ರಾಷ್ಟ್ರಪತಿ, ಪಿಎಂಓ, ಮೋದಿಯನ್ನು ಟ್ವಿಟರ್​ನಲ್ಲಿ ಅನ್​ಫಾಲೋ ಮಾಡಿದ ಬಗ್ಗೆ ಸ್ಪಷ್ಟೀಕರಣ ನೀಡಿದ ಶ್ವೇತಭವನ

ಲಕ್ಷಗಟ್ಟಲೇ ಫಾಲೋವರ್ಸ್ ಹೊಂದಿರುವ ಶ್ವೇತಭವನ 18 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿತ್ತು‌. ಈಗ ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಕಚೇರಿ, ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಿರುವುದರಿಂದ ಆ ಸಂಖ್ಯೆ 13 ಮಾತ್ರ ಆಗಿದೆ.

news18-kannada
Updated:April 30, 2020, 5:14 PM IST
ರಾಷ್ಟ್ರಪತಿ, ಪಿಎಂಓ, ಮೋದಿಯನ್ನು ಟ್ವಿಟರ್​ನಲ್ಲಿ ಅನ್​ಫಾಲೋ ಮಾಡಿದ ಬಗ್ಗೆ ಸ್ಪಷ್ಟೀಕರಣ ನೀಡಿದ ಶ್ವೇತಭವನ
ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
  • Share this:
ನವದೆಹಲಿ: ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಅಮೆರಿಕದ ಶ್ವೇತಭವನ ಅನ್​ಫಾಲೋ ಮಾಡಿದೆ. ಫಾಲೋ ಮಾಡಲು ಆರಂಭಿಸಿದ ಮೂರೇ ವಾರದಲ್ಲಿ ಯಾವ ಕಾರಣಕ್ಕಾಗಿ ಅನ್ ಫಾಲೋ ಮಾಡಲಾಯಿತು ಎಂಬ ಬಗ್ಗೆ ಈಗ ಸ್ಪಷ್ಟೀಕರಣ ನೀಡಿದೆ.

ಕ್ರೂರಿ ಕೊರೋನಾಗೆ ಮದ್ದಿಲ್ಲದ ಕಾರಣಕ್ಕೆ ಇಡೀ ಜಗತ್ತಿನ ಜಂಘಾಬಲ ಹುದುಗಿಹೋಗಿದೆ. ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕದಲ್ಲಿ ಅತಿಹೆಚ್ಚು ಕೊರೋನಾ ಸೋಂಕು‌ ಕಾಣಿಸಿಕೊಂಡಿರುವುದರಿಂದ ಅಲ್ಲೂ ಕೂಡ ಪರಿಪರಿ ಪರದಾಟವಿದೆ. ತಜ್ಞ ವೈದ್ಯರು ಸದ್ಯಕ್ಕೆ ಹಿಂದೆ ಮಲೇರಿಯಾ ರೋಗಕ್ಕೆ ನೀಡುತ್ತಿದ್ದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಸಿಕೆಯನ್ನೇ ಕೊರೋನಾ ಪೀಡಿತರಿಗೆ ತಾತ್ಕಾಲಿಕವಾಗಿ ನೀಡಬಹುದೆಂದು ಸಲಹೆ ಕೊಟ್ಟಿದ್ದಾರೆ. ಆದುದರಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಹೈಡ್ರೋಕ್ಸಿಕ್ಲೋರೋಕ್ವಿನ್‌ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತದ ಬೆನ್ನುಬಿದ್ದಿದ್ದವು. ಅಮೆರಿಕ ಕೂಡ.

ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಸಿಕೆಯನ್ನು ಕೊಡಲೇಬೇಕೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆಯನ್ನೂ ಹಾಕಿದ್ದರು. ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಸಿಕೆಗಳನ್ನು ಪೂರೈಸದಿದ್ದರೆ ಉಳಿದ ವಸ್ತುಗಳ ಆಮದನ್ನೂ ನಿಷೇಧಿಸಬೇಕಾಗಿದೆ ಎಂದಿದ್ದರು. ಆ ಬೆದರಿಕೆಗೆ ಹೆದರಿದ ನರೇಂದ್ರ ಮೋದಿ ಸರ್ಕಾರ ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಸಿಕೆಗಳನ್ನು ಪೂರೈಸಿತ್ತು. ಹೀಗೆ ಭಾರತವು ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಸಿಕೆಗಳನ್ನು ಪೂರೈಕೆ ಮಾಡಿದಾಗ ಅಮೆರಿಕ ಕೃತಜ್ಞತೆ ಸಲ್ಲಿಸಿತ್ತು‌. ಅಲ್ಲಿನ ಶ್ವೇತಭವನ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿತ್ತು‌.

ಏಪ್ರಿಲ್ 10ರಂದು ಡೊನಾಲ್ಡ್ ಟ್ರಂಪ್, ಮೋದಿಗೆ ಥ್ಯಾಂಕ್ಸ್ ಅನ್ನೂ ಹೇಳಿದ್ದರು. ಇದಾದ ಮೂರು ವಾರಗಳ ಬಳಿಕ ಏಪ್ರಿಲ್ 29ನೇ ತಾರೀಖು ಶ್ವೇತಭವನ ಭಾರತದ ರಾಷ್ಟ್ರಪತಿ ರಾಮನಾಥ್ ಕೊವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಅನ್ ಫಾಲೋ ಮಾಡಿದೆ. ಅಷ್ಟೇ ಅಲ್ಲ, ಅಮೆರಿಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಟ್ವೀಟರ್ ಖಾತೆಗಳನ್ನೂ ಅನ್ ಫಾಲೋ ಮಾಡಿದೆ.

ಶ್ವೇತಭವನ ಇದ್ದಕ್ಕಿದ್ದಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಪ್ರಧಾನ ಮಂತ್ರಿ ಕಚೇರಿ, ಅಮೆರಿಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಟ್ವೀಟರ್ ಖಾತೆಗಳನ್ನೂ ಅನ್ ಫಾಲೋ ಮಾಡಿದ ಬಗ್ಗೆ ನಿನ್ನೆ ವ್ಯಾಪಕ ಚರ್ಚೆ ಆಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಅಮೆರಿಕಾದ ನಡೆಯನ್ನು ಖಂಡಿಸಿದ್ದರು. ಚರ್ಚೆಯ ಬಳಿಕ ಈಗ ಶ್ವೇತಭವನ ಸ್ಪಷ್ಟೀಕರಣ ನೀಡಿದೆ.

ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅತಿಥೇಯ ರಾಷ್ಟ್ರದ ಅಧ್ಯಕ್ಷರ, ಪ್ರಧಾನಿಗಳ, ಪ್ರಧಾನಮಂತ್ರಿ ಕಚೇರಿಯ, ರಾಯಭಾರ ಕಚೇರಿಗಳ ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಫಾಲೋ ಮಾಡಲಾಗಿತ್ತು. ಇದು ಶ್ವೇತಭವನ ಅನುಸರಿಸುವ ಶಿಷ್ಟಾಚಾರ. ಅಮೆರಿಕ ಅಧ್ಯಕ್ಷರ ಪ್ರವಾಸದ ಬಳಿಕ ಅನ್ ಫಾಲೋ ಮಾಡುವುದು ಕೂಡ ಶಿಷ್ಟಾಚಾರದ ಮುಂದುವರೆದ ಭಾಗ. ಆದುದರಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಚೇರಿ, ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಲಾಗಿದೆ. ಶ್ವೇತಭವನದ ಈ ಸಾಮಾನ್ಯ ಪ್ರಕ್ರಿಯೆಗೆ ವಿಶೇಷ ಅರ್ಥಗಳನ್ನು ಕಲ್ಪಿಸಬಾರದು ಎಂದು ತಿಳಿಸಿದೆ‌.

ಇದನ್ನು ಓದಿ: ಕೊರೋನಾ ವೈರಸ್​ಗೆ ಅಮೆರಿಕದಲ್ಲಿ 61 ಸಾವಿರ ಮಂದಿ ಬಲಿ; ವಿಶ್ವಾದ್ಯಂತ 32 ಲಕ್ಷ ಮಂದಿಗೆ ಸೋಂಕುಲಕ್ಷಗಟ್ಟಲೇ ಫಾಲೋವರ್ಸ್ ಹೊಂದಿರುವ ಶ್ವೇತಭವನ 18 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿತ್ತು‌. ಈಗ ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಕಚೇರಿ, ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಿರುವುದರಿಂದ ಆ ಸಂಖ್ಯೆ 13 ಮಾತ್ರ ಆಗಿದೆ.
First published: April 30, 2020, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading