Agri Reforms - ಕೇಂದ್ರ ಸರ್ಕಾರದ ಕೃಷಿ ಸುಧಾರಣೆಯ ಮಸೂದೆಗಳು: ರೈತರ ಆತಂಕಕ್ಕೆ ಏನು ಕಾರಣ?

ಕೇಂದ್ರ ಸರ್ಕಾರದ ಹೊಸ ಕೃಷಿ ಮಸೂದೆಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟೈಸ್ ಮಾಡುತ್ತವೆ. ದುರ್ಬಲ ಹಾಗೂ ಅಸಂಘಟಿತ ರೈತರ ಶೋಷಣೆಗೆ ವೇದಿಕೆ ಸೃಷ್ಟಿಸಲಿದೆ ಎಂಬುದು ರೈತ ಮುಖಂಡರ ಆತಂಕ ಮತ್ತು ಆಕ್ರೋಶ.

ಪಂಜಾಬ್ ರೈತರ ಪ್ರತಿಭಟನೆ

ಪಂಜಾಬ್ ರೈತರ ಪ್ರತಿಭಟನೆ

 • Share this:
  ನವದೆಹಲಿ(ಸೆ. 18): ಕೇಂದ್ರ ಸರ್ಕಾರ ನಿನ್ನೆ ಲೋಕಸಭೆಯಲ್ಲಿ ಕೃಷಿ ಸುಧಾರಣೆಗೆ ಸಂಬಂಧಿಸಿದ 2 ಮಸೂದೆಗಳನ್ನ ಮಂಡಿಸಿ ಅನುಮೋದನೆ ಪಡೆದಿದೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಪ್ರೋತ್ಸಾಹ ಸೌಲಭ್ಯ ಮಸೂದೆ 2020, ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ ಮಸೂದೆಗೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಸಮ್ಮತಿ ಸಿಕ್ಕಿತು.  ವಿಪಕ್ಷಗಳ ಸದಸ್ಯರು ಈ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಎನ್​ಡಿಎ ಮೈತ್ರಿಕೂಟದ ಅಂಗಪಕ್ಷ ಶಿರೋಮಣಿ ಅಕಾಲಿ ದಳ ಕೂಡ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸಚಿವರಾಗಿದ್ದ ಆ ಪಕ್ಷದ ಹರ್​ಸಿಮ್ರತ್ ಕೌರ್ ಬಾದಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು. ಪಂಜಾಬ್​ನಲ್ಲಂತೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ಹುಟ್ಟಿವೆ. ಇನ್ನೂ ಕೆಲ ರಾಜ್ಯಗಳಲ್ಲಿ ಈ ಮಸೂದೆಗಳಿಗೆ ತೀವ್ರ ಮಟ್ಟದ ವಿರೋಧ ವ್ಯಕ್ತವಾಗಿದೆ. ಅಷ್ಟಕ್ಕೂ ಕೃಷಿ ಸುಧಾರಣೆ ದೃಷ್ಟಿಯಿಂದ ರೂಪಿಸಲಾಗಿರುವ ಈ ಮಸೂದೆಗಳಿಗೆ ಯಾಕಿಷ್ಟು ವಿರೋಧ? ಏನಿದೆ ಈ ಮಸೂದೆಗಳಲ್ಲಿ.

  ಕೃಷಿ ಉತ್ಪನ್ನಗಳನ್ನ ಅಂತರರಾಜ್ಯ ಹಾಗೂ ಆಂತರಿಕವಾಗಿ ಯಾವುದೇ ಅಡೆತಡೆ ಇಲ್ಲದೆ ರೈತರು ಮಾರಾಟ ಮಾಡಲು ಅನುವಾಗುವಂತೆ “ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಪ್ರೋತ್ಸಾಹ ಹಾಗೂ ಸೌಲಭ್ಯ ಮಸೂದೆ” ಅನ್ನು ರೂಪಿಸಲಾಗಿದೆ. ಹಾಗೆಯೇ, ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ ಮಸೂದೆಯು ಪೂರ್ವನಿಗದಿತ ಬೆಲೆಯಲ್ಲಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ನೀಡುತ್ತದೆ.

  ಇದನ್ನೂ ಓದಿ: Harsimrat Kaur Badal: ಕೃಷಿ ಮಸೂದೆಗೆ ವಿರೋಧ: ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್​ ಕೌರ್​ ಬಾದಲ್​ ರಾಜೀನಾಮೆ

  ಮಸೂದೆಗಳಿಗೆ ಯಾಕೆ ವಿರೋಧ?

  ಕನಿಷ್ಠ ಬೆಂಬಲ ಬೆಲೆ ನೀತಿಯ ಮೂಲಕ ಈಗ ರೈತರಿಗೆ ಸ್ವಲ್ಪವಾದರೂ ಸಮಾಧಾನ ಸಿಗುತ್ತಿದೆ. ಆದರೆ, ಹೊಸ ಮಸೂದೆಗಳಿಂದ ಕೃಷಿ ವಲಯವೇ ಕಾರ್ಪೊರೇಟ್ ವ್ಯವಸ್ಥೆಗೆ ಒಳಪಡುತ್ತದೆ. ಆಗ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯವೂ ಕೈತಪ್ಪುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ (ಎಐಕೆಎಸ್​ಸಿಸಿ)ಯ ರಾಷ್ಟ್ರೀಯ ಸಂಚಾಲಕ ವಿ.ಎಂ. ಸಿಂಗ್ ಹೇಳುತ್ತಾರೆ. ಇನ್ನು, ಸಂಸತ್​ನಲ್ಲಿ ಮಸೂದೆಯನ್ನು ಬಲವಾಗಿ ವಿರೋಧಿಸಿ ಪಂಜಾಬ್ ಸಂಸದರು, ಕಳೆದ 50 ವರ್ಷಗಳಿಂದ ಆ ರಾಜ್ಯದಲ್ಲಿ ಕೃಷಿ ವಲಯವನ್ನು ಕಟ್ಟಡಲು ರಾಜ್ಯ ಸರ್ಕಾರಗಳು ಸತತವಾಗಿ ಮಾಡಿದ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಹಲವು ಕೃಷಿ ತಜ್ಞರೂ ಕೂಡ ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ನೀತಿಗಳನ್ನ ಟೀಕಿಸಿದ್ದಾರೆ. ಬಲಶಾಲಿ ಕಾರ್ಪೊರೇಟ್ ವ್ಯವಸ್ಥೆಯಲ್ಲಿ ದುರ್ಬಲ ರೈತರು ಮಂಡಿಯೂರಬೇಕಾಗುತ್ತದೆ. ಕಾರ್ಪೊರೇಟ್ ಕಂಪನಿಗಳು ಹೇಳಿದ್ದನ್ನ ರೈತರು ಕೇಳಿಕೊಂಡಿರಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಹೇಳಿರುವ ಮಾಜಿ ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ಸಿರಾಜ್ ಹುಸೇನ್ ಅವರು ಗುಜರಾತ್ ರೈತರ ಮೇಲೆ ಪೆಪ್ಸಿಕೋ ಕಂಪನಿ ದಾವೆ ಹೂಡಿದ ಪ್ರಕರಣವನ್ನು ಉದಾಹರಿಸಿದ್ದಾರೆ.

  ಇದನ್ನೂ ಓದಿ: ಪುಲ್ವಾಮಾ ಮಾದರಿಯಲ್ಲೇ ಮತ್ತೊಂದು ದಾಳಿಗೆ ಉಗ್ರರ ಸಂಚು?; 52 ಕೆ.ಜಿ ಸ್ಪೋಟಕಗಳನ್ನು ವಶಪಡಿಸಿಕೊಂಡ ಸೇನೆ

  ಈ ಹೊಸ ಮಸೂದೆಗಳು ರೈತರಿಗೆ ನೆರವಾಗುವುದಿಲ್ಲ. ಬದಲಾಗಿ ವ್ಯಾಪಾರಿಗಳು, ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತವೆ. ಹಾಗೆಯೇ, ರಾಜ್ಯ ಸರ್ಕಾರಗಳ ಅಧಿಕಾರವನ್ನೂ ಮೊಟಕುಗೊಳಿಸುತ್ತದೆ. ರಾಜ್ಯ ಸರ್ಕಾರದ ಕಾನೂನು ಮತ್ತು ಮಾರುಕಟ್ಟೆ ಸಮಿತಿಯ ವ್ಯಾಪ್ತಿಗೂ ಇದು ನಿಲುಕದ್ದಾಗಿರುತ್ತದೆ ಎಂದು ಮತ್ತೊಬ್ಬ ಕೃಷಿ ನೀತಿ ತಜ್ಞ ನರಸಿಂಹ ರೆಡ್ಡಿ ದೊಂತಿ ಹೇಳುತ್ತಾರೆ.

  ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡು ಮಸೂದೆಗಳು ರೈತರ ಪಾಲಿಗೆ ಮಹತ್ವವಾಗಿವೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ರೈತರನ್ನ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮಧ್ಯವರ್ತಿಗಳು ಸೇರಿದಂತೆ ಹಲವು ಅಡೆತಡೆಗಳಿಂದ ರೈತರಿಗೆ ಮುಕ್ತಿ ಸಿಗುಂತೆ ಈ ಮಸೂದೆಗಳು ಸಹಾಯವಾಗಲಿವೆ ಎಂದು ಹೇಳಿದ್ದಾರೆ. ಗುತ್ತಿಗೆ ಆಧಾರಿತ ಕೃಷಿ ವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸುವ ಮೂಲಕ ರೈತರ ಬೆಳೆಗಳಿಗೆ ಉತ್ತಮ ಬೆಲೆ ಪ್ರಾಪ್ತವಾಗುತ್ತದೆ ಎಂಬುದು ಸರ್ಕಾರದ ವಾದ.
  Published by:Vijayasarthy SN
  First published: