ದೆಹಲಿ: ನಾವು ಜವಾಹರ್ಲಾಲ್ ನೆಹರೂ (Jawaharlal Nehru) ಅವರ ಹೆಸರನ್ನು ಎಲ್ಲಾದರೂ ಬಳಸದೇ ಇದ್ದರೆ ಕಾಂಗ್ರೆಸ್ನವರು (Congress) ನಮ್ಮ ಮೇಲೆ ಕಿಡಿ ಕಾರುತ್ತಾರೆ. ಏಕೆಂದರೆ ನೆಹರೂ ಅಂತಹ ಶ್ರೇಷ್ಠ ವ್ಯಕ್ತಿ, ಆದರೆ ಅವರ ಕುಟುಂಬಸ್ಥರು ಮಾತ್ರ ಏಕೆ ಅವರ ಉಪನಾಮವನ್ನು(Surname) ಬಳಸುತ್ತಿಲ್ಲ ಎಂದು ಪ್ರಶ್ನಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ರಾಜ್ಯ ಸಭೆಯಲ್ಲಿ (Rajya Sabha) ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ (Rahul Gandhi) ಕಾಲೆಳೆದಿದ್ದಾರೆ. ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಗೌರವಿಸಲು ಅವರಲ್ಲಿ ಯಾರೂ ಅವರ ಹೆಸರನ್ನು ಏಕೆ ಬಳಸುತ್ತಿಲ್ಲ ಎಂದು ಕೇಳಿದ್ದಾರೆ.
ನೆಹರು ಹೆಸರು ಬಳಸಲು ಅವಮಾನವೇಕೆ?
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಮೋದಿ, ನಾವು ಎಲ್ಲಿಯಾದರೂ ನೆಹರೂ ಅವರ ಹೆಸರನ್ನು ಉಲ್ಲೇಖಿಸುವುದನ್ನು ತಪ್ಪಿಸಿದರೆ, ಕಾಂಗ್ರೆಸ್ನವರು ಅಸಮಾಧಾನಗೊಳ್ಳುತ್ತಾರೆ. ಏಕೆಂದರೆ ನೆಹರೂ ಅವರು ಅಂತಹ ಮಹಾನ್ ವ್ಯಕ್ತಿಯಾಗಿದ್ದರು. ಆದರೆ ಅವರ ಕುಟುಂಬಸ್ಥರು ನೆಹರು ಉಪನಾಮವನ್ನು ಏಕೆ ಬಳಸುವುದಿಲ್ಲ, ನೆಹರೂ ಹೆಸರನ್ನು ಬಳಸುವುದರಲ್ಲಿ ನಾಚಿಕೆ ಏನಿದೆ?" ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
90 ಬಾರಿ ಸರ್ಕಾರ ಉರುಳಿಸಿದ್ದಾರೆ
ಕಾಂಗ್ರೆಸ್ ಮತ್ತು ಆ ಪಕ್ಷದ ಹಿಂದಿನ ಪ್ರಧಾನ ಮಂತ್ರಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ನಮೋ, ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ಟೀಕಿಸುವಾಗ ತನ್ನದೇ ಆದ ವಿವಾದಗಳನ್ನು ಮುಚ್ಚಿಹಾಕುತ್ತಿದೆ ಎಂದು ಆರೋಪಿಸಿದರು ನಾವು ಕೆಲವು ರಾಜ್ಯಗಳಿಗೆ ತೊಂದರೆ ನೀಡುತ್ತಿದ್ದೇವೆ ಎಂದು ಅವರು ಹೇಳುತ್ತಾರೆ, ಆದರೆ ಅವರ ಅವಧಿಯಲ್ಲಿ ಚುನಾಯಿತ ರಾಜ್ಯ ಸರ್ಕಾರಗಳನ್ನು 90 ಬಾರಿ ಉರುಳಿಸಿದ್ದಾರೆ. ಒಬ್ಬ ಕಾಂಗ್ರೆಸ್ ಪ್ರಧಾನಿ ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು 356 ನೇ ವಿಧಿಯನ್ನು ಐವತ್ತು ಬಾರಿ ಬಳಸಿದ್ದಾರೆ. ಅವರೇ ಇಂದಿರಾ ಗಾಂಧಿ ಎಂದ ಮೋದಿ ಈ ದೇಶ ಯಾವುದೇ ಕುಟುಂಬದ ಆಸ್ತಿಯಲ್ಲ ಎಂದು ಹೇಳಿದರು.
ಎಷ್ಟೇ ಕೆಸರು ಎರಚಿದರೂ ಕಮಲ ಅರಳುತ್ತೆ
ಸಂಸತ್ನಲ್ಲಿ ವಿರೋಧ ಪಕ್ಷಗಳು ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ಅದಾನಿ ವಿಚಾರವಾಗಿ ನಿರಂತರ ಘೋಷಣೆಗಳನ್ನು ಕೂಗುತ್ತಿದ್ದಕ್ಕೆ ಪ್ರತಿಕ್ರಿಯಿಸಿ, ಕೆಲವು ಸದಸ್ಯರ ನಡವಳಿಕೆ ಇಡೀ ದೇಶಕ್ಕೆ ನಿರಾಶಾದಾಯಕವಾಗಿದೆ. ಅಂತರಿಗೆ ನಾನು ಹೇಳುವುದೇನೆಂದರೆ ನೀವು ನಮ್ಮ ಮೇಲೆ ಎಷ್ಟೇ ಕೆಸರು ಎರಚಿದರೂ ಕಮಲ ಅರಳುತ್ತಿರುತ್ತದೆ. ಇದಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಅವಧಿಯಲ್ಲಿ ಹಗರಣಗಳದ್ದೇ ಸದ್ದು
2004ರಿಂದ 2014ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರೀ ಹಗರಣಗಳೇ ಸದ್ದು ಮಾಡಿದ್ದವು. ದೇಶದ ಹಲವು ಕಡೆ ಉಗ್ರರ ದಾಳಿ ನಡೆದಿದ್ದವು. ಆ ದಶಕ ದೇಶಕ್ಕೆ ಹೊರೆಯಾಗಿ ಪರಿಣಮಿಸಿತ್ತು. 2008ರ ಮುಂಬೈ ದಾಳಿಯನ್ನು ಯಾರೂ ಮರೆಯುವುದಿಲ್ಲ. ಅಂದಿನ ಯುಪಿಎ ಸರ್ಕಾರ ಭಯೋತ್ಪಾದನೆ ವಿರುದ್ದ ಕ್ರಮ ತೆಗೆದುಕೊಳ್ಳಲು ವಿಫಲವಾಗಿತ್ತು. ಈ ಕಾರಣದಿಂದ ದೇಶದಲ್ಲಿ ಮುಗ್ಧ ನಾಗರಿಕರು ಜೀವ ಕಳೆದುಕೊಂಡರು ಎಂದು ಕಾಂಗ್ರೆಸ್ನ 10 ವರ್ಷದ ಆಡಳಿತವನ್ನು ಮೋದಿ ಟೀಕಿಸಿದರು.
ನನ್ನ ಬಗ್ಗೆ ಟೀಕಿಸುವುದನ್ನ ಜನ ಒಪ್ಪುವುದಿಲ್ಲ
ಇಡೀ ಪ್ರಪಂಚ ಯುದ್ದ ಹಾಗೂ ಕೋವಿಡ್ ಸಂದರ್ಭಗಳಲ್ಲಿ ಅಸ್ಥಿರತೆ ಅನುಭವಿಸಿವೆ. ಇಂತಹ ಸ್ಥಿತಿಯಲ್ಲೂ ಇಡೀ ಪ್ರಪಂಚ ಭಾರತದ ಕಡೆಗೆ ಭರವಸೆ ಕಣ್ಣಿನಿಂದ ನೋಡುತ್ತಿದೆ. ಆದರೆ ಇದನ್ನಲ್ಲಾ ನೋಡಿ ಕೆಲವರು ಹತಾಶೆಗೆ ಒಳಗಾಗಿದ್ದಾರೆ. ದೇಶದ ಬೆಳವಣಿಗೆಯನ್ನು ಅವರಿಂದ ಸಹಿಸಲು ಆಗುತ್ತಿಲ್ಲ. ಜನರ ಸಂಕಷ್ಟದ ಸಮಯದಲ್ಲಿ ಮೋದಿ ಅವರ ನೆರವಿಗೆ ನಿಂತಿದ್ದಾರೆ ಎಂಬುವುದನ್ನ ಅವರಿಂದ ಅರಗಿಸಿಕೊಳ್ಳಲು ಸಾಧ್ಯವಾಗದೇ ನನ್ನನ್ನು ನಿಂದಿಸುತ್ತಿದ್ದಾರೆ. ಅದರೆ ಇದನ್ನೆಲ್ಲಾ ಜನರು ಒಪ್ಪುವುದಿಲ್ಲ. ಕೋಟ್ಯಂತರ ಜನರ ನಂಬಿಕೆಯೇ ನನಗೆ ಶ್ರೀರಕ್ಷೆಯಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ