​Begusarai Lok Sabha Exit Poll 2019: ಬೇಗುಸರಾಯ್​​ನಲ್ಲಿ ಕನ್ನಯ್ಯ V/S ಗಿರಿರಾಜ್​​ ಸಿಂಗ್​​: ಕಡಿಮೆ ಅಂತರದಲ್ಲಿ ಬಿಜೆಪಿಗೆ ಗೆಲುವು

Begusarai Lok Sabha Elections 2019 Exit Poll: ದೇಶದ ಗಮನ ಸೆಳೆದಿರುವ ಬೇಗುಸರಾಯ್ ತ್ರಿಕೋನ ಹಣಾಹಣಿಗೆ ಸಾಕ್ಷಿಯಾಗಿದೆ. ನಾಲ್ಕನೇ ಹಂತದಲ್ಲಿಯೇ ಈಗಾಗಲೇ ಈ ಕ್ಷೇತ್ರದ ಮತದಾನ ಮುಗಿದಿದೆ. 23ಕ್ಕೆ ಫಲಿತಾಂಶ ಹೊರಬೀಳಲಿದ್ದು, ಯಾರು ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.

Ganesh Nachikethu | news18
Updated:May 19, 2019, 8:35 PM IST
​Begusarai Lok Sabha Exit Poll 2019: ಬೇಗುಸರಾಯ್​​ನಲ್ಲಿ ಕನ್ನಯ್ಯ V/S ಗಿರಿರಾಜ್​​ ಸಿಂಗ್​​: ಕಡಿಮೆ ಅಂತರದಲ್ಲಿ ಬಿಜೆಪಿಗೆ ಗೆಲುವು
ಕನ್ನಯ್ಯ ಕುಮಾರ್​​ ಮತ್ತು ಗಿರಿರಾಜ್​​ ಸಿಂಗ್​
  • News18
  • Last Updated: May 19, 2019, 8:35 PM IST
  • Share this:
ನವದೆಹಲಿ(ಮೇ.19): ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಮತ್ತು ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರ ಕೇರಳದ ವಯನಾಡು ಕ್ಷೇತ್ರಗಳಂಗತೆಯೇ ಇಡೀ ದೇಶದ ಗಮನ ಸೆಳೆಯುತ್ತಿರುವ ಮತ್ತೊಂದು ಕ್ಷೇತ್ರ ಬಿಹಾರದ ಬೇಗುಸರಾಯ್​​. ಜೆಎನ್​​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್​​ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಾರಣ ಬೇಗುಸರಾಯ್​​​, ವಾರಣಾಸಿ ಮತ್ತು ವಯನಾಡು ಕ್ಷೇತ್ರಗಳನ್ನು ಮೀರಿ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಜವಹರಲಾಲ್​ ನೆಹರು (ಜೆಎನ್​​ಯು) ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ​ ದೇಶ ವಿರೋಧಿ ಘೋಷಣೆ ಕೂಗಿದ್ದರು ಎನ್ನುವ ಆರೋಪ ಹೊತ್ತ ಕನ್ನಯ್ಯ ವಿರುದ್ಧವಾಗಿ ಆಡಳಿತರೂಢ ಬಿಜೆಪಿ ಮತ್ತದರ ಮಾತೃ ಸಂಸ್ಥೆ ಸಂಘಪರಿವಾರ ನಿಂತಿದೆ. 2016, ಫೆಬ್ರವರಿ 12ರಂದು ಅಫ್ಜಲ್​ ಗುರು ಗಲ್ಲು ಶಿಕ್ಷೆಯನ್ನು ವಿರೋಧಿಸಿ ಕಾರ್ಯಕ್ರಮ ಮಾಡಿದ್ದರು ಎಂದು ಆರೋಪಿಸಿದ ಸಂಘಪರಿವಾರ ಕನ್ನಯ್ಯನ ವಿರುದ್ಧ ರಾಜದ್ರೋಹ ಆರೋಪಡಿಯಲ್ಲಿ ಕೇಸ್​ ದಾಖಲಿಸಿತ್ತು.

ಕನ್ನಯ್ಯ ಕುಮಾರ್​​​ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ 10 ಸಾವಿರ ರೂ ದಂಡ ಕೂಡ ವಿಧಿಸಲಾಗಿತ್ತು. ಬಳಿಕ ಕನ್ನಯ್ಯ ಪರವಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿ ಸೇರಿದಂತೆ ದೇಶದ ಪ್ರಗತಿಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟಿಸಿದರು. ನಂತರದಲ್ಲಿ ದೆಹಲಿ ಹೈಕೋರ್ಟ್, 2016ರ ಜುಲೈ ತಿಂಗಳಿನಲ್ಲಿ ಈ ಕೇಸ್​​ಗೆ ತಡೆಯೊಡ್ಡಿತ್ತು. ಈ ಪ್ರಕರಣದಿಂದಾಗಿ ಕನ್ನಯ್ಯಕುಮಾರ್ ಹೆಸರು ವಿದ್ಯಾರ್ಥಿ ಚಳುವಳಿಯಲ್ಲಿ ಮುಂಚೂಣಿಗೆ ಬಂದಿತ್ತು.

ಕನ್ನಯ್ಯ ಕುಮಾರ್ ಎಂಬ ಬಿಹಾರದ ಪುಟ್ಟ ಪಟ್ಟಣದ ಯುವಕ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರವನ್ನು ಗುರಿಯಾಗಿಸಿ ಸಾಲುಸಾಲು ಭಾಷಣಗಳನ್ನು ಮಾಡಿದರು. ಕೋಮುವಾದ, ದ್ವೇಷ ರಾಜಕಾರಣ ವಿರೋಧಿಸುತ್ತಾ ಸಮಾನತೆಗಾಗಿ ನಡೆದ ವಿದ್ಯಾರ್ಥಿ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗಿಯಾದರು.

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಲೇ ಯುವ ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮಿದರು. ಇದೇ ಕನ್ನಯ್ಯ ಸಿಪಿಐ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಕಾರಣಕ್ಕೆ ಬೇಗುಸರಾಯ್​​ ದೇಶದ ಗಮನ ಸೆಳೆದಿದೆ. ಬೇಗುಸರಾಯ್​​ನಿಂದ ಕನ್ನಯ್ಯ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದ ಬೆನ್ನಲ್ಲೇ ತನ್ನದೇ ಭೂಮಿಹಾರ್ ಸಮುದಾಯಕ್ಕೆ ಸೇರಿದ ಜನಪ್ರಿಯ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಗಿರಿರಾಜ್​​ ಸಿಂಗ್ ಸದಾ​​ ಮುಸ್ಲಿಂ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಹೇಳಿಕೆಗಳ ಮೂಲಕವೇ ಜನಪ್ರಿಯತೆ ಗಳಿಸಿದ್ದಾರೆ ಎಂದರೂ ತಪ್ಪಾಗಲಾರದು.

ಒಂದೆಡೆ ಬೇಗುಸರಾಯ್​ನಿಂದ ಕನ್ನಯ್ಯನನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಹಾಗೂ ಮಹಿಳೆಯರ ಪರ ದನಿ ಎತ್ತಲಿದ್ದಾರೆ. ದೇಶದ ನಿರುದ್ಯೋಗಿ ಯುವಕರ ಪರ ಕೆಲಸ ಮಾಡಲಿದ್ದಾರೆ. ಹಾಗಾಗಿ ಕನ್ನಯ್ಯಗೆ ವೋಟ್​​ ಮಾಡಿ ಎಂದು ಕಮ್ಯುನಿಷ್ಟ್​​-ಪ್ರಗತಿಪರ ಹೋರಾಟಗಾರರು ಮತಯಾಚಿಸಿದ್ದಾರೆ.

ಇನ್ನೊಂದೆಡೆ ಮೋದಿ ವಿರೋಧಿಗಳು ದೇಶದದ್ರೋಹಿಗಳು. ಈ ಬಾರಿ ಮೋದಿ ಪ್ರಧಾನಿ ಆಗೋದು ಖಚಿತ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಟುಕ್ಡೆ ಗ್ಯಾಂಗ್​ ಅನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗುವುದು. ಪಾಕಿಸ್ತಾನದ ದಾಳದಂತೆ ಕಾಣುವ ಹಸಿರು ಬಾವುಟಗಳನ್ನೆಲ್ಲಾ ತೆಗೆದು ಹಾಕಲಾಗುವುದು. ಹಾಗಾಗಿ ಬಿಜೆಪಿಗೆ ವೋಟ್​​ ಮಾಡಿ, ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಿ ಎಂದು ಖುದ್ದು ಕೇಂದ್ರ ಸಚಿವ ಗಿರಿರಾಜ್​​ ಸಿಂಗ್​ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.ಬೇಗುಸರಾಯ್​​​ನ ಚುನಾವಣಾ ಕಣದಲ್ಲಿ ಬಿಜೆಪಿಯವರು ಮತ್ತೊಮ್ಮೆ ಮೋದಿ, ಧರ್ಮ ದ್ವೇಷ, ಇಸ್ಲಾಮೋಫೋಬಿಯಾ, ದೇಶದ್ರೋಹಿ ವರ್ಸಸ್ ದೇಶಭಕ್ತ ಎಂಬ ಚರ್ಚೆ ನಡೆಸಿದರೆ, ಸಿಪಿಐನ ಕನ್ನಯ್ಯ ಮಾತ್ರ ನಿರುದ್ಯೋಗ ಸಮಸ್ಯೆ, ಸಾಮರಸ್ಯ, ಕಾರ್ಮಿಕರು, ಕೃಷಿಕರು ಎಂದು ಮಾತನಾಡುತ್ತ ಜನರಿಗೆ ಹತ್ತಿರವಾಗಲು ಯತ್ನಿಸಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಸದ್ದೇ ಮಾಡದ ಬೇಗುಸರಾಯ್​ ಕ್ಷೇತ್ರ, ಕನ್ನಯ್ಯ ಮತ್ತು ಗಿರಿರಾಜ್​ ಸಿಂಗ್​ ಸ್ಪರ್ಧೆಯಿಂದ ಚರ್ಚೆಯ ಕೇಂದ್ರವಾಗಿದೆ.

ಹಿಂದುತ್ವವಾದದ ಪ್ರತಿನಿಧಿಯಾಗಿ ಗಿರಿರಾಜ್ ಸಿಂಗ್ ಇದ್ದರೆ, ಎಡಪಂಥೀಯ ಚಿಂತನೆಯ ಅಭ್ಯರ್ಥಿಯಾಗಿ ಕನ್ನಯ್ಯ ಕಣದಲ್ಲಿದ್ದಾರೆ. ಜತೆಗೆ ಮಹಾಘಟ್​ಬಂಧನ್​​ ಅಡಿಯಲ್ಲಿ ಕನ್ನಯ್ಯಗೆ ಬೇಗುಸರಾಯ್​​ ಬಿಟ್ಟುಕೊಡಲು ನಿರಾಕರಿಸಿದ ಆರ್​​ಜೆಡಿ ಅಭ್ಯರ್ಥಿಯೂ ಅಖಾಡಕ್ಕಿಳಿದಿದ್ದಾರೆ. ಕನ್ನಯ್ಯರನ್ನು ಬೆಂಬಲಿಸಿ ತಮ್ಮ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಿ ಎಂಬ ಎಡಪಕ್ಷಗಳ ಮನವಿಗಳು ಕ್ಯಾರೇ ಎನ್ನದೇ ಆರ್​​ಜೆಡಿ ಪ್ರಬಲ ಮುಸ್ಲಿಂ ಅಭ್ಯರ್ಥಿ ತನ್ವೀರ್ ಹಸನ್​​​ ​ಅವರನ್ನು ನಿಲ್ಲಿಸಿದೆ.

ಬಿಹಾರದ ‘ಲೆನಿನ್ ಗ್ರಾಡ್’ ಎಂದೇ ಕರೆಯಲ್ಪಡುವ ಕಮ್ಯುನಿಸ್ಟ್ ಪ್ರಾಬಲ್ಯದ ಕ್ಷೇತ್ರದಲ್ಲಿ 1967ರಲ್ಲಿ ಸಿಪಿಐನ ಯೋಗೇಂದ್ರ ಶರ್ಮಾ ಎಂಬುವರು ಜಯ ಗಳಿಸಿದ್ದರು. ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್, ಜನತಾ ಪಕ್ಷ, ಜೆಡಿಯು, ಆರ್​ಜೆಡಿ ಮತ್ತು ಬಿಜೆಪಿಯೂ ಜಯಭೇರಿ ಭಾರಿಸಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಎಡಪಕ್ಷಗಳ ಮತಗಳು ಮಾತ್ರ ಪ್ರತಿ ಬಾರಿಯೂ ಪಕ್ಷದ ಅಭ್ಯರ್ಥಿಯ ಪರ ಅಚಲವಾಗಿ ನಿಂತಿವೆ. ಹಾಗಾಗಿ ಪ್ರತಿ ಚುನಾವಣೆಯಲ್ಲಿಯೂ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಜಯ ಪಡೆಯದೇ ಹೋದರೂ, ಎರಡು ಅಥವಾ ಮೂರನೇ ಸ್ಥಾನದ ಪೈಪೋಟಿ ಕಾಯ್ದುಕೊಂಡುಬಂದಿದೆ.

ಕಳೆದ 2014ರ ಚುನಾವಣೆಯಲ್ಲಿ ಕೂಡ ಬಿಜೆಪಿಯ ಭೋಲಾ ಸಿಂಗ್, ಆರ್ ಜೆ ಡಿಯ ತನ್ವೀರ್ ಹಸನ್ ವಿರುದ್ಧ 58 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಭೋಲಾ ಸಿಂಗ್ ಶೇ.39.72 ಮತ ಪಡೆದಿದ್ದರೆ, ಪರಾಜಿತ ತನ್ವೀರ್ ಹಸನ್ ಶೇ.34.31ರಷ್ಟು ಮತ ಪಡೆದಿದ್ದರು. ಮೂರನೇ ಸ್ಥಾನದಲ್ಲಿದ್ದ ಸಿಪಿಐ ಅಭ್ಯರ್ಥಿ ರಾಜೇಂದ್ರ ಪ್ರಸಾದ್ ಸಿಂಗ್ ಶೇ.17.87 ಮತ ಪಡೆದಿದ್ದರು. ಕೈಗಾರಿಕೆಗಳು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಾಬಲ್ಯವಿದೆ. ಅದುವೇ ಎಡಪಕ್ಷಗಳಿಗೆ ಗಟ್ಟಿ ನೆಲೆ ಒದಗಿಸಿದೆ.

ಇನ್ನು ಈ ಬಾರಿ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಮತ್ತು ಸಿಪಿಐ ಅಭ್ಯರ್ಥಿ ಕನ್ನಯ್ಯ ಇಬ್ಬರೂ ಕ್ಷೇತ್ರದ ಬಹುಸಂಖ್ಯಾತ ಭೂಮಿಹಾರ್ ಸಮುದಾಯಕ್ಕೆ ಸೇರಿದ್ದಾರೆ. ಒಟ್ಟು 19 ಲಕ್ಷ ಮತದಾರರ ಪೈಕಿ, ಸುಮಾರು 4.5 ಲಕ್ಷ ಮತದಾರರನ್ನು ಹೊಂದಿರುವ ಭೂಮಿಹಾರ್ ಸಮುದಾಯ ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ನಂತರದ ಸ್ಥಾನದಲ್ಲಿ ಮುಸ್ಲಿಂ(2.5 ಲಕ್ಷ), ಯಾದವ (80 ಸಾವಿರ) ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಒಂದು ಲಕ್ಷ ಮತಗಳಿವೆ.

ಬಿಜೆಪಿ ಮತ್ತು ಸಿಪಿಐ ಅಭ್ಯರ್ಥಿಗಳಿಬ್ಬರೂ ಒಂದೇ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಭೂಮಿಹಾರ್​​ಮತಗಳು ಹಂಚಿಹೋಗಲಿವೆ. ಇನ್ನು ತಮ್ಮದೇ ಸಮುದಾಯದ ಮುಸ್ಲಿಂ ಹಾಗೂ ಯಾದವ ಮತಗಳ ಬಲದ ಮೇಲೆ ಗೆಲುವು ತಮ್ಮದೆ ಎಂಬ ವಿಶ್ವಾಸದಲ್ಲಿ ಆರ್​ಜೆಡಿ ಅಭ್ಯರ್ಥಿ ಹಸನ್ ಇದ್ದಾರೆ. ಹಾಗೆಯೇ ಭೂಮಿಹಾರ್ ಸಮುದಾಯದ ಹಿರಿಯ ನಾಯಕ ಗಿರಿರಾಜ್. ಇವರಿಗೆ ಕಟ್ಟಾ ಹಿಂದುತ್ವದ ಪರ ಸಮುದಾಯದ ಮತಗಳು ಬರಲಿವೆ. ಇನ್ನುಳಿದಂತೆ ಕುರ್ಮಿ ಮತ್ತಿತರ ಹಿಂದುಳಿದ ವರ್ಗಗಳ ಮತ ಬಿಜೆಪಿಗೆ ಹೋಗಿರುವ ಸಾಧ್ಯತೆಯಿದೆ. ಅಂತೆಯೇ ಬಿಜೆಪಿ ವಿರೋಧಿ ಮತಗಳು ಕನ್ನಯ್ಯ ಮತ್ತು ಹಸನ್ ನಡುವೆ ಹಂಚಿಹೋಗಲಿವೆ. ಈ ಮತ ವಿಭಜನೆಯ ಲಾಭ ತಮಗೇ ಆಗಲಿದೆ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.

ಸ್ಟಾರ್ ನಟರ ಪ್ರಚಾರ, ಜೆಎನ್​ಯು ಬೆಂಬಲ, ಕಮ್ಯುನಿಸ್ಟ್ ಕೇಡರ್ ಬಲದ ಹೊರತಾಗಿಯೂ ಕನ್ನಯ್ಯಗೆ ದೊಡ್ಡ ಸವಾಲು ಎದುರಾಗಿದೆ. ಮಾಧ್ಯಮ ಪ್ರಚಾರ, ಸಭೆ-ಸಮಾರಂಭ, ಮನೆಮನೆ ಭೇಟಿ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಮತದಾರರನ್ನು ತಲುಪಿದರೂ ಕನ್ನಯಗೆ ಗೆಲುವುದು ಅಷ್ಟು ಸುಲಭವಲ್ಲ. ಹಾಗೆಯೇ ಕೇಂದ್ರ ಸಚಿವ ಗಿರಿರಾಜ್​​ ಸಿಂಗ್​​ ಬೇಗುಸರಾಯ್​​ ಅಲ್ಲದೇ  ಪಕ್ಕದ ಕ್ಷೇತ್ರ ನವಾಡದಿಂದ ವಲಸೆ ಬಂದಿದ್ದಕ್ಕೆ ಜನ ಕೈ ಹಿಡಿಯುತ್ತಾರಾ? ಎಂಬ ಪ್ರಶ್ನೆ ಕಾಡುತ್ತಿದೆ.

ಕನ್ನಯ್ಯ ಪರವಾಗಿ ಈಗಾಗಲೇ ಜಾವೇದ್ ಅಖ್ತರ್, ಸ್ವರ ಭಾಸ್ಕರ, ಪ್ರಕಾಶ್ ರಾಜ್, ಜಿಗ್ನೇಶ್ ಮೆವಾನಿ, ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್, ಶಬಾನಾ ಆಜ್ಮಿ, ಕುನಾಲ್​ ಕಮ್ರಾ ಸೇರಿದಂತೆ ಮುಂತಾದವರು ಪ್ರಚಾರ ನಡೆಸಿದ್ದಾರೆ. ಜತೆಗೆ ತಳಮಟ್ಟದಲ್ಲಿ ಎಡಪಕ್ಷಗಳ 14 ಸಾವಿರಕ್ಕೂ ಹೆಚ್ಚು ಯುವ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ಆರ್​ಎಸ್​ಎಸ್​ ಮತ್ತು ಸಂಘಪರಿವಾರ ಕೂಡ ಕ್ಷೇತ್ರದಲ್ಲಿ ಗಟ್ಟಿಯಾಗಿದ್ದು, ತನ್ನ ಪಕ್ಷದ ಹಿರಿಯ ನಾಯಕನನ್ನು ಗೆಲ್ಲಿಸಿ ದೇಶಕ್ಕೇ ಸಂದೇಶ ರವಾನಿಸಬೇಕೆಂದು ಟೊಂಕ ಕಟ್ಟಿ ನಿಂತಿದೆ.

ಸದ್ಯಕ್ಕಂತೂ ದೇಶದ ಗಮನ ಸೆಳೆದಿರುವ ಬೇಗುಸರಾಯ್ ತ್ರಿಕೋನ ಹಣಾಹಣಿಗೆ ಸಾಕ್ಷಿಯಾಗಿದೆ. ನಾಲ್ಕನೇ ಹಂತದಲ್ಲಿಯೇ ಈಗಾಗಲೇ ಈ ಕ್ಷೇತ್ರದ ಮತದಾನ ಮುಗಿದಿದೆ. ಚುನಾವಣಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅಭ್ಯರ್ಥಿ ಗಿರಿರಾಜ್​ ಸಿಂಗ್​ ಕಡಿಮೆ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.  ಇದೇ ತಿಂಗಳ 23ಕ್ಕೆ ಅಧಿಕೃತ ಫಲಿತಾಂಶ ಹೊರಬೀಳಲಿದ್ದು, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.
First published:May 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading