PM Modi Childhood Friend: ಪ್ರಧಾನಿ ಮೋದಿ ಬಾಲ್ಯದ ಗೆಳೆಯ ಅಬ್ಬಾಸ್ ಈಗೆಲ್ಲಿದ್ದಾರೆ? ಮೋದಿಗೆ ಗೆಳೆಯನ ನೆನಪಿದೆಯೇ?

Abbas: ನಮ್ಮೆಲ್ಲ ಒಡಹುಟ್ಟಿದವರಂತೆಯೇ ನಮ್ಮ ತಾಯಿಯೂ ಅಬ್ಬಾಸ್‌ನ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಪ್ರತಿ ವರ್ಷ ಈದ್‌ನಲ್ಲಿ ಅವರು ಅವರ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು ಎಂದು ತಿಳಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ, ಹೀರಾಬೆನ್ ಮೋದಿ ಮತ್ತು ಅಬ್ಬಾಸ್

ಪ್ರಧಾನಿ ನರೇಂದ್ರ ಮೋದಿ, ಹೀರಾಬೆನ್ ಮೋದಿ ಮತ್ತು ಅಬ್ಬಾಸ್

  • Share this:
    ಎಲ್ಲರಿಗೂ ಬಾಲ್ಯದ ಗೆಳೆಯ ಅಂದರೆ ಅಚ್ಚುಮೆಚ್ಚು. ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಆಟ ಪಾಠ ರಗಳೆ, ಕಿತಾಪತಿ ಜಗಳ ಹೀಗೆ ಎಲ್ಲದರಲ್ಲೂ ಜೊತೆ ಜೊತೆಗೆ ಕೈಜೋಡಿಸಿದ್ದ ಬಾಲ್ಯದ ಗೆಳೆಯರು ಎಂದಿಗೂ ನೆನಪಿನಿಂದ ಮರೆಯಲ್ಲ. ಜೀವನದಲ್ಲಿ ಯಾವುದೇ ಹಂತ ತಲುಪಲಿ, ಎಲ್ಲೇ ಹೋಗಲಿ ಬಾಲ್ಯದ ಗೆಳೆಯರನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದ್ದಾರೆ ಓರ್ವ ಬಾಲ್ಯದ ಗೆಳೆಯ. ಅವರೇ ಅಬ್ಬಾಸ್ (Abbas). ಮೊನ್ನೆ ಮೊನ್ನೆ ತಾನೇ ತಮ್ಮ ತಾಯಿ ಹೀರಾಬೆನ್ ಮೋದಿ ಅವರ 100ನೇ ವರ್ಷದ ಹುಟ್ಟುಹಬ್ಬದ ದಿನ ಬರೆದ ಬ್ಲಾಗ್​ನಲ್ಲಿ ತಮ್ಮ ಬಾಲ್ಯ ಗೆಳೆಯನ (PM Modi Childhood Friend) ಬಗ್ಗೆ ಹಂಚಿಕೊಂಡಿದ್ದಾರೆ.

    ತಮ್ಮ ಬಾಲ್ಯದ ಗೆಳೆಯನ ಕುರಿತು ಬ್ಲಾಗ್​ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, “ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ನನ್ನ ತಂದೆಯ ನಿಕಟ ಸ್ನೇಹಿತರು ವಾಸಿಸುತ್ತಿದ್ದ ಹಳ್ಳಿಯೊಂದಿತ್ತು. ಅವರ ಮಗ ಅಬ್ಬಾಸ್. ಅವರ ತಂದೆಯ ಅಕಾಲಿಕ ಮರಣದ ನಂತರ, ನಮ್ಮ ತಂದೆ ಅಬ್ಬಾಸ್ ಅವರನ್ನು ನಮ್ಮ ಮನೆಗೆ ಕರೆತಂದರು. ಅವರು ನಮ್ಮೊಂದಿಗೆ ಉಳಿದುಕೊಂಡು ಅಧ್ಯಯನವನ್ನು ಪೂರ್ಣಗೊಳಿಸಿದರು.

    ನನ್ ತಾಯಿಗೆ ಅಬ್ಬಾಸ್ ಮೇಲೆ ಭಾರೀ ಕಾಳಜಿ
    ನಮ್ಮೆಲ್ಲ ಒಡಹುಟ್ಟಿದವರಂತೆಯೇ ನಮ್ಮ ತಾಯಿಯೂ ಅಬ್ಬಾಸ್‌ನ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಪ್ರತಿ ವರ್ಷ ಈದ್‌ನಲ್ಲಿ ಅವರು ಅವರ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು. ಹಬ್ಬಗಳಂದು ನೆರೆಹೊರೆಯ ಮಕ್ಕಳು ನಮ್ಮ ಮನೆಗೆ ಬಂದು ನನ್ನ ತಾಯಿ ತಯಾರಿಸುತ್ತಿದ್ದ ವಿಶೇಷ ತಿಂಡಿಗಳನ್ನು ಸವಿಯುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಗುಜರಾತ್ ಸರ್ಕಾರದಲ್ಲಿ ಉದ್ಯೋಗಿಯಾಗಿದ್ದ ಅಬ್ಬಾಸ್
    ಅಬ್ಬಾಸ್ ಅವರು ಗುಜರಾತ್ ಸರ್ಕಾರದ ಕ್ಲಾಸ್ 2 ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ತಿಂಗಳ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದಾರೆ. ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

    ಎಲ್ಲಿ ವಾಸಿಸುತ್ತಿದ್ದಾರೆ ಅಬ್ಬಾಸ್
    ಅಬ್ಬಾಸ್‌ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಖೇರಾಲು ತಹಶೀಲ್‌ನಲ್ಲಿ ವಾಸಿಸುತ್ತಿದ್ದರೆ, ಕಿರಿಯ ಮಗ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಅಬ್ಬಸ್ ಅವರು ಪ್ರಸ್ತುತ ಸಿಡ್ನಿಯಲ್ಲಿ ತನ್ನ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದಾರೆ.

    ಒಂದು ಕೋಣೆಯ ವಠಾರವೇ ಮನೆ
    ತಮ್ಮ ಬ್ಲಾಗ್‌ನಲ್ಲಿ ಪಿಎಂ ಮೋದಿ ವಡ್ನಗರದಲ್ಲಿರುವ ತಮ್ಮ ಪುಟ್ಟ ಮನೆಯ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಿಟಕಿಯೂ ಇರಲಿಲ್ಲ, ಶೌಚಾಲಯ ಅಥವಾ ಸ್ನಾನಗೃಹದಂತಹ ಸೌಲಭ್ಯಗಳೂ ಇರಲಿಲ್ಲ. ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿರುವ ಈ ಒಂದು ಕೋಣೆಯ ವಠಾರವನ್ನು ನಾವು ನಮ್ಮ ಮನೆ ಎಂದು ಕರೆಯುತ್ತಿದ್ದೆವು ಎಂದು ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: Marriage Age: ಬಾಲ್ಯ ವಿವಾಹ ಎತ್ತಿ ಹಿಡಿದ ಕೋರ್ಟ್! ಮುಸ್ಲಿಂ ಯುವತಿಗೆ 16 ವರ್ಷಕ್ಕೆ ಮದುವೆಗೆ ಅನುಮತಿ

    ಕೆಲವು ಮನೆಗಳಲ್ಲಿ ಪಾತ್ರೆ ತೊಳೆಯುತ್ತಿದ್ದರಂತೆ!
    ಅವರು ವಡ್ನಗರದಲ್ಲಿರುವ ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿರುವ ಪುಟ್ಟ ಮನೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿ ಅವರು ತಮ್ಮ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದರು. ಅವರ ತಾಯಿ ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದಳು. ಆದರೆ ಅವರು ಮನೆಯ ಅಲ್ಪ ಆದಾಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದರು. ಹೀರಾಬೆನ್ ಅವರು ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

    ಮಳೆಗಾಲದಲ್ಲಿ ಮನೆ ಸೋರುತ್ತಿತ್ತು
    ಮಳೆಗಾಲದಲ್ಲಿ ನಮ್ಮ ಮೇಲ್ಛಾವಣಿ ಸೋರುತ್ತಿತ್ತು. ಮನೆಗೆ ನೀರು ಬರುತ್ತದೆ. ಮಳೆನೀರನ್ನು ಸಂಗ್ರಹಿಸಲು ನನ್ನ ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಸೋರುವುದರ ಕೆಳಗೆ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು.

    ಇದನ್ನು ಓದಿ: Heeraben Modi: ನನ್ನಮ್ಮ ಅಂದ್ರೆ ನಂಗೆ ಎಷ್ಟು ಇಷ್ಟ ಅಂದ್ರೆ..! ಪ್ರಧಾನಿ ಮೋದಿ ಬರೆದಿದ್ದಾರೆ ಓದಿ

    ಔಪಚಾರಿಕವಾಗಿ ಶಿಕ್ಷಣ ಪಡೆಯದೆ ಕಲಿಯಲು ಸಾಧ್ಯ ಎಂದು ಅವರ ತಾಯಿಯು ತನಗೆ ಅರಿವು ಮೂಡಿಸಿದರು ಎಂದು ಅವರು ಬರೆದಿದ್ದಾರೆ. "ಅವಳ ಆಲೋಚನಾ ಪ್ರಕ್ರಿಯೆ ಮತ್ತು ದೂರದೃಷ್ಟಿಯ ಚಿಂತನೆಯು ಯಾವಾಗಲೂ ನನ್ನನ್ನು ಆಶ್ಚರ್ಯಗೊಳಿಸುತ್ತದೆ" ಎಂದು ಅವರು ನೆನೆಸಿಕೊಂಡಿದ್ದಾರೆ.
    Published by:guruganesh bhat
    First published: