ಯಾರು ಈ ಮಾಜಿ ಗ್ಯಾಂಗ್​ಸ್ಟರ್​ ಲಖಾ ಸಿಧಾನಾ; ಜ.26ರ ಗಲಭೆಯಲ್ಲಿ ಈತನೂ ಪಾತ್ರಧಾರಿಯೇ?

ಲಖಾ ಸಿಧಾನಾ.

ಲಖಾ ಸಿಧಾನಾ.

ಹಳ್ಳಿಗಳಲ್ಲಿ ಸಮಾಜ ಸೇವೆಯ ಕಾರ್ಯಗಳನ್ನು ಮಾಡುವುದಾಗಿ ಹೇಳಿಕೊಳ್ಳುವ ಮಾಲ್ವಾ ಯೂತ್ ಫೆಡರೇಶನ್ ಮುಖ್ಯಸ್ಥರಾಗಿರುವ ಸಿಧಾನಾ ವಿರುದ್ಧ ಪಂಜಾಬ್‌ನಲ್ಲಿ 25 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

 • Share this:

  ನವ ದೆಹಲಿ (ಜನವರಿ 28); ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿಯ ಹೊರವಲಯದಲ್ಲಿ ಶಾಂತಿಯುತವಾದ ಪ್ರತಿಭಟನೆಯನ್ನು ನಡೆಸುತ್ತಿದ್ದರು. ಅಲ್ಲದೆ, ಜನವರಿ 26 ರಂದು ಗಣರಾಜ್ಯೋತ್ಸವದ ದಿನ ರಾಜಧಾನಿಯಲ್ಲಿ ಟ್ರ್ಯಾಕ್ಟರ್​ ಮೆರವಣಿಗೆ ನಡೆಸಲು ರೈತ ಮುಖಂಡರು ಮುಂದಾಗಿದ್ದರು. ಆದರೆ, ಈ ವೇಳೆ ಕೆಂಪುಕೋಟೆಯ ಬಳಿ ದಿಢೀರನೆ ಘರ್ಷಣೆ ಕಾಣಿಸಿಕೊಂಡಿತ್ತು.  ದೀಪ್ ಸಿಧು ಎಂಬಾತನ ನೇತೃತ್ವದಲ್ಲಿ ಒಂದಷ್ಟು ರೈತರ ಗುಂಪು ಕೆಂಪುಕೋಟೆಯನ್ನೇ ವಶಕ್ಕೆ ಪಡೆದು ರೈತರ ಮತ್ತು ಸಿಖ್ ಧ್ವಜವನ್ನು ಹಾರಿಸುವ ಮೂಲಕ ಉದ್ವಿಗ್ನ ಪರಿಸ್ಥಿತಿಗೆ ಕಾರಣನಾಗಿದ್ದ. ಇದೀಗ ಆತನ ಮೇಲೂ ಪೊಲೀಸರು ಎಫ್​ಐಆರ್​  ದಾಖಲಿಸಿದ್ದಾರೆ. ಈತನ ಜೊತೆಗೆ ಗಣರಾಜ್ಯೋತ್ಸವದ ದಿನದಂದು ಹಿಂಸಾಚಾರಕ್ಕೆ ಕಾರಣವಾದ ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದಕ್ಕಾಗಿ ಲಖಾ ಸಿಧಾನಾ ಎಂಬಾತನನ್ನೂ ದೂಷಿಸಲಾಗಿತ್ತು. ಹೀಗಾಗಿ ಬುಧವಾರವೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಈತ, "ತಾನು ರಾಷ್ಟ್ರ ರಾಜಧಾನಿಯ ರಿಂಗ್ ರಸ್ತೆಯವರೆಗೆ ಮಾತ್ರ ಮೆರವಣಿಗೆ ನಡೆಸಿದ್ದೆ. ಕೆಂಪು ಕೋಟೆಯ ಕಡೆಗೆ ಹೋಗುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ" ಎಂದು ಸಮಜಾಯಿಷಿ ನೀಡಿದ್ದಾನೆ. 


  ಪಂಜಾಬ್‌ನ ಬತಿಂಡಾದ ಸಿಖಾನಾ ಗ್ರಾಮದ ಲಖ್‌ಬೀರ್ ಸಿಂಗ್ ಸಿಧಾನಾ ಅಲಿಯಾಸ್ ಲಖಾ ಸಿಧಾನಾ, "ರೈತರ ಆಂದೋಲನದ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಂಚು ಹೂಡಿದ್ದಾರೆ ಎಂದು ಆರೋಪಿಸುತ್ತಾ, ತಾನು ಯಾವಾಗಲೂ ಶಾಂತಿಗಾಗಿ ಕರೆ ನೀಡುತ್ತಾ ಬಂದಿದ್ದೇನೆ" ಎಂದು ತನ್ನನ್ನು ಸಮರ್ಥಿಸಿಕೊಂಡಿದ್ದಾನೆ. ಆದರೆ, ಈತನ ಹಿನ್ನೆಲೆಯನ್ನು ಕೆದಕುತ್ತಾ ಹೋದಂತೆ ಅನೇಕ ಅಂಶಗಳು ಇದೀಗ ಬಟಾಬಯಲಾಗುತ್ತಿದೆ.


  ಮೊದಲಿಗೆ ಗ್ಯಾಂಗ್‌ಸ್ಟರ್ ಆಗಿದ್ದ ಈತ ಈಗ ಸಮಾಜಸೇವಕನಂತೆ!


  ಮಂಗಳವಾರ ನಡೆದ ಘಟನೆಗಳ ಬಗ್ಗೆ ಮಾತನಾಡಿರುವ ಲಖ್‌ಬೀರ್ ಸಿಂಗ್ ಸಿಧಾನಾ, "ಕೆಂಪುಕೋಟೆ ಘರ್ಷಣೆಗೆ ಸಂಬಂಧಿಸಿದಂತೆ ನನಗೆ ನೋವಿದೆ. ಆದರೆ ನಾನು ಈ ಘಟನೆಯಲ್ಲಿ ಭಾಗಿಯಾಗಿಲ್ಲ. ನಾನು ಜನರನ್ನು ಪ್ರಚೋದಿಸಿದ್ದೇನೆ ಎಂದು ತೋರಿಸುವ ಯಾವುದೇ ವೀಡಿಯೊ, ಫೋಟೋ ಅಥವಾ ಇತರ ಪುರಾವೆಗಳಿಲ್ಲ. ನಮ್ಮ ರೈತ ಮುಖಂಡರನ್ನು ಅನುಸರಿಸಿ ನಾವು ರಿಂಗ್ ರಸ್ತೆಯ ಕಡೆಗೆ ಶಾಂತಿಯುತವಾಗಿ ಸಾಗಿದ್ದೆವು. ಕೆಂಪು ಕೋಟೆಯ ಕಡೆಗೆ ಹೋಗುವ ಯಾವುದೇ ಕಾರ್ಯಸೂಚಿಯನ್ನು ನಾವು ಎಂದಿಗೂ ಹೊಂದಿರಲಿಲ್ಲ" ಎಂದು 40 ವರ್ಷದ ಸಿಧಾನಾ ಹೇಳಿದ್ದಾನೆ.


  ನವೆಂಬರ್ 26 ರಿಂದ ಸಿಂಘು ಗಡಿಯಲ್ಲಿ ಟಿಕಾಣಿ ಹಾಕಿರುವ ಸಿಧಾನಾ, ಸೋಮವಾರ ಜ.25 ರ ರಾತ್ರಿ ಸಿಂಘು ಗಡಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ನಟ ದೀಪ್ ಸಿಧು ಜೊತೆಗೆ ವೇದಿಕೆಯನ್ನು ಹಂಚಿಕೊಂಡಿರುವ ಆರೋಪವನ್ನು ನಿರಾಕರಿಸಿದ್ದಾನೆ. ರಿಂಗ್ ರಸ್ತೆಯಲ್ಲಿ ಮೆರವಣಿಗೆ ನಡೆಸಲು ಬಯಸುತ್ತಿದ್ದ ಜನರನ್ನು ನಾನು ಸಮಾಧಾನ ಮಾಡುತ್ತಿದ್ದೆ ಅಷ್ಟೇ ಎಂದು ಹೇಳಿದ್ದಾನೆ.


  ಸುಮಾರು 20 ರೈತ ಮುಖಂಡರು ತಮ್ಮ ಕಾರ್ಯಕರ್ತರೊಂದಿಗೆ ರಿಂಗ್ ರೋಡ್‌ವರೆಗೆ ಶಾಂತಿಯುತವಾಗಿ ತೆರಳಿದರು ಮತ್ತು ತಕ್ಷಣವೇ ಹಿಂದಿರುಗಿದರು ಎಂದು ಸಿಧಾನಾ ತಿಳಿಸಿದ್ದಾನೆ.


  ಹಳ್ಳಿಗಳಲ್ಲಿ ಸಮಾಜ ಸೇವೆಯ ಕಾರ್ಯಗಳನ್ನು ಮಾಡುವುದಾಗಿ ಹೇಳಿಕೊಳ್ಳುವ ಮಾಲ್ವಾ ಯೂತ್ ಫೆಡರೇಶನ್ ಮುಖ್ಯಸ್ಥರಾಗಿರುವ ಸಿಧಾನಾ ವಿರುದ್ಧ ಪಂಜಾಬ್‌ನಲ್ಲಿ 25 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯ ಪ್ರಕರಣಗಳು ಸೇರಿವೆ. ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಿಂದ ಮಾನವಿಕ ವಿಭಾಗದಲ್ಲಿ ಪದವಿ ಪಡೆದಿರುವ ಈತ, ಸಾಮಾಜಿಕ ಕಾರ್ಯಗಳಿಗಾಗಿ ಅಪರಾಧ ಜಗತ್ತನ್ನು ತೊರೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.


  2011 ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್‌ಗೆ ಸೇರಿ, 2013 ರಲ್ಲಿ ತ್ಯಜಿಸಿದ್ದ. ಅಂದಿನಿಂದ, ಮಾಲ್ವಾ ಪ್ರದೇಶದಲ್ಲಿ ಸಿಧಾನಾ ಜನಪ್ರಿಯತೆ ಗಳಿಸಿದ. ದುರ್ಬಲ ವರ್ಗದ ಹಲವಾರು ಯುವತಿಯರ ಮದುವೆಗೆ ಸಹಾಯ ಮಾಡಿ, ಬಡ ಕುಟುಂಬಗಳಿಗೆ ಹಣ ಮತ್ತು ಇತರ ರೀತಿಯ ಸಹಾಯ ಮಾಡಿ, ಮುನ್ನೆಲೆಗೆ ಬಂದ.


  ಇದನ್ನೂ ಓದಿ: Union Budget 2021: ಬಜೆಟ್ ಅಧಿವೇಶನ, ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳ ನಿರ್ಧಾರ


  ರಸ್ತೆ ಫಲಕಗಳ ಮೇಲಿನ ಇಂಗ್ಲಿಷ್ ಸಂಕೇತಗಳನ್ನು ಪಂಜಾಬಿಯಲ್ಲಿ ಬರೆಯಬೇಕೆಂದು ಒತ್ತಾಯಿಸಿ 2017 ರ ಅಕ್ಟೋಬರ್‌ನಲ್ಲಿ ನಡೆಸಿದ ಪ್ರತಿಭಟನೆಯೊಂದರ ಮೂಲಕ ಸುದ್ದಿಯಾಗಿದ್ದ. ಅಲ್ಲಿ ಗಲಾಟೆ ಸಂಭವಿಸಿದಾಗ ಆತನನ್ನು ಬಂಧಿಸಿ ಫರೀದ್‌ಕೋಟ್ ಮಾಡರ್ನ್ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಭತ್ತದ ತ್ಯಾಜ್ಯವನ್ನು ಸುಡಬಾರದೆಂದು ರೈತರಿಗೆ ಫೇಸ್‌ಬುಕ್ ಮೂಲಕ ಸಲಹೆ ನೀಡಿದ್ದ! ನಂತರ ಆತ‌ನಿಂದ ಸೆಲ್‌ಫೋನ್ ಅನ್ನು ವಶಪಡಿಸಿಕೊಂಡು, ಮೋಸ ಪ್ರಕರಣದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮೇ 2019 ರಲ್ಲಿ, ಬಾದಲ್ ಗ್ರಾಮದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸುವಾಗ ಕೊಲೆ ಯತ್ನದ ಪ್ರಕರಣದಲ್ಲಿ ಆತ ಮತ್ತು ಇತರ 60 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.


  ಈಗ ಈತ ತಾನು ಶಾಂತಿಪ್ರಿಯ, ದೀಪ್ ಸಿಧು ಜೊತೆ ಭಾಗಿಯಾಗಿಲ್ಲ ಎನ್ನುತ್ತಿದ್ದಾನೆ. ಆದರೆ, ಈ ಶಾಂತಿಪ್ರಿಯ ಮಹಾಶಯ, ನಿಗದಿತ ಮಾರ್ಗ ಬಿಟ್ಟು ರಿಂಗ್‌ರೋಡ್ ಮಾರ್ಗದತ್ತ ಹೋಗಿದ್ದೇಕೆ? ಎಂಬ ಪ್ರಶ್ನೆಯನ್ನು ಕೇಳಬೇಕಾದ ಪೊಲೀಸರು ಸುಮ್ಮನೇ ಇರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

  Published by:MAshok Kumar
  First published: