HOME » NEWS » National-international » WHO IS BEST POLITICAL STRATEGIST AMIT SHAH OR ARAVIND KEJRIWAL RH

ಅಮಿತ್ ಶಾ - ಅರವಿಂದ ಕೇಜ್ರಿವಾಲ್; ಇಬ್ಬರಲ್ಲಿ ಯಾರು ನಿಜವಾದ ಚಾಣಾಕ್ಯ?

ಇನ್ನೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆಲುವನ್ನು ನೋಡಿದರೆ ಬಹಳ ಮುಖ್ಯವಾದ ಅಂಶ ಇಡೀ ಚುನಾವಣೆಯಲ್ಲಿ ಯಾವ ಹಂತದಲ್ಲೂ ಅವರು ಬಿಜೆಪಿ ಅಥವಾ ಅಮಿತ್ ಶಾ ತೋಡಿದ ಹಳ್ಳಕ್ಕೆ ಬೀಳಲಿಲ್ಲ‌. ಬಹಳ ಎಚ್ಚರಿಕೆಯಿಂದ ತಮ್ಮದೇ ನರೇಷನ್ ಗೆ ಬಿಜೆಪಿಯನ್ನು ಎಳೆದು ತಂದರು‌.

news18-kannada
Updated:February 11, 2020, 3:06 PM IST
ಅಮಿತ್ ಶಾ - ಅರವಿಂದ ಕೇಜ್ರಿವಾಲ್; ಇಬ್ಬರಲ್ಲಿ ಯಾರು ನಿಜವಾದ ಚಾಣಾಕ್ಯ?
ಅರವಿಂದ್ ಕೇಜ್ರಿವಾಲ್ ಮತ್ತು ಅಮಿತ್ ಶಾ.
  • Share this:
ನವದೆಹಲಿ: ಸಾಮಾನ್ಯವಾಗಿ ಸೋಲಿಗೆ ನೂರು ಕಾರಣಗಳು ಎಂಬ ಮಾತಿದೆ.‌ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಈ ಮೂರು ಕಾರಣಗಳು ಅಂತಾ ಮತದಾನಕ್ಕೂ ಮುನ್ನವೇ ಆ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದರು.


  • ಕಾರಣ 1: ತುಂಬಾ ತಡವಾಗಿ ಚುನಾವಣಾ ಅಖಾಡ ಪ್ರವೇಶ ಮಾಡಿದ್ದು.

  • ಕಾರಣ 2: ತುಂಬಾ ತಡವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಿದ್ದು.

  • ಕಾರಣ 3: ಆಮ್ ಆದ್ಮಿ ಪಕ್ಷವನ್ನು ಬಹಳ ಲಘುವಾಗಿ ಪರಿಗಣಿಸಿದ್ದು.


ಕಾರಣಗಳು ಆದ ಮೇಲೆ ಕಾರ್ಯಕರ್ತರ ಬಗ್ಗೆಯೂ ಹೇಳಲೇಬೇಕು. ಈ ಮೂರು ತಪ್ಪು ಆಗಿದ್ದು; ಬಿಜೆಪಿಯ ಕಾರ್ಯಕರಿಂದ ಅಲ್ಲ, ಆ ಪಕ್ಷದ ದೆಹಲಿ ಘಟಕದಿಂದಲೂ ಅಲ್ಲ, ವಾಸ್ತವವಾಗಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರಿಗೆ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ರಣತಂತ್ರ ಮತ್ತು ಪ್ರಚಾರದಲ್ಲಿ ಮೂರು ಕಾಸಿನ ಕಿಮ್ಮತ್ತಿರಲಿಲ್ಲ.‌ ಸ್ಥಳೀಯ ಘಟಕ-ಕಾರ್ಯಕರ್ತರಲ್ಲ ಎಂದ ಮೇಲೆ ರಾಷ್ಟ್ರೀಯ ಘಟಕವೇ? ಅದರ ಅಧ್ಯಕ್ಷ ಜೆ.ಪಿ. ನಡ್ಡ ಅವರೇ? ಅವರೂ ಅಲ್ಲ. ಅಸಲಿ ಕಾರಣಕರ್ತ ಅಮಿತ್ ಶಾ!ಅಮಿತ್ ಶಾ ಕೇಂದ್ರ ಗೃಹ ಸಚಿವರಾದ‌ ಕಾರಣಕ್ಕೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆಯೇ ವಿನಃ, ಅಧಿಕಾರ ಮತ್ತು ಹಿಡಿತವನ್ನಲ್ಲ. ರಾಜ್ಯ ಸಚಿವ ಸಂಪುಟ ವಿಷಯದಲ್ಲೂ ಇದು ಸಾಬೀತಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಅಂತಿಮವಾಗಿ ಹಸಿರು ನಿಶಾನೆ ಪಡೆದಿದ್ದು ಶಾ ಬಳಿಯೇ. ಇತ್ತೀಚೆಗೆ ಬಿಜೆಪಿಯಲ್ಲಿ ಇನ್ನೂ ಒಂದು ಮಾತು ಚಾಲ್ತಿಗೆ ಬರುತ್ತಿದೆ. ದಿನೇ ದಿನೇ ಅಮಿತ್ ಶಾ, ಮೋದಿಗಿಂತಲೂ ಹೆಚ್ಚು ಪ್ರಭಾವಿ ಆಗುತ್ತಿದ್ದಾರೆ ಅಂತಾ. ದೆಹಲಿ ಚುನಾವಣೆಯಲ್ಲೂ ಹೆಸರಿಗೆ ಮಾತ್ರ ಮೋದಿ‌ ಸ್ಟಾರ್ ಪ್ರಚಾರಕ. ಆದರೆ ಅವರು ಮಾಡಿದ್ದು ಎರಡೇ ಸಮಾವೇಶ. ಅಮಿತ್ ಶಾ‌ ವಾರಪೂರ್ತಿ ದಿನಕ್ಕೆರಡು ಮೂರು ಪ್ರಚಾರ ಸಭೆ, ರೋಡ್ ಶೋಗಳನ್ನು ಮಾಡಿದರು. ಇನ್ನೂ ಸ್ವತಃ ಅಮಿತ್ ಶಾ ಅವರೇ ಆರಂಭದಲ್ಲಿ ತಮ್ಮ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ 'ಮೋದಿ ಮುಖ ಇಟ್ಟುಕೊಂಡು ಮತ ಕೇಳಿ' ಎಂದು ಕರೆಕೊಟ್ಟಿದ್ದರು. ಆದರೆ ಅಮಿತ್ ಶಾ ಇಡೀ ದೆಹಲಿ ಚುನಾವಣೆಯನ್ನು ಕೊಂಡೊಯ್ದಿದ್ದು ಬೇರೆಯದೇ ನರೇಷನ್ ಮೂಲಕ. ಶಾಹೀನ್ ಬಾಗ್, ಪಾಕಿಸ್ತಾನ, ಸಿಎಎ ಮತ್ತು ಎನ್​ಆರ್​ಸಿ ವಿಷಯಗಳನ್ನು ಇಟ್ಟುಕೊಂಡು. ಈಗ ಹೇಳಿ ಬಿಜೆಪಿ ಸೋಲಿಗೆ ಯಾರು ಕಾರಣ?

ಮತ್ತೆ ಕಾರಣಗಳೆಡೆಗೆ ಹೊರಳುವುದಾದರೆ ಬಿಜೆಪಿ, ಅಂದರೆ ಅಮಿತ್ ಶಾ ದೆಹಲಿ ಚುನಾವಣಾ ಅಖಾಡ ಪ್ರವೇಶ ಮಾಡಿದ್ದು ಬಹಳ ತಡವಾಗಿಯೇ. ಈಗವರು ದೆಹಲಿ ಚುನಾವಣೆಯನ್ನು ಸೋತ ಮಾತ್ರಕ್ಕೆ ಅವರ ಸಂಘಟನಾ ಚಾತರ್ಯ ಮತ್ತು ರಣತಂತ್ರ ನೈಪುಣ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ದೆಹಲಿ ಚುನಾವಣೆ ಹರಳುಗಟ್ಟುವ ಸಮಯಕ್ಕೆ ಸರಿಯಾಗಿ ಅಮಿತ್ ಶಾ ತಾವೇ ಸೃಷ್ಟಿಸಿಕೊಂಡಿದ್ದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ವಿರುದ್ಧ ದೇಶಾದ್ಯಂತ ಎದ್ದಿದ್ದ ವಿರೋಧವನ್ನು ನಿಭಾಯಿಸುವುದರಲ್ಲಿ ನಿರತರಾಗಿದ್ದರು. ಬಹುಶಃ ಇಲ್ಲದಿದ್ದರೆ ಅವರ ಪ್ರವೇಶ ವಿಳಂಬ‌ ಆಗುತ್ತಿರಲಿಲ್ಲವೇನೋ?

ಆಮ್ ಆದ್ಮಿ ಪಕ್ಷದ ಅಧಿಕಾರ ಇದ್ದರೂ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್​ನಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಿಸಿ ಹೊಸಬರನ್ನು ಅಖಾಡಕ್ಕೆ ಹೂಡಿ ಜಯ ಸಾಧಿಸಿದ್ದರು‌ ಅಮಿತ್ ಶಾ. ಈ ಗೆಲುವು ಅವರಲ್ಲಿ ಅತಿ ಉತ್ಸಾಹ ತಂದಿತ್ತೇನೋ, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಹೂಡಲು ಬಹಳ ಸಮಯ ತೆಗೆದುಕೊಂಡರು. ಆಮ್ ಆದ್ಮಿ ಪಕ್ಷ ತನ್ನ ಕೆಲಸವನ್ನೇ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದುದರಿಂದ ಬಿಜೆಪಿ ಬೇಗ ಅಭ್ಯರ್ಥಿಗಳನ್ನು ಅಖೈರುಗೊಳಿಸಿದ್ದರೆ ಕಡೆ ಪಕ್ಷ ಅಭ್ಯರ್ಥಿಗಳು ತಮ್ಮ ವೈಯಕ್ತಿಕವಾದ ವರ್ಚಸ್ಸು, ನೆಟ್ ವರ್ಕ್ ವೃದ್ಧಿಸಿಕೊಳ್ಳಲಾದರೂ ಸಮಯ ಸಿಗುತ್ತಿತ್ತು.

ಇನ್ನೂ ಆಮ್ ಆದ್ಮಿ ಪಕ್ಷವನ್ನು ಬಹಳ ಲಘುವಾಗಿ ಪರಿಗಣಿಸಿದ್ದು. ಈಗಾಗಲೇ ಹೇಳಿದಂತೆ ಅಮಿತ್ ಶಾ ಚುನಾವಣಾ ನಿಪುಣರಾಗಿರುವ ಕಾರಣಕ್ಕೆ ಆಮ್ ಆದ್ಮಿ ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದರು. ಅವರ ಪಕ್ಷದ ಎರಡನೇ ಹಂತದ ನಾಯಕರು, ಕಾಲಾಳುಗಳ ಕತೆ ಬಿಡಿ, ಸ್ವತಃ ಅವರೇ ಜನಪ್ರಿಯ ಮುಖ್ಯಮಂತ್ರಿ‌ ಅರವಿಂದ ಕೇಜ್ರಿವಾಲ್ ಅವರನ್ನು ಗೇಲಿ ಮಾಡಿದರು. ಸಿಸಿ ಟಿವಿಗಳ ಬಗ್ಗೆ ಸುಳ್ಳಾಡಿದರು. ಆಪ್ ಸೋಷಿಯಲ್ ಮೀಡಿಯಾ ಪಡೆ ಕೆಲವೇ ಗಂಟೆಗಳಲ್ಲಿ ಅಮಿತ್ ಶಾ ಮಾತನಾಡಿದ ಜಾಗದ ಸಿಸಿ ಟಿವಿ ಫೂಟೇಜ್ ಗಳನ್ನೇ ಪ್ರಸ್ತುತಪಡಿಸಿತು‌. ಆಪ್ ಸರ್ಕಾರ ಮತ್ತು ಅರವಿಂದ ಕೇಜ್ರಿವಾಲರನ್ನು ಜರಿಯುವ ಭರದಲ್ಲಿ ಈ ಬಾರಿ ದೆಹಲಿಯ ವಿದ್ಯಾರ್ಥಿಗಳಿಂದ ಒಳ್ಳೆಯ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಹಾಗಿದ್ದರೆ ನೀವು ವಿದ್ಯಾರ್ಥಿಗಳು, ಅವರಿಗೆ ಪಾಠ ಮಾಡುವ ಶಿಕ್ಷಕರು ಮತ್ತು ಪೋಷಕರನ್ನು ಅವಮಾನ ಮಾಡುತ್ತಿದ್ದೀರಾ? ಎಂದು ಆಪ್ ತಿರುಗೇಟು ನೀಡಿತು. ಇವು ಉದಾಹರಣೆಗಳಷ್ಟೇ. ಒಟ್ಟಾರೆಯಾಗಿ ಅಮಿತ್ ಶಾ ತಾವಂದುಕೊಂಡಂತೆ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ.

ಇನ್ನೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆಲುವನ್ನು ನೋಡಿದರೆ ಬಹಳ ಮುಖ್ಯವಾದ ಅಂಶ ಇಡೀ ಚುನಾವಣೆಯಲ್ಲಿ ಯಾವ ಹಂತದಲ್ಲೂ ಅವರು ಬಿಜೆಪಿ ಅಥವಾ ಅಮಿತ್ ಶಾ ತೋಡಿದ ಹಳ್ಳಕ್ಕೆ ಬೀಳಲಿಲ್ಲ‌. ಬಹಳ ಎಚ್ಚರಿಕೆಯಿಂದ ತಮ್ಮದೇ ನರೇಷನ್ ಗೆ ಬಿಜೆಪಿಯನ್ನು ಎಳೆದು ತಂದರು‌.

ಆರಂಭದಿಂದ ಅಂತ್ಯದವರೆಗೂ 'ಕೆಲಸ ನೋಡಿಕೊಂಡು ಮತ ಕೊಡಿ' ಎಂಬ ನಿಲುವಿಗೇ ಬದ್ದರಾಗಿದ್ದರು. ಅವರಷ್ಟೇಯಲ್ಲ, ಅವರ ಪಕ್ಷದ ಇಡೀ ತಂಡ ಇದೇ ಹಾದಿಯಲ್ಲಿ ಸಾಗುವಂತೆಯೂ ನೋಡಿಕೊಂಡರು. ಬಿಜೆಪಿಯವರು 'ಪಾಕಿಸ್ತಾನಿ' ಎಂಬ ಪಟ್ಟ ಕಟ್ಟಿದಾಗ 'ದೆಹಲಿಯ ಮಗ' ಎಂಬ ತಿರುಗೇಟು ನೀಡಿದರು. ಅದರಲ್ಲೂ 'ನಾನು ದೆಹಲಿಯ ಮಗನೋ ಅಲ್ಲವೋ ಎಂಬುದನ್ನು ನೀವೇ ನಿರ್ಧರಿಸಿ' ಎಂದು ದೆಹಲಿ ಮತದಾರರತ್ತ ವಿವಾದದ ಚೆಂಡು ಎಸೆದರು. ಬಿಜೆಪಿಯವರು 'ಬಿರಿಯಾನಿ' ವಿಷಯ ಪ್ರಸ್ತಾಪಿಸಿದ್ದಕ್ಕೆ 'ಹನುಮಾನ್ ಚಾಲಿಸ್' ಮೂಲಕ ಉತ್ತರ ಕೊಟ್ಟರು. ಶಾಹೀನ್ ಬಾಗ್ ನಲ್ಲಿ ಗುಂಡು ಹಾರಿಸಿ ಸಿಕ್ಕ ಬಿದ್ದ ಯುವಕನನ್ನು ಆಪ್ ಕಾರ್ಯಕರ್ತ ಎಂದು ಆರೋಪಿಸಿದಾಗ 'ಹಾಗಿದ್ದರೆ ಆತನಿಗೆ ಎರಡು ಪಟ್ಟು ಶಿಕ್ಷೆ ಕೊಡಿ' ಎಂಬ ವರಸೆ ಶುರುವಿಟ್ಟುಕೊಂಡರು. ಕಡೆ ಎರಡು ದಿನ ಇದ್ದಾಗ ಕಣ್ಣೀರಾಕಿ ಭಾವನಾತ್ಮಕವಾಗಿ ಭಾರೀ ಆಟ ಆಡುವ ಬಿಜೆಪಿಗರಿಗೆ ಅದೇ ಭಾವನಾತ್ಮಕವಾಗಿ ಮುಟ್ಟಿನೋಡಿಕೊಳ್ಳುವಂಥ ಹೊಡೆತ ನೀಡಿದರು.

ಇದನ್ನು ಓದಿ: Delhi Election Results; ದೆಹಲಿಯಲ್ಲಿ ಕೇಜ್ರಿವಾಲ್ ಗೆಲುವಿನ ಆರ್ಭಟ, ಬಿಜೆಪಿ-ಕಾಂಗ್ರೆಸ್​ ಧೂಳೀಪಟ; ಮೂರನೇ ಬಾರಿ ಅಧಿಕಾರದ ಗದ್ದುಗೆಗೆ ಆಮ್ ಆದ್ಮಿ

ಇಡೀ‌ ಚುನಾವಣೆ ಉದ್ದಕ್ಕೂ ಅಮಿತ್ ಶಾ ತನ್ನ ಮುಂದೆ ಏನೇನೂ ಅಲ್ಲ ಎಂಬಂತೆಯೇ ನಡೆದುಕೊಂಡರು. ಆದರೆ ಎಲ್ಲಿಯೂ ಉಗ್ರವಾದ ಭಾಷೆಯನ್ನು ಬಳಸದಂತೆ ಎಚ್ಚರಿಕೆಯನ್ನೂ ವಹಿಸಿದರು. 'ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಹೇಳಿ. ಒಂದೇ ದಿನದಲ್ಲಿ ಹೇಳಿ' ಎಂಬಿತ್ಯಾದಿ ಸವಾಲುಗಳಿಂದ ಬಿಜೆಪಿ ದೌರ್ಬಲ್ಯವನ್ನು ಎತ್ತಿ ತೋರಿಸಿ ಮೂದಲಿಸಿದರು. ಅಮಿತ್ ಶಾ ಮತ್ತವರ ಪಟಾಲಂ ಕೋಮುಧ್ರುವೀಕರಣ ಮಾಡಲು ಪ್ರಯತ್ನಿಸಿದಂತೆಲ್ಲಾ ಕೇಜ್ರಿವಾಲ್ ಕೆಲಸದ ವಿಷಯವನ್ನೇ ಮುಂದಿಟ್ಟುಕೊಂಡು ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಈಗ ಹೇಳಿ ಅಮಿತ್ ಶಾ ಮತ್ತು ಅರವಿಂದ ಕೇಜ್ರಿವಾಲ್; ಇಬ್ಬರಲ್ಲಿ ಯಾರು ನಿಜವಾದ ಚಾಣಾಕ್ಯ?
Youtube Video
First published: February 11, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories