ನವ ದೆಹಲಿ (ಜುಲೈ 13); "ನಮ್ಮ ಪಕ್ಷದ ಕುರಿತು ನಾನು ಚಿಂತಿತನಾಗಿದ್ದೇನೆ. ನಮ್ಮ ಅಶ್ವಶಾಲೆಗಳಿಂದ ಕುದುರೆಗಳು ತಪ್ಪಿಸಿಕೊಂಡ ನಂತರವೇ ನಾವು ಎಚ್ಚರಗೊಳ್ಳುತ್ತೇವೆ” ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಟ್ವೀಟ್ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕೊರೋನಾ ಲಾಕ್‌ಡೌನ್‌ಗೆ ಮುಂಚೆ ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಬಿಜೆಪಿ ಸಫಲವಾಗಿತ್ತು. ಸರಿಯಾಗಿ ಮೂರು ತಿಂಗಳ ನಂತರ ಇಂದು ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಈ ಕುರಿತು ಕಪಿಲ್ ಸಿಬಲ್ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬರ್ಥದಲ್ಲಿ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
Worried for our party
Will we wake up only after the horses have bolted from our stables ?
— Kapil Sibal (@KapilSibal) July 12, 2020
ಕಳೆದ ವರ್ಷ ಕರ್ನಾಟಕ, ಈ ವರ್ಷ ಮಧ್ಯಪ್ರದೇಶ ಸೇರಿದಂತೆ ಭಾರತದ ಪ್ರಮುಖ ಮತ್ತು ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ಆಪರೇಷನ್ ಕಮಲಕ್ಕೆ ಸೋತು ಅಧಿಕಾರ ಕಳೆದುಕೊಂಡಿದೆ. ಈಗ ರಾಜಸ್ಥಾನದಲ್ಲಿಯೂ ಅದೇ ಸ್ಥಿತಿ ಎದರಿಸುತ್ತಿದ್ದು, ಸಚಿನ್ ಪೈಲಟ್ ಪಕ್ಷ ತ್ಯಜಿಸುವುದು ಬಹುತೇಕ ಖಚಿತವಾಗಿದೆ.
ಸಚಿನ್ ಪೈಲಟ್ ಮಾರ್ಚ್‌ನಿಂದ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ 22 ಶಾಸಕರೊಂದಿಗೆ ಪಕ್ಷದಿಂದ ಹೊರಬಂದು ಬಿಜೆಪಿ ಸೇರಿದಾಗ ಅಲ್ಲಿನ ಮಧ್ಯಪ್ರದೇಶ ಸರ್ಕಾರ ಕುಸಿದು ಬಿದ್ದಿತ್ತು. ಇದೀಗ ಅಂತಹದ್ದೇ ಸ್ಥಿತಿ ರಾಜಸ್ಥಾನ ಸರ್ಕಾರಕ್ಕೂ ಎದುರಾಗಿದೆ.
ಅಶೋಕ್ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದ ಸಚಿನ್ ಪೈಲಟ್, "ಗೆಹ್ಲೋಟ್ ಜೊತೆಗಿನ ಅನುಭವ ಸಾಕಾಗಿದೆ. ಸರ್ಕಾರ ಉರುಳಿಸುವ ಆರೋಪದ ಸಮನ್ಸ್ ಅನ್ನು ನೀಡಿರುವುದು ಒಬ್ಬ ಉಪಮುಖ್ಯಮಂತ್ರಿಯನ್ನು ನಡೆಸಿಕೊಳ್ಳುವ ರೀತಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇದೇ ಕಾರಣಕ್ಕೆ ಅವರು ಬಿಜೆಪಿ ಸೇರ್ಪಡೆಯಾಗಲೂ ಮುಂದಾಗಿದ್ದರು ಎನ್ನಲಾಗುತ್ತಿದೆ.
ಈ ನಡುವೆ ಅವರು ತಮ್ಮ ಬೆಂಬಲಿತ ಶಾಸಕರ ಜೊತೆಗೆ ಕಳೆದ ಶನಿವಾರವೇ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆಗೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂತ್ತು. ಆದರೆ, ಈ ನಡುವೆ ಇಂದು ಮತ್ತೊಂದು ಹೇಳಿಕೆ ನೀಡಿರುವ ಅವರು, "ತಾವು ಯಾವುದೇ ಪಕ್ಷದ ಜೊತೆಗೆ ಸೇರ್ಪಡೆಯಾಗುತ್ತಿಲ್ಲ" ಎಂದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ