ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದಾಗಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ದ ಎಂದು ಹೇಳಿರುವುದರಿಂದ, ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇನ್ನೊಂದು ಸುತ್ತಿನ ಸಭೆ ಯಾವಾಗ ನಡೆಯಲಿದೆ ಎಂಬ ಕುತೂಹಲ ಹುಟ್ಟುಕೊಂಡಿದೆ. ಇಂಥ ಕುತೂಹಲ ಹುಟ್ಟಲು ಕಾರಣವೂ ಇದೆ. ಈಗಾಗಲೇ ಕೇಂದ್ರ ಸರ್ಕಾರ ಮತ್ತು ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳ ಪದಾಧಿಕಾರಿಗಳ ಜೊತೆ 11 ಸುತ್ತು ಮಾತುಕತೆ ಆಗಿ ಅಷ್ಟೂ ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಭಾರೀ ಪ್ರಭಾವಿ ಎಂದೇ ಹೇಳಲಾಗುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರೈತ ಮುಖಂಡರೊಂದಿಗೆ ಒಮ್ಮೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ. ಆದರೆ ಅವರು ಕೂಡ ರೈತರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಆದುದರಿಂದ ಇನ್ನೊಂದು ಸಭೆ ಯಾವಾಗ ನಡೆಯಬಹುದು ಎಂಬುದು ಮಹತ್ವದ ವಿಷಯವಾಗಿದೆ.
ರೈತರು ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ತಾವು ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ರೈತರ ಹೋರಾಟ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ಈಗ ರೈತರ ಜೊತೆ ಔಪಚಾರಿಕ ಚರ್ಚೆ ನಡೆಸುವ ಪ್ರಯತ್ನ ಮಾಡುತ್ತಿದೆ. ಆದರೆ ರೈತ ಸಂಘಟನೆಗಳನ್ನು ಮುನ್ನಡೆಸುತ್ತಿರುವ ಸಂಯುಕ್ತ್ ಕಿಸಾನ್ ಮೋರ್ಚಾ ಕೇಂದ್ರ ಸರ್ಕಾರ ಮತ್ತು ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ ಕೇಂದ್ರ ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ 'ಮಾತುಕತೆ' ನಡೆಯುವುದು ಸುಲಭ ಸಾಧ್ಯವಾಗಿಲ್ಲ.
ಇದಲ್ಲದೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಈಗಾಗಲೇ 12ನೇ ಸುತ್ತಿನ ಸಭೆ ನಡೆಸುದಿಲ್ಲ. ರೈತರು ತಮ್ಮ ನಿಲುವನ್ನು ಸಡಿಲಗೊಳಿಸಲೇಬೇಕು ಎಂದಿದ್ದಾರೆ. ಸದ್ಯ ನರೇಂದ್ರ ಮೋದಿ ಮಾತನಾಡಿರುವುದು ಕೂಡ 'ರೈತರು ರಾಜಿಗೆ ಬರಬೇಕು' ಎಂಬ ಧಾಟಿಯಲ್ಲಿ ಇರುವುದರಿಂದ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಸಭೆ ನಡೆಯುವುದು ಈಗಲೂ ಅನುಮಾನಸ್ಪದವಾಗಿಯೇ ಇದೆ.
ದೆಹಲಿ ಗಡಿಗಳಲ್ಲಿ ಕಳೆದ 71 ದಿನಗಳಿಂದ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಮುನ್ನಡೆಸುತ್ತಿದ್ದು, ಸಂಯುಕ್ತ ಕಿಸಾನ್ ಮೋರ್ಚಾ, 'ರೈತ ವಿರೋಧಿಯಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬುದನ್ನು ಬಿಟ್ಡು ರೈತರು ಕೇಂದ್ರ ಸರ್ಕಾರದಿಂದ ಮತ್ತೇ ಇನ್ನೇನನ್ನೂ ನಿರೀಕ್ಷೆ ಮಾಡುವುದಿಲ್ಲ' ಎಂಬುದಾಗಿ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಪ್ರವೇಶ ಮಾಡುತ್ತಾರೆ ಎನ್ನುವ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿರುವ ರಸ್ತೆಗಳಲ್ಲಿ ಹಲವು ಸುತ್ತಿನ ಬ್ಯಾರಿಕೇಡ್ ಹಾಕಲಾಗಿದೆ. ಅದರ ಮೇಲೆ ಮುಳ್ಳು ತಂತಿ ಬೇಲಿಗಳನ್ನು ಹಾಕಲಾಗಿದೆ. ರಸ್ತೆಗಳಲ್ಲಿ ಕಂದಕ ಸೃಷ್ಟಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ