ಡೊನಾಲ್ಡ್ ಟ್ರಂಪ್​​ಗೆ ಎರಡು ಬಾರಿ ವಾಗ್ದಂಡನೆ; ಅಮರಿಕದ ಇತಿಹಾಸದಲ್ಲಿ ಇದೇ ಮೊದಲು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ವಾಗ್ದಂಡನೆಗೆ ಒಳಗಾಗಿದ್ದಾರೆ. ಒಂದು ವೇಳೆ ಸೆನೇಟ್​ನಲ್ಲಿ ಈ ವಾಗ್ದಂಡನೆ ವಿಚಾರಣೆ ವೇಳೆ ಟ್ರಂಪ್ ದೋಷಿ ಎಂದು ಪರಿಗಣಿತವಾದರೆ ಭವಿಷ್ಯದಲ್ಲಿ ಅವರು ಅಧಿಕಾರಕ್ಕೆ ಮರಳಿ ಏರಲು ಸಾಧ್ಯವಾಗುವುದಿಲ್ಲ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

  • News18
  • Last Updated :
  • Share this:
ವಾಷಿಂಗ್ಟನ್(ಜ. 14): ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರು ಎರಡು ಬಾರಿ ವಾಗ್ದಂಡನೆಗೆ (Impeachment) ಒಳಗಾಗಿದ್ಧಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಪೇಕ್ಷಿತ ದಾಖಲೆ ಬರೆದಿದ್ದಾರೆ. ಅಮೆರಿಕದ ಸಂಸತ್ ಭವನವಾದ ಕ್ಯಾಪಿಟಲ್ ಬ್ಯುಲ್ಡಿಂಗ್ (The Capitol Building) ಮೇಲೆ ಜನರು ಆಕ್ರಮಣ ಮಾಡಿದ ಘಟನೆಗೆ ಡೊನಾಲ್ಡ್ ಟ್ರಂಪ್ ಅವರನ್ನ ಹೊಣೆಯಾಗಿಸಿ ಅಮೆರಿಕದ ಸದನವು ದೋಷಾರೋಪಣೆ (ವಾಗ್ದಂಡನೆ) ಮಾಡಿತು. ಟ್ರಂಪ್​ಗೆ ವಾಗ್ದಂಡನೆ ಮಾಡುವ ನಿರ್ಣಯದ ಪರವಾಗಿ 232 ಮತ್ತು ವಿರುದ್ಧವಾಗಿ 197 ಮತಗಳು ಬಿದ್ದವು.

ಈ ಹಿಂದಿನ ಕೆಲ ಅಮೆರಿಕ ಅಧ್ಯಕ್ಷರಿಗೆ ಮಹಾಭಿಯೋಗ ನಡೆಸಲಾಗಿದೆಯಾದರೂ ಎರಡು ಬಾರಿ ವಾಗ್ದಂಡನೆ ಶಿಕ್ಷೆಗೆ ಒಳಗಾದ ಮೊದಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿದ್ದಾರೆ. ಇದು ಅಧ್ಯಕ್ಷರನ್ನು ಪದಚ್ಯುತಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಆದರೆ, ಡೊನಾಲ್ಡ್ ಅವರನ್ನು ಕೆಳಗಿಳಿಸುವ ಸಾಧ್ಯತೆ ಕಾಣುತ್ತಿಲ್ಲ. ಜ. 19ರವರೆಗೆ ಟ್ರಂಪ್ ಅವರು ಅಧಿಕಾರದಲ್ಲಿರುತ್ತಾರೆ. ಜ. 20ಕ್ಕೆ ಜೋ ಬೈಡೆನ್ ಅವರು ನೂತನ ಅಮೇರಿಕಾ ಅಧ್ಯಕ್ಷರಾಗಲಿದ್ದಾರೆ. ಅಷ್ಟರೊಳಗೆ ಟ್ರಂಪ್ ಅವರನ್ನ ಕೆಳಗಿಳಿಸುವ ಸಾಧ್ಯತೆ ಕಡಿಮೆ. ಯಾಕೆಂದರೆ, ಈಗ ವಿಧಿಸಲಾಗಿರುವ ವಾಗ್ದಂಡನೆಯನ್ನು ಸದನದಲ್ಲಿ ಚರ್ಚೆಗೆ ತೆಗೆದುಕೊಂಡು ಟ್ರಂಪ್ ದೋಷಿ ಎಂದು ಮೂರನೇ ಎರಡು ಬಹುಮತದೊಂದಿಗೆ ನಿರ್ಣಯ ಆಗಬೇಕಿದೆ. ಆದರೆ, ಜ. 20ರೊಳಗೆ ಸದನ ನಡೆಸಲು ಆಗುವುದಿಲ್ಲ. ಹೀಗಾಗಿ, ಅವಧಿಗೆ ಮುನ್ನ ಟ್ರಂಪ್ ಅವರನ್ನ ಕೆಳಗಿಳಿಸುವ ಪ್ರಯತ್ನ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Bitcoin - ಬಿಟ್​ಕಾಯಿನ್ ಪಾಸ್​ವರ್ಡ್ ಮರೆತು ಜನರು ಕಳೆದುಕೊಂಡ ಹಣ 10 ಲಕ್ಷ ಕೋಟಿಯಾ?

ಇದಾದರೂ ಡೊನಾಲ್ಡ್ ಟ್ರಂಪ್ ಅವರನ್ನ ಭವಿಷ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆಯೇ ಮಾಡುವ ಸಾಧ್ಯತೆ ಇದೆ. ವಾಗ್ದಂಡನೆ ಇಟ್ಟುಕೊಂಡು ಸದನದಲ್ಲಿ ಟ್ರಂಪ್ ದೋಷಿ ಎಂಬ ನಿರ್ಣಯ ಆದಲ್ಲಿ ಟ್ರಂಪ್ ಅವರು ಮತ್ತೆಂದೂ ಅಧಿಕಾರಕ್ಕೆ ಏರಲು ಸಾಧ್ಯವಾಗುವುದಿಲ್ಲ. ಜೋ ಬೈಡೆನ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಈ ಪ್ರಕ್ರಿಯೆ ನಡೆಯಬಹುದು. ಹಾಗೊಂದು ಬೆಳವಣಿಗೆ ಆದಲ್ಲಿ ಅಮೆರಿಕ ಇತಿಹಾಸದಲ್ಲಿ ಈ ಹಿಂದೆ ಯಾವ ಅಧ್ಯಕ್ಷರೂ ವಾಗ್ದಂಡನೆ ವಿಚಾರಣೆಯಲ್ಲಿ ದೋಷಿ ಎನಿಸಿಲ್ಲ. ಟ್ರಂಪ್​ಗೆ ಇಂಥದ್ದೊಂದು ಕಳಂಕ ಮೆತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಡೆಮಾಕ್ರಾಟ್ ಅಭ್ಯರ್ಥಿ ಜೋ ಬೈಡೆನ್ ಎದುರು ಪರಾಭವಗೊಂಡಿದ್ದರು. ಸೋಲನ್ನು ಒಪ್ಪಿಕೊಳ್ಳದ ಟ್ರಂಪ್ ಅವರು, ಚುನಾವಣೆಯಲ್ಲಿ ಮೋಸವಾಗಿದೆ. ನ್ಯಾಯಯುತವಾಗಿ ಬೈಡೆನ್ ಗೆದ್ದಿಲ್ಲ. ವ್ಯಾಲಿಡ್ ವೋಟ್​ಗಳ ಮರು ಎಣಿಕೆ ಆಗಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರು. ಜನವರಿ 6ರಂದು ಅವರು ತಮ್ಮ ಭಾಷಣದಲ್ಲಿ, ಚುನಾವಣಾ ಫಲಿತಾಂಶದ ವಿರುದ್ಧ ಭಾರೀ ಹೋರಾಟ (Fight like hell) ನಡೆಸುವಂತೆ ಸಾರ್ವಜನಿಕವಾಗಿ ಕರೆ ನೀಡಿದ್ದರು. ಇದರಿಂದ ಲಕ್ಷಾಂತರ ಮಂದಿ ಟ್ರಂಪ್ ಬೆಂಬಲಿಗರು ಕಳೆದ ವಾರದಂದು ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಬ್ಯುಲ್ಡಿಂಗ್ (ಅಮೆರಿಕದ ಸಂಸತ್ ಭವನ) ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಿಂಸಾಚಾರದಲ್ಲಿ ನಾಲ್ಕೈದು ಮಂದಿ ಮೃತಪಟ್ಟಿದ್ದರು. ಜನದಂಗೆಯಲ್ಲಿ ಆದ ದಾಂದಲೆ ಇಡೀ ವಿಶ್ವವನ್ನ ಅಮೆರಿಕದತ್ತ ವ್ಯಂಗ್ಯವಾಗಿ ನೋಡುವಂತೆ ಮಾಡಿತು. ಇದಕ್ಕೆ ಡೊನಾಲ್ಡ್ ಟ್ರಂಪ್ ಅವರ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದು ಬಗೆಯಲಾಗಿದೆ. ಹೀಗಾಗಿ, ಇಂಪೀಚ್​ಮೆಂಟ್ ಪ್ರಕ್ರಿಯೆ ನಡೆಸಲಾಯಿತು.

ಇದನ್ನೂ ಓದಿ: 83 ತೇಜಸ್​ ಲಘು ಯುದ್ಧ ವಿಮಾನ ಖರೀದಿಗೆ ಮೋದಿ ಸಂಪುಟ ಒಪ್ಪಿಗೆ

ಈಗ ಸೆನೆಟ್​ನಲ್ಲಿ ಡೆಮಾಕ್ರಾಟ್ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಟ್ರಂಪ್ ವಿರುದ್ಧದ ವಾಗ್ದಂಡನೆ ವಿಚಾರಣೆಯಲ್ಲಿ ದೋಷಿ ಎಂಬ ನಿರ್ಣಯಕ್ಕೆ ಬಹುಮತ ಸಿಗುವ ಸಾಧ್ಯತೆ ಇದ್ದೇ ಇದೆ. ಭವಿಷ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಇದು ಎಚ್ಚರಿಕೆಯ ಪಾಠವಾಗಬಹುದು.

ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರಾವಧಿಯ ಕೊನೆಗಾಲದಲ್ಲಿ ಇನ್ನಿಲ್ಲದ ಅವಮಾವ ಎದುರಿಸಿದ್ದಾರೆ. ಕ್ಯಾಪಿಟಾಲ್ ಆಕ್ರಮಣದ ಬಳಿಕ ಟ್ವಿಟ್ಟರ್ ಮತ್ತು ಫೇಸ್​ಬುಕ್ ಸಾಮಾಜಿಕ ಜಾಲತಾಣಗಳು ಟ್ರಂಪ್ ಅವರನ್ನ ಸಂಪೂರ್ಣವಾಗಿ ಬಹಿಷ್ಕರಿಸಿದೆ. ಸೋಷಿಯಲ್ ಮೀಡಿಯಾದಲ್ಲೇ ಹೆಚ್ಚಾಗಿ ಹೇಳಿಕೆಗಳನ್ನ ನೀಡುತ್ತಿದ್ದ ಟ್ರಂಪ್ ಅವರ ಧ್ವನಿ ಬಹುತೇಕ ಅಡಗಿದಂತಾಗಿದೆ. ಇಂಥದ್ದೊಂದು ನಿರ್ಗಮನವನ್ನು ಅವರು ಎಂದೂ ನಿರೀಕ್ಷಿಸಿರಲಿಲ್ಲ.
Published by:Vijayasarthy SN
First published: