ಆರ್ಥಿಕ ಕುಸಿತ, ಆತಂಕದಲ್ಲಿ ಭಾರತ; ಆರ್ಥಿಕತೆ ಎಂದರೇನು? ಲೆಕ್ಕಾಚಾರ ಹೇಗೆ? ದೇಶದ ಪ್ರಸ್ತುತ ಸ್ಥಿತಿ ಏನು? ಇಲ್ಲಿದೆ ಮಾಹಿತಿ

ಆಟೋಮೊಬೈಲ್​ನಿಂದ ಹೋಟೆಲ್​ ಉದ್ಯಮದವರೆಗೆ ಎಲ್ಲಾ ಕ್ಷೇತ್ರಗಳು ಕುಸಿಯಲು ದೇಶದ ಆರ್ಥಿಕತೆಯೇ ನೇರ ಕಾರಣ. ಅರಗಿಸಿಕೊಳ್ಳಲು ಕಷ್ಟವಾದರೂ ಇದೇ ಸತ್ಯ.  ಹಾಗಾದರೆ ಆರ್ಥಿಕತೆ ಎಂದರೆ ಏನು? ಆರ್ಥಿಕತೆಯ (ಜಿಡಿಪಿ) ದರವನ್ನು ಹೇಗೆ ಅಂದಾಜಿಸಲಾಗುತ್ತದೆ? ಇದು ಜನರ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದರ ಪರಿಹಾರಕ್ಕಿರುವ ದಾರಿಯಾದರೂ ಯಾವುದು? ದೇಶದ ಪ್ರಸ್ತುತ ಆರ್ಥಿಕತೆಯ ಕುರಿತ ವಾಸ್ತವ ಮಾಹಿತಿ ಇಲ್ಲಿದೆ ಆಸಕ್ತಿ ಇದ್ದವರು ಓದಿಕೊಳ್ಳಿ.

MAshok Kumar | news18-kannada
Updated:September 14, 2019, 3:43 PM IST
ಆರ್ಥಿಕ ಕುಸಿತ, ಆತಂಕದಲ್ಲಿ ಭಾರತ; ಆರ್ಥಿಕತೆ ಎಂದರೇನು? ಲೆಕ್ಕಾಚಾರ ಹೇಗೆ? ದೇಶದ ಪ್ರಸ್ತುತ ಸ್ಥಿತಿ ಏನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ.
  • Share this:
ಪ್ರಸ್ತುತ ಇಡೀ ದೇಶವನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ದೇಶದಲ್ಲಿ ಯುವಕರ ಶಿಕ್ಷಣಕ್ಕೆ ಹಾಗೂ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಲಭ್ಯವಾಗುತ್ತಿಲ್ಲ. ಕೆಲಸ ಸಿಕ್ಕರೂ ಸೂಕ್ತ ಸಂಬಳ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರವೇ ಹೇಳುವುದಾದರೆ ಕಳೆದ 45 ವರ್ಷದಲ್ಲಿ ದೇಶ ಹಿಂದೆಂದೂ  ಕಾಣದ ಮಟ್ಟಿಗಿನ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದೆ. ಪರಿಣಾಮ ದೇಶದ ಯುವ ಸಮುದಾಯ ಭವಿಷ್ಯದ ಚಿಂತೆಯಲ್ಲಿ ದಿನದೂಡುವಂತಾಗಿದೆ.

ಪ್ರಸ್ತುತ ಆಟೋ ಮೊಬೈಲ್ ಕ್ಷೇತ್ರ ಸಂಪೂರ್ಣವಾಗಿ ನೆಲ ಕಚ್ಚಿದೆ. ಅಂದಾಜಿನ ಪ್ರಕಾರ ಕಳೆದ ಆರು ತಿಂಗಳ ಅವಧಿಯಲ್ಲಿ ದೇಶದಲ್ಲಿ ವಾಹನಗಳ ಮಾರಾಟದ ಪ್ರಮಾಣ ಶೇ.27 ರಿಂದ ಶೇ.33 ರಷ್ಟು ಕುಸಿತ ಕಂಡಿದೆ. ಪರಿಣಾಮ ದೇಶದ ಆಟೋಮೊಬೈಲ್ ಕ್ಷೇತ್ರದ ದೈತ್ಯ ಎಂದೇ ಗುರುತಿಸಿಕೊಳ್ಳುವ ‘ಮಾರುತಿ ಸುಜುಕಿ’ಯಂತಹ ಕಂಪೆನಿ ತನ್ನ ಉತ್ಪಾದನಾ ಘಟಕವನ್ನೇ ಸ್ಥಗಿತಗೊಳಿಸುವ ಕುರಿತು ಆಲೋಚಿಸುತ್ತಿದೆ. ಈ ಬೆಳವಣಿಗೆಯೂ ಸಹ ದೇಶದ ನಿರುದ್ಯೋಗ ಸಮಸ್ಯೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಜನ ಸಾಮಾನ್ಯರು ವಾಹನಗಳನ್ನು ಖರೀದಿ ಮಾಡಿದರೂ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದಿನದಿಂದ ದಿನಕ್ಕೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಪರಿಣಾಮ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಇನ್ನೂ ಚಿನ್ನದ ಬೆಲೆಯಂತೂ ಬಡ ಹಾಗೂ ಮಧ್ಯಮ ವರ್ಗದ ಜನರ ಕೈಗೂ ಸಿಗದಷ್ಟು ಎತ್ತರಕ್ಕೆ ಏರಿ ಕುಳಿತಿದೆ. ಭಾರತದ ಇತಿಹಾಸದಲ್ಲೇ ಚಿನ್ನ ಎಂಬ ಲೋಹ ಪ್ರಸ್ತುತ ಎಂದೂ ಕಂಡು ಕೇಳರಿಯದಷ್ಟು ದುಬಾರಿಯಾಗಿ ಪರಿಣಮಿಸಿದೆ.

ಭಾರತದಲ್ಲಿನ ಇಷ್ಟೆಲ್ಲಾ ಬೆಳವಣಿಗೆಗಳಿಗೆ ಕುಸಿಯುತ್ತಿರುವ ನಮ್ಮ ದೇಶದ ಆರ್ಥಿಕತೆಯೇ ನೇರ ಕಾರಣ. ಅರಗಿಸಿಕೊಳ್ಳಲು ಕಷ್ಟವಾದರೂ ಇದೇ ಸತ್ಯ. ಹಾಗಾದರೆ ಆರ್ಥಿಕತೆ ಎಂದರೆ ಏನು? ಆರ್ಥಿಕತೆಯ (ಜಿಡಿಪಿ) ದರವನ್ನು ಹೇಗೆ ಅಂದಾಜಿಸಲಾಗುತ್ತದೆ? ಇದು ಜನ ಸಾಮಾನ್ಯರ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಈ ಸಮಸ್ಯೆಯ ಪರಿಹಾರಕ್ಕಿರುವ ದಾರಿಯಾದರೂ ಯಾವುದು? ದೇಶದ ಆರ್ಥಿಕತೆಯ ಕುರಿತ ಪ್ರಸ್ತುತ ವಾಸ್ತವ ಮಾಹಿತಿ ಇಲ್ಲಿದೆ ಆಸಕ್ತಿ ಇದ್ದವರು ಓದಿಕೊಳ್ಳಿ.

ಆರ್ಥಿಕತೆ ಮತ್ತು ಅದರ ಲೆಕ್ಕಾಚಾರ:

ಈವರೆಗೆ ಭಾರತವನ್ನು ವಿಶ್ವದ ಟಾಪ್ 5 ಪ್ರಬಲ ಆರ್ಥಿಕತೆ ಹೊಂದಿರುವ ರಾಷ್ಟ್ರ, ಅಭಿವೃದ್ಧಿ ಶೀಲ ರಾಷ್ಟ್ರ ಎಂದೇ ಪರಿಗಣಿಸಲಾಗಿತ್ತು. ಆದರೆ, ವಿಶ್ವಬ್ಯಾಂಕ್ ಇದೀಗ ಭಾರತವನ್ನು ಅಭಿವೃದ್ಧಿಶೀಲ ರಾಷ್ಷ್ರಗಳ ಪಟ್ಟಿಯಿಂದಲೇ ಹೊರಗಿಟ್ಟಿದೆ. ಇದಕ್ಕೆ ಕಾರಣ ಭಾರತದ ಆರ್ಥಿಕತೆಯಲ್ಲಿನ ಭಾರೀ ಕುಸಿತ.

ಕಳೆದ ಒಂದು ದಶಕದಿಂದ ಭಾರತ ಒಟ್ಟಾರೆ ಆರ್ಥಿಕತೆಯನ್ನು 3 ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಜಿಡಿಪಿ ದರ 9 ರ ಆಸುಪಾಸಿನಲ್ಲಿತ್ತು. ಅಲ್ಲದೆ, 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕಡೆಗೆ ಹೆಜ್ಜೆ ಇಡುವುದು ನಮ್ಮ ಧ್ಯೇಯ ಎಂದು ಕಳೆದ ವರ್ಷ ಸ್ವತಃ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.ಆದರೆ, ವಾಸ್ತವದಲ್ಲಿ ಭಾರತದ ಆರ್ಥಿಕತೆ ಇದೀಗ ಕುಸಿತದ ಹಾದಿ ಹಿಡಿದಿದೆ. 3 ಟ್ರಿಲಿಯನ್​ನಿಂದ 2 ಟ್ರಿಲಿಯನ್ ಡಾಲರ್ ಕಡೆಗೆ ಹಿಮ್ಮುಖವಾಗಿ ಚಲಿಸುತ್ತಿದೆ. ದೇಶದ ಜಿಡಿಪಿ ದರ 9 ರಿಂದ 5ಕ್ಕೆ ಕುಸಿದಿದೆ. ಒಪ್ಪಿಕೊಳ್ಳಲು ಕಷ್ಟವಾದರೂ ಇದೇ ಸತ್ಯ ಎಂದು ಈಗಾಗಲೇ ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಅನೇಕ ಅರ್ಥಶಾಸ್ತ್ರಜ್ಞರು ಈ ಕುರಿತು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಒಂದು ದೇಶದ ಜನ ಎಷ್ಟರ ಮಟ್ಟಿಗೆ ಹಣವನ್ನು ಖರ್ಚು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದರ ಆಧಾರದ ಮೇಲೆಯೇ ಆ ದೇಶದ ಆರ್ಥಿಕತೆಯನ್ನು ನಿರ್ಧರಿಸಲಾಗುತ್ತದೆ. ಯಾವ ದೇಶದಲ್ಲಿ ಆಂತರಿಕವಾಗಿ ಅಧಿಕ ಪ್ರಮಾಣದ ದ್ರವರೂಪಿ ಹಣ ವಹಿವಾಟು ನಡೆಯುತ್ತದೆಯೋ ಅದರ ಆಧಾರದಲ್ಲಿಯೇ ಆ ದೇಶದ ಜಿಡಿಪಿ ದರವನ್ನು ಅಳೆಯಲಾಗುತ್ತದೆ ಮತ್ತು ಅದನ್ನು ಉತ್ತಮ ಅಥವಾ ಅಭಿವೃದ್ಧಿಯ ಆರ್ಥಿಕತೆ ಎಂದು ಕರೆಯಲಾಗುತ್ತದೆ.

ಉದಾಹರಣೆಗೆ;  ಹೋಟೆಲ್ ಉದ್ಯಮ ನಡೆಸುತ್ತಿರುವ ನಿಮ್ಮ ತಂದೆ ನಿಮಗೆ 500 ರೂ. ಹಣ ನೀಡುತ್ತಾರೆ. ಆ ಹಣವನ್ನು ನೀವು ಸಿನಿಮಾ ನೋಡಲು ಬಳಸುತ್ತೀರಿ ಎಂದು ಭಾವಿಸಿಕೊಳ್ಳಿ. ಆ ಚಿತ್ರಮಂದಿರ ಮಾಲೀಕ ಆ ಹಣವನ್ನು ಅಂದು ಸಂಜೆಯೇ ತನ್ನ ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿ ಮಾಡಲು ಬಳಸುತ್ತಾನೆ. ಆ ದಿನಸಿ ಅಂಗಡಿಯ ಮಾಲೀಕ ಮರುದಿನ ಬೆಳಗ್ಗೆ ತನ್ನ ಕುಟುಂಬದೊಂದಿಗೆ ಮತ್ತೆ ನಿಮ್ಮ ತಂದೆಯದ್ದೇ ಹೋಟೆಲ್​ಗೆ ಬಂದು ಊಟ ಮಾಡಿ ಅದೇ 500 ರೂ ಹಣವನ್ನು ಖರ್ಚು ಮಾಡಿ ತೆರಳುತ್ತಾನೆ ಎಂದಿಟ್ಟುಕೊಳ್ಳಿ.

ಅಂದರೆ ಈ ಆರ್ಥಿಕ ಚಕ್ರದಲ್ಲಿ ನಿಮ್ಮ 500 ರೂಪಾಯಿ 2,000 ಮೌಲ್ಯದ ಆರ್ಥಿಕತೆಯನ್ನು ಸೃಷ್ಟಿಸಿದಂತಾಗುತ್ತದೆ. ಹೀಗೆ ಜನ ಸಾಮಾನ್ಯರ ಹಣದ ಖರ್ಚಿನ ಸಾಮರ್ಥ್ಯ ಹಾಗೂ ಆ ಹಣ ಸೃಷ್ಟಿಸಿದ ಆರ್ಥಿಕತೆಯ ಆಧಾರದಲ್ಲಿ ಒಂದು ದೇಶದ ಅಭಿವೃದ್ಧಿ, ಆರ್ಥಿಕ ಸುಸ್ಥಿರತೆ ಹಾಗೂ ಆರ್ಥಿಕ ದರವನ್ನು ಅಳೆಯಲಾಗುತ್ತದೆ. ಆದರೆ, ಪ್ರಸ್ತುತ ದೇಶದ ಬಹು ಸಂಖ್ಯಾತ ಬಡ ಮತ್ತು ಮಧ್ಯಮ ವರ್ಗದ ಜನರ ಬಳಿ ಖರ್ಚು ಮಾಡಲು ಹಣವೇ ಇಲ್ಲ ಎಂಬುದೇ ಬಹಿರಂಗ ಸತ್ಯ.

ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆಯಿಂದಾಗಿಯೇ ಜನ ಈ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಎಂಬುದು ಎಷ್ಟು ಸತ್ಯವೋ? ಇದೇ ಕಾರಣಕ್ಕೆ ಆಟೋಮೊಬೈಲ್ ನಿಂದ ರಿಯಲ್ ಎಸ್ಟೇಟ್ ವರೆಗೆ ಎಲ್ಲಾ ಕ್ಷೇತ್ರಗಳು ನಷ್ಟ ಅನುಭವಿಸುತ್ತಿವೆ ಎಂಬುದು ಅಷ್ಟೇ ಸತ್ಯ. ಈ ಕ್ಷೇತ್ರಗಳಲ್ಲಿ ಉಂಟಾಗುತ್ತಿರುವ ನಷ್ಟ ಮತ್ತಷ್ಟು ನಿರುದ್ಯೋಗಕ್ಕೆ ಕಾರಣವಾಗಲಿದೆ ಪರಿಣಾಮ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂಬುದು ಕಹಿಯಾದ ವಾಸ್ತವ.ಆಟೋಮೊಬೈಲ್​ ಕ್ಷೇತ್ರದ ತಜ್ಞರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ನೀಡಿರುವ ವರದಿಯ ಪ್ರಕಾರ ದೇಶದಲ್ಲಿ ಶೇ.26 ರಷ್ಟು ಕಾರುಗಳ ಮಾರಾಟದಲ್ಲಿ ಹಿನ್ನಡೆಯಾಗಿದೆ. ಬೈಕ್​ಗಳ ಮಾರಾಟದಲ್ಲಿ ಶೇ.19 ರಷ್ಟು ಹಿನ್ನಡೆಯಾಗಿದ್ದರೆ, ಕೃಷಿ ಕ್ಷೇತ್ರದ ಬೆನ್ನೆಲುಬಾದ ಟ್ರ್ಯಾಕ್ಟರ್ ಮಾರಾಟವೂ ಸಹ ಶೇ.10ರಷ್ಟು ಕುಸಿತ ಕಂಡಿದೆ. ಇನ್ನೂ ಕೇವಲ 5 ರೂಪಾಯಿ ಮೌಲ್ಯದ ಪಾರ್ಲೆ-ಜಿ ಬಿಸ್ಕಟ್ ಮಾರಾಟದಲ್ಲೂ ಸಹ ಶೇ.10 ರಿಂದ 20 ರಷ್ಟು ಕುಸಿತವಾಗಿದೆ. ಪರಿಣಾಮ ದೇಶದ ಖ್ಯಾತ ಬಿಸ್ಕಟ್ ಕಂಪೆನಿಯಾದ ಪಾರ್ಲೆ-ಜಿ ತನ್ನ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದಲೇ ವಜಾ ಮಾಡಲು ಮುಂದಾಗಿದೆ.

ಕೇವಲ 5 ರೂಪಾಯಿ ಮೌಲ್ಯದ ಬಿಸ್ಕಟ್ ಖರೀದಿ ಮಾಡಲೂ ಸಹ ಜನ ಸಾಮಾನ್ಯರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ದೇಶದ ಆರ್ಥಿಕತೆ ಹಾಗೂ ಜನರ ಖರ್ಚು ಮಾಡಬಹುದಾದ ಸಾಮರ್ಥ್ಯದ ಕುರಿತ ಪ್ರಸ್ತುತ ಪರಿಸ್ಥಿತಿಯನ್ನು ನೀವು ಊಹಿಸಬಹುದು. ಪ್ರಸ್ತುತ ದೇಶ ಇಂದು ಅನುಭವಿಸುತ್ತಿರುವ ಇಂತಹ ಕಠಿಣ ಪರಿಸ್ಥಿತಿಗೆ ಕೇಂದ್ರ ಸರ್ಕಾರದ ಜಾರಿಗೆ ತಂದ ನೋಟ್ ಬ್ಯಾನ್ ಮತ್ತು ಜಿಎಸ್​ಟಿ ಯೇ ಕಾರಣ ಎಂಬುದು ಅರ್ಥಶಾಸ್ತ್ರಜ್ಞರ ಆರೋಪ

ನೋಟ್ ಬ್ಯಾನ್-ಜಿಎಸ್​ಟಿ ತಂದ ಆಪತ್ತು;

ನೋಟ್​ಬ್ಯಾನ್​ ಮತ್ತು ಜಿಎಸ್​ಟಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು. ಆದರೆ, ದೇಶದ ಆರ್ಥಿಕತೆ ಕುಸಿಯಲು ಸರಿಯಾದ ಅಧ್ಯಯನ ಹಾಗೂ ಗುರಿ ಇಲ್ಲದೆ ಜಾರಿಗೆ ತಂದ ಈ ಎರಡು ಯೋಜನೆಗಳೇ ಕಾರಣ ಎಂದು ಆರ್ಥಿಕ ತಜ್ಞರು ಸೇರಿದಂತೆ ಅನೇಕರು ಆರಂಭದಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುತ್ತಲೇ ಇದ್ದಾರೆ.

2016 ರಲ್ಲಿ ಕೇಂದ್ರ ಸರ್ಕಾರದ ನೋಟ್​ಬ್ಯಾನ್ ಕ್ರಮದಿಂದಾಗಿ ನಷ್ಟವನ್ನು ಬರಿಸಲಾಗದೆ ದೇಶದ ಅನೇಕ ಉದ್ಯಮಗಳು ಪತನ ಕಂಡಿದ್ದವು. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ನೋಟ್​ಬ್ಯಾನ್​ನ ನೇರ ಪರಿಣಾಮಕ್ಕೆ ಗುರಿಯಾಗಿ ಸ್ಥಗಿತವಾಗಿದ್ದವು. ಅಲ್ಲದೆ, ಇದು ದೇಶದ ಜನರ ಬಳಿ ಹಣದ ಓಡಾಟಕ್ಕೆ ಕಡಿವಾಣ ಹಾಕುವ ಮೂಲಕ ಜನರ ಖರ್ಚು ಮಾಡುವ ಸಾಮರ್ಥ್ಯವನ್ನು ಕುಸಿಯುವಂತೆ ಮಾಡಿತ್ತು.

ಇನ್ನೂ ತೆರಿಗೆ ಇಲಾಖೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎಂದೇ ಊಹಿಸಲಾಗಿದ್ದ ಜಿಎಸ್​ಟಿ ತನ್ನ ದುಬಾರಿ ತೆರಿಗೆಯ ಕಾರಣಕ್ಕೆ ಜನ ಹಣ ಖರ್ಚು ಮಾಡಲು ಸಹ ಹೆದರುವಂತೆ ಮಾಡಿದೆ.

ಉದಾಹರಣೆಗೆ; ನೀವು ಹೋಟೆಲ್​​ಗೆ ತೆರಳಿ ಕಾಫಿ ಕುಡಿಯಲೂ ಸಹ ಇಂದು ಜಿಎಸ್​ಟಿ ಹೆಸರಿನಲ್ಲಿ 2 ರಿಂದ 3 ರೂಪಾಯಿ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಲಕ್ಷಾಂತರ ಮೌಲ್ಯದ ಕಾರ್ ಹಾಗೂ ಬೈಕ್​ಗಳಿಗೆ ಎಷ್ಟು ಪ್ರಮಾಣದ ತೆರಿಗೆ ಸಲ್ಲಿಸಬೇಕು ಎಂದು ಒಮ್ಮೆ ಯೋಚಿಸಿ.

ಜನ ಹೀಗೆ ದುಬಾರಿ ತೆರಿಗೆಯ ಕುರಿತು ಯೋಚಿಸುತ್ತಿರುವ ಕಾರಣದಿಂದಾಗಿಯೇ ಹಣ ಇರುವ ಕೆಲವು ಜನರೂ ಸಹ ಖರ್ಚು ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಈ ಕಾರಣದಿಂದಾಗಿಯೇ ಇಂದು ಆಟೋಮೊಬೈಲ್ ಕ್ಷೇತ್ರ ಸಂಪೂರ್ಣವಾಗಿ ನೆಲ ಕಚ್ಚಿದೆ ಎಂಬುದು ಆರ್ಥಿಕ ತಜ್ಞರ ಅವಲೋಕನ.

ಇದಕ್ಕೆ ಪರಿಹಾರವೇನು?

ಇದು ಪ್ರಸ್ತುತ 2019ರ ಭಾರತದ ಆರ್ಥಿಕ ಪರಿಸ್ಥಿತಿ. ಆದರೆ, ಈ ಹಿಂದೆಯೇ 2008ರಲ್ಲಿ ಇಡೀ ವಿಶ್ವ ಇಂತಹದ್ದೇ  ಆರ್ಥಿಕ ಮುಗ್ಗಟ್ಟನ್ನು ಎದುರಿಸಿತ್ತು. ಆದರೆ, ಭಾರತ ಮಾತ್ರ ಈ ಪರಿಸ್ಥಿತಿಯನ್ನು ಗಟ್ಟಿಯಾಗಿ ಮೆಟ್ಟಿ ನಿಂತಿತ್ತು. ಅದಕ್ಕೆ ಕಾರಣ ಅಂದಿನ ಸರ್ಕಾರದ ನಿಯಮಗಳು ಮಾತ್ರವಲ್ಲ, ಇದರ ಜೊತೆಗೆ ದೇಶದ ಹೆಣ್ಣು ಮಕ್ಕಳ ಶಕ್ತಿಯೂ ಒಟ್ಟಾಗಿ ಅಂದಿನ ಆರ್ಥಿಕ ಮುಗ್ಗಟ್ಟಿನಿಂದ ಇಡೀ ದೇಶವನ್ನು ಬಚಾವು ಮಾಡಿತ್ತು.

"2008ರಲ್ಲಿ ದೇಶವನ್ನು ನಿರುದ್ಯೋಗ ಕಾಡುತ್ತಿದ್ದ ಸಂದರ್ಭದಲ್ಲಿ, ಆರ್ಥಿಕ ಮುಗ್ಗಟ್ಟು ವ್ಯಾಪಿಸಿದ್ದ ಕಾಲದಲ್ಲಿ ಹೆಣ್ಣು ಮಕ್ಕಳು ತಮ್ಮ ಬಳಿ ಮನೆಯಲ್ಲೇ ಕೂಡಿಟ್ಟಿದ್ದ ಸಣ್ಣ ಪ್ರಮಾಣದ ಹಣವನ್ನು ಖರ್ಚು ಮಾಡಲು ಆರಂಭಿಸಿದ್ದರು. ಹೀಗೆ ಹೆಣ್ಣು ಮಕ್ಕಳು ಖರ್ಚು ಮಾಡಿದ ಹಣವೇ ಆ ಕಾಲಕ್ಕೆ ಸಾವಿರಾರು ಕೋಟಿಯ ಗೆರೆ ದಾಟಿತ್ತು. ಈ ಪ್ರಕ್ರಿಯೆ ಸಾಮಾನ್ಯವಾಗಿ ಮತ್ತೆ ದೇಶದ ಆರ್ಥಿಕ ಚಕ್ರಕ್ಕೆ ಇಂಧನವನ್ನು ಪೂರೈಸಿತ್ತು. ಪರಿಣಾಮ 2008ರ ಆರ್ಥಿಕ ಮುಗ್ಗಟ್ಟನ್ನು ದೇಶ ದಿಟ್ಟವಾಗಿ ಎದುರಿಸಿತ್ತು" ಎಂದು ಸ್ವತಃ ಅಂದಿನ ಪ್ರಧಾನಿ ಮನಮೋಹನ್​ ಸಿಂಗ್​ ಸಂದರ್ಶನವೊಂದರಲ್ಲಿ ತಿಳಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸರಿಯಾಗಿ ದಶಕದ ನಂತರ ಭಾರತ ಮತ್ತೆ ಅದಕ್ಕಿಂತ ದೊಡ್ಡ ಮಟ್ಟದ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿದೆ. ಈ ಕುರಿತು ಕಳವಳ ವ್ಯಕ್ತಪಡಿಸಿರುವ ಆರ್ಥಿಕ ತಜ್ಞರು ಪರಿಸ್ಥಿತಿ ನಿಭಾಯಿಸಲು ಸರ್ಕಾರ ಶೀಘ್ರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ತೆರಿಗೆಯ ಪ್ರಮಾಣವನ್ನು ಇಳಿಸಬೇಕು. ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತರಬೇಕು. ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡುವ ಮೂಲಕ ಜನರ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ದೇಶದಲ್ಲಿ ಕಿತ್ತು ತಿನ್ನುವ ಬಡತನ ನಿರ್ಮಾಣವಾಗಲಿದೆ ಎಂದು ಸರ್ಕಾರವನ್ನು ಎಚ್ಚರಿಸುತ್ತಿದ್ದಾರೆ.

ಆದರೆ, ಈ ಕುರಿತು ಗಂಭೀರ ಯೋಚನೆಗೆ-ಯೋಜನೆಗಳಿಗೆ ಮುಂದಾಗದ ಕೇಂದ್ರ ಸಚಿವರುಗಳು ಹೋದಲ್ಲಿ ಬಂದಲ್ಲೆಲ್ಲಾ ಓಲಾ-ಊಬರ್ ಬಳಕೆಯಿಂದಲೇ ಆಟೋಮೊಬೈಲ್ ಕ್ಷೇತ್ರ ಕುಸಿತ ಕಂಡಿದೆ. ಜಿಡಿಪಿಯನ್ನು ಗಣಿತದಿಂದ ಅಳೆಯಬಾರದು, ​ಗುರುತ್ವಾಕರ್ಷಣೆ ಬಲವನ್ನು ಕಂಡುಹಿಡಿದವನು ನ್ಯೂಟನ್ ಅಲ್ಲ ಐನ್​ಸ್ಟೀನ್ ಎಂದು ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ನಗೆಪಾಟಲಿಗೆ ಗುರಿಯಾಗುತ್ತಾ ಜನರ ಗಮನವನ್ನು ವಾಸ್ತವ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುತ್ತಿರುವುದು ಮಾತ್ರ ದುರಂತವೇ ಎಂದು ಖಂಡಿಸುತ್ತಿವೆ ವಿರೋಧ ಪಕ್ಷಗಳು.

ಇದನ್ನೂ ಓದಿ : ಆಟೋಮೊಬೈಲ್ ಕ್ಷೇತ್ರ ಕುಸಿತಕ್ಕೆ ಓಲಾ ಊಬರ್ ಕಾರಣವಲ್ಲ; ಸಚಿವೆ ನಿರ್ಮಲಾ ಸೀತಾರಾಮನ್​ಗೆ ತಿರುಗೇಟು ನೀಡಿದ ಮಾರುತಿ ಸುಜುಕಿ!

First published: September 14, 2019, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading