ಕಾಶ್ಮೀರದ ವಿಶೇಷ ಸವಲತ್ತಿಗೆ ಕತ್ತರಿ; ಏನಿದು ಕಲಂ 370? ಇದರ ಹಿನ್ನೆಲೆ, ಇತಿಹಾಸವೇನು? ರದ್ದುಗೊಳಿಸಿದರೆ ಆಗುವ ಪರಿಣಾಮವೇನು? ಇಲ್ಲಿದೆ ಮಾಹಿತಿ

What Is Article 370 And 35A : ಏನಿದು ಕಲಂ 370? ಇದರಿಂದ ಕಣಿವೆ ರಾಜ್ಯಕ್ಕೆ ಸಿಗುತ್ತಿರುವ ಅನುಕೂಲಗಳೇನು? ಹಾಗೂ ಭಾರತದಲ್ಲಿ ಯಾವೆಲ್ಲಾ ರಾಜ್ಯಗಳಿಗೆ ಈ ಸವಲತ್ತು ಲಭ್ಯವಾಗುತ್ತಿದೆ? ಕಣಿವೆ ರಾಜ್ಯದ ಈ ಸವಲತ್ತು ಈ ಪ್ರಮಾಣದ ವಿರೋಧವನ್ನು ಎದುರಿಸಲು ಕಾಣವೇನು? ಇದನ್ನು ರದ್ದುಗೊಳಿಸಿದರೆ ಆಗುವ ಪರಿಣಾಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

MAshok Kumar | news18
Updated:August 5, 2019, 10:54 AM IST
ಕಾಶ್ಮೀರದ ವಿಶೇಷ ಸವಲತ್ತಿಗೆ ಕತ್ತರಿ; ಏನಿದು ಕಲಂ 370? ಇದರ ಹಿನ್ನೆಲೆ, ಇತಿಹಾಸವೇನು? ರದ್ದುಗೊಳಿಸಿದರೆ ಆಗುವ ಪರಿಣಾಮವೇನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ.
  • News18
  • Last Updated: August 5, 2019, 10:54 AM IST
  • Share this:
ಶ್ರೀನಗರ: ಕಳೆದ ಒಂದು ವಾರದಿಂದ ಕಣಿವೆ ರಾಜ್ಯದಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕೇಂದ್ರದ ಐತಿಹಾಸಿಕ ನಿರ್ಣಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತಾನು ನೀಡಿದ ಆಶ್ವಾಸನೆಯಂತೆ ಜಮ್ಮು-ಕಾಶ್ಮೀರದ ಕಲಂ 370 ಅಡಿಯಲ್ಲಿ ನೀಡಲಾಗಿರುವ ವಿಶೇಷ ಸ್ಥಾನಮಾನಕ್ಕೆ ಕೊನೆಗೂ ಕತ್ತರಿ ಹಾಕಲು ಮುಂದಾಗಿದೆ. ಪರಿಣಾಮ ಇಂದು ಇಡೀ ಕಾಶ್ಮೀರದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. 

ಕೇಂದ್ರದ ಈ ನಿರ್ಣಯವನ್ನು ಸ್ಥಳೀಯ ರಾಜಕೀಯ ನಾಯಕರು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದರೆ ಜಮ್ಮು-ಕಾಶ್ಮೀರ ಸಾಂವಿಧಾನಿಕವಾಗಿ ಕಾನೂನುಬದ್ಧವಾಗಿ ಭಾರತದಿಂದ ಬೇರ್ಪಟ್ಟಂತಾಗುತ್ತದೆ. ಇದು ಸಾಧ್ಯವಾದರೆ ಪ್ರತ್ಯೇಕತಾವಾದಿಗಳ ಹಾದಿ ಮತ್ತಷ್ಟು ಸಲೀಸಾಗಲಿದೆ ಎಂಬುದು ಅವರ ಅಂಬೋಣ. ಆದರೂ, ಅವರ ಮಾತಿಗೆ ಮಣೆ ಹಾಕದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿರಿಸಿದೆ.

ಅಲ್ಲದೆ, ಇಂದು ಈ ಕುರಿತು ಚರ್ಚೆ ನಡೆಸಲು ಸಚಿವ ಸಂಪುಟ ಸಭೆಯನ್ನೂ ಕರೆಯಲಾಗಿದೆ. ಈ ಸಭೆಯಲ್ಲಿ ಕಾಶ್ಮೀರದ ಭದ್ರತೆ, ವಿಶೇಷ ಸ್ಥಾನಮಾನ ರದ್ದು ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ನಡುವೆ ಕಣಿವೆ ರಾಜ್ಯದ ಕಲಂ 370 ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕಾನೂನು ತಜ್ಱರು ಇದು ಅಷ್ಟು ಸುಲಭದ ಕೆಲಸವಲ್ಲ ಎಂದು ತಿಳಿಸಿದ್ದಾರೆ.

ಹಾಗಾದರೆ ಏನಿದು ಕಲಂ 370? ಇದರಿಂದ ಕಣಿವೆ ರಾಜ್ಯಕ್ಕೆ ಸಿಗುತ್ತಿರುವ ಅನುಕೂಲಗಳೇನು? ಹಾಗೂ ಭಾರತದಲ್ಲಿ ಯಾವೆಲ್ಲಾ ರಾಜ್ಯಗಳಿಗೆ ಈ ಸವಲತ್ತು ಲಭ್ಯವಾಗುತ್ತಿದೆ? ಕಣಿವೆ ರಾಜ್ಯದ ಈ ಸವಲತ್ತು ಈ ಪ್ರಮಾಣದ ವಿರೋಧವನ್ನು ಎದುರಿಸಲು ಕಾಣವೇನು? ಇದನ್ನು ರದ್ದುಗೊಳಿಸಿದರೆ ಆಗುವ ಪರಿಣಾಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ಕಲಂ 370?:

ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಭಯಕೆಯನ್ನು ಹೊಂದಿದ್ದರು.

ಆದರೆ, ಕಣಿವೆ ರಾಜ್ಯದ ಮೇಲೆ  1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ.

  1. ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.

  2. ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.

  3. ಭಾರತದ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು

  4. ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು.

  5. ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂಗಾಯಿತು.

  6. ರಾಷ್ಟ್ರಪತಿ ಏನಾದರು ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರಕಾರದ ಶಿಫಾರಸು ಅಗತ್ಯ.


ಇದನ್ನೂ ಓದಿ: ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ನಾವು ಸಹಿಸೆವು; ಭಾರತಕ್ಕೆ ಪಾಕ್​ ಎಚ್ಚರಿಕೆ

ಹೀಗೆ ಕಲಂ 370 ರ ಅಡಿಯಲ್ಲಿ ಆರು ಪ್ರಮುಖ ಸವಲತ್ತುಗಳನ್ನು ಸಂವಿಧಾನದ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದೆ. ಇದಲ್ಲದೆ ಕಲಂ 35(ಎ) ಅಡಿಯಲ್ಲಿ.

  1. ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ.

  2. ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು.

  3. ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ.

  4. ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ.

  5. ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.

  6. ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ.

  7. ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ.


ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 45 (ಎ) ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ.

ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) ವಿಧಿಯ ಅನ್ವಯ ಮಿಝೋರಾಮ್ ರಾಜ್ಯಗಳಿಗೂ ಸಹ ಇದೇ ರೀತಿಯ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ ರಾಜ್ಯಗಳಿಗಿರುವ ಇತಿಹಾಸದ ಕಾರಣಕ್ಕಾಗಿಯೇ ಈ ವಿಶೇಷ ಸವಲತ್ತುಗಳನ್ನು ನೀಡಲಾಗಿರುವುದು ಉಲ್ಲೇಖಾರ್ಹ.

ಆದರೆ, ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ಜನಸಾಮಾನ್ಯರು ಹಾಗೂ ಗಡಿ ಭದ್ರತಾ ಪಡೆಗಳ ನಡುವಿನ ನಿರಂತರ ಚಕಮಕಿಯ ಕಾರಣದಿಂದಾಗಿಯೇ ಕಲಂ 370 ಹಾಗೂ 35(ಎ) ತಿದ್ದುಪಡಿ ತರಬೇಕು ಎಂಬ ಕೂಗು ಬಲವಾಗಿಯೇ ಕೇಳಿಬರುತ್ತಿತ್ತು. ಈ ಕುರಿತು ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ, ಆದರೆ, ಇದೀಗ ಈ ಕೂಗಿಗೆ ರಾಜಕೀಯ ಬಣ್ಣವೂ ಪ್ರಾಪ್ತಿಯಾಗಿದ್ದು, ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಕಾರ್ಯರೂಪಕ್ಕೂ ಮುಂದಾಗಿದೆ.

ಆದರೆ, ಕಲಂ 370ನ್ನು ರದ್ದುಗೊಳಿಸಿದರೆ ಕಣಿವೆ ರಾಜ್ಯದಲ್ಲಿ ಗಲಭೆಗಳು ಭುಗಿಲೇಳುವ ಸಾಧ್ಯತೆಗಳೂ ಇದೆ, ಅಲ್ಲದೆ ಸ್ವತಂತ್ರ್ಯ ರಾಷ್ಟ್ರದ ಕೂಗಿಗೆ ಪ್ರತ್ಯೇಕತಾವಾದಿಗಳ ಕಾರ್ಯಾಚರಣೆಗೆ ಮತ್ತಷ್ಟು ಬಲಗೊಳ್ಳಲಿದೆ ಎಂದೂ ಹೇಳಲಾಗುತ್ತಿದೆ. ಈ ನಡುವೆ ಕಣಿವೆ ರಾಜ್ಯದಲ್ಲಿ ಪ್ರಸ್ತುತ ಯುದ್ಧದ ವಾತಾವರಣವೇ ನಿರ್ಮಾಣವಾಗಿದ್ದು, ಈ ಸೂಕ್ಷ್ಮ ವಿಚಾರವನ್ನು ಕೇಂದ್ರ ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ನಂತರದ ದಿನಗಳು ಸ್ಪಷ್ಟಪಡಿಸಲಿವೆ.

ಇದನ್ನೂ ಓದಿ : Kashmir LIVE: ಪ್ರಧಾನಿ ಮೋದಿ ನಿವಾಸದಲ್ಲಿ ಸಂಪುಟ ಸಭೆ; ಭದ್ರತೆ ಕುರಿತು ಮಹತ್ವದ ಚರ್ಚೆ

First published:August 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading