news18-kannada Updated:January 21, 2021, 6:43 AM IST
ನಿರ್ಮಲಾ ಸೀತಾರಾಮನ್
ನವದೆಹಲಿ (ಜ. 21): ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2021-22ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನವು ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಮತ್ತು ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕತೆ ಈಗಾಗಲೇ ಆರ್ಥಿಕತೆ ಮೇಲೆ ಭಾರೀ ಹೊಡೆತ ನೀಡಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ತೀವ್ರ ಮಟ್ಟದ ಆರ್ಥಿಕ ಹಿಂಜರಿತದಿಂದ ಸಾಗುತ್ತಿದೆ. ಭಾರತದ ಆರ್ಥಿಕತೆ ಮೂರನೇ ಒಂದು ಭಾಗದಷ್ಟು ಕುಗ್ಗಿದೆ. ಈ ನಡುವೆ ಬಜೆಟ್ ಮಂಡನೆಯಾಗುತ್ತಿದ್ದು, ಈ ಬಾರಿಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಅಧಿವೇಶನದ ಮೊದಲ ದಿನ ಜ. 29ರಂದು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ರಾಜ್ಯ ಸಭೆ ಮತ್ತು ಲೋಕಸಭೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೋನಾ ಹಿನ್ನಲೆ ಈ ಬಾರಿ ಜಂಟಿ ಅಧಿವೇಶನ ಮೂರು ಪ್ರತ್ಯೇಕ ಕೊಠಡಿಗಳಲ್ಲಿ ನಡೆಯಲಿದೆ. ಸೆಂಟ್ರಲ್ ಹಾಲ್ನಿಂದ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ಫೆ. 1 ರಂದು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ನಿರೀಕ್ಷೆಗಳೇನು?ಕೊರೋನಾ ಸಾಂಕ್ರಾಮಿಕ ಹಿನ್ನಲೆ ಆರ್ಥಿಕ ಚೇತರಿಕೆಗೆ ವಿಶ್ವಾಸಾರ್ಹ ಮಾರ್ಗಸೂಚಿಯನ್ನು ಒದಗಿಸುವುದು 2021 ರ ಬಜೆಟ್ನ ಮುಖ್ಯ ನಿರೀಕ್ಷೆಯಾಗಿದೆ. ಆರ್ಥಿಕ ಉತ್ತೇಜನ ನೀಡಲು ಕೇಂದ್ರ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಇದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮುಂದಿನಗಳಲ್ಲಿ ತೀವ್ರ ಹಣಕಾಸಿನ ಕೊರತೆಯನ್ನು ನಿಭಾಯಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ.
ಬಜೆಟ್ನಲ್ಲಿ ಜಿಡಿಪಿ ಮತ್ತು ಕೃಷಿ ಕ್ಷೇತ್ರದ ಸುಧಾರಣೆ ಎದುರು ನೋಡಲಾಗುತ್ತಿದೆ. ಜೊತೆಗೆ ಆತ್ಮ ನಿರ್ಭರ್ ಅಡಿ ಸ್ವಾವಲಂಬನೆ ಮತ್ತು ಸ್ವಾವಲಂಬಿ ಆರ್ಥಿಕತೆಯ ಅಗತ್ಯಕ್ಕೆ ಉತ್ತೇಜನ ಇರಲಿದೆ .
ಇದನ್ನು ಓದಿ: ಕೋವಿಡ್ ಪರೀಕ್ಷೆಯಿಂದ ಶಿಫ್ಟ್ ವ್ಯವಸ್ಥೆವರೆಗೂ; ಹಲವು ಮಾರ್ಪಾಡನ್ನು ಹೊಂದಿರಲಿದೆ ಈ ಬಾರಿ ಅಧಿವೇಶನ
ದೇಶವನ್ನೇ ಕಾಡುತ್ತಿರುವ ಕೊರೋನಾ ಸೋಂಕು ತಡೆಗೆ ಕೋವಿಡ್-19 ಲಸಿಕೆಗಳ ಖರೀದಿ, ಸಾರಿಗೆ, ವಿತರಣೆ ಸೇರಿದಂತೆ ಆರೋಗ್ಯ ವಲಯಕ್ಕೆ ಬಲ ತುಂಬಲು ಈ ಬಾರಿ ಹೆಚ್ಚಿನ ಪ್ರಸ್ತಾಪಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಈ ಮೂಲಕ ಸಾರ್ವಜನಿಕರ ಆರೋಗ್ಯ ವಲಯವನ್ನು ಸದೃಢಪಡಿಸಲು ಒತ್ತು ನೀಡುವ ಸಾಧ್ಯತೆ ಇದೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ನರೇಂದ್ರ ಮೋದಿ ಸರ್ಕಾರ ಅನುಮೋದಿಸಿದೆ ಎಂಬ ಸೂಚನೆಳಿವೆ, ಭಾರತದ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ದ್ವಿಗುಣಗೊಳಿಸುವುದು ಬಜೆಟ್ ನ ಶಿಫಾರಸ್ಸಿನಲ್ಲಿವೆ ಎನ್ನಲಾಗಿದೆ.
Published by:
Seema R
First published:
January 21, 2021, 6:43 AM IST