Bengal Violence: 8 ಜನರ ಸಜೀವ ದಹನದ ನಂತರ ದೀದಿ ರಾಜ್ಯದಲ್ಲಿ ಹೆಚ್ಚಿದ ಗದ್ದಲ, ಐವರು BJP ಶಾಸಕರು ಅಮಾನತು

ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವಾದ ಬಿಜೆಪಿ ನಡುವೆ ಹೊಡೆತಗಳೊಂದಿಗೆ ಪ್ರಕ್ಷುಬ್ಧ ದೃಶ್ಯಗಳು ನಡೆದಿವೆ. ಈ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಬಿಜೆಪಿ ಮುಖ್ಯ ಸಚೇತಕ ಮನೋಜ್ ಟಿಗ್ಗಾ ಸೇರಿದಂತೆ ಐವರು ಬಿಜೆಪಿ ಶಾಸಕರು ಅಮಾನತುಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಶ್ಚಿಮ ಬಂಗಾಳ ರಾಜಕೀಯ (West Bengal Politics) ಆಗಾಗ್ಗೆ ನಾನಾ ಕಾರಣಗಳಿಗಾಗಿ ಸುದ್ದಿ ಮಾಡುತ್ತಲೇ ಇರುತ್ತದೆ. ಬಂಗಾಳದಲ್ಲೂ ಕೇಸರಿ ಅಲೆ ಸ್ಥಾಪಿಸಲು ಬಿಜೆಪಿ (BJP) ಭಾರಿ ಪ್ರಯತ್ನಗಳನ್ನು ನಡೆಸುತ್ತಿರುವ ನಡುವೆ, ಟಿಎಂಸಿ (TMC) ಸಹ ತನ್ನ ಅಲೆಯನ್ನು ಗಟ್ಟಿಯಾಗೇ ಇರಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ಇದರೊಂದಿಗೆ ಬಂಗಾಳದಲ್ಲಿ ರಾಜಕೀಯ ಕಾರಣಗಳಿಗಾಗಿ ಹಿಂಸೆಯ ಪ್ರಕರಣಗಳೂ ಹೆಚ್ಚಾಗಿ ಕಂಡುಬರುತ್ತಿವೆ. ಇದಕ್ಕೊಂದು ಉದಾಹರಣೆ ಕಳೆದ ವಾರದ ಬಿರ್ಭುಮ್‌ ಹತ್ಯೆಗಳು.

ಈ ಬಿರ್ಭೂಮ್‌ ಹತ್ಯೆಗಳ ವಿಚಾರವಾಗಿ ಸೋಮವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿಯ ಶಾಸಕರು ಮತ್ತು ಆಡಳಿತಾರೂಢ ಟಿಎಂಸಿ ನಡುವೆ ಮುಷ್ಠಿ ಯುದ್ಧ ನಡೆದಿದೆ. ಹೌದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವಾದ ಬಿಜೆಪಿ ನಡುವೆ ಹೊಡೆತಗಳೊಂದಿಗೆ ಪ್ರಕ್ಷುಬ್ಧ ದೃಶ್ಯಗಳು ನಡೆದಿವೆ.

ಈ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಬಿಜೆಪಿ ಮುಖ್ಯ ಸಚೇತಕ ಮನೋಜ್ ಟಿಗ್ಗಾ ಸೇರಿದಂತೆ ಐವರು ಬಿಜೆಪಿ ಶಾಸಕರು ಅಮಾನತುಗೊಂಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ಟಿಎಂಸಿ ಶಾಸಕ..!

ಇನ್ನು, ಶಾಸಕರ ಅಮಾನತು ಮಾತ್ರವಲ್ಲ. ಘಟನೆಯಲ್ಲಿ ಎರಡೂ ಕಡೆಯ ಹಲವು ಶಾಸಕರು ಗಾಯಗೊಂಡಿರುವ ಘಟನೆಯೂ ನಡೆದಿದೆ. ಟಿಎಂಸಿಯ ಅಸಿತ್ ಮಜುಂದಾರ್ ಮೂಗು ಮುರಿದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರ ಸಂಖ್ಯೆ 9ಕ್ಕೆ ಏರಿಕೆ

ಬಿರ್ಭುಮ್‌ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿಕೆಯಾಗಿದ್ದು, ಅದೇ ದಿನ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಈ ರಣರಂಗ ನಡೆದಿದೆ. ನಜ್ಮಾ ಬೀಬಿ ಎಂದು ಗುರುತಿಸಲ್ಪಟ್ಟ ಇವರು ಸುಟ್ಟಗಾಯಗಳಿಂದ ನರಳುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು.

ಅನಪೇಕ್ಷಿತ, ಹಿಂದೆಂದೂ ನಡೆಯದ ಘಟನೆ ಎಂದ ಸ್ಪೀಕರ್..!

"ಇದು ಅನಪೇಕ್ಷಿತ, ಹಿಂದೆಂದೂ ಕಂಡುಬರದ ಘಟನೆ" ಎಂದು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಬಜೆಟ್ ಅಧಿವೇಶನದ ಕೊನೆಯ ದಿನದ ಅವ್ಯವಸ್ಥೆಯನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಿರ್ಭುಮ್‌ನ ಬೊಗ್ಟುಯಿ ಗ್ರಾಮದಲ್ಲಿ ನಡೆದ ಸರಣಿ ಹಿಂಸಾಚಾರ, ಹತ್ಯೆ ಘಟನೆಗಳಿಗೆ ಸಂಬಂಧಿಸಿದಂತೆ ಹಲವಾರು ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿದರು.

ಇದನ್ನೂ ಓದಿ: Luxury Jet: ಮೆಕ್ಸಿಕನ್ ಅಧ್ಯಕ್ಷರ ಲಕ್ಷುರಿ ಜೆಟ್​ನಲ್ಲಿ ಇನ್ಮುಂದೆ ಮುಂದೆ ಮದುವೆ, ಪಾರ್ಟಿ, ಫಂಕ್ಷನ್

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಬಿಜೆಪಿ ಮುಖ್ಯ ಸಚೇತಕ ಮನೋಜ್ ಟಿಗ್ಗಾ, ಶಂಕರ್ ಘೋಷ್, ನರಹರಿ ಮಹತೋ ಮತ್ತು ದೀಪಕ್ ಬರ್ಮನ್ - ಈ ಐವರು ಬಿಜೆಪಿ ಶಾಸಕರನ್ನು ಮುಂದಿನ ಅಧಿವೇಶನದವರೆಗೆ ಅಮಾನತುಗೊಳಿಸಲಾಗಿದೆ. ಅಮಾನತು ಮುಂದುವರಿಸುವ ಕುರಿತು ಮುಂದಿನ ಅಧಿವೇಶನದ ಮೊದಲು ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಆಕ್ರೋಶ..!

"ನಮ್ಮನ್ನು ಅಕ್ರಮವಾಗಿ ಅಮಾನತುಗೊಳಿಸಲಾಗಿದೆ" ಎಂದು ಐವರು ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಘಟನೆಗೆ ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಟ್ವೀಟ್

ಇನ್ನು, ಬಿಜೆಪಿಯ ಪಶ್ಚಿಮ ಬಂಗಾಳ ಘಟಕವು "ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ..!’’ ಎಂದು ಟ್ವೀಟ್‌ ಮಾಡಿದೆ. ಆದರೆ, "ಬಂಗಾಳದ ಪ್ರತಿಷ್ಠೆಯನ್ನು ಹಾಳುಮಾಡಲು" ಬಿಜೆಪಿ ಪ್ಲ್ಯಾನ್‌ ಮಾಡಿದೆ ಎಂದು ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ಅವರು ವಿಧಾನಸಭೆಯಲ್ಲಿ ನಡೆದ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನ್ಯಾಯಯುತವಾದ ತನಿಖೆಯನ್ನು" ಖಚಿತಪಡಿಸಿಕೊಳ್ಳಲು ಬಿರ್ಭುಮ್‌ ಸರಣಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕಲ್ಕತ್ತಾ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಮೂರು ದಿನಗಳ ನಂತರ ಈ ಘಟನೆ ನಡೆದಿದೆ.

ಸ್ಥಳೀಯ ಟಿಎಂಸಿ ನಾಯಕ ಬದು ಶೇಖ್ ಹತ್ಯೆಗೆ ಪ್ರತೀಕಾರವಾಗಿ ಕಳೆದ ಸೋಮವಾರ ರಾತ್ರಿ, ಬೊಗ್ಟುಯಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಜನರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಈ ಹಿಂದೆಯೂ ಅಮಾನತಾಗಿದ್ದ ಬಿಜೆಪಿ ಶಾಸಕರು..!

ರಾಜ್ಯಪಾಲ ಜಗದೀಪ್ ಧನಕರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಬಿಜೆಪಿಯ ಇತರ ಇಬ್ಬರು ಶಾಸಕರಾದ ಸುದೀಪ್ ಮುಖರ್ಜಿ ಮತ್ತು ಮಿಹಿರ್ ಗೋಸ್ವಾಮಿ ಅವರನ್ನು ಮಾರ್ಚ್ 7 ರಂದು ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿತ್ತು. ಈಗ ಸೋಮವಾರ ಸ್ಪೀಕರ್ ತೆಗೆದುಕೊಂಡ ಕ್ರಮವು ಈ ಅಧಿವೇಶನದಲ್ಲಿ ಬಿಜೆಪಿಗೆ ಎರಡನೇ ಬಾರಿಯಾಗಿದೆ.

ಇದನ್ನೂ ಓದಿ: Shocking: 3 ವರ್ಷದಲ್ಲಿ ರೈಲು ಹಳಿಗಳ ಮೇಲೆ 45 ಆನೆಗಳ ಸಾವು! ಕರ್ನಾಟಕದಲ್ಲಿ ಎಷ್ಟು ಆನೆಗಳು ಮೃತಪಟ್ಟಿವೆ ನೋಡಿ

ಇನ್ನೊಂದೆಡೆ, ಮಹಾರಾಷ್ಟ್ರ ವಿಧಾನಸಭೆ ಒಂದು ವರ್ಷ ಕಾಲ 12 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿತ್ತು. ಆದರೆ, 2022 ಜನವರಿಯಲ್ಲಿ ಸುಪ್ರೀಂಕೋರ್ಟ್‌ ಈ ನಿರ್ಧಾರವನ್ನು ರದ್ದುಗೊಳಿಸಿತ್ತು.
Published by:Divya D
First published: