• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • West Bengal Violence: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ- ಬಿಜೆಪಿ ಕಾರ್ಯಕರ್ತರ ನಡುವೆ ಗಲಭೆ; ಹಿಂಸಾಚಾರದಲ್ಲಿ 11 ಜನ ಸಾವು

West Bengal Violence: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ- ಬಿಜೆಪಿ ಕಾರ್ಯಕರ್ತರ ನಡುವೆ ಗಲಭೆ; ಹಿಂಸಾಚಾರದಲ್ಲಿ 11 ಜನ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

West Bengal Riots: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯಲ್ಲಿ ಎರಡೂ ಪಕ್ಷಗಳ ಒಟ್ಟು 11 ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.

  • Share this:

ಕೊಲ್ಕತ್ತಾ (ಮೇ 4): ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಚುನಾವಣಾ ಫಲಿತಾಂಶದ ಬಳಿಕ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯಲ್ಲಿ ಎರಡೂ ಪಕ್ಷಗಳ ಒಟ್ಟು 11 ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.


ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಲೇ ಬೇಕೆಂಬ ಹಠದಿಂದ ಕೊರೋನಾ ಅಟ್ಟಹಾಸದ ನಡುವೆಯೂ ಬಿಜೆಪಿ ನಾಯಕರು ಸಾಲು ಸಾಲು ಚುನಾವಣಾ ರ್ಯಾಲಿಗಳನ್ನು ನಡೆಸಿ, ಮತಯಾಚನೆ ಮಾಡಿದ್ದರು. ಅದರ ಜೊತೆಗೆ ಆಪರೇಷನ್ ಕಮಲ ಕಾರ್ಯಾಚರಣೆಯೂ ನಡೆದು, ಬಂಗಾಳದ ಅನೇಕ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತು. ಆದರೂ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಗಲಭೆ ನಡೆದಿದ್ದು, ದೈಹಿಕ ಹಲ್ಲೆಗಳೂ ನಡೆದಿವೆ.



ಬಂಗಾಳದಲ್ಲಿ 6 ಮಂದಿ ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ಅದಕ್ಕೆ ಟಿಎಂಸಿಯೇ ನೇರ ಹೊಣೆ ಎಂದಿದೆ. ಬಿಜೆಪಿ ಕಾರ್ಯಾಲಯ ಸೇರಿದಂತೆ ಅನೇಕ ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವರದಿ ನೀಡುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ.


ಇನ್ನು, ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ವಿಡಿಯೋಗಳು ಕೂಡ ವೈರಲ್ ಆಗಿವೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನಂದಿಗ್ರಾಮದ ಬಿಜೆಪಿ ಎಂಎಲ್​ಎ ಸುವೇಂದು ಅಧಿಕಾರಿ, ಕೆಲವು ಗೂಂಡಾಗಳು ಇಂದು ಸಂಜೆ ನನ್ನ ಕಾರಿನ ಮೇಲೆ ದಾಳಿ ನಡೆಸಿದರು. ನನಗೇ ಈ ರೀತಿಯಾಗಿದ್ದರೆ ಇನ್ನು ಜನಸಾಮಾನ್ಯರ ಗತಿಯೇನು ಎಂದು ಟ್ವೀಟ್ ಮಾಡಿದ್ದಾರೆ. ಸುವೇಂದು ಅಧಿಕಾರಿ ಕೆಲವು ತಿಂಗಳ ಹಿಂದೆ ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ನಂದಿಗ್ರಾಮದಲ್ಲಿ ಈ ಬಾರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ ಗೆಲುವು ಕಂಡಿದ್ದರು.


ಪರ್ಬ ಬರ್ಧಮಾನ್ ಜಿಲ್ಲೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಒಂದೆಡೆ ತಮ್ಮ ಪಕ್ಷದ ಕಾರ್ಯಕರ್ತರ ಸಾವಿಗೆ ಟಿಎಂಸಿ ಕಾರಣ ಎಂದು ಬಿಜೆಪಿ ಆರೋಪಿಸುತ್ತಿದೆ. ಇನ್ನೊಂದೆಡೆ ತಮ್ಮ ಪಕ್ಷದ ಮೂವರು ಕಾರ್ಯಕರ್ತರ ಸಾವಿಗೆ ಬಿಜೆಪಿ ಕಾರಣ ಎಂದು ಟಿಎಂಸಿ ಪಕ್ಷ ಆರೋಪಿಸಿದೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಗಾಯಗೊಂಡಿದ್ದ ಮಹಿಳೆಯೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಕೆ ಬಿಜೆಪಿ ಬೆಂಬಲಿಗರಾಗಿದ್ದರು ಎಂದು ಹೇಳಲಾಗಿದೆ.ಅನೇಕ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಾರ್ಯಕರ್ತರ ಮನೆ, ಅಂಗಡಿ, ಬೈಕ್​ಗಳನ್ನು ಧ್ವಂಸ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಕೇಂದ್ರ ಗೃಹ ಸಚಿವಾಲಯ ಈ ಘಟನೆ ಬಗ್ಗೆ ವರದಿ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ. ಭಾನುವಾರ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, 292 ಸ್ಥಾನಗಳ ಪೈಕಿ 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಟಿಎಂಸಿ ಮತ್ತೊಮ್ಮೆ ದಿಗ್ವಿಜಯ ಸಾಧಿಸಿದೆ. ಬಿಜೆಪಿ ಕೇವಲ 77 ಸ್ಥಾನಗಳಲ್ಲಿ ಗೆಲುವು ಕಂಡು ಹೀನಾಯ ಸೋಲು ಅನುಭವಿಸಿದೆ.

First published: