ಪಶ್ಚಿಮ ಬಂಗಾಳ ಚುನಾವಣೆ ವೇಳೆ ನಡೆದಿದ್ದ ಅತ್ಯಾಚಾರ, ಗಲಭೆ; ಸಿಬಿಐ ತನಿಖೆಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್​

ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕರಿಸಿದ ನಂತರ ಯಾವುದೇ ಹಿಂಸಾಚಾರ ನಡೆದಿಲ್ಲ. ಅವರು ಅಧಿಕಾರ ಸ್ವೀಕರಿಸಿದ ದಿನ ಯಾವುದೇ ಹಿಂಸೆ ನಡೆಯಲಿಲ್ಲ. ಗೌರವಾನ್ವಿತ ನ್ಯಾಯಾಲಯದ ತೀರ್ಪಿನ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ ಆದರೆ NHRC ವರದಿಯ ಬಗ್ಗೆ ನಮಗೆ ಪ್ರಶ್ನೆಗಳಿವೆ. ಚುನಾವಣೋತ್ತರ ಹಿಂಸಾಚಾರ ನಡೆದಿರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಟಿಎಂಸಿ ನಾಯಕ ಸೌಗತ ರಾಯ್ ಹೇಳಿದರು.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

 • Share this:  ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಕೊಲ್ಕತ್ತಾ ಹೈಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ಗುರುವಾರ ಶ್ಲಾಘಿಸಿದೆ ಮತ್ತು ಮಹಿಳೆಯರ ವಿರುದ್ಧದ ಅಪರಾಧವೂ ಸಹ ಇದರಲ್ಲಿ ಸೇರಿಸಲಾಗಿದೆ. ಹಾಗೂ  ಉಳಿದ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನ್ಯಾಯಾಲಯವು ಹಸ್ತಾಂತರಿಸಿದೆ, ಇವೆರಡನ್ನೂ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ.


  "ಹೈಕೋರ್ಟ್ ತೀರ್ಪು ರಾಜ್ಯದ ಪೊಲೀಸ್ ಮತ್ತು ಆಡಳಿತದ ರಾಜಕೀಯೀಕರಣ, ನಿಷ್ಕ್ರಿಯತೆ ಮತ್ತು ವೈಫಲ್ಯವನ್ನು ಎತ್ತಿ ತೋರಿಸಿದೆ. ಈ ತೀರ್ಪು ಬಂಗಾಳದಲ್ಲಿ ತುಳಿತಕ್ಕೊಳಗಾದ ಮತ್ತು ವಂಚಿತರಾಗಿರುವ ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಗೆಲುವಾಗಿದೆ ಎಂದು ಬಂಗಾಳ ಬಿಜೆಪಿಯ ಅಧಿಕೃತ ಟ್ವೀಟರ್​ ಖಾತೆಯಿಂದ ಟ್ವೀಟ್ ಮಾಡಿದೆ.

  ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ನ್ಯಾಯಮೂರ್ತಿಗಳಾದ ಐ ಪಿ ಮುಖರ್ಜಿ, ಹರೀಶ್‌ ಟಂಡನ್‌, ಸೌಮೇನ್‌ ಸೇನ್‌ ಮತ್ತು ಸುಬ್ರತಾ ತಾಲೂಕ್ದಾರ್‌ ಅವರನ್ನು ಒಳಗೊಂಡ ಪಂಚ ಪೀಠವು ಮೂರು ಪ್ರತ್ಯೇಕ ಆದರೆ ಸಹಮತದ ತೀರ್ಪು ಪ್ರಕಟಿಸಿದೆ.


  “ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರಚಿಸಿದ್ದ ಸಮಿತಿ ವರದಿಯಲ್ಲಿ ಕೊಲೆ, ಮಹಿಳೆಯರ ಅತ್ಯಾಚಾರ, ಅತ್ಯಾಚಾರ ಯತ್ನ ಆರೋಪದ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.


  “ಈ ಸಂಬಂಧದ ಎಲ್ಲಾ ದಾಖಲೆಗಳನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಬೇಕು. ತನಿಖೆಯ ಮೇಲೆ ನ್ಯಾಯಾಲಯ ನಿಗಾ ಇಡಲಿದ್ದು, ಯಾರಾದರೂ ತನಿಖೆಗೆ ಅಡ್ಡಿಪಡಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.  ಎನ್‌ಎಚ್‌ಆರ್‌ಸಿ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಇತರೆ ಪ್ರಕರಣಗಳನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ತನಿಖೆಗಾಗಿ ವರ್ಗಾಯಿಸಿರುವ ನ್ಯಾಯಾಲಯವು ಅದರ ಮೇಲೂ ನಿಗಾ ಇಡಲಾಗುವುದು ಎಂದಿದೆ.

  ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕರಿಸಿದ ನಂತರ ಯಾವುದೇ ಹಿಂಸಾಚಾರ ನಡೆದಿಲ್ಲ. ಅವರು ಅಧಿಕಾರ ಸ್ವೀಕರಿಸಿದ ದಿನ ಯಾವುದೇ ಹಿಂಸೆ ನಡೆಯಲಿಲ್ಲ. ಗೌರವಾನ್ವಿತ ನ್ಯಾಯಾಲಯದ ತೀರ್ಪಿನ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ ಆದರೆ NHRC ವರದಿಯ ಬಗ್ಗೆ ನಮಗೆ ಪ್ರಶ್ನೆಗಳಿವೆ. ಚುನಾವಣೋತ್ತರ ಹಿಂಸಾಚಾರ ನಡೆದಿರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಟಿಎಂಸಿ ನಾಯಕ ಸೌಗತ ರಾಯ್ ಹೇಳಿದರು.


  ಪಶ್ಚಿಮ ಬಂಗಾಳ ವೃಂದದ ಐಪಿಎಸ್‌ ಅಧಿಕಾರಿಗಳಾದ ಸುಮನ್‌ ಬಾಲಾ ಸಾಹೂ, ಸೌಮೇನ್‌ ಮಿತ್ರಾ ಮತ್ತು ರಣ್ವೀರ್‌ ಕುಮಾರ್‌ ಅವರನ್ನು ಎಸ್‌ಐಟಿ ತಂಡ ಒಳಗೊಂಡಿದೆ. ಎಸ್‌ಐಟಿ ತನಿಖೆಯ ಮೇಲೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಿಗಾ ಇಡಲಿದ್ದು, ಈ ಸಂಬಂಧ ನ್ಯಾಯಾಧೀಶರ ಒಪ್ಪಿಗೆ ಪಡೆದು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಪೀಠ ಹೇಳಿದೆ.


  ದಕ್ಷಿಣ ಉಪನಗರ ಡಿಸಿಪಿ ರಶೀದ್‌ ಮುನೀರ್‌ ಖಾನ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಏಕೆ ಆರಂಭಿಸಬಾರದು ಎಂದು ಜುಲೈ 2ರಂದು ಜಾರಿ ಮಾಡಲಾಗಿರುವ ಷೋಕಾಸ್‌ ನೋಟಿಸ್‌ ಕುರಿತು ಆನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.


  ರಾಜ್ಯ ಸರ್ಕಾರದ ಎಲ್ಲಾ ಸಂಸ್ಥೆಗಳು ಸಿಬಿಐ ಮತ್ತು ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದ್ದು, ಎನ್‌ಎಚ್‌ಆರ್‌ಸಿ ಸಮಿತಿ ವರದಿಯಲ್ಲಿನ ಇತರೆ ವಿಚಾರಗಳು ಮತ್ತು ಪ್ರಕ್ರಿಯೆಯ ಕುರಿತು ನಿರ್ಧರಿಸಲು ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗುವುದು ಎಂದಿದ್ದು, ಪ್ರಕರಣವನ್ನು ಅಕ್ಟೋಬರ್‌ 4ಕ್ಕೆ ಮುಂದೂಡಿದೆ.

  ಇದನ್ನೂ ಓದಿ: ರಾಜಸ್ಥಾನದಲ್ಲಿ ಕೇವಲ ಕುರ್ಚಿಗಾಗಿ ಕಾದಾಟ ನಡೆಸುತ್ತಿರುವ ಕಾಂಗ್ರೆಸ್​: ಜನ ಆಶೀರ್ವಾದ ಯಾತ್ರೆಯಲ್ಲಿ ಬಿಜೆಪಿ ವ್ಯಂಗ್ಯ

  "ಟಿಎಂಸಿ ಈ ತೀರ್ಪಿನ ಬಗ್ಗೆ ಚಿಂತಿಸಿಲ್ಲ ... ನಾವು ತೀರ್ಪಿನ ಬಗ್ಗೆ ಏನನ್ನೂ ಹೇಳುತ್ತಿಲ್ಲ ಆದರೆ ಎನ್ಎಚ್ಆರ್​ಸಿ ವರದಿಯು ರಾಜಕೀಯ ಪ್ರೇರಿತವಾಗಿದೆ. ತ್ರಿಪುರಾದಲ್ಲಿ ಏನಾಗುತ್ತಿದೆ? ಅವರ ನಾಯಕರು 'ತಾಲಿಬಾನಿ ಶೈಲಿಯಲ್ಲಿ ಟಿಎಂಸಿ ನಾಯಕರನ್ನು ಕೊಲ್ಲಿ' ಎಂದು ಹೇಳುತ್ತಿದ್ದಾರೆ. ಮಾನವ ಹಕ್ಕು ಆಯೋಗ ಈಗ ಎಲ್ಲಿದೆ? ನೀವು ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದೀರಿ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:HR Ramesh
  First published: