news18-kannada Updated:December 25, 2020, 11:33 AM IST
ಪ್ರಾತಿನಿಧಿಕ ಚಿತ್ರ.
ಕೋಲ್ಕತ್ತಾ (ಡಿಸೆಂಬರ್ 25); ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆ 2021ರ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಮತ್ತೊಂದು ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದರೆ, ಬಿಜೆಪಿ ಈ ಬಾರಿ ಕೋಲ್ಕತ್ತಾದಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿದೆ. ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಇದೇ ಸಲುವಾಗಿ ಆಗಿಂದಾಗ್ಗೆ ಬಂಗಾಳಕ್ಕೆ ಎಡತಾಕುತ್ತಿದ್ದಾರೆ. ಈ ನಡುವೆ ಮತ್ತೊಂದು ಕಡೆ ಪಶ್ಚಿಮ ಬಂಗಾಳದಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಹೋರಾಡುತ್ತಿರುವ ಕಾಂಗ್ರೆಸ್ ಪಕ್ಷ ತಾವು ಕಮ್ಯೂನಿಸ್ಟ್ ಪಕ್ಷದ ಜೊತೆಗೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಘೋಷಿಸಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ದೃಢಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಅಧೀರ್ ರಂಜನ್ ಚೌಧರಿ, "ಎಡಪಕ್ಷಗಳ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಸಮ್ಮತಿ ಸೂಚಿಸಿದೆ" ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿಯು ಎಡಪಕ್ಷಗಳ ಜೊತೆಗಿನ ಮೈತ್ರಿ ಬಗ್ಗೆ ಒಲವು ತೋರಿ, ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತಂದಿತ್ತು. ಕಾಂಗ್ರೆಸ್ ಜೊತೆ ಕೈ ಜೋಡಿಸಲು ಎಡಪಕ್ಷಗಳೂ ಆಸಕ್ತಿ ತೋರಿದ್ದವು. ಹಾಗಾಗಿ ಮೈತ್ರಿಯ ಹಾದಿ ಸುಗಮವಾಗಿದೆ.
ಇದನ್ನೂ ಓದಿ : CoronaVirus; ಬೆಂಗಳೂರಿಗೆ ವಕ್ಕರಿಸಿದ ರೂಪಾಂತರಿ ವೈರಸ್; ಬ್ರಿಟನ್ನಿಂದ ನಗರಕ್ಕೆ ಆಗಮಿಸಿದ್ದ 7 ಜನರಲ್ಲಿ ಸೋಂಕು ಪತ್ತೆ!
ಕಳೆದ ಲೋಕಸಭಾ ಚುನಾವಣೆ ವೇಳೆ ಎಡಪಕ್ಷ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿಯೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆದರೆ, ಇದೀಗ ಬಂಗಾಳದಲ್ಲಿ ಒಂದೆಡೆ ಟಿಎಂಸಿ ಹಾಗೂ ಮತ್ತೊಂದೆಡೆ ಬಿಜೆಪಿ ಪ್ರಬಲ ಪೈಪೋಟಿ ಒಡ್ಡುತ್ತಿರುವ ನಡುವೆ, ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಮೈತ್ರಿಗೆ ಸಿದ್ದವಾಗಿರುವುದು ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು 2021ರ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಡೆಯಲಿದೆ. ಈ ಬಾರಿ ಹೇಗಾದರೂ ಅಧಿಕಾರ ಹಿಡಿಯಲೇ ಬೇಕು ಎಂದು ಬಿಜೆಪಿ ಪಣತೊಟ್ಟಿದೆ. ಮತ್ತೊಂದು ಕಡೆ ಮಮತಾ ಬ್ಯಾನರ್ಜಿಯವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ.
Published by:
MAshok Kumar
First published:
December 25, 2020, 11:33 AM IST