Loverboy- ಕದ್ದುಮುಚ್ಚಿ ಲವ್ವಿಡವ್ವಿ ಮಾಡ್ತಿದ್ದವನ ಎಲ್ಲಾ ಗರ್ಲ್​ಫ್ರೆಂಡ್ಸ್ ಒಟ್ಟಿಗೆ ಮನೆಗೆ ಬಂದಾಗ…

Girlfriends storm- ಕೂಚ್ ಬಿಹಾರ್ ಜಿಲ್ಲೆಯಲ್ಲಿ ಮೆಡಿಕಲ್ ಸ್ಟೋರ್​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಲ್ವರು ಹುಡುಗಿಯರನ್ನ ಪ್ರೀತಿಸುತ್ತಿದ್ದ. ಈ ವಿಚಾರ ಗೊತ್ತಾಗಿ ಆ ಹುಡುಗಿಯರು ಒಟ್ಟಿಗೆ ಈತನ ಮನೆಗೆ ನುಗ್ಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಜಲಪಾಯಿಗುರಿ, ಬಂಗಾಳ: ಪ್ರೀತಿ ಮಾಯೆ, ಪ್ರೀತಿ ಕುರುಡು (Love is blind) ಎನ್ನುತ್ತಾರೆ. ಕೆಲವರಿಗೆ ಇದು ಶಕ್ತಿ, ಕೆಲವರಿಗೆ ಇದು ದೌರ್ಬಲ್ಯ, ಕೆಲವರಿಗೆ ಇದು ವ್ಯಸನ. ಒಬ್ಬರಲ್ಲ ಇಬ್ಬರಲ್ಲ ಹತ್ತತ್ತು ಲವರ್​ಗಳನ್ನ ಇಟ್ಟುಕೊಂಡಿರುವವರು ಇದ್ದಾರೆ. ಅದೂ ಒಟ್ಟೊಟ್ಟಿಗೆ, ಒಬ್ಬರಿಗೊಬ್ಬರು ತಿಳಿಯದಂತೆ ಇವರು ಅದ್ಭುತವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ, ಯಾವುದೇ ಅದ್ಭುತ ಶೋ ಆದರೂ ಒಮ್ಮೆ ಪರದೆ ಬೀಳಲೇ ಬೇಕು. ಇದು ಪಶ್ಚಿಮ ಬಂಗಾಳದ ಲವರ್ ಬಾಯ್​ವೊಬ್ಬನಿಗೆ ಚೆನ್ನಾಗಿ ಅರ್ಥ ಆಗುವಂಥ ಸಮಯ ಬಂತು. ಆತ ಕದ್ದುಮುಚ್ಚಿ ಲವ್ವಿ ಡವ್ವಿ ಆಡುತ್ತಿದ್ದ ನಾಲ್ವರು ಗರ್ಲ್ ಫ್ರೆಂಡ್ಸ್ (Four girl friends storm lover’s house together) ಒಟ್ಟಿಗೆ ಸೇರಿ ಈತನ ಮನೆಗೆ ನುಗ್ಗಿದರೆ ಹೇಗಿದ್ದೀತು? ತಡಬಡಾಯಿಸಿದ ಈ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ (Consumes poison) ಮಾಡಿಕೊಳ್ಳುವ ಹಂತಕ್ಕೂ ಹೋಗಿದ್ದಾನೆ. ಅದೃಷ್ಟಕ್ಕೆ ಬದುಕುಳಿದು ಈಗ ಆಸ್ಪತ್ರೆಯಲ್ಲಿದ್ದಾನೆ.

  ಈ ವಿಚಿತ್ರ ಘಟನೆ ನಡೆದದ್ದು ಪಶ್ಚಿಮ ಬಂಗಾಳ ರಾಜ್ಯದ ಕೂಚ್ ಬಿಹಾರ್ ಜಿಲ್ಲೆಯ ಜೋರಪಟಕಿ ಎಂಬ ಗ್ರಾಮದಲ್ಲಿ. ಆತ್ಮಹತ್ಯೆ ಪ್ರಯತ್ನ ಮಾಡಿದ ಲವರ್ ಬಾಯ್ ಹೆಸರು ಸುಭಮೋಯ್ ಕರ್. ಸ್ಥಳೀಯ ಮೆಡಿಕಲ್ ಸ್ಟೋರ್​ನಲ್ಲಿ ಕೆಲಸ ಮಾಡುತ್ತಿದ್ದ ಈತ ಅದು ಹೇಗೋ ನಾಲ್ವರು ಹುಡುಗಿಯರನ್ನ ತನ್ನ ಪ್ರೇಮಪಾಶದಲ್ಲಿ ಕೆಡವಿದ್ದ. ಒಬ್ಬರಿಗೊಬ್ಬರಿಗೆ ಗೊತ್ತಾಗದ ರೀತಿಯಲ್ಲಿ ಈತ ನಾಲ್ವರ ಜೊತೆ ಸಂಬಂಧ ಇಟ್ಟುಕೊಂಡಿದ್ದ.

  ಹುಡುಗಿಯರಿಗೆ ಗೊತ್ತಾದಾಗ…

  ಈ ವಿಚಾರ ಅದು ಹೇಗೋ ಆ ನಾಲ್ವರಿಗೂ ಗೊತ್ತಾಗಿ ಹೋಗುತ್ತದೆ. ಈತನಿಗೆ ಪಾಠ ಕಲಿಸಲು ಆ ಮಹಿಳಾ ಮಣಿಯರು ನಿರ್ಧರಿಸಿ ಪ್ಲಾನ್ ಮಾಡುತ್ತಾರೆ.

  ಗರ್ಲ್ ಫ್ರೆಂಡ್ಸ್ ಒಟ್ಟಿಗೆ ನುಗ್ಗಿದಾಗ…

  ಇತ್ತ ಲವರ್ ಬಾಯ್ ಸುಭಮೋಯ್ ಇತ್ತೀಚೆಗೆ ಮನೆಯಲ್ಲಿ ಕಾಳಿ ಪೂಜೆ ಮಾಡಿಸಿದ್ದ ಈತ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಲು ತಯಾರಾಗಿರುತ್ತಾನೆ. ಅಷ್ಟರಲ್ಲಿ ಆತನ ನಾಲ್ಕೂ ಗರ್ಲ್ ಫ್ರೆಂಡ್​ಗಳು ಒಟ್ಟೊಟ್ಟಿಗೆ ಈತನ ಮನೆ ಪ್ರವೇಶ ಮಾಡುತ್ತಾರೆ. ಒಬ್ಬಳೇ ಬಂದಿದ್ದರೆ ಈತ ಪರಿಸ್ಥಿತಿ ನಿಭಾಯಿಸುತ್ತಿದ್ದನೇನೋ, ಆದರೆ ಎಲ್ಲಾ ತಿಳಿದುಕೊಂಡು ನಾಲ್ವರು ಬಂದದ್ದು ಈತನ ಜಂಘಾಬಲವೇ ಉಡುಗಿಹೋದಂತಾಗಿತ್ತು.

  ವಿಷಸೇವಿಸಿ ಆತ್ಮಹತ್ಯೆಗೆ ಯತ್ನ:

  ಆ ಲಲನೆಯರು ಈತನ ಮನೆಗೆ ಬಂದವರೇ ಹಿಗ್ಗಾಮುಗ್ಗ ಈತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ಬೆದರಿಕೆ ಹಾಕುತ್ತಾರೆ. ಪೊಲೀಸ್ ಕಂಪ್ಲೇಂಟ್​ಗೆ ಹೆದರಿದ ಸುಭಯೋಮ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ಕೊಡುತ್ತಾನೆ. ಆದರೂ ಮಹಿಳೆಯರು ತಾವು ದೂರು ಕೊಟ್ಟೇ ತೀರುವುದಾಗಿ ಹಠ ಹಿಡಿಯುತ್ತಾರೆ. ಆಗ ಈತ ತನ್ನ ರೂಮಿಗೆ ಓಡಿಹೋಗಿ ವಿಷ ಸೇವಿಸುತ್ತಾನೆ.

  ಇದನ್ನೂ ಓದಿ: Dating: ಮೊದಲ ಸಲ‌ ಡಿನ್ನರ್​ಗೆ ಕರೆದವನು ಬೆತ್ತಲಾಗಿದ್ದ, ಕೇಳಬಾರದ್ದು ಕೇಳಿಬಿಟ್ಟ..ಆಮೇಲೇನಾಯ್ತು?

  ಈ ವೇಳೆ, ಸ್ಥಳೀಯರು ಆಗಮಿಸಿ ಈತನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಅದೃಷ್ಟಕ್ಕೆ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಒಟ್ಟೊಟ್ಟಿಗೆ ನಾಲ್ವರು ಗರ್ಲ್​ಫ್ರೆಂಡ್​ಗಳನ್ನ ಕಳೆದುಕೊಂಡಿದ್ದಲ್ಲದೇ ಮಾನ ಹರಾಜು ಹಾಕಿಸಿಕೊಂಡಿದ್ದಾನೆ. ಈತ ಈ ಸ್ಥಿತಿಗೆ ಬಂದ ನಂತರ ಆ ಮಹಿಳೆಯರು ಪೊಲೀಸ್ ಠಾಣೆಗೆ ದೂರು ಕೊಡದೇ ಇರಲು ನಿರ್ಧರಿಸಿದ್ದಾರೆನ್ನಲಾಗಿದೆ.

  ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ಈ ವರದಿ ಪ್ರಕಾರ, ಸುಭಮೋಯ್​ನ ಕುಟುಂಬದವರು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

  ದಿನನಿತ್ಯ ಇಂಥದ್ದೇ ಸುದ್ದಿ:

  ನಮ್ಮ ರಾಜ್ಯದಲ್ಲೂ ಇಂಥ ಹಲವು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿ ಆಗಿವೆ. ಗಂಡನಿಗೆ ಕಾಣದೆ ಲವರ್ ಜೊತೆ ಹೆಂಡತಿ ಲವ್ವಿ ಡವ್ವಿ ಆಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕೇಸ್​ಗಳು ಅನೇಕ. ವಿವಾಹಿತ ಮಹಿಳೆಯರು ಲವರ್​ಗಳ ಜೊತೆ ಓಡಿ ಹೋದ ಪ್ರಕರಣಗಳೂ ಇವೆ. ವಿವಾಹಿತ ಗಂಡಸು ಹೆಂಡತಿಗೆ ಕಾಣದೇ ಹೊರಗೆ ಅನೇಕರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡ ಪ್ರಕರಣಗಳು ದಿನ ಬೆಳಗ್ಗೆ ವರದಿಯಾಗುತ್ತಲೇ ಇರುತ್ತವೆ. ಕನ್ನಡದ ಪ್ರೀತಿ ಮಾಯೆ ಹುಷಾರು ಎಂಬ ಹಾಡನ್ನ ಈಗ ಮೆಲುಕು ಹಾಕಲು ಅಡ್ಡಿ ಇಲ್ಲ.
  Published by:Vijayasarthy SN
  First published: