ಬಂಗಾಳದಲ್ಲಿ 6-7 ಹಂತ, ತಮಿಳುನಾಡು-ಕೇರಳಕ್ಕೆ ಒಂದೇ ಹಂತದಲ್ಲಿ ಚುನಾವಣೆ; ಫೆ.15ರ ನಂತರ ಅಂತಿಮ ಘೋಷಣೆ

ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಕುರಿತು ಚರ್ಚಿಸಲು ಚುನಾವಣಾ ಆಯೋಗವು ಫೆಬ್ರವರಿ 12 ಮತ್ತು 20 ರ ನಡುವೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರ ಅಡಿಯಲ್ಲಿ ಸರಣಿ ಸಭೆಗಳನ್ನು ನಡೆಸಲಿದೆ ಎಂದು ನ್ಯೂಸ್ 18 ಈ ಹಿಂದೆಯೇ ವರದಿ ಮಾಡಿತ್ತು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ನವ ದೆಹಲಿ (ಫೆಬ್ರವರಿ 10); ಬಹು ನಿರೀಕ್ಷಿತ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವಿಧಾನ ಸಭೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಚುನಾವಣೆಯನ್ನು 6 ರಿಂದ 7 ಹಂತಗಳಲ್ಲಿ ಹಾಗೂ ತಮಿಳುನಾಡು-ಕೇರಳ ಚುನಾವಣೆಗಳನ್ನು ಒಂದೇ ಹಂತದಲ್ಲಿ ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ ರಾಜ್ಯದ ಚುನಾವಣೆಯನ್ನೂ ಸಹ 2 ರಿಂದ 3 ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಭಾರತೀಯ ಚುನಾವಣಾ ಆಯೋಗ ಫೆಬ್ರವರಿ.15ರ ನಂತರ ಘೋಷಿಸಲಿದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗಿದೆ.

  ಚುನಾವಣೆ ಸಂಬಂಧ ಚುನಾವಣೆ ಆಯೋಗದ ಉನ್ನತ ಅಧಿಕಾರಿಗಳು ಬುಧವಾರ ತಮಿಳುನಾಡು, ಪುದುಚೇರಿ ಮತ್ತು ಕೇರಳಕ್ಕೆ ಭೇಟಿ ನೀಡಿ ಚುನಾವಣಾ ಸನ್ನದ್ಧತೆಯನ್ನು ಸಂಗ್ರಹಿಸಲಿದ್ದಾರೆ. ಅಲ್ಲದೆ, ಈಗಾಗಲೇ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಎಲ್ಲಾ ಪ್ರಮುಖ ಮಾಹಿತಿಗಳನ್ನೂ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

  ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಚುನಾಯಿತ ಶಾಸಕಾಂಗ ಸಭೆಯ ಅಧಿಕಾರ ಮೇ ಮತ್ತು ಜೂನ್​ ನಡುವೆ ವಿವಿಧ ದಿನಾಂಕಗಳಲ್ಲಿ ಕೊನೆಗೊಳ್ಳುತ್ತಿದೆ. ಹೀಗಾಗಿ ಇದಕ್ಕೂ ಮುನ್ನವೇ ಈ ರಾಜ್ಯಗಳಿಗೆ ಚುನಾವಣೆ ನಡೆಸುವ ಅಗತ್ಯವಿದ್ದು, ಚುನಾವಣಾ ಆಯೋಗ ಏಪ್ರಿಲ್​ನಲ್ಲಿ ಚುನಾವಣೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಮತ್ತು ರಾಜೀವ್ ಕುಮಾರ್ ಅವರನ್ನೊಳಗೊಂಡ ಆಯೋಗ ಫೆಬ್ರವರಿ 10 ಮತ್ತು 11 ರಂದು ತಮಿಳುನಾಡಿನಲ್ಲಿ ಚುನಾವಣೆ ಕುರಿತು ಪರಿಶೀಲನೆ ನಡೆಸಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

  ಚುನಾವಣಾ ಸನ್ನದ್ಧತೆಯ ಮಾಹಿತಿಗಳನ್ನು ಸಂಗ್ರಹಿಸುವ ಮತ್ತು ಶಾಂತಿಯುತವಾಗಿ ಚುನಾವಣೆಯನ್ನು ನಡೆಸುವ ಸಲುವಾಗಿ ಮತದಾನ ಅಧಿಕಾರಿಗಳು ಹಾಗೂ ಪೊಲೀಸ್​ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಚುನಾವಣಾ ಅಧಿಕಾರಿಗಳು ಫೆಬ್ರವರಿ 12 ರಂದು ನೆರೆಯ ಪುದುಚೇರಿ ಮತ್ತು ಫೆಬ್ರವರಿ 13 ಮತ್ತು 14 ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಚುನಾವಣಾ ಆಯೋಗವು ಪ್ರಮುಖ ರಾಜಕೀಯ ಪಕ್ಷಗಳೊಂದಿಗೂ ಸಂವಹನ ನಡೆಸಲಿದೆ.

  ಇದನ್ನೂ ಓದಿ: ಪರಮಾಣು ಶಸ್ತ್ರಾಸ್ತ್ರಗಳಿಗೆ ಪಾವತಿಸಲು 300 ಮಿಲಿಯನ್‌ ಡಾಲರ್​ಗೂ ಅಧಿಕ ಹಣ ಕದ್ದ ಉತ್ತರ ಕೊರಿಯಾದ ಹ್ಯಾಕರ್‌ಗಳು!

  ಆಯೋಗವು ಸಾಮಾನ್ಯವಾಗಿ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಮೊದಲು ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ ಬಿಹಾರದ ವಿಷಯದಲ್ಲಿ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ಮತದಾನ ಸಮಿತಿ ಪಾಟ್ನಾಕ್ಕೆ ಭೇಟಿ ನೀಡಿತ್ತು ಎಂಬುದು ಉಲ್ಲೇಖಾರ್ಹ.

  ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಕುರಿತು ಚರ್ಚಿಸಲು ಚುನಾವಣಾ ಆಯೋಗವು ಫೆಬ್ರವರಿ 12 ಮತ್ತು 20 ರ ನಡುವೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರ ಅಡಿಯಲ್ಲಿ ಸರಣಿ ಸಭೆಗಳನ್ನು ನಡೆಸಲಿದೆ ಎಂದು ನ್ಯೂಸ್ 18 ಈ ಹಿಂದೆಯೇ ವರದಿ ಮಾಡಿತ್ತು.
  Published by:MAshok Kumar
  First published: