Mamata Banerjee | ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಟೀ ಮಾಡಿದ ಸಿಎಂ ಮಮತಾ ಬ್ಯಾನರ್ಜಿ; ವಿಡಿಯೋ ವೈರಲ್
West Bengal Election 2021: ನಂದಿಗ್ರಾಮದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಮಮತಾ ಬ್ಯಾನರ್ಜಿ ನಿನ್ನೆ ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿಯ ಅಂಗಡಿಯಲ್ಲಿ ತಾವೇ ಖುದ್ದಾಗಿ ಟೀ ಮಾಡಿ, ತಮ್ಮ ಜೊತೆಗಿದ್ದವರಿಗೆ ಟೀ ಹಂಚಿ ಗಮನ ಸೆಳೆದರು.
ಕೊಲ್ಕತ್ತಾ (ಮಾ. 10): ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲು ಚಾಯ್ವಾಲಾ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಟೀ ಮಾರುತ್ತಿದ್ದ ಪ್ರಧಾನಿ ಮೋದಿ ಇಂದಿಗೂ ಆ ವಿಚಾರವನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಲೇ ಇದೆ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರದ ವೇಳೆ ಟೀ ಮಾಡಿ, ತಮ್ಮ ಜೊತೆಗಿದ್ದವರಿಗೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರ ಚಾಯ್ವಾಲಾ ಇಮೇಜಿನಿಂದ ಸ್ಫೂರ್ತಿ ಪಡೆದಿದ್ದಾರಾ? ಎಂಬ ಚರ್ಚೆಗಳೂ ಜಾಲತಾಣಗಳಲ್ಲಿ ನಡೆಯುತ್ತಿದೆ.
ನಂದಿಗ್ರಾಮದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಮಮತಾ ಬ್ಯಾನರ್ಜಿ ನಿನ್ನೆ ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿಯ ಅಂಗಡಿಯಲ್ಲಿ ತಾವೇ ಖುದ್ದಾಗಿ ಟೀ ಮಾಡಿ, ತಮ್ಮ ಜೊತೆಗಿದ್ದವರಿಗೆ ಟೀ ಹಂಚಿ ಗಮನ ಸೆಳೆದರು. ತಾವು ಚುನಾವಣೆಗೆ ಸ್ಪರ್ಧಿಸಿರುವ ನಂದಿಗ್ರಾಮದ ಮತದಾರರನ್ನು ಸೆಳೆಯಲು ನಿನ್ನೆ ರೋಡ್ ಶೋ ನಡೆಸಿದರು. ಬಳಿಕ ಸಂಜೆ ಟೀ ಶಾಪ್ಗೆ ತೆರಳಿ, ಟೀ ಮಾಡಿ ಗಮನ ಸೆಳೆದಿದ್ದಾರೆ.
#WATCH: West Bengal CM Mamata Banerjee serves tea to everyone at a tea stall in Nandigram. The CM herself had tea at the stall. pic.twitter.com/0FwnNgZF44
ಅಂದಹಾಗೆ, ಈ ರೀತಿ ರಸ್ತೆ ಬದಿಯ ಟೀ ಶಾಪ್ನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಟೀ ಮಾಡುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲಿ ಕೂಡ ದಿಘಾದ ದತ್ತಾಪುರದಲ್ಲಿ ರಸ್ತೆ ಬದಿ ಅಂಗಡಿಯಲ್ಲಿ ಟೀ ಮಾಡಿ, ಅಲ್ಲಿನ ಜನರಿಗೆ ತಾವೇ ಹಂಚಿದ್ದರು. ಹಾಗೇ, ಅಂಗಡಿಯೊಂದಕ್ಕೆ ತೆರಳಿ, ಅಲ್ಲಿನ ಮಗುವೊಂದನ್ನು ಎತ್ತಿಕೊಂಡು ಮುದ್ದಾಡಿದ್ದರು. ಇದೀಗ ಮತ್ತೆ ಚುನಾವಣಾ ರ್ಯಾಲಿ ಬಳಿಕ ಟೀ ಮಾಡಿದ್ದಾರೆ.
#WATCH West Bengal Chief Minister Mamata Banerjee prepares tea & serves it to locals in Duttapur, Digha. (Video Source - Mamata Banerjee's twitter handle) pic.twitter.com/UGZAjKG02H
ಚುನಾವಣಾ ದಿನಾಂಕ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ ಈ ಬಾರಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಪಕ್ಷ ತೊರೆದು ತಮಗೇ ಪ್ರತಿಸ್ಪರ್ಧಿಯಾಗಿ ನಿಂತಿರುವ ಸುವೇಂದು ಅವರ ವಿರುದ್ಧ ಜಯ ಗಳಿಸಲೇಬೇಕಾದ ಹಠ ಮಮತಾ ಬ್ಯಾನರ್ಜಿಯವರದ್ದಾಗಿದೆ.
ಮಾರ್ಚ್ 27ರಿಂದ 8 ಹಂತಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 29ರಂದು ಮತದಾನ ಪ್ರತಿಕ್ರಿಯೆ ಪೂರ್ಣಗೊಳ್ಳಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ