ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದೆ. ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ವರ್ಗಾವಣೆ ವಿಚಾರ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸೋಮವಾರ ಬಂಡೋಪಾಧ್ಯಯ ಅವರು ನಿವೃತ್ತಿಯಾಗಿದ್ದು, ಇಂದು ಮಧ್ಯಾಹ್ನವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಆದರೆ, ಸರ್ಕಾರದ ಮೂಲಗಳ ಪ್ರಕಾರ, ಇಂದು ಚಾರ್ಜ್‌ಶೀಟ್ ನೀಡಲಾಗುವುದು ಮತ್ತು ಬಂಡೋಪಾಧ್ಯಾಯ ಅವರ ಅಧಿಕಾರದ ಹೊರತಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಹೊಸ ಆದೇಶದಂತೆ, ಜೂನ್ 1 ರಿಂದ ಮೂರು ವರ್ಷಗಳ ಕಾಲ ಬಂಡೋಪಾಧ್ಯಾಯ ಅವರು ಹೊಸ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ರಾಜ್ಯ ಗೃಹ ಕಾರ್ಯದರ್ಶಿ ಎಚ್.ಕೆ. ದ್ವಿವೇದಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ ಪಿ ಗೋಪಾಲಿಕಾ ಅವರು ಗೃಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ಈ ಬದಲಾವಣೆ ಪ್ರಕಟಿಸಿದ ಬಳಿಕ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ರಾಜ್ಯ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಅವರ ಸೇವೆ ಇಂದು (ಮೇ 31, 2021) ಕೊನೆಗೊಳ್ಳುತ್ತಿದ್ದಂತೆ ನಿವೃತ್ತರಾಗಿದ್ದಾರೆ. ಅವರು ತಮ್ಮ ಸೇವೆಯನ್ನು ವಿಸ್ತರಣೆ ಮಾಡುವಂತೆ ಕೇಳಲಿಲ್ಲ. ಆದರೆ, ಅಧಿಕಾರಶಾಹಿಯಲ್ಲಿನ ಅವರ ಅಪಾರ ಅನುಭವವನ್ನು ಪರಿಗಣಿಸಿ, COVID-19 ಸಾಂಕ್ರಾಮಿಕ ಮತ್ತು ಯಾಸ್ ಸೈಕ್ಲೋನ್ ನಂತರದ ಪರಿಹಾರ ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಅವರ ಸೇವೆಯನ್ನು ನಾವು ಕೇಳಿದ್ದೇವು. ಅವರು ಅದಕ್ಕೆ ಒಪ್ಪಿಕೊಂಡರು. ಅಲಾಪನ್ ಬಂಡೋಪಾಧ್ಯಾಯ ಅವರ ಸೇವೆಗಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಪಶ್ಚಿಮ ಬಂಗಾಳಕ್ಕೆ ಅವರ ಸೇವೆ ಉತ್ಕೃಷ್ಟವಾಗಿದೆ. ಅವರ ದಾಖಲೆಯನ್ನು ಗಮನದಲ್ಲಿ ಇಟ್ಟುಕೊಂಡು ನಾವು ಅವರನ್ನು 3 ವರ್ಷಗಳ ಅವಧಿಗೆ ಸಿಎಂಗೆ ಮುಖ್ಯ ಸಲಹೆಗಾರರಾಗಿ ನೇಮಿಸುತ್ತಿದ್ದೇವೆ "ಎಂದು ಅವರು ತಿಳಿಸಿದರು.
1987 ರ ಬ್ಯಾಚ್‌ನ ಐಎಎಸ್ ಅಧಿಕಾರಿ, ಅಲಪನ್ ಬಂಡ್ಯೋಪಾಧ್ಯಾಯ ಅವರು 2019 ರಲ್ಲಿ ಗೃಹ ಮತ್ತು ಮಾಹಿತಿ ವಿಭಾಗದಲ್ಲಿ ನೇಮಕಗೊಳ್ಳುವ ಮೊದಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಜವಳಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ಅವರನ್ನು ಅತ್ಯುತ್ತಮ ಟಾಸ್ಕ್ ಮಾಸ್ಟರ್ ಎಂದು ಕರೆಯಲಾಗುತ್ತದೆ. ಮತ್ತು ಬಂಗಾಳದ ಸರ್ಕಾರದಲ್ಲಿ ಅವರನ್ನು 'ನೀಲಿ ಕಣ್ಣಿನ ಹುಡುಗ'. 2011 ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ನಂತರ, ಅವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರಶಂಸೆ ಮತ್ತು ಸ್ಥಾನಮಾನ ಪಡೆದುಕೊಂಡಿದ್ದಾರೆ.
ಇದನ್ನು ಓದಿ: ಜನರ ಕಲ್ಯಾಣಕ್ಕಾಗಿ ಪ್ರಧಾನಿ ಕಾಲಿಗೆ ಬೀಳಲು ಸಿದ್ಧ. ಆದರೆ, ಅವಮಾನ ಸಹಿಸಲ್ಲ; ಮಮತಾ ಬ್ಯಾನರ್ಜಿ
ಮೇ 28 ರಂದು ಕಲೈಕುಂಡದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಚಂಡಮಾರುತ ಪರಿಶೀಲನಾ ಸಭೆಯಲ್ಲಿ ಬಂಡೋಪಾಧ್ಯಾಯ ಅವರು ಗೈರು ಹಾಜರಾಗಿದ್ದರು. ವರದಿಯ ಮೇರೆಗೆ ಅಲಪನ್ ಬಂಡೋಪಾಧ್ಯಾಯ ಅವರನ್ನು ಕೇಂದ್ರವು ಅವರನ್ನು ಕೇಂದ್ರಕ್ಕೆ ವಾಪಸ್ ಕರೆಸಿಕೊಳ್ಳಲು ಮುಂದಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾನರ್ಜಿ ಸೋಮವಾರ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯರನ್ನು ಕೇಂದ್ರಕ್ಕೆ ವರದಿ ಮಾಡಿಕೊಳ್ಳುವಂತೆ ಮಾಡಿರುವ ಏಕಪಕ್ಷೀಯ ಆದೇಶದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಮತ್ತು ರಾಜ್ಯ ಸರ್ಕಾರವು ಅವರನ್ನು ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆ ಮಾಡುವುದಿಲ್ಲ,"ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ