West Bengal Politics| ಪಶ್ಚಿಮ ಬಂಗಾಳ ರಾಜ್ಯಸಭಾ ಉಪಚುನಾವಣೆ; ಟಿಎಂಸಿ ವಿರುದ್ಧದ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ!

ರಾಜ್ಯಸಭಾ ಚುನಾವಣೆಯ ಫಲಿತಾಂಶ ಮೊದಲೆ ನಿರ್ಧಾರ ಆಗಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ನಿರ್ಧಾರ ತೆಳೆಯಲಾಗಿದೆ ಎಂದು ಬಿಜೆಪಿ ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಕೋಲ್ಕತ್ತಾ (ಸೆಪ್ಟೆಂಬರ್​ 21); ಪಶ್ಚಿಮ ಬಂಗಾಳದಲ್ಲಿ (West Bengal) ಅಕ್ಟೋಬರ್ 4 ರಂದು ರಾಜ್ಯಸಭಾ ಉಪ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತ್ತೊಮ್ಮೆ ಆಡಳಿತರೂಢ ಟಿಎಂಸಿ (TMC) ಮತ್ತು ಪ್ರಬಲ ವಿರೋಧ ಪಕ್ಷವಾದ ಬಿಜೆಪಿ (BJP) ನಡುವೆ ಜಿದ್ದಾಜಿದ್ದಿ ನಡೆಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಬಂಗಾಳ ರಾಜ್ಯಸಭಾ ಉಪಚುನಾವಣೆಯಲ್ಲಿ (Rajya Sabha Election) ಸ್ಪರ್ಧಿಸದಿರಲು ರಾಜ್ಯ ಬಿಜೆಪಿ ನಿರ್ಧಾರ ಮಾಡಿದೆ ಎಂದು ಸೋಮವಾರ ಘೋಷಿಸಿದೆ. ರಾಜ್ಯಸಭಾ ಚುನಾವಣೆಯ ಫಲಿತಾಂಶ ಮೊದಲೆ ನಿರ್ಧಾರ ಆಗಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ನಿರ್ಧಾರ ತೆಳೆಯಲಾಗಿದೆ ಎಂದು ಬಿಜೆಪಿ ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ. ಪಕ್ಷದ ಗಮನ ಭವಾನಿಪುರ ವಿಧಾನಸಭಾ ಉಪ-ಚುನಾವಣೆಯ ಕಡೆಗೆ ಕೇಂದ್ರೀಕೃತವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗದ ಮುಖ್ಯಮಂತ್ರಿಯನ್ನು ಮತ್ತೊಮ್ಮೆ ಆಯ್ಕೆಯಾಗದ ಹಾಗೆ ಮಾಡಲು ಪಕ್ಷ ಕೆಲಸ ಮಾಡುತ್ತಿದೆ ಎಂದು ಅದು ಹೇಳಲಾಗಿದೆ.

  ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದರು ಮತ್ತು ಅಲ್ಲಿ ಅವರ ಮಾಜಿ ಆಪ್ತ ಸುವೆಂಧು ಅಧಿಕಾರಿ ವಿರುದ್ದ ಸೋಲುಂಡಿದ್ದರು. ಹೀಗಾಗಿ ಅವರು ತಮ್ಮ ಹಿಂದಿನ ಕ್ಷೇತ್ರವಾದ ಭವಾನಿಪುರದಲ್ಲಿ ಮತ್ತೆ ಉಪಚುನಾವಣೆಗೆ ನಿಂತಿದ್ದಾರೆ. ಅವರು ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರೆಯ ಬೇಕಾಗಿದ್ದರೆ ಈ ಚುನಾವಣೆಯಲ್ಲಿ ವಿಜಯಿಯಾಗಲೇ ಬೇಕಾಗಿದೆ.

  "ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ. ಫಲಿತಾಂಶವು ಪೂರ್ವನಿರ್ಧರಿತವಾಗಿದೆ. ಆಯ್ಕೆ ಆಗದ ಸಿಎಂ ಮತ್ತೊಮ್ಮೆ ಆಯ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಗಮನ ಕೇಂದ್ರೀಕೃತವಾಗಿದೆ" ಎಂದು ಬಂಗಾಳದ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.

  ಮಮತಾ ಅವರಿಗೆ ನವೆಂಬರ್ 5 ವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇರಬಹುದಾಗಿದೆ. ಹೀಗಾಗಿ ಅವರು ತಮ್ಮ ಗಡುವು ಮುಗಿಯುವುದರ ಒಳಗೆ ಭವಾನಿಪುರ ಕ್ಷೇತ್ರವನ್ನು ಗೆದ್ದು, ಅಲ್ಲಿನ ಶಾಸಕಿಯಾಗಬೇಕಾಗಿದೆ. ಆಗಸ್ಟ್ 9 ರಂದು ನಡೆದ ರಾಜ್ಯಸಭಾ ಉಪಚುನಾವಣೆಯಲ್ಲಿ ಕೂಡಾ ಬಿಜೆಪಿ ಸ್ಪರ್ಧಿಸಿರಲಿಲ್ಲ, ಇದು ಟಿಎಂಸಿಯ ಜವಾಹರ್ ಸಿರ್ಕಾರ್ ಅವಿರೋಧವಾಗಿ ಆಯ್ಕೆಯಾಗಲು ದಾರಿ ಮಾಡಿಕೊಟ್ಟಿತ್ತು.

  ಭವಾನಿಪುರ ಕ್ಷೇತ್ರವು ಬಂಗಾಳಿ ಮಾತನಾಡದ ಶೇ.40ರಷ್ಟು ಮತದಾರರನ್ನು ಹೊಂದಿದೆ. ವಿಧಾನಸಭೆ ಉಪಚುನಾವಣೆಯಲ್ಲಿ ಟಿಎಂಸಿಯನ್ನು ಸೋಲಿಸಲು ಬಿಜೆಪಿ ಈ ನಿರ್ದಿಷ್ಟ ಮತದಾರರ ಮೇಲೆ ಕಣ್ಣಿಟ್ಟಿದೆ.

  ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡು ಟಿಎಂಸಿಗೆ ಸೇರಿದ್ದ ಸುಶ್ಮಿತಾ ದೇವ್ ಅವರನ್ನು ಪಕ್ಷವು ರಾಜ್ಯಸಭಾ ಉಪಚುನಾವಣೆಗೆ ನಾಮನಿರ್ದೇಶನ ಮಾಡಿದೆ. ರಾಜ್ಯಸಭಾ ಸದಸ್ಯನಾಗಿದ್ದ ಟಿಎಂಸಿ ನಾಯಕ ಮಾನಸ್ ಭುನಿಯಾ ಅವರು ವಿಧಾನಸಭಾ ಚುನಾವಣೆಗೆ ನಿಂತು ಗೆದ್ದಿದ್ದರು. ಹೀಗಾಗಿ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ರಾಜ್ಯ ಸಭಾ ಸ್ಥಾನ ತೆರವುಗೊಂಡಿತ್ತು. ಬಂಗಾಳದಲ್ಲಿ ಇರುವ 16 ರಾಜ್ಯಸಭಾ ಸ್ಥಾನಗಳಲ್ಲಿ 11 ಟಿಎಂಸಿ ಪಕ್ಷದಲ್ಲಿದೆ. ಕಾಂಗ್ರೆಸ್ ಎರಡು ಮತ್ತು ಸಿಪಿಐ (ಎಂ) ಒಂದು ಸ್ಥಾನಗಳನ್ನು ಹೊಂದಿದೆ.

  ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ. ಟಿಎಂಸಿಯಿಂದ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಲ್ಲಿ ಸ್ಪರ್ಧಿಸುತ್ತಿರುವುದರಿಂದ ಕ್ಷೇತ್ರವು ದೇಶದ ಗಮನ ಸೆಳೆದಿದೆ. ಚುನಾವಣೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಲು ಬಿಜೆಪಿ ಪಕ್ಷದ ನಾಯಕಿ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಕಣಕ್ಕಿಳಿಸಿದೆ.

  ಇದನ್ನೂ ಓದಿ: Punjab Political Crisis| ರಾಷ್ಟ್ರೀಯವಾದಿ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ; ಅಶ್ವನಿ ಶರ್ಮಾ

  ಮುಖ್ಯಮಂತ್ರಿ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿರುವ ಟಿಬ್ರೆವಾಲ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿಯ ಪ್ರಮುಖ ನಾಯಕಿಯಾಗಿರುವ ಟಿಬ್ರೆವಾಲ್ ಅವರು, ವಿಧಾನಸಭಾ ಚುನಾವಣೆಯ ನಂತರ ನಡೆದಿದೆ ಎನ್ನಲಾಗಿರುವ ಹಿಂಸಾಚಾರದ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಿದ ಅರ್ಜಿದಾರರಲ್ಲಿ ಒಬ್ಬರಾಗಿದ್ದಾರೆ. ಸಿಪಿಐಎಂ ಭವಾನಿಪುರದಲ್ಲಿ ಮಮತಾ ವಿರುದ್ದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌ ಸ್ಪರ್ಧಿಸದೆ ಇರಲು ನಿರ್ಧರಿಸಿದೆ.
  Published by:MAshok Kumar
  First published: