‘ನಾವು ಶಿವನ ಪೂಜಿಸುತ್ತೇವೆ; ಅವರು ಶಿವನಂತೆ ವರ್ತಿಸುತ್ತಾರೆ’ – ನಿತ್ಯಾನಂದ ಬಗ್ಗೆ ಮದುರೈ ಮಠ ಹೇಳಿದ್ದಿದು

ಮದುರೈ ಜಿಲ್ಲೆಯಲ್ಲಿರುವ ಶೈವ ಪಂಥಕ್ಕೆ ಸೇರಿದ ಅಧೀನಂ ಮಠದ ಸ್ವಾಮೀಜಿ ಶ್ರೀ ಅರುಣಗಿರಿನಾತರ್ ಅವರು ಮೃತಪಟ್ಟ ಬೆನ್ನಲ್ಲೇ ‘ಕೈಲಾಸವಾಸಿ’ ನಿತ್ಯಾನಂದ ತಾನು ಅಧೀನಂ ಮಠದ ನೂತನ ಸ್ವಾಮೀಜಿ ಎಂದು ಹೇಳಿಕೊಂಡಿದ್ದಾರೆ.

ನಿತ್ಯಾನಂದ ಸ್ವಾಮೀಜಿ

ನಿತ್ಯಾನಂದ ಸ್ವಾಮೀಜಿ

 • News18
 • Last Updated :
 • Share this:
  ಚೆನ್ನೈ: ಭಾರತ ತೊರೆದು ಕೈಲಾಸ ಹೆಸರಿನ ದ್ವೀಪ ರಾಷ್ಟ್ರ ಸ್ಥಾಪಿಸಿದ್ದೇನೆ ಎಂದು ಹೇಳಿಕೊಳ್ಳುವ ನಿತ್ಯಾನಂದ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಮದುರೈ ಅಧೀನಂ ಮಟದ 292ನೇ ಸ್ವಾಮೀಜಿ ಆಗಿದ್ದ ಶ್ರೀ ಅರುಣಗಿರಿನಾದರ್ ಅವರು ಕಳೆದ ವಾರ ನಿಧನರಾಗುತ್ತಿದ್ದಂತೆಯೇ ನಿತ್ಯಾನಂದ ಆ ಮಠಕ್ಕೆ ತಾನೇ ಸ್ವಾಮೀಜಿ ಎಂದು ಹೇಳಿಕೊಂಡಿದ್ದಾರೆ. ಅರುಣಗಿರಿನಾಥರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಹೇಳಿಕೆ ನೀಡಿರುವ ಅವರು, ತಾನು ಈ ಪುರಾತನ ಅಧೀನಮ್ ಮಠಕ್ಕೆ ನಿಜವಾದ ವಾರಸುದಾರ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಾನು ಈ ಮಠದ 293ನೇ ಸ್ವಾಮೀಜಿ ಆಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದೂ ಅವರು ಘೋಷಿಸಿಕೊಂಡಿರುವುದು ಕುತೂಹಲ. ಆದರೆ, 1,500 ವರ್ಷಗಳಷ್ಟು ಹಳೆಯದಾದ ಶೈವ ಪಂಥಕ್ಕೆ ಸೇರಿದ ಮದುರೈ ಅಧೀನಮ್ ಮಠ ನಿತ್ಯಾನಂದರ ಹೇಳಿಕೆಯನ್ನ ಅಲ್ಲಗಳೆದಿದೆ.

  “ಸುಂದರಮೂರ್ತಿ ಸ್ವಾಮಿಗಳ್ ಅವರು ಮದುರೈ ಅಧೀನಂ ಪೀಠದ 293ನೇ ಸ್ವಾಮೀಜಿ ಆಗಲಿದ್ದಾರೆ. ನಿತ್ಯಾನಂದರಿಗೂ ನಮಗೂ ಸಂಬಂಧ ಇಲ್ಲ. ನಾವು ಶಿವನನ್ನು ಆರಾಧಿಸುತ್ತೇವೆ. ನಿತ್ಯಾನಂದ ಅವರು ತಾನೇ ಶಿವ ಎಂಬಂತೆ ವರ್ತಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಏನನ್ನೂ ಸಾಧಿಸಲು ಆಗುವುದಿಲ್ಲ. ಗುರು ಇಹಲೋಕ ತ್ಯಜಿಸಿದಾಗ ಅವರು ಅಧೀನಂ ಪೀಠಕ್ಕೆ ಬರುವ ಸೌಜನ್ಯವನ್ನೂ ತೋರಲಿಲ್ಲ” ಎಂದು ಮದುರೈ ಅಧೀನಂ ಪೀಠದ ಪರ ವಕೀಲ ಜಯಚಂದ್ರನ್. ಕುತೂಹಲವೆಂದರೆ ನಿತ್ಯಾನಂದ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಹರಸಾಹಸ ಮಾಡಬೇಕಾಯಿತು. ಮಠದ ಯಾವ ಶ್ರೀಗಳೂ ಕೂಡ ನಿತ್ಯಾನಂದರ ಬಗ್ಗೆ ಮಾತನಾಡಲು ನಿರಾಕರಿಸಿದರು. ಕೊನೆಗೆ ವಕೀಲರಿಂದ ಸ್ಪಷ್ಟೀಕರಣ ಸಿಕ್ಕಿತು.

  ಬಿಡದಿಯ ಧ್ಯಾನಪೀಠಂ ಆಶ್ರಮ ನಡೆಸುವಾಗ ನಿತ್ಯಾನಂದ 2012ರಲ್ಲಿ ಮದುರೈನ ಅಧೀನಂ ಮಠಕ್ಕೆ ಹೋಗಿ ಅಲ್ಲಿ ಕಿರಿಯ ಸ್ವಾಮೀಜಿ ದೀಕ್ಷೆ ಪಡೆದರು. ಆದರೆ, ಶಿಸ್ತು ಕ್ರಮವಾಗಿ ಅವರನ್ನ ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಆ ಸ್ಥಾನದಿಂದ ಕಿತ್ತೊಗೆಯಲಾಗಿತ್ತು. ಆದರೂ ನಿತ್ಯಾನಂದ ಈ ಮಠದ ಮೇಲಿನ ಹಕ್ಕನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

  ಇದನ್ನೂ ಓದಿ: Mekadatu Project- ರಾಮನಗರದಲ್ಲಿ ರೈತರ ಜಾಥಾ; ಮೇಕೆದಾಟು ಯೋಜನೆ ಆಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

  ಇದೇ ವೇಳೆ, ಶ್ರೀ ಅರುಣಗಿರಿನಾತರ್ ಅವರ ನಿಧನಕ್ಕೆ ಸಂತಾಪ ಸೂಚಕವಾಗಿ ಕೈಲಾಸ ದೇಶದ ಎಲ್ಲಾ ಅಧಿಕೃತ ಕಟ್ಟಡಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. 292ನೇ ಗುರುವಿನ ಅಗಲಿದ ಆತ್ಮಕ್ಕೆ ಮುಕ್ತಿ ಕೊಡಿಸುವ ವಿಧಿವಿಧಾನಗಳನ್ನ ನಿತ್ಯಾನಂದ ಮಾಡಿದರು. ಅದರ ಫೋಟೋಗಳೂ ಇದರಲ್ಲಿವೆ. ಮದುರೈನಲ್ಲಿರುವ ಅಧೀನಂ ಮಠಕ್ಕೆ ನಿತ್ಯಾನಂದ ಅವರೇ 293ನೇ ಸ್ವಾಮೀಜಿ ಆಗಿದ್ದಾರೆ ಎಂದು ‘ಕೈಲಾಸ ರಾಷ್ಟ್ರ’ದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ಬಿಡದಿ ಆಶ್ರಮದಲ್ಲಿದ್ದಾಗ ನಿತ್ಯಾನಂದರ ಮೇಲೆ ಅತ್ಯಾಚಾರ, ಅಪಹರಣ, ದಬ್ಬಾಳಿಕೆ ಇತ್ಯಾದಿ ಆರೋಪಗಳು ಕೇಳಿಬಂದು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದ ವಿಚಾರಣೆಗೂ ಗೈರಾಗುತ್ತಿದ್ದ ಅವರ ಬಂಧನಕ್ಕೆ ವಾರಂಟ್ ನೀಡಲಾಗಿದೆ. ನಂತರ ಭಾರತವನ್ನ ತೊರೆದು ಹೋಗಿರುವ ನಿತ್ಯಾನಂದ ತಾನು ಒಂದು ದ್ವೀಪವನ್ನ ಖರೀದಿಸಿದ್ದು, ಅದರಲ್ಲಿ ಕೈಲಾಸ ಎಂಬ ಹಿಂದೂ ದ್ವೀಪ ರಾಷ್ಟ್ರವನ್ನ ಸ್ಥಾಪಿಸಿದ್ದಾಗಿ ಹೇಳಿಕೊಂಡಿದ್ದಾರೆ.  ಇದು ಗಡಿಗಳಿಲ್ಲದ ದೇಶವಾಗಿದ್ದು, ವಿಶ್ವದೆಲ್ಲೆಡೆಯಿಂದ ಹಿಂದೂ ನಿರಾಶ್ರಿತರಿಗೆ ತನ್ನ ಆದೇಶ ಆಶ್ರಯತಾಣವಾಗಿದೆ. ಇಲ್ಲಿ ಪ್ರತ್ಯೇಕ ಸರ್ಕಾರ, ಪ್ರಧಾನಿ, ಸಂಪುಟ ಇತ್ಯಾದಿ ಇವೆ. ಕೈಲಾಸ ರಿಸರ್ವ್ ಬ್ಯಾಂಕ್ ಕೂಡ ಇದೆ. ಇಲ್ಲಿ ಕೈಲಾಶಿಯನ್ ಡಾಲರ್ ಕರೆನ್ಸಿ ಚಲಾವಣೆಯಲ್ಲಿದೆ ಎಂದೂ ನಿತ್ಯಾನಂದ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​​ಗಳಲ್ಲಿ ಮಾಹಿತಿ ನೀಡಿದ್ದಾರೆ. ಇವರ ಕೈಲಾಸ ದ್ವೀಪವು ಈಕ್ವಡಾರ್ ಬಳಿ ಇದೆ ಎಂಬ ಮಾತು ಕೇಳಿಬರುತ್ತದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: