ಅಂಬೇಡ್ಕರ್, ಲೋಹಿಯಾ, ದೀನ್ ದಯಾಳ್, ಗಾಂಧಿ ಆಶಯಕ್ಕಾಗಿ ದುಡಿಯೋಣ; ಪ್ರಧಾನಿ ಮೋದಿ

ಎನ್​ಡಿಎ ಮೈತ್ರಿಕೂಟದ ನಾಯಕನಾಗಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಪ್ರಸ್ತಾವ ಸಲ್ಲಿಸಲಿದ್ದಾರೆ.

news18
Updated:May 25, 2019, 8:01 PM IST
ಅಂಬೇಡ್ಕರ್, ಲೋಹಿಯಾ, ದೀನ್ ದಯಾಳ್, ಗಾಂಧಿ ಆಶಯಕ್ಕಾಗಿ ದುಡಿಯೋಣ; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ.
  • News18
  • Last Updated: May 25, 2019, 8:01 PM IST
  • Share this:
ನವದೆಹಲಿ(ಮೇ.25): ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು ಎನ್​ಡಿಎ ಮೈತ್ರಿಕೂಟದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಜೆಪಿ ನೇತೃತ್ವದ ಎನ್​ಡಿಎ ಸಂಸದೀಯ ಪಕ್ಷಗಳ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ನಾಯಕನಾಗಿ ಒಮ್ಮತದಿಂದ ಆರಿಸಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ಸಂಸತ್​ನಲ್ಲಿ ನಡೆದ ಎನ್​ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಅವರನ್ನು ನಾಯಕನಾಗಿ ಪ್ರಸ್ತಾಪ ಮಾಡಿದರು. ಹಿರಿಯ ಬಿಜೆಪಿ ಮುಖಂಡರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದರು. ಜೊತೆಗೆ, ಶಿವಸೇನೆ, ಜೆಡಿಯು, ಶಿರೋಮಣಿ ಅಕಾಲಿ ದಳ ಮೊದಲಾದ ಬಿಜೆಪಿ ಮಿತ್ರ ಪಕ್ಷಗಳ ಮುಖಂಡರು ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿದರು. ಇದರೊಂದಿಗೆ ಮುಂದಿನ ಸರಕಾರದ ನೇತೃತ್ವವನ್ನು ನರೇಂದ್ರ ಮೋದಿ ಅವರೇ ವಹಿಸುವುದು ಖಚಿತವಾಗಿದೆ.

ಬಿಜೆಪಿಯ ಸರ್ವ ಸಂಸದರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂಸದೀಯ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಪ್ರಧಾನಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವಕ್ಕೆ ಬದ್ಧರಾಗಿದ್ದರು. ಇದರಿಂದಾಗಿ ನರೇಂದ್ರ ಮೋದಿ ಅವರು ಇನ್ನೂ 5 ವರ್ಷ ಕಾಲ ಪ್ರಧಾನಿಯಾಗಲು ಸಾಧ್ಯವಾಗಿದೆ. ಎಲ್ಲಾ ವರ್ಗಗಳ ಜನರು ಮೋದಿ ಮತ್ತು ಎನ್​ಡಿಎಗೆ ಹೆಚ್ಚಿನ ಬಹುಮತ ನೀಡಿ ಆಶೀರ್ವದಿಸಿದ್ದಾರೆ. ಒಬ್ಬ ಬಡಕುಟುಂಬದಿಂದ ಬಂದ ವ್ಯಕ್ತಿಯು ಪ್ರಧಾನಿಯಾಗುವ ಹಂತಕ್ಕೇರಿದ್ದು ಪ್ರಜಾತಂತ್ರದ ವೈಶಿಷ್ಟ್ಯತೆಯಾಗಿದೆ” ಎಂದು ಬಣ್ಣಿಸಿದರು.

ಇದನ್ನೂ ಓದಿ: ವಿರೋಧ ಪಕ್ಷ ಸ್ಥಾನ ಪಡೆಯುವಲ್ಲಿ ಮತ್ತೆ ವಿಫಲವಾದ ಕಾಂಗ್ರೆಸ್​; ಖರ್ಗೆ ಸೋಲಿನ ಬಳಿಕ ಯಾರಾಗಲಿದ್ದಾರೆ ವಿಪಕ್ಷ ನಾಯಕರು?

“ಈ ಚುನಾವಣೆಯಲ್ಲಿ ಜನರು ವಂಶಾಡಳಿತ ಹಾಗೂ ಜಾತಿ ಆಧಾರಿತ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಸರಕಾರದ ಕಾರ್ಯಸಾಧನೆ ಮತ್ತು ಅಭಿವೃದ್ಧಿ ಆಧಾರದ ಮೇಲೆ ಜನರು ಮತ ಹಾಕಿದ್ದಾರೆ” ಎಂದು ಈ ವೇಳೆ ಅಮಿತ್ ಶಾ ಅಭಿಪ್ರಾಯಪಟ್ಟರು.

ಅಮಿತ್​​ ಶಾ ಬಳಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿಯವರು,  ಸಂಸದೀಯ ನಾಯಕನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ನಾನು ನಿಮಗೆಲ್ಲರಿಗೂ ಆಭಾರಿಯಾಗಿದ್ದೇನೆ. ನವಭಾರತದ ನಮ್ಮ ಸಂಕಲ್ಪ ವಿನೂತನವಾಗಿ ಆರಂಭವಾಗಲಿದೆ. ಇಡೀ ವಿಶ್ವವೇ ಭಾರತದ ಚುನಾವಣೆಯನ್ನು ನೋಡುತ್ತಿತ್ತು.  ಈ ಬದಲಾವಣೆ ಪ್ರಕ್ರಿಯೆಯಲ್ಲಿ ನೀವೆಲ್ಲ ಭಾಗಿಯಾಗಿದ್ದೀರಿ ಎನ್ನುವ ಮೂಲಕ ಮೊದಲ ಬಾರಿಗೆ ಆಯ್ಕೆಯಾಗಿ ಬಂದವರಿಗೆ ಅಭಿನಂದನೆ ಸಲ್ಲಿಸಿದರು.

ಹಾಗೆಯೇ ಭಾರತ ಪ್ರಜಾತಂತ್ರದ ಉತ್ಸವ ವಿಶ್ವದ ಮುಂದೆ ಪ್ರತಿಷ್ಠೆಯಾಗಿ ನಿಲ್ಲಿಸಬೇಕು.  ಚುನಾವಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ. ಜನಾದೇಶ ನಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಜವಾಬ್ದಾರಿ ಎಲ್ಲರೂ ಸಮರ್ಥವಾಗಿ ನಿಭಾಯಿಸಬೇಕು. ದೇಶದ ರಾಜಕೀಯದಲ್ಲಿ ಬದಲಾವಣೆ ಬಂದಿದೆ. ಅಧಿಕಾರ ಮತದಾರರ ಮೇಲೆ ಎಂದೂ ಪ್ರಭಾವಿಸಲ್ಲ. ಜನ ನಮ್ಮನ್ನು ಆರಿಸಿದ್ದು ನಮ್ಮ ಸೇವಾಭಾವ ನೋಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೀಗೆ ಮಾತು ಮುಂದುವರೆಸಿದ ಪ್ರಧಾನಿ, ನನ್ನ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗ. ನಾನು ಕೂಡ ನಿಮ್ಮಂತೆಯೇ ಓರ್ವ ಸಂಸದ. ಮತದಾರರ ಪ್ರಬುದ್ಧತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ನಾಯಕತ್ವವನ್ನು ದೇಶದ ಜನ ಗುರುತಿಸಿದ್ದಾರೆ. ದೇಶದ ಜನ ಸಕಾರಾತ್ಮಕವಾಗಿ ಮತದಾನ ಮಾಡಿದ್ದಾರೆ. ದೇಶದಲ್ಲಿ ಉತ್ತಮ ಕೆಲಸಗಳಾಗಬೇಕೆಂದು ಜನ ಬೆಂಬಲ ಸಿಕ್ಕಿದೆ. ದೇಶದ ಅಭಿವೃದ್ಧಿ ಕನಸಿಗೆ 130 ಕೋಟಿ ಜನರಿಂದ ಸಾಥ್ ನೀಡಿದ್ಧಾರೆ ಎಂದರು.ಹೆಗಲಿಗೆ ಹೆಗಲು ಕೊಟ್ಟು ನಾವೆಲ್ಲರೂ ಮುನ್ನಡೆಯಬೇಕು. 17 ರಾಜ್ಯಗಳು ಶೇ.50 ಮತಗಳನ್ನು ಈ ಬಾರಿ ನೀಡಿದ್ದಾರೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ವಿಶ್ವವೇ ಮೆಚ್ಚಿದೆ. ಈ ಚುನಾವಣೆ ನನ್ನ ಪಾಲಿಗೆ ಮಹಾ ತೀರ್ಥಯಾತ್ರೆ. ಈ ಚುನಾವಣೆಯಲ್ಲಿ ಮಹಿಳೆಯರಿಂದ ಹೆಚ್ಚು ಮತದಾನ ಆಗಿದೆ. ಮಹಿಳೆಯರು, ತಾಯಂದಿರು ಹೆಚ್ಚು ಆಶೀರ್ವದಿಸಿದ್ದಾರೆ. ಪ್ರಚಾರದ ವೇಳೆ ಜನರಲ್ಲಿ ಮತ ಕೇಳಲು ಹೋಗ್ತಿರಲಿಲ್ಲ. ಜನರಲ್ಲಿ ಆಶೀರ್ವಾದ ಕೇಳಲು ಹೋಗುತ್ತಿದ್ದೆ ಎಂದು ಹೇಳಿದರು.

2014ರಲ್ಲಿ ಬಿಜೆಪಿಗಿದ್ದ ಮತದಾನ ಪ್ರಮಾಣ ಹೆಚ್ಚಾಗಿದೆ. 2019ರಲ್ಲಿ ಶೇ.25ರಷ್ಟು ಮತದಾನ ಪ್ರಮಾಣ ಹೆಚ್ಚಿದೆ. ಪ್ರಾದೇಶಿಕ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಅಡ್ವಾಣಿಯವರು ಘಟಬಂಧನ್ ಯಶಸ್ವಿಯಾಗಿ ಮುನ್ನಡೆಸಿದ್ರು. ದೇಶದಲ್ಲಿ ಘಟಬಂಧನ್ ತಾತ್ಕಾಲಿಕ ಗುಂಪು ಆಗುವುದಿಲ್ಲ. ಮಿತ್ರಪಕ್ಷಗಳು ರಾಜಕೀಯ ಬಲ ನೀಡುತ್ತವೆ ಎಂದು ತಿಳಿಸಿದರು.

ಯಶ್ವಸಿ ಮೈತ್ರಿಕೂಟಕ್ಕೆ ಎನ್ಡಿಎ ಉದಾಹರಣೆಯಾಗಿದೆ. ದೇಶ ಪರಿಶ್ರಮ, ಪ್ರಾಮಾಣಿಕತೆಯನ್ನು ಗೌರವಿಸುತ್ತದೆ. ಹೊಸದಾಗಿ ಆಯ್ಕೆಯಾದವರಿಗೆ ಹೆಸರು ಮಾಡುವ ಆಸೆಯಿದೆ. ನೀವು ಮಾಡುವ ಕಾಯಕದಿಂದ ಖ್ಯಾತಿ ಗಳಿಸಿಕೊಳ್ಳಿ ಎಂದು ಮೊದಲ ಬಾರಿ ಆಯ್ಕೆಯಾದವರಿಗೆ ಮೋದಿ ಕಿವಿಮಾತು ಹೇಳಿದರು.

ಮೋದಿ ಸರ್ಕಾರದಲ್ಲಿ ಮಂತ್ರಿಯಾಗುವ ಕನಸಿರುತ್ತೆ. ಮಂತ್ರಿ ಸ್ಥಾನದ ಬಗ್ಗೆ ಮಾತುಗಳು ಕೇಳಿ ಬರುತ್ತವೆ. ಯೋಚಿಸಬೇಡಿ, ನಿಮಗೆ ಮಂತ್ರಿ ಸ್ಥಾನ ಸಿಗುತ್ತದೆ. ಇಡೀ ದೇಶ ನಿಮ್ಮನ್ನು ನೋಡುತ್ತಿರುತ್ತದೆ, ಎಚ್ಚರ. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಎಚ್ಚರವಹಿಸಿ. ಮೋದಿಯಿಂದ ಆಯ್ಕೆಯಾಗಿದ್ದೇವೆಂಬ ಭಾವನೆ ಬೇಡ. ಜನಾದೇಶವನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಿ. ವಿವಿಐಪಿ ಸಂಸ್ಕೃತಿಯನ್ನು ದೇಶ ವಿರೋಧಿಸುತ್ತದೆ. ಚುನಾವಣಾ ಆಯೋಗ, ಸೇನೆಗೆ ಯಶಸ್ವಿಯಾಗಿ ಚುನಾವಣೆ ನಡೆಸಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. 5 ವರ್ಷ ಮೂಲಭೂತವಾದ ಬಿಟ್ಟು ಕೆಲಸ ಮಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಲೋಹಿಯಾ, ದೀನ್ ದಯಾಳ್, ಮಹಾತ್ಮಗಾಂಧಿ ಕನಸು ನನಸು ಮಾಡಲು ಕೆಲಸ ಮಾಡೋಣ ಎಂದು ಭಾಷಣ ಮುಗಿಸಿದರು.

 

ಇನ್ನು ಎನ್​ಡಿಎ ಮೈತ್ರಿಕೂಟದ ನಾಯಕನಾಗಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಪ್ರಸ್ತಾವ ಸಲ್ಲಿಸಲಿದ್ದಾರೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading