ಪಣಜಿ (ನ. 28): ದಶಕಗಳಿಂದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಕಗ್ಗಂಟಾಗಿರುವ ಮಹದಾಯಿ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ಕರ್ನಾಟಕದ ಜತೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಪಣಜಿಯಲ್ಲಿ ಮಾತನಾಡಿರುವ ಪ್ರಮೋದ್ ಸಾವಂತ್, ನಾವು (ಗೋವಾ) ಮಹದಾಯಿ ನ್ಯಾಯಮಂಡಳಿ ನೀಡಿರುವ ಐತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಸುಪ್ರೀಂಕೋರ್ಟಿನಲ್ಲಿ ನಮ್ಮಅರ್ಜಿ ವಿಚಾರಣೆಯ ಹಂತದಲ್ಲಿದೆ. ಹಾಗಾಗಿ ಸುಪ್ರೀಂ ಕೋರ್ಟಿನಲ್ಲಿ ನಾವು ಹೋರಾಟ ನಡೆಸುತ್ತೇವೆ. ಈ ಅಂತರರಾಜ್ಯ ಜಲ ವಿವಾದವು ಕಾನೂನಾತ್ಮಕವಾಗಿಯು ಬಗೆಹರಿಯಲಿ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ "ಅಂತರರಾಜ್ಯ ಮಹದಾಯಿ ಜಲ ವಿವಾದದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸುತ್ತೀರಾ? ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಮುಂದಾಗುವಿರಾ?" ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಸಾವಂತ್, "ಕರ್ನಾಟಕದ ಜೊತೆ ಮಾತನಾಡುವ ಪ್ರಶ್ನೆಯೇ ಇಲ್ಲ. ನಮಗೆ ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸಿಕೊಳ್ಳುವ ಯೋಚನೆ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಅವರು ಕರ್ನಾಟಕ ಈಗ ಮಹದಾಯಿ ನದಿಗೆ ಕಡಿಮೆ ನೀರು ಹರಿಸುತ್ತಿದೆ ಎಂದು ಆರೋಪ ಮಾಡಿದರಲ್ಲದೆ, ನಮ್ಮ ಮೂಲ ಬೇಡಿಕೆ "ಕರ್ನಾಟಕವು ನದಿ ತಿರುವು ಯೋಜನೆ ಕೈ ಬಿಡಬೇಕು ಮತ್ತು ಗೋವಾಕ್ಕೆ ಬರುವ ನದಿಗೆ ನೀರು ಹರಿಸಬೇಕು ಎನ್ನುವುದಾಗಿದೆ. ಆದುದರಿಂದ ಈ ಸಮಸ್ಯೆಗೆ ಕಾನೂನು ಹೋರಾಟದಿಂದ ಮಾತ್ರ ಪರಿಹಾರ ಸಿಗಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.
ಇದನ್ನು ಓದಿ: ಅಯೋಧ್ಯೆಯಲ್ಲಿ ರಾಷ್ಟ್ರ ಮಟ್ಟದ ಕುಸ್ತಿ ಅಖಾಡ; ಪ್ರಶಸ್ತಿಗಾಗಿ ಗದಗ ದಂಗಲ್ ಹುಡುಗಿಯರ ಸಖತ್ ತಾಲೀಮು
ಮಹದಾಯಿ ನ್ಯಾಯಮಂಡಳಿಯೇ ಒಮ್ಮೆ 'ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ' ಎಂದು ಹೇಳಿತ್ತು. ಇದಲ್ಲದೆ ದೇಶದ ಇತರೆ ಜಲ ವಿವಾದಗಳಲ್ಲಿ ಅನೇಕ ಬಾರಿ ಸರ್ವೋಚ್ಛ ನ್ಯಾಯಾಲಯವು ಕೂಡ 'ಮಾತುಕತೆಯ ಮದ್ದಿನ' ಸಲಹೆ ನೀಡಿದೆ. ಇವುಗಳನ್ನು ಸ್ಮರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ