ಅಭಿಪ್ರಾಯ - ನೀರಿನ ಭೀಕರ ಸವಾಲಿಗೆ ಸಮಾಜ ಎಚ್ಚೆತ್ತುಕೊಳ್ಳದಿದ್ದಲ್ಲಿ ಕಾದಿದೆ ಅನಾಹುತ..!

ವಿಶ್ವ ಅರೋಗ್ಯ ಸಂಸ್ಥೆಯ ವರದಿಯೊಂದು ಹೇಳುವಂತೆ ಜಗತ್ತಿನಲ್ಲಿ ಕನಿಷ್ಠ 2 ಬಿಲಿಯನ್ ಜನರು ಅನಿವಾರ್ಯವಾಗಿ ಕಲುಷಿತ ಮೂಲಗಳಿಂದ ನೀರನ್ನು ಕುಡಿಯುತ್ತಿದ್ದು, ಅವರೆಲ್ಲರೂ ನೀರಿನ ಸಂಬಂಧವಿರುವ ಖಾಯಿಲೆಗಳನ್ನು ಹೊಂದುವ ಅತಿ ಹೆಚ್ಚು ಅಪಾಯದಲ್ಲಿದ್ದಾರೆ.

Rajesh Duggumane | news18-kannada
Updated:August 26, 2019, 12:18 PM IST
ಅಭಿಪ್ರಾಯ - ನೀರಿನ ಭೀಕರ ಸವಾಲಿಗೆ ಸಮಾಜ ಎಚ್ಚೆತ್ತುಕೊಳ್ಳದಿದ್ದಲ್ಲಿ ಕಾದಿದೆ ಅನಾಹುತ..!
ಸಾಂದರ್ಭಿಕ ಚಿತ್ರ.
  • Share this:
ಬಹಳ ಹಿಂದೆ, ಸುಪ್ರೀಮ್ ಕೋರ್ಟು ಶುದ್ಧ ನೀರಿನ ಲಭ್ಯತೆ ಬದುಕುವ ಹಕ್ಕಿನ ಭಾಗ ಎಂದು ಹೇಳಿತ್ತು. ಸಂವಿಧಾನದ 21ನೆಯ ಅನುಚ್ಛೇದವು ಈ ಹಕ್ಕನ್ನು ಖಚಿತ ಪಡಿಸುತ್ತದೆ. ಸುಪ್ರೀಮ್ ಕೋರ್ಟಿನ ಪ್ರಕಾರ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲದಿದ್ದಲ್ಲಿ ಈ ಹಕ್ಕಿಗೆ ಏನೂ ಅರ್ಥವಿಲ್ಲ !

ವಿಶ್ವ ಅರೋಗ್ಯ ಸಂಸ್ಥೆಯ ವರದಿಯೊಂದು ಹೇಳುವಂತೆ ಜಗತ್ತಿನಲ್ಲಿ ಕನಿಷ್ಠ 2 ಬಿಲಿಯನ್ ಜನರು ಅನಿವಾರ್ಯವಾಗಿ ಕಲುಷಿತ ಮೂಲಗಳಿಂದ ನೀರನ್ನು ಕುಡಿಯುತ್ತಿದ್ದು, ಅವರೆಲ್ಲರೂ ನೀರಿನ ಸಂಬಂಧವಿರುವ ಖಾಯಿಲೆಗಳನ್ನು ಹೊಂದುವ ಅತಿ ಹೆಚ್ಚು ಅಪಾಯದಲ್ಲಿದ್ದಾರೆ.

ನಮ್ಮ ದೇಶದಲ್ಲಿ 90ರ ದಶಕದಲ್ಲಿ, ಒರಿಸ್ಸಾದ ರಿಪೋರ್ಟ್ ಒಂದರ ಆಧಾರದ ಮೇಲೆ ನಾನೊಂದು ತೀರ್ಪನ್ನು ಕೊಟ್ಟಿದ್ದೆ. ಅಲ್ಲಿಯ ಜನರು ಕುಡಿಯುತ್ತಿದ್ದ ನೀರು ಸ್ನಾನಕ್ಕೂ ಯೋಗ್ಯವಿರಲಿಲ್ಲ, ಅದರಿಂದ ಚರ್ಮ ರೋಗಗಳು ಬರುತ್ತಿದ್ದವು.

ಹಳೆಯದನ್ನ ಕೆದಕುವುದರಲ್ಲಿ ಅರ್ಥವಿಲ್ಲ. ಸಮಯ ಮೀರುವುದರೊಳಗಾಗಿ ಸದ್ಗುರು ಅವರು ಪ್ರಾರಂಭಿಸಿದ ”ನದಿಗಳನ್ನು ರಕ್ಷಿಸಿ” (Rally for Rivers) ಆಂದೋಲನವು ಅವರ ಬುದ್ಧಿವಂತಿಕೆಯ ಫಲ ಎಂದೇ ಹೇಳಬಹುದು.

ಇದನ್ನೂ ಓದಿ: ನಾಳೆಯ ಒಳಿತಿಗಾಗಿ ನ್ಯೂಸ್​​-18 ಜಲ ಸಂರಕ್ಷಣೆ ಅಭಿಯಾನ

ನೀರನ್ನು ಉಳಿಸಿಕೊಳ್ಳುವ ಮತ್ತು ಸಂರಕ್ಷಿಸುವ ಕಡೆ ಮುಂದುವರಿಯದಿದ್ದಲ್ಲಿ ನಾವು ಖಂಡಿತ ಅನಾಹುತದ ಕಡೆಗೆ ಹೊರಟಿದ್ದೇವೆ. ಈ ಭಯಂಕರ ಸವಾಲನ್ನು ಎದುರಿಸಲು ಇಡೀ ಸಮಾಜವೇ ನಿಲ್ಲಬೇಕಿದೆ. ಇಂತಹ ಚಳುವಳಿಯಲ್ಲಿ ಒಂದು ಸಮಾಜವೇ ಹೇಗೆ ತೊಡಗಿಕೊಳ್ಳಬಹುದು ಅನ್ನುವುದಕ್ಕೆ "ಕಾವೇರಿ ಕೂಗು", ಒಂದು ಶ್ರೇಷ್ಠ ಉದಾಹರಣೆ. ಏಕೆಂದರೆ ಇರುವ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದಕ್ಕಿಂತ, ಆರ್ಥಿಕವಾಗಿಯೂ ಮತ್ತು ಪರಿಸರದ ದೃಷ್ಟಿಯಿಂದ ಲಾಭದಾಯಕವಾಗಿಯೂ ನದಿ ಮತ್ತು ನದಿ ಮೂಲಗಳ ಸುತ್ತ ಹೇಗೆ ಬದುಕಬಹುದು ಎಂದು ಅದು ತೋರಿಸುತ್ತದೆ. ಕೊನೆಗೂ, ಭೂಮಿಯಲ್ಲಿನ ನೀರನ್ನು ಹೆಚ್ಚಿಸಬೇಕೆಂದರೆ ಮರಗಳನ್ನು ನೆಡುವುದು ಪ್ರಮುಖ ವಿಧಾನಗಳಲ್ಲೊಂದು ಎನ್ನುವ ಜಾಗತಿಕ ಓಮ್ಮತ ಮೂಡಿದೆ.

ಕಳೆದ ಕೆಲವು ವರ್ಷಗಳಿಂದ ಜಾಗತಿಕ ತಾಪಮಾನ ಏರುತ್ತಿರುವುದರ ಬಗ್ಗೆ ಬಹಳ ಕೇಳುತ್ತಿದ್ದೇವೆ. ಅದೇಕೆ? ಏಕೆಂದರೆ ಹಸಿರು ಹೊದಿಕೆಯು ನಮ್ಮನ್ನು ದಂಗು ಬಡಿಸುವಷ್ಟು ವೇಗದಲ್ಲಿ ಕ್ಷೀಣಿಸುತ್ತಿದೆ. ಇಥಿಯೋಪಿಯ ಅತ್ಯಂತ ಹೆಚ್ಚಿನ ಹಸಿರು ಹೊದಿಕೆ ಹೊಂದಿತ್ತು, ಆದರೆ ಈಗ ಅಲ್ಲಿ ಮರುಭೂಮಿಯ ವಿಸ್ತಾರಗಳಿವೆ. ಏಕೆ? ಏಕೆಂದರೆ ಎಲ್ಲಾ ಮರದ ತೊಲೆಗಳನ್ನ ಕಡಿದು ರಫ್ತು ಮಾಡಿದ್ದಾರೆ. ಬೇರೆಲ್ಲೋ ನಡೆಯುತ್ತಿದ್ದ ನಿರ್ಮಾಣ ಕಾರ್ಯಕ್ಕೆ ಒದಗಿಸಲು, ದಿನಕ್ಕೆ 300 ಹಡಗುಗಳು ಟಿಂಬರ್ ಹೊತ್ತು ಅದರ ಗಡಿಯಿಂದ ಹೊರಡಿತ್ತಿದ್ದವು ಎಂದು ಅನುಮಾನಿಸಲಾಗಿದೆ. ಇದರಿಂದ ದೇಶಕ್ಕೆ ಒಳ್ಳೆಯ ಆದಾಯ ಬರುತ್ತಿದ್ದರೂ, ದೊಡ್ಡ ಮಟ್ಟದಲ್ಲಿ ಅದು ಮರುಭೂಮಿಯಾಗುತ್ತಿತ್ತು. ಆದ್ದರರಿಂದ ’ಪರಿಸರ ಸಂರಕ್ಷಣೆ’ ಮತ್ತು ’ಸುಸ್ಥಿರ ಅಭಿವೃದ್ಧಿ’ಯಂತಹ ಪದಗಳು ಶಬ್ದಕೋಶದೊಳಗಿಂದ ನಮ್ಮ ನಿತ್ಯ ಜೀವನದಲ್ಲಿ ಬರಬೇಕು.ಉದ್ಯಮಗಳನ್ನು ಕೊನೆಗೊಳಿಸಲು ನಮಗೆ ಸಾಧ್ಯವಿಲ್ಲ. ಸಹಜವಾಗಿಯೇ ರಾಷ್ಟ್ರಗಳು ತಮಗೆ ಯಾವುದು ಆರ್ಥಿಕವಾಗಿ ಲಾಭದಾಯಕವೋ ಅದನ್ನು ರಫ್ತು ಮಾಡುತ್ತವೆ. ಆದರೆ, ಸುಸ್ಥಿರ ಅಭಿವೃದ್ಧಿ ಇಲ್ಲಿ ಮುಖ್ಯ ಪದವಾಗುತ್ತದೆ. ಅದಕ್ಕೆ ನನಗೆ `ರ‍್ಯಾಲಿ ಫಾರ್ ರಿವರ್ಸ್’ ಮತ್ತು ’ಕಾವೇರಿ ಕೂಗು’ ಚಳುವಳಿಗಳ ಬಗ್ಗೆ ಸಂತೋಷವಾಗುತ್ತದೆ. ಏಕೆಂದರೆ ಅವು ಆರ್ಥಿಕತೆ ಮತ್ತು ಪರಿಸರವನ್ನು ಪರಸ್ಪರ ಪೂರಕವಾಗಿ ವೃದ್ಧಿಸುತ್ತವೆ. ಅದು ಹಾಗೆಯೇ ಇರಬೇಕು.

ಪರಿಸರ ಸಂರಕ್ಷಣೆಯಲ್ಲಿ ನ್ಯಾಯಾಂಗದ ಪಾತ್ರ:

ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ನ್ಯಾಯಾಂಗವು ಬಹಳ ಸಕ್ರಿಯ ಪಾತ್ರ ವಹಿಸಿದೆ. 90ರ ದಶಕದ ಗೋದಾವರ್ಮನ್ ಕೇಸ್ (ಸುಪ್ರೀಂ ಕೋರ್ಟ್ ನಲ್ಲಿ ಆಲಿಸಲಾದ ಮೊದಲ ಪರಸರ ಸಂಬಂಧಿ ಕೇಸ್) ನಿಂದ ಹಿಡಿದು ಪರಿಸರ ಸಂರಕ್ಷಣೆಗೆಂದೇ ಇಂದು ಸ್ಥಾಪಿಸಲಾಗಿರುವ ನ್ಯಾಷನಲ್ ಗ್ರೀನ್ ಟ್ರೈಬುನಲ್ ವರೆಗೆ, ನಮ್ಮ ಪರಿಸರಕ್ಕೆ ಸರಿಯಾದುದನ್ನೇ ಮಾಡಲು ನಮ್ಮ ನ್ಯಾಯಾಂಗವು ಬಹಳ ಸಕ್ರಿಯವಾಗಿ ಭಾಗವಹಿಸುತ್ತಿದೆ.

ಇದೆಲ್ಲವೂ ಆರಂಭವಾಗಿದ್ದು ನಮ್ಮ ದೇಶದುದ್ದಕ್ಕೂ ಮಿತಿಮೀರಿದ ಅರಣ್ಯನಾಶದಿಂದ. ಪರಿಸರದ ವಿಷಯಗಳಿಗೋಸ್ಕರ ಮತ್ತು ನೈಸರ್ಗಿಕ ಸಂಪನ್ಮೂಲಗಳ ದೊಡ್ಡ ಮಟ್ಟದ ನಾಶದ ಹತೋಟಿಗಾಗಿ ಸುಪ್ರೀಂ ಕೋರ್ಟು ಮೇಲ್ವಿಚಾರಣಾ ಪಾತ್ರ ನಿರ್ವಹಿಸಲು ನಿರ್ಧರಿಸಿತಲ್ಲದೆ, ಸೆಂಟ್ರಲಿ ಎಂಪವರ್ಡ್ ಕಮಿಟಿ (CEC) ರಚಿಸಿತು. ಮೂಲ ವಿಷಯವೆಂದರೆ ಅರಣ್ಯದಲ್ಲಿ ಅರಣ್ಯಕ್ಕೆ ಸಂಬಂಧವಿರದ ಚಟುವಟಿಕೆಗಳು ನಡೆಯಕೂಡದು. ಉದಾಹರಣೆಗೆ ಗಣಿಗಾರಿಕೆ. ಗಣಿಗಾರಿಕೆ ಅರಣ್ಯಸಂಬಂಧಿ ವಿಷಯವಲ್ಲ. ಆದರೆ, ಗಣಿಗಳೆಲ್ಲವೂ ಅರಣ್ಯದಲ್ಲೇ ಇವೆ. ಸುಪ್ರೀಂ ಕೋರ್ಟ್ ಹೇಳುವುದೇನೆಂದರೆ ಅರಣ್ಯಕ್ಕೆ ಸಂಬಂಧವಿರದ ಚಟುವಟಿಕೆಗಳನ್ನು ಅರಣ್ಯ ಭೂಮಿಯಲ್ಲಿ ಮಾಡುವುದಾದರೆ ಅದಕ್ಕೆ ನೀವು ಹಣ ಕೊಟ್ಟು, ಪರವಾನಗಿ ಪಡೆಯಬೇಕು ಎಂದು.

ಅದಕ್ಕೆ ಪರಿಸರ ಹಾಗು ಅರಣ್ಯದ ಅನುಮತಿಯನ್ನೂ ಪಡೆಯಬೇಕು. ಇದರ ನಿಯಂತ್ರಣಕ್ಕೆಂದೇ ಬಹಳ ಕ್ಲಿಷ್ಟಕರವಾದ ಕ್ರಮಗಳಿದ್ದು ಅದರ ಉಲ್ಲಂಘನೆಯ ದಂಡನೆಯ ಮೊತ್ತ ಕೋಟಿಗಟ್ಟಲೆ ಇದೆ. ಆದರೆ ಜನರ ಮನಸ್ಥಿತಿಯು ಬದಲಾಗದ ಹೊರತು, ಎಷ್ಟೇ ಕಾನೂನು ಮಾಡಿದರೂ ಸಂಪೂರ್ಣ ಪರಿವರ್ತನೆ ತರಲು ಸಾಧ್ಯವಿಲ್ಲ. ಕರ್ನಾಟಕದ ಕುದುರೆಮುಖ ಗಣಿಗಾರಿಕೆಯ ಪ್ರಕರಣವು ನಾಗರಿಕರ ಕ್ರಿಯಾಶೀಲತೆಯಿಂದ ನಿಂತಿತು. ಆ ಸುಪ್ರೀಂ ಕೋರ್ಟ್ ತೀರ್ಪಿನ ಬರಹಗಾರನಾಗಿ ನಾನು ಇಷ್ಟನ್ನು ನಿಶ್ಚಿತವಾಗಿ ಹೇಳಬಲ್ಲೆ: ಪ್ರತಿಬದ್ಧವಾದ ನಾಗರಿಕರ ಸಣ್ಣ ಗುಂಪೊಂದು ಸರ್ಕಾರದ ಒಡೆತನದ ರಫ್ತು ಮಾಡುವ ಕಾರ್ಯಕಾರಿಯನ್ನು; ಪಶ್ಚಿಮ ಘಟ್ಟಗಳ ವೈವಿಧ್ಯಮಯ ಜೀವರಾಶಿಯನ್ನು ನಾಶ ಮಾಡುವುದರಿಂದ ತಪ್ಪಿಸಿ ಮುಚ್ಚಿಸಿತು.

2000ದ ನಂತರ ಪರಿಸರದ ವಿಷಯದಲ್ಲಿ ಸಾರ್ವಜನಿಕರ ಹಾಗೂ ನ್ಯಾಯಾಂಗದ ನಿರ್ವಹಣೆ ಅಗಾಧವಾಗಿ ಹೆಚ್ಚಿದೆ. ಪರಿಸರದ ವಿಷಯಗಳನ್ನು ನೋಡಿಕೊಳ್ಳಲು 2010ರಲ್ಲಿ ನ್ಯಾಷನಲ್ ಗ್ರೀನ್ ಟ್ರೈಬುನಲ್ ಅನ್ನು ಸ್ಥಾಪಿಸಲಾಯಿತು. ಇತ್ತೀಚಿಗೆ, ನದಿ ಸಂಬಂಧಿಸಿದ ತಕರಾರುಗಳನ್ನ ರಿವರ್ ಟ್ರೈಬುನಲ್ ನೋಡಿಕೊಳ್ಳುವುದು ಎಂದು ಸರ್ಕಾರ ಹೇಳಿದೆ. ಮತ್ತು ಆ ಪ್ರಕ್ರಿಯೆಯನ್ನು ನಿರ್ದಿಷ್ಟ ಕಾಲಾವಧಿಯೊಳಗೆ ಪೂರ್ತಿಗೊಳಿಸಲು ಅದಕ್ಕೆ ಆದೇಶವಿದೆ. ಇದಕ್ಕೆ ಮುಂಚೆ ಇಂತಹ ಪ್ರತಿ ತಕರಾರಿಗೂ ಒಂದೇ ಟ್ರೈಬುನಲ್ ಇದ್ದು, ಬಹಳ ದೀರ್ಘ ಸಮಯ ಬೇಕಾಗುತ್ತಿತ್ತು. ಉದಾಹರಣೆಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನದಿ ನೀರಿನ ತಕರಾರು ನಿರಂತರವಾಗಿ ಇನ್ನೂ ನಡೆಯುತ್ತಿದೆ. ಹಾಗೆಯೇ ಒರಿಸ್ಸಾ-ಆಂಧ್ರಪ್ರದೇಶ, ಒರಿಸ್ಸಾ-ಛತ್ತೀಸ್ ಗಢ ಸೇರಿದಂತೆ ತಕರಾರುಗಳು ಇನ್ನೂ ಹಲವಾರಿವೆ.

ಅದೇನಿದ್ದರೂ, ನಾವೆಲ್ಲರೂ ಮುಖ್ಯ ವಿಷಯವನ್ನು ಮರೆಯುತ್ತಿದ್ದೇವೆ ಎಂದು ನನಗನಿಸುತ್ತದೆ. 2005-06 ರಲ್ಲಿ ಕರ್ನಾಟಕ-ತಮಿಳುನಾಡು ತಕರಾರಿನಲ್ಲಿ ತಮಾಷೆಗಾಗಿ ಹೇಳಿದ್ದು ನನಗೆ ನೆನಪಿದೆ: "ವರುಣದೇವನನ್ನು ಪ್ರಾರ್ಥಿಸಿ, ಏಕೆಂದರೆ ಮಳೆದೇವರ ಆಶೀರ್ವಾದವಿಲ್ಲದೆ, ಎಂತಹ ವಾದ ಮಂಡಿಸಿದರೂ ನಿಮಗೆ ನೀರು ಪಡೆಯಲು ಸಹಾಯ ಮಾಡುವುದಿಲ್ಲ; ಏಕೆಂದರೆ ಸುಪ್ರೀಂ ಕೋರ್ಟಿಗೆ ನೀರು ಉತ್ಪಾದಿಸಲು ಸಾಧ್ಯವಿಲ್ಲ".

(ಲೇಖಕರು ಅರಿಜಿತ್​ ಪಸಾಯತ್​, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾಗಿದ್ದು, ಅಭಿಪ್ರಾಯ ವೈಯಕ್ತಿಕವಾಗಿದೆ)

First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ