ಜೈಪುರ (ಜುಲೈ 24); ರಾಜಸ್ಥಾನ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದೇವೆ. ಹೀಗಾಗಿ ಶೀಘ್ರದಲ್ಲೇ ವಿಧಾನಸಭಾ ಅಧಿವೇಶನವನ್ನು ಕೆಯಲಾಗುವುದು. ಅಲ್ಲದೆ, ನಮಗೆ ಪೂರ್ಣ ಬಹುಮತವಿದ್ದು, ಈ ಅಧಿವೇಶನದಲ್ಲಿ ಸರ್ಕಾರವು ತನ್ನ ಬಹುಮತ ಸಾಬೀತುಪಡಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಒಳಗಿನ ಬಿಕ್ಕಟ್ಟು ಕಳೆದ ಮೂರು ವಾರಗಳಿಂದ ಬೀದಿಗೆ ಬಿದ್ದಿದೆ. ಬಿಜೆಪಿ ಜೊತೆ ಸೇರಿ ಸರ್ಕಾರ ಬೀಳಿಸಲು ಸಂಚು ನಡೆಸಿದ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಡಿಸಿಎಂ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಕೆಳಗಿಳಿಸಲಾಗಿತ್ತು.
ಅಲ್ಲದೆ, ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೆಲ ದಿನಗಳ ಹಿಂದೆ ಲೀಕ್ ಆಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಈ ಇಬ್ಬರೂ ಶಾಸಕರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿತ್ತು.
ಈ ಬೆಳವಣಿಗೆಯ ನಂತರ ಪೈಲಟ್ ಬಣದ 18ಕ್ಕೂ ಹೆಚ್ಚು ಶಾಸಕರು ನಾಪತ್ತೆಯಾಗಿದ್ದಾರೆ. ಹೀಗಾಗಿ ಅಶೋಕ್ ಗೆಹ್ಲೋಟ್ ವಿಶ್ವಾಸಮತ ಯಾಚನೆಯಲ್ಲಿ ಸೋಲನುಭವಿಸಲಿದ್ದಾರೆ ಎಂದೇ ಹೇಳಲಾಗಿತ್ತು.
ಈ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿರುವ ಸಿಎಂ ಅಶೋಕ್ ಗೆಹ್ಲೋಟ್, “ಸಚಿನ್ ಪೈಲಟ್ ಬೆಂಬಲಿತ ಶಾಸಕರು ಇಲ್ಲದ ಹೊರತಾಗಿಯೂ ವಿಶ್ವಾಸಮತ ಯಾಚನೆಗೆ ನಮಗೆ ಅಗತ್ಯವಾದ ಸಂಖ್ಯಾಬಲ ಇದೆ. ಹೀಗಾಗಿ ಸೂಕ್ತ ಸಮಯದಲ್ಲಿ ಅಧಿವೇಶನ ಕರೆಯುತ್ತೇವೆ. ಅಧಿವೇಶನ ಕರೆದಾಗ ಭಿನ್ನಮತೀಯ ಶಾಸಕರೂ ಸಹ ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.
ರಾಜಸ್ಥಾನ್ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಾಸ್ರಾ ಸಹ ಮಾತನಾಡಿ, “ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯಾಬಲವನ್ನು ಹೊಂದಿದೆ. ಹೀಗಾಗಿ ಬಹುಮತ ಸಾಬೀತುಪಡಿಸುವುದು ಶೇ.100 ರಷ್ಟು ಖಚಿತ” ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ