ಕರುಣಾನಿಧಿಗೆ ಕಾಡುತ್ತಿತ್ತು ಅತೀವ ಅಭದ್ರತೆ: ಡಾ. ಸುಬ್ರಮಣಿಯನ್ ಸ್ವಾಮಿ


Updated:August 7, 2018, 9:29 PM IST
ಕರುಣಾನಿಧಿಗೆ ಕಾಡುತ್ತಿತ್ತು ಅತೀವ ಅಭದ್ರತೆ: ಡಾ. ಸುಬ್ರಮಣಿಯನ್ ಸ್ವಾಮಿ
ಕರುಣಾನಿಧಿ ಅವರ ಭಾವಚಿತ್ರ

Updated: August 7, 2018, 9:29 PM IST
- ಡಿ.ಪಿ. ಸತೀಶ್, ನ್ಯೂಸ್18

ಬೆಂಗಳೂರು: ಕರುಣಾನಿಧಿ ಅವರ ದ್ರಾವಿಡ ಹೋರಾಟ ಹಾಗೂ ಬ್ರಾಹ್ಮಣ-ವಿರೋಧಿ ಹೋರಾಟದ ಹಾದಿಯಲ್ಲಿ ಹೆಚ್ಚಾಗಿ ಕಾಡಿದ್ದು ಬಿಜೆಪಿ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ಅವರೇ ಇರಬೇಕು. ಕರುಣಾನಿಧಿ ಮತ್ತು ಸುಬ್ರಮಣಿಯನ್ ಸ್ವಾಮಿ ಇಬ್ಬರಲ್ಲೂ 1991ರವರೆಗೂ ಉತ್ತಮ ಸಂಬಂಧವೇ ಇತ್ತು. ಕರುಣಾನಿಧಿ ಬಗ್ಗೆ ಬಹಳ ಆತ್ಮವಿಶ್ವಾಸದಿಂದ ಮಾತನಾಡುವ ಕೆಲವೇ ಮಂದಿಗಳಲ್ಲಿ ಸ್ವಾಮಿ ಕೂಡ ಒಬ್ಬರು. ನ್ಯೂಸ್18 ವಾಹಿನಿ ಜೊತೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ತಮ್ಮ ತಾತ್ವಿಕ ವಿರೋಧಿ ಕರುಣಾನಿಧಿ ಬಗ್ಗೆ ಒಂದಷ್ಟು ವಿಚಾರಗಳು ಹಾಗೂ ಅಭಿಪ್ರಾಯಗಳನ್ನ ಹಂಚಿಕೊಂಡಿದ್ಧಾರೆ. ಒಂದೆಡೆ, ಕರುಣಾನಿಧಿ ಅವರನ್ನು ಅಪೂರ್ವ ಸಂಘಟಕ ಎಂದು ಹೊಗಳುವ ಸ್ವಾಮಿ, ಇನ್ನೊಂದೆಡೆ ಅವರನ್ನು ಅಪ್ರಾಮಾಣಿಕ ಎಂದು ಟೀಕಿಸುತ್ತಾರೆ.

“ಕರುಣಾನಿಧಿ ಒಬ್ಬ ಒಳ್ಳೆಯ ಸಂಘಟಕ ಎಂಬುದು ಹೌದು. ಜೊತೆ ಒಳ್ಳೆಯ ವಾಗ್ಮಿ ಕೂಡ. ಅವರ ತಮಿಳು ಉಚ್ಛಾರ ಅದ್ಭುತ. ಇಷ್ಟೆಲ್ಲಾ ಉತ್ತಮ ಗುಣವಿದ್ದರೂ ಅವರಲ್ಲಿ ಕಿಂಚಿತ್ತೂ ಪ್ರಾಮಾಣಿಕತೆ, ನೈತಿಕತೆ ಇರಲಿಲ್ಲ. ಅವರಲ್ಲಿ ಅಭದ್ರತೆ ಅತೀವವಾಗಿ ಕಾಡುತ್ತಿತ್ತು” ಎಂದು ಮಾಜಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟರು.

ಸ್ವಾಮಿ ಹೇಳಿಕೊಂಡ ಪ್ರಕಾರ ಅವರು ಮತ್ತು ಕರುಣಾನಿಧಿ ಮೊದಲು ಭೇಟಿಯಾಗಿದ್ದು 1974ರಲ್ಲಿ, ಅಂದರೆ ಇಂದಿರಾ ಗಾಂಧಿ ತುರ್ತುಸ್ಥಿತಿ ಹೇರುವ ಒಂದು ವರ್ಷ ಮುನ್ನ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ ಡಾ. ಸ್ವಾಮಿ ಆ ಸಂದರ್ಭದಲ್ಲಿ ವಿಭಿನ್ನ ಆರ್ಥಿಕ ಚಿಂತನೆ ಮತ್ತು ವಿಚಾರಧಾರೆಗಳಿಗೆ ಖ್ಯಾತರಾಗಿದ್ದರು. ಸಂಸತ್ತಿನಲ್ಲಿ ಅವರ ವಾಗ್ಝರಿ ಅಮೋಘವಾಗಿರುತ್ತಿತ್ತು. ಬಿಜೆಪಿಯ ಪೂರ್ವಾಶ್ರಮದ ಪಕ್ಷವಾದ ಜನಸಂಘದ ಸಂಸದರಾಗಿದ್ದ ಸುಬ್ರಮಣಿಯನ್ ಸ್ವಾಮಿ ಬಗ್ಗೆ ಕರುಣಾನಿಧಿ ಅವರಿಗೆ ಒಂದು ರೀತಿಯ ಕುತೂಹಲ ಮನೆ ಮಾಡಿತ್ತು. ಅದುವೇ ಅವರನ್ನು ಭೇಟಿಯಾಗಲು ಕಾರಣವಾಯಿತು.

“ಆಗ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಆರೆಸ್ಸೆಸ್​ನವರು ಆ ದಿನಗಳಲ್ಲಿ ‘ಮದರ್ ಲ್ಯಾಂಡ್’ ಎಂಬ ಪತ್ರಿಕೆ ಪ್ರಕಟಿಸುತ್ತಿದ್ದರು. ಈ ಪತ್ರಿಕೆಗೆ ಜಾಹೀರಾತು ಕೊಡಲು ಸಾಧ್ಯವೇ ಎಂದು ಕರುಣಾನಿಧಿ ಅವರಲ್ಲಿ ಕೇಳಿದೆ. ಅವರಿಗೆ ಶಾಕ್ ಆಯಿತು. ಆರ್ಯರ ಒಂದು ಪಕ್ಷದ ವ್ಯಕ್ತಿ ದ್ರಾವಿಡನ್ ಪಕ್ಷದ ಮುಖ್ಯಮಂತ್ರಿ ಬಳಿಯೇ ಜಾಹೀರಾತು ಕೇಳುತ್ತಿದ್ದಾನಲ್ಲ…! ಆದರೂ ಕರುಣಾನಿಧಿ ನನ್ನ ಮಾತನ್ನ ತಳ್ಳಿಹಾಕಲಿಲ್ಲ. ‘ಮದರ್ ಲ್ಯಾಂಡ್’ ಪತ್ರಿಕೆಗೆ ಸರಕಾರೀ ಜಾಹೀರಾತುಗಳನ್ನ ನೀಡುವ ಮನಸು ಮಾಡಿದರು,” ಎಂದು 1974ರ ಆ ಭೇಟಿಯನ್ನು ಸ್ವಾಮಿ ಮೆಲುಕು ಹಾಕಿದರು.

ಅದಾಗಿ ಒಂದು ವರ್ಷದಲ್ಲಿ ತುರ್ತುಪರಿಸ್ಥಿತಿ ಜಾರಿ ಆಯಿತು. ಪ್ರಧಾನಿ ಇಂದಿರಾ ಗಾಂಧಿ ತನ್ನ ಸರಕಾರವನ್ನೂ ಕಿತ್ತೊಗೆಯುವ ಭಯ ಕರುಣಾನಿಧಿ ಅವರಲ್ಲಿತ್ತು. ಆದರೂ ಕೂಡ ಅವರು ತುರ್ತುಪರಿಸ್ಥಿತಿ ವಿರುದ್ಧ ಹೋರಾಡುವ ಜನರನ್ನ ಬಂಧಿಸುವ ಕೆಲಸ ಮಾಡಲಿಲ್ಲ. ಅಂದುಕೊಂಡಂತೆ, ಇದೇ ಕಾರಣಕ್ಕೆ ಕರುಣಾನಿಧಿ ಸರಕಾರವನ್ನ ಇಂದಿರಾ ಗಾಂಧಿ ವಜಾಗೊಳಿಸಿದರೆಂದು ಸ್ವಾಮಿ ಹೇಳುತ್ತಾರೆ.

“ತುರ್ತು ಪರಿಸ್ಥಿತಿ ಆದ ನಂತರ ನಾನು ಅವರನ್ನು ಮತ್ತೊಮ್ಮೆ ಭೇಟಿಯಾದೆ. ಆಗ ನಾನು ತುರ್ತುಸ್ಥಿತಿ ವಿರುದ್ಧ ಹೋರಾಡಿ ಹೀರೋ ಆಗಿದ್ದೆ. ನನ್ನ ಬಗ್ಗೆ ಕರುಣಾನಿಧಿಗೆ ಮೆಚ್ಚುಗೆ ಇತ್ತು. 1977ರ ಲೋಕಸಭಾ ಚುನಾವಣೆಯಲ್ಲಿ ಮದ್ರಾಸ್ ದಕ್ಷಿಣ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸುವ ಇಂಗಿತ ಅವರಲ್ಲಿತ್ತು. ನನಗೂ ಇದು ಒಪ್ಪಿಗೆ ಎನಿಸಿತು. ಆದರೆ, ನನ್ನ ಫ್ಯಾಮಿಲಿ ಪ್ರೆಂಡ್ ಆದ ಶಾಸ್ತ್ರೀಯ ಸಂಗಿತದ ದಿಗ್ಗಜೆ ಎಂ.ಎಸ್. ಸುಬ್ಬುಲಕ್ಷ್ಮೀ ಅವರು ಆ ಕ್ಷೇತ್ರದಿಂದ ರಾಜಮೋಹನ್ ಗಾಂಧಿ ಸ್ಪರ್ಧಿಸಬೇಕೆಂದು ಬಯಸಿದರು. ಆ ಕ್ಷೇತ್ರದಲ್ಲಿ ನಿಲ್ಲದಂತೆ ನನಗೆ ಮನವಿ ಮಾಡಿದರು. ಮೊರಾರ್ಜಿ ದೇಸಾಯಿ ಅವರು ಬಾಂಬೆಯಲ್ಲಿ ನಾನು ಸ್ಪರ್ಧಿಸಬೇಕೆಂದು ಅಪೇಕ್ಷಿಸಿದ್ದರು. ಮೊರಾರ್ಜಿ ಮಾತಿಗೆ ಒಪ್ಪಿ ನಾನು ಬಾಂಬೆಗೆ ಹೋದೆ. ಇದು ಕರುಣಾನಿಧಿಗೆ ಗೊತ್ತಾಗಿ ಕೋಪಗೊಂಡರು. ರಾಜಮೋಹನ್ ಗಾಂಧಿ  ಅವರಿಗೆ ಟಿಕೆಟ್ ಕೊಡುವುದಿಲ್ಲವೆಂದು ನನಗೆ ಹೇಳಿದರು. ಅವರನ್ನು ಕಂಡರೆ ಅದೇಕೋ ಅವರಿಗೆ ಇಷ್ಟವಿರಲಿಲ್ಲವೆನಿಸುತ್ತದೆ. ಕೊನೆಗೆ ಕರುಣಾನಿಧಿ ಅವರ ಸಂಬಂಧಿಕ ಮುರಸೋಳಿ ಮಾರನ್ ಅವರು ಮದ್ರಾಸ್ ಸೌತ್ ಕ್ಷೇತ್ರದಿಂದ ಡಿಎಂಕೆ ಪಕ್ಷದ ಪರವಾಗಿ ಕಣಕ್ಕಿಳಿದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್​ನ ಆರ್. ವೆಂಕಟರಾಮನ್ ಎದುರು ಮಾರನ್ ಸೋಲಪ್ಪಿದರು. ಆರ್. ವೆಂಕಟರಾಮನ್ ಅವರು ಮುಂದೆ ಭಾರತದ ರಾಷ್ಟ್ರಪತಿಗಳಾಗುತ್ತಾರೆ. ನಾನೇನಾದರೂ ಆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ ವೆಂಕಟರಾಮನ್ ಅವರನ್ನ ಸೋಲಿಸಿರುತ್ತಿದ್ದೆ. ಬಾಂಬೆಯಲ್ಲಿ ಸ್ಪರ್ಧಿಸಿ ನಾನು ಗೆದ್ದಿದ್ದೆ,” ಎಂದು ಸುಬ್ರಮಣಿಯನ್ ಸ್ವಾಮಿ ವಿವರಿಸಿದರು.
Loading...

ಬ್ರಾಹ್ಮಣ್ಯದ ಕಟುವಿರೋಧಿಯಾಗಿದ್ದ ಕರುಣಾನಿಧಿ ಅವರಿಗೆ ಸುಬ್ರಮಣಿಯನ್ ಸ್ವಾಮಿ ಜೊತೆ ಇಷ್ಟೊಳ್ಳೆ ಸಂಬಂಧ ಇತ್ತಾ ಎಂಬುದು ಅಚ್ಚರಿ ಮೂಡಿಸುತ್ತದೆ. ಇವರಿಬ್ಬರ ನಡುವಿನ ಉತ್ತಮ ಬಾಂಧವ್ಯಕ್ಕೆ ಕಲ್ಲು ಬಿದ್ದದ್ದು ಎಲ್​ಟಿಟಿಇ ಮತ್ತು ಜಯಲಲಿತಾ ವಿಚಾರಗಳಿಂದಲಂತೆ.

“ಎಂಬತ್ತರ ದಶಕದಲ್ಲಿ ಶ್ರೀಲಂಕಾದಲ್ಲಿ ತಮಿಳು ವಿಚಾರವೇ ಪ್ರಮುಖವಾಗಿ ಸುಡುತ್ತಿತ್ತು. ಆಗ ಕರುಣಾನಿಧಿ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಇಂದಿರಾ ಗಾಂಧಿಯಿಂದ ತರಬೇತು ಪಡೆದ ತಮಿಳ್ ಈಳಂ ಮುಕ್ತಿ ಸಂಘಟನೆ(ಟಿಇಎಲ್​ಒ)ಯ ನಾಯಕ ಸಬರತ್ನಮ್ ಕೂಡ ಈ ಸಮಿತಿಯ ಸದಸ್ಯರೊಲ್ಲೊಬ್ಬರಾಗಿದ್ದರು. ನಾನು ಹಾಗೂ ದ್ರಾವಿಡ ಕಳಗಂ ಪಕ್ಷದ ವೀರಮಣಿ ಮತ್ತು ಅನ್ಬಳಗನ್ ಅವರೂ ಈ ಸಮಿತಿಯಲ್ಲಿದ್ದೆವು. ಸಮಿತಿಯಲ್ಲಿ ಒಬ್ಬ ಬ್ರಾಹ್ಮಣ ವ್ಯಕ್ತಿಯು ತಮಿಳು ವಿಚಾರದ ಬಗ್ಗೆ ಚರ್ಚೆ ನಡೆಸುವುದು ಆ ಸಂದರ್ಭದಲ್ಲಿ ವಿಚಿತ್ರದಂತೆ ಭಾಸವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇದೇ ಸಬರತ್ನಮ್ ಅವರನ್ನು ಎಲ್​ಟಿಟಿಇ ಹತ್ಯೆಗೈಯ್ಯುತ್ತದೆ. ಕರುಣಾನಿಧಿ ಅವರು ಎಲ್​ಟಿಟಿಇಗೆ ಬೆಂಬಲ ನೀಡುತ್ತಿರುವುದು ನನ್ನ ಅರಿವಿಗೆ ಬಂತು. ವಿ. ಪ್ರಭಾಕರನ್ ಮತ್ತಾತನ ಎಲ್​ಟಿಟಿಇ ಸಂಘಟನೆಯ ಪ್ರಬಲ ವಿರೋಧಿ ನಾನಾಗಿದ್ದೆ. ಹೀಗಾಗಿ, ನಾನು ಆ ಸಮಿತಿಯಿಂದ ಹೊರಬಂದುಬಿಟ್ಟೆ. ಅದಾದ ನಂತರ ನನ್ನ ಮತ್ತು ಕರುಣಾನಿಧಿ ಭೇಟಿ ಅಪರೂಪವಾಯಿತು,” ಎಂದು ಸ್ವಾಮಿ ತಿಳಿಸಿದರು.

“1990ರಲ್ಲಿ ಚಂದ್ರಶೇಖರ್ ಸರಕಾರ ರಚನೆಯಾದಾಗ ನಾನು ಕಾನೂನು ಮತ್ತು ವಾಣಿಜ್ಯದಂತಹ ಪ್ರಮುಖ ಖಾತೆಗಳನ್ನ ಹೊಂದಿದ ಪ್ರಭಾವಿ ಸಚಿವನಾದೆ. ಎಲ್​ಟಿಟಿಇಗೆ ನಿಕಟ ಬೆಂಬಲ ನೀಡುತ್ತಿರುವ ಕಾರಣಕ್ಕೆ ಕರುಣಾನಿಧಿ ನೇತೃತ್ವದ ಡಿಎಂಕೆ ಸರಕಾರವನ್ನ ವಜಾಗೊಳಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಇದೇ ಕಾರಣವಾಗಿ ತಮಿಳುನಾಡಿನಲ್ಲಿ ಎಲ್ಲಿಯೂ ಗಲಭೆಯಾಗದಂತೆ ಪರಿಸ್ಥಿತಿ ನಿಭಾಯಿಸಿದೆ. ಇದರಿಂದ ಕರುಣಾನಿಧಿ ಕುದಿದುಹೋದರು. ಆ ಬಳಿಕ ನಮ್ಮಿಬ್ಬರ ಭೇಟಿ ಮತ್ತಷ್ಟು ಅಪರೂಪವಾಯಿತು”ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಡಾ. ಸ್ವಾಮಿ ತಿಳಿಸಿದರು.

“1991-96ರವರೆಗಿನ ಜಯಲಲಿತಾ ಅವರ ಭ್ರಷ್ಟ ಆಡಳಿತದ ವಿರುದ್ಧ ನಾನು ಮಾಡಿದ ಹೋರಾಟವು ಕರುಣಾನಿಧಿ ಅವರನ್ನು ವಿಚಲಿತಗೊಳಿಸಿತು. ಅಲ್ಲಿಯವರೆಗೂ ನನ್ನ ಕುರಿತು ಕರುಣಾನಿಧಿ ಅವರಿಗೆ ಯಾವ ಆತಂಕವೂ ಇರಲಿಲ್ಲ. ನಿರ್ಭೀತಿಯಿಂದ ಜಯಲಲಿತಾ ಅವರನ್ನ ಎದುರಿಸಿ ನಿಂತ ನಾನು ಬೃಹತ್ತಾಗಿ ಬೆಳೆಯುತ್ತಿರುವಂತೆ ಕರುಣಾನಿಧಿಗೆ ಭಾಸವಾಯಿತು. ಅವರಿಗೆ ಅದೆಂಥದ್ದೋ ಕೆಟ್ಟ ಅಭದ್ರತೆಯ ಭಾವನೆ ಕಾಡಲಾರಂಭಿಸಿತು. ತಮಿಳುನಾಡಿನಲ್ಲಿ ಜಯಲಲಿತಾಗೆ ನಾನು ಪ್ರಮುಖ ಎದುರಾಳಿ ಆಗುವುದು ಅವರಿಗೆ ಬೇಡವಾಗಿತ್ತು. ಈ ವಿಚಾರದ ಬಗ್ಗೆ ಅವರು ಕಾಂಗ್ರೆಸ್ ಮುಖಂಡ ಜಿ.ಕೆ. ಮೂಪನಾರ್ ಜೊತೆ ಮಾತನಾಡಿದ್ದರು. ಬ್ರಾಹ್ಮಣನಾದ ನನಗೆ ಒಂಚೂರು ಅವಕಾಶ ಸಿಕ್ಕರೂ ಇಡೀ ರಾಜ್ಯವನ್ನೇ ವಶಕ್ಕೆ ತೆಗೆದುಕೊಂಡುಬಿಡಬಹುದು ಎಂದನಿಸಿತ್ತು ಅವರಿಗೆ. ಬ್ರಾಹ್ಮಣನಾದ ನಾನು ಇದ್ದಕ್ಕಿದ್ದಂತೆ ತಮಿಳು ವ್ಯಕ್ತಿತ್ವದನಾಗಿ ಬದಲಾಗಿಬಿಟ್ಟಿದ್ದೆ. ಬ್ರಾಹ್ಮಣರನ್ನು ಕಂಡರೆ ಆಗದ ಅವರಿಗೆ ನಾನು ಜಯಲಲಿತಾರ ಭ್ರಷ್ಟಾಚಾರವನ್ನು ಬಯಲಿಗೆಳೆದು ಜೈಲಿಗೆ ಹೋಗುಂತೆ ಮಾಡಿದ ಸಂಗತಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ,” ಎಂದು ಸ್ವಾಮಿ ಅಭಿಪ್ರಾಯಪಟ್ಟರು.

ಸೇತು ಸಮುದ್ರಂ ಯೋಜನೆ ವಿರುದ್ಧ ಕರುಣಾನಿಧಿ ಹೋರಾಟ ಮಾಡುತ್ತಿದ್ದರು. ನಾನು ಕರುಣಾನಿಧಿಯವರ ಪಕ್ಷದವರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೆ. ಇದು ತಮ್ಮಿಬ್ಬರ ಮಧ್ಯೆ ಇದ್ದ ಕಂದಕವನ್ನು ಇನ್ನಷ್ಟು ಹೆಚ್ಚಿಸಿತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.

ಇನ್ನು, ಕರುಣಾನಿಧಿ ಅವರ ಪುತ್ರ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಬಗ್ಗೆಯೂ ಸ್ವಾಮಿ ಮಿಶ್ರ ಪ್ರತಿಕ್ರಿಯೆ ಕೊಡುತ್ತಾರೆ. “ಅಪ್ಪನಂತೆ ಸ್ಟಾಲಿನ್ ಕೂಡ ಒಳ್ಳೆಯ ಸಂಘಟಕರೇನೋ ಹೌದು. ಆದರೆ, ಅಪ್ಪನ ವಾಕ್​ಚಾತುರ್ಯ ಸ್ಟಾಲಿನ್​ರಲ್ಲಿಲ್ಲ” ಎಂಬುದು ಸ್ವಾಮಿ ಅಭಿಪ್ರಾಯ.

ಸುಬ್ರಮಣಿಯನ್ ಸ್ವಾಮಿ ಪ್ರಕಾರ, ತಮಿಳುನಾಡಿನಲ್ಲಿ ಮುಂದಿನ ದಿನಗಳಲ್ಲಿ ಜಾತಿ ಆಧಾರಿತ ರಾಜಕಾರಣವೇ ಮುನ್ನೆಲೆಗೆ ಬರುತ್ತವೆ. ತೇವರ್​ನಂತಹ ಪ್ರಬಲ ಜಾತಿಗಳ ನಾಯಕರಾದ ಶಶಿಕಲಾ ನಟರಾಜನ್, ಟಿ.ಟಿ.ವಿ. ದಿನಕರನ್ ಮೊದಲಾದವರು ತಮಿಳುನಾಡಿನ ರಾಜಕೀಯದಲ್ಲಿ ಮುಖ್ಯಸ್ಥಾನಕ್ಕೆ ಬರಲಿದ್ದಾರಂತೆ.

“ತಮಿಳುನಾಡಿನಲ್ಲಿ ಜಾತಿ ರಾಜಕಾರಣಕ್ಕೆ ಕಡಿವಾಣ ಹಾಕಲು ಹಿಂದುತ್ವದ ರಾಜಕಾರಣದಿಂದ ಸಾಧ್ಯ. ಆದರೆ, ಇಲ್ಲಿಯ ಬಿಜೆಪಿಯ ಚುಕ್ಕಾಣಿ ಹಿಡಿದವರಿಗೆ ಆ ಮಟ್ಟದ ಸಾಮರ್ಥ್ಯ ಇಲ್ಲ,” ಎಂದು ಸ್ವಾಮಿ ವಿಷಾದಿಸುತ್ತಾರೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...