news18-kannada Updated:February 28, 2021, 7:45 PM IST
ರಾಹುಲ್ ಗಾಂಧಿ.
ಚೆನ್ನೈ (ಫೆಬ್ರವರಿ 28); "ಪ್ರೀತಿ ಮತ್ತು ಅಂಹಿಸೆಯ ಮೂಲಕ ನಾವು ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುತ್ತೇವೆ. ಇದೇ ಅಸ್ತ್ರಗಳನ್ನು ಬಳಸಿ ನಾವು ಇವರಿಗಿಂತ ಪ್ರಬಲವಾಗಿದ್ದ ಶತ್ರುಗಳನ್ನೂ ಹೊಡೆದೋಡಿಸಿದ್ದೇವೆ, ಇನ್ನು ಇವರು ಯಾವ ಲೆಕ್ಕ" ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಅಭಿಯಾನದ ಅಂಗವಾಗಿ ದಕ್ಷಿಣ ತಮಿಳುನಾಡಿನಲ್ಲಿ ಎರಡನೇ ದಿನ ಪ್ರವಾಸ ಮಾಡುತ್ತಿರುವ ರಾಹುಲ್ ಗಾಂಧಿ, ತಿರುನಲ್ವೇಲಿಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ‘ಎಜುಕೇಟರ್ಸ್ ಮೀಟ್’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಈ ಮೇಲಿನ ಸಾಲುಗಳನ್ನು ಉಚ್ಚರಿಸಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ "ಪ್ರೀತಿ ಮತ್ತು ಅಹಿಂಸೆಗಿಂತ ಪ್ರಬಲವಾದ ಅಸ್ತ್ರಗಳು ಈ ಜಗತ್ತಿನಲ್ಲೇ ಇಲ್ಲ ಎಂದು ತೋರಿಸಿಕೊಟ್ಟವರು ಭಾರತೀಯರು. ಆದರೆ, ಇಂದು ಇದೇ ನೆಲದಲ್ಲಿ ಸರ್ವಾಧಿಕಾರಿ ಧೋರಣೆ ತಲೆದೋರಿದೆ. ಈ ಸರ್ವಾಧಿಕಾರಿ ಆಡಳಿತವನ್ನು ಪ್ರೀತಿ ಮತ್ತು ಅಹಿಂಸೆಯಿಂದಲೇ ನಾವು ಸೋಲಿಸುತ್ತೇವೆ. ಇವರಿಗಿಂತಲೂ ದೊಡ್ಡ ಶತ್ರುಗಳನ್ನು ಸೋಲಿಸಿರುವಾಗ, ಇವರು ಯಾವ ಲೆಕ್ಕ" ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ: ಪುಣೆ ಮೂಲದ ಯುವತಿ ಆತ್ಮಹತ್ಯೆ ಪ್ರಕರಣ; ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ರಾಜೀನಾಮೆ
ಇದೇ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಯನ್ನು ನೆನಪಿಸಿಕೊಂಡ ಅವರು, "ಪ್ರಧಾನಿ ಮೋದಿಗಿಂತಲೂ ಬ್ರಿಟೀಷರು ಹೆಚ್ಚು ಶಕ್ತಿಶಾಲಿಯಾಗಿದ್ದರು. ಬ್ರಿಟೀಷ್ ಸಾಮ್ರಾಜ್ಯಕ್ಕೆ ಹೋಲಿಸಿದರೆ ನರೇಂದ್ರ ಮೋದಿ ಯಾವ ಲೆಕ್ಕ?. ಈ ದೇಶದ ಜನರು ಬ್ರಿಟಿಷ್ ಸಾಮ್ರಾಜ್ಯವನ್ನೇ ಹಿಂದಕ್ಕೆ ಕಳುಹಿಸಿದ್ದಾರೆ. ಅದೇ ರೀತಿಯಲ್ಲಿ ನಾವು ನರೇಂದ್ರ ಮೋದಿಯವರನ್ನು ಮತ್ತೆ ನಾಗಪುರಕ್ಕೆ ಕಳುಹಿಸುತ್ತೇವೆ" ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
ಬಿಜೆಪಿ ಪಕ್ಷದ ಹಿಂದುತ್ವ ಪ್ರತಿಪಾದನೆಯನ್ನು ಲೇವಡಿ ಮಾಡಿರುವ ರಾಹುಲ್ ಗಾಂಧಿ,"ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದೂ ಧರ್ಮವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿದೆ. ಆದರೆ ವಾಸ್ತವದ ಹಿಂದೂ ಧರ್ಮಕ್ಕೂ ಬಿಜೆಪಿಯ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದುತ್ವ ಯಾವ ಜನರನ್ನೂ ಅವಮಾನಿಸಿ ಎಂದು ಹೇಳುವುದಿಲ್ಲ. ಕೊಲ್ಲುವುದನ್ನು ಹೊಡೆಯುವುದನ್ನು ಬೋಧಿಸುವುದಿಲ್ಲ. ಎಲ್ಲಾ ಧರ್ಮಗಳ ಮೂಲ ತತ್ವವೆಂದರೆ ಪ್ರೀತಿ" ಎಂದು ಕಿವಿಮಾತು ಹೇಳಿದ್ದಾರೆ.
Published by:
MAshok Kumar
First published:
February 28, 2021, 7:45 PM IST