ನವ ದೆಹಲಿ (ಅಕ್ಟೋಬರ್ 26); ದಸರಾ ಹಬ್ಬದ ಪ್ರಯುಕ್ತ ನಿನ್ನೆ ಮಾತನಾಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಭಾಷಣದ ವೇಳೆ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉಲ್ಲೇಖಿಸಿದ್ದರು. ಅಲ್ಲದೆ, "ಮುಸ್ಲಿಂ ಸಹೋದರರು ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ದಾರಿ ತಪ್ಪಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ಮೋಹನ್ ಭಾಗವತ್ ಅವರ ಮಾತಿಗೆ, "ದಾರಿ ತಪ್ಪಲು ನಾವೇನು ಮಕ್ಕಳಲ್ಲ" ಎಂದು ಹೇಳುವ ಮೂಲಕ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದ್-ಉಲ್-ಮುಸ್ಲೇಮಿನ್ (AIMIM) ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ಸಿಎಎ ವಿರೋಧಿ ಕಾವು ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ಸಂಸದ ಓವೈಸಿ ಪರೋಕ್ಷವಾಗಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಲ್ಲದೆ, ಈ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.
We're not kids to be 'misguided'. BJP didn't mince words about what CAA+NRC were meant to do. If it's not about Muslims, just remove all references to religion from the law? Know this: we'll protest again & again till there are laws that require us to prove our Indianness...[1] https://t.co/uccZ8JTjsi
— Asaduddin Owaisi (@asadowaisi) October 25, 2020
ಅಲ್ಲದೆ, "ನಮ್ಮ ಭಾರತೀಯತೆಯನ್ನು ಸಾಬೀತುಪಡಿಸಲು ಇಂತಹ ಕಾನೂನುಗಳು ಚಾಲ್ತಿಯಲ್ಲಿ ಇರುವವರೆಗೂ ನಾವು ಮತ್ತೆ ಮತ್ತೆ ಪ್ರತಿಭಟಿಸುತ್ತೇವೆ” ಎಂದು ಕೇಂದ್ರ ಸರ್ಕಾರಕ್ಕೆ ಓವೈಸಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮೋಹನ್ ಭಾಗವತ್ ಭಾಷಣದಲ್ಲಿ ಏನಿತ್ತು?:
ಆರ್ಎಸ್ಎಸ್ ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ ಮೊಹನ್ ಭಾಗವತ್ ತಮ್ಮ ಭಾಷಣದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ಪ್ರಸ್ತಾಪಿಸಿದರು. "ಸಿಎಎ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ವಿರೋಧಿಸುವುದಿಲ್ಲ. ಆದರೆ ಈ ಹೊಸ ಕಾನೂನನ್ನು ವಿರೋಧಿಸಲು ಬಯಸುವವರು ಮುಸ್ಲಿಂ ಸಮುದಾಯವನ್ನು ನಿರ್ಬಂಧಿಸುವ ಗುರಿಯನ್ನು ಈ ಕಾಯ್ದೆಗಳು ಹೊಂದಿವೆ ಎಂಬ ಸುಳ್ಳು ವದಂತಿಯನ್ನು ಪ್ರಚಾರ ಮಾಡಿದರು. ಆ ಮೂಲಕ ಮೂಲಕ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಿದರು. ಸಿಎಎ ಬಳಸಿ, ಅವಕಾಶವಾದಿಗಳು ಪ್ರತಿಭಟನೆಯ ಹೆಸರಿನಲ್ಲಿ ಸಂಘಟಿತ ಹಿಂಸಾಚಾರವನ್ನು ನಡೆಸಿದರು" ಎಂದು ಹೇಳಿದ್ದರು.
ಸಿಎಎ ಬಗ್ಗೆ ಮುಸ್ಲಿಮರು ದಾರಿ ತಪ್ಪುತ್ತಿದ್ದಾರೆ ಎಂಬ ಭಾಗವತ್ ಅವರ ಹೇಳಿಕೆ ಮೇರೆಗೆ ಓವೈಸಿ ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷಗಳ ಮೇಲೂ ವಾಗ್ದಾಳಿ ನಡೆಸಿದ್ದರು. "ನಾವು ಪೌರತ್ವದ ಆಧಾರದ ಮೇಲೆ ಧರ್ಮವನ್ನು ವಿಭಜಿಸುವ ಕಾನೂನಿನ ವಿರುದ್ಧ ಪ್ರತಿಭಟಿಸುತ್ತೇವೆ. ನಾನು ಕಾಂಗ್ರೆಸ್, ಆರ್ಜೆಡಿ ಮತ್ತು ಅಂತ ಪಕ್ಷಗಳ ತದ್ರೂಪುಗಳನ್ನು ಸಹ ಇಲ್ಲಿ ಹೆಸರಿಸಲು ಬಯಸುತ್ತೇನೆ" ಎಂದು ದೂರಿದ್ದರು.
ಇನ್ನು, "ಪ್ರತಿಭಟನೆಯ ಸಮಯದಲ್ಲಿ ನಿಮ್ಮ ಮೌನವನ್ನು ಮರೆಯಲಾಗುವುದಿಲ್ಲ. ಬಿಜೆಪಿ ನಾಯಕರು ಸೀಮಾಂಚಲ್ ಜನರನ್ನು ನುಸುಳುಕೋರರು ಎಂದು ಕರೆಯುತ್ತಿರುವಾಗ, ಆರ್ಜೆಡಿ-ಐಎನ್ಸಿ ಒಮ್ಮೆಯೂ ಬಾಯಿ ತೆರೆಯಲಿಲ್ಲ " ಎಂದು ಓವೈಸಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಸ್ತುತ ಬಿಹಾರದ ಚುನಾವಣೆ ಕಳೆಕಟ್ಟುತ್ತಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಇದೇ ಕಾರಣಕ್ಕೆ ಸಿಎಎ, ಎನ್ಆರ್ಸಿ, ಕಲಂ 370 ಮತ್ತೆ ಚುನಾವಣಾ ಪ್ರಚಾರದ ಸಂಬಂಧ ಸುದ್ದಿಯಾಗುತ್ತಿದೆ. ಅಲ್ಲದೆ ಬಿಹಾರದ ಚುನಾವಣೆ ಮತ್ತಷ್ಟು ಮಹತ್ವವನ್ನು ಪಡೆದುಕೊಳ್ಳಲು ಕಾರಣವಾಗಿದೆ. ಒಂದೆಡೆ ಎನ್ಡಿಎ ಮೈತ್ರಿಕೂಟ ಬಲಿಷ್ಠವಾಗಿದ್ದರೆ ಮತ್ತೊಂದೆಡೆ ಅವರನ್ನು ಎದುರಿಸಲು ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಗ್ರ್ಯಾಂಡ್ ಡೆಮಾಕ್ರಟಿಕ್ ಸೆಕ್ಯುಲರ್ ಫ್ರಂಟ್ ಸಹ ಸಿದ್ದವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ