ನಾವು ಮಕ್ಕಳಿಗೆ ಪೆನ್ ಕೊಡ್ತೀವಿ; ಬಿಜೆಪಿಯವರು ಗನ್ ಕೊಡ್ತಾರೆ: ಅರವಿಂದ್ ಕೇಜ್ರಿವಾಲ್

ಮಕ್ಕಳ ಕೈಗೆ ನಾವು ಪೆನ್ ಮತ್ತು ಕಂಪ್ಯೂಟರ್​ಗಳನ್ನು ತುಂಬುತ್ತಿದ್ದೇವೆ. ಅವರ ಮನಸ್ಸಲ್ಲಿ ಉದ್ಯಮಶೀಲತೆಯ ಕನಸು ತುಂಬುತ್ತಿದ್ದೇವೆ. ಆದರೆ, ಬಿಜೆಪಿಯವರು ಬಂದೂಕು ಮತ್ತು ಧ್ವೇಷ ತುಂಬುತ್ತಿದ್ಧಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ಧಾರೆ.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

  • News18
  • Last Updated :
  • Share this:
ನವದೆಹಲಿ(ಜ. 31): ಜಾಮಿಯಾ ನಗರ್​ನಲ್ಲಿ ಪ್ರತಿಭಟನಾಕಾರರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿಯನ್ನು ಶಂಕಿಸಿದ್ಧಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯು ದೆಹಲಿಯಲ್ಲಿ ಗಲಭೆ ಸೃಷ್ಟಿಸುವ ಚಿತಾವಣಿ ಇದಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ಧಾರೆ. ಫೆ. 8ಕ್ಕೆ ನಿಗದಿಯಾಗಿರುವ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿರುವುದನ್ನು ಮನಗಂಡಿರುವ ಬಿಜೆಪಿ ಈ ಚುನಾವಣೆಯನ್ನು ಮುಂದೂಡಲಾಗುವಂತೆ ಗಲಭೆ ಸೃಷ್ಟಿಸಲು ಯೋಜಿಸಿದೆ. ಜಾಮಿಯಾ ಫೈರಿಂಗ್ ಘಟನೆಯು ಈ ಯೋಜನೆಯ ಭಾಗವಾಗಿದೆ ಎಂದು ಕೇಜ್ರಿವಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ಗುರುವಾರ ದೆಹಲಿಯ ಜಾಮಿಯಾ ನಗರದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ವ್ಯಕ್ತಿಯೊಬ್ಬ ಪಿಸ್ತೂಲ್ ತೆಗೆದು ರಾಜಾರೋಷವಾಗಿ ಓಡಾಡುತ್ತಾ ಗುಂಡಿನ ದಾಳಿ ನಡೆಸಿದ್ದ. “ಯೇ ಲೋ ಆಜಾದಿ”(ತೆಗೆದುಕೊಳ್ಳಿ ಸ್ವಾತಂತ್ರ್ಯ) ಎಂದು ಆತ ಘೋಷಣೆ ಕೂಗುತ್ತಾ ಫೈರಿಂಗ್ ಮಾಡಿದ್ದ. ಈ ಫೈರಿಂಗ್​​ನಲ್ಲಿ ಒಬ್ಬ ಪ್ರತಿಭಟನಾಕಾರರಿಗೆ ಗಾಯವಾಗಿದೆ. ಫೈರಿಂಗ್ ನಡೆಯುವವರೆಗೂ ಸುಮ್ಮನಿದ್ದಂತಿದ್ದ ಪೊಲೀಸರು, ಗುಂಡಿನ ದಾಳಿಯ ನಂತರ ಆ ವ್ಯಕ್ತಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಕುಡಿಯುವ ನೀರು, ಇ-ಸ್ಕೂಟರ್, 2 ರೂಗೆ ಗೋಧಿ ಹಿಟ್ಟು: ದೆಹಲಿ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್

ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅರವಿಂದ್ ಕೇಜ್ರಿವಾಲ್, ಮಕ್ಕಳ ಮನಸ್ಸಿನಲ್ಲಿ ಬಿಜೆಪಿ ಧ್ವೇಷದ ಭಾವನೆ ತುಂಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

“ಮಕ್ಕಳ ಕೈಗೆ ನಾವು ಪೆನ್ ಮತ್ತು ಕಂಪ್ಯೂಟರ್​ಗಳನ್ನು ತುಂಬುತ್ತಿದ್ದೇವೆ. ಅವರ ಮನಸ್ಸಲ್ಲಿ ಉದ್ಯಮಶೀಲತೆಯ ಕನಸು ತುಂಬುತ್ತಿದ್ದೇವೆ. ಆದರೆ, ಅವರು (ಬಿಜೆಪಿ) ಬಂದೂಕು ಮತ್ತು ಧ್ವೇಷವನ್ನು ತುಂಬುತ್ತಿದ್ಧಾರೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ಧಾರೆ. ದೆಹಲಿಯ ಸರ್ಕಾರಿ ಶಾಲಾ ವಿದ್ಯಾರ್ಥಿಯೊಬ್ಬ ಐಟಿ-ಟೆಕ್ ಕಾನ್ಫೆರೆನ್ಸ್ ಉದ್ದೇಶಿಸಿ ಮಾತನಾಡುತ್ತಿದ್ದ ವಿಡಿಯೋವೊಂದನ್ನೂ ಈ ಟ್ವೀಟ್​ನಲ್ಲಿ ಅವರು ಅಟ್ಯಾಚ್ ಮಾಡಿದ್ಧಾರೆ.

ಇದನ್ನೂ ಓದಿ: ಐಬಿಎಂಗೆ ಮುಂದಿನ ಸಿಇಒ ಅರವಿಂದ್ ಕೃಷ್ಣ; ಅಮೆರಿಕನ್ ಸಂಸ್ಥೆಗಳ ಮೇಲೆ ಮುಂದುವರಿದ ಭಾರತೀಯರ ಪಾರಮ್ಯ

“ನಿಮ್ಮ ಮಕ್ಕಳಿಗೆ ನೀವು ಏನನ್ನು ಕೊಡಲು ಇಚ್ಛಿಸುತ್ತೀರಿ? ಫೆ. 8ರಂದು ತಿಳಿಸಿ” ಎಂದು ದೆಹಲಿ ಮುಖ್ಯಮಂತ್ರಿ ದೆಹಲಿಯ ಮತದಾರರಿಗೆ ಮನವಿ ಮಾಡಿದ್ಧಾರೆ.

ಫೆ. 8ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅರವಿಂದ್ ಕೇಜ್ರಿವಾಲ್ ಸಿಎಂ ಆಗಿ ಹ್ಯಾಟ್ರಿಕ್ ಸಾಧನೆ ಮಾಡಲು ಹೊರಟಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 70 ಸ್ಥಾನಗಳ ಪೈಕಿ 67 ಕ್ಷೇತ್ರಗಳನ್ನ ಜಯಿಸಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: