ವಿದ್ಯಾರ್ಥಿ ವಿರೋಧಿ ನೀತಿ ವಿರುದ್ಧ ಜೆಎನ್​ಯುನಲ್ಲಿ ಭುಗಿಲೆದ್ದ ಪ್ರತಿಭಟನೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ

ಶುಲ್ಕದಲ್ಲಿ ಹಿಂದಿನದ್ದಕ್ಕಿಂತ ಶೇ. 999ರಷ್ಟು ಹೆಚ್ಚಳವಾಗಿದೆ. ಜೆಎನ್​ಯುನಲ್ಲಿರುವ ಶೇ. 40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕಡಿಮೆ ಆದಾಯವಿರುವ ಕುಟುಂಬದಿಂದ ಬಂದವರಾಗಿದ್ದಾರೆ ಎಂದು ಜೆಎನ್​ಯು ವಿದ್ಯಾರ್ಥಿ ಒಕ್ಕೂಟ ನೀಡಿದ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

news18
Updated:November 11, 2019, 4:38 PM IST
ವಿದ್ಯಾರ್ಥಿ ವಿರೋಧಿ ನೀತಿ ವಿರುದ್ಧ ಜೆಎನ್​ಯುನಲ್ಲಿ ಭುಗಿಲೆದ್ದ ಪ್ರತಿಭಟನೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ
ಜೆಎನ್​ಯು ವಿದ್ಯಾರ್ಥಿಗಳು
  • News18
  • Last Updated: November 11, 2019, 4:38 PM IST
  • Share this:
ನವದೆಹಲಿ(ನ. 11): ಜವಾಹರಲಾಲ್ ವಿಶ್ವ ವಿದ್ಯಾಲಯದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದೆ. ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ಪ್ರಸ್ತಾವವನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಜೆಎನ್​ಯು ಕ್ಯಾಂಪಸ್​ನ ಹೊರಗೆ ತೀವ್ರ ಪ್ರತಿಭಟನೆ ನಡೆಸಿದರು. ಘಟಿಕೋತ್ಸವವನ್ನುದ್ದೇಶಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾಷಣ ಮಾಡುತ್ತಿದ್ದ ಐಐಸಿಟಿಇ ಆಡಿಟೋರಿಯಮ್​ಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ದೆಹಲಿ ಪೊಲೀಸರು ವಾಟರ್ ಕ್ಯಾನಾನ್​ಗಳನ್ನು ಬಳಸಿದರು.

ಶುಲ್ಕದಲ್ಲಿ ಹಿಂದಿನದ್ದಕ್ಕಿಂತ ಶೇ. 999ರಷ್ಟು ಹೆಚ್ಚಳವಾಗಿದೆ. ಜೆಎನ್​ಯುನಲ್ಲಿರುವ ಶೇ. 40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕಡಿಮೆ ಆದಾಯವಿರುವ ಕುಟುಂಬದಿಂದ ಬಂದವರಾಗಿದ್ದಾರೆ ಎಂದು ಜೆಎನ್​ಯು ವಿದ್ಯಾರ್ಥಿ ಒಕ್ಕೂಟ ನೀಡಿದ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಕೆಸಿಆರ್​​ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿದ ಸಾರಿಗೆ ನೌಕರರು: ಸಚಿವ-ಶಾಸಕರ ಮನೆಗೆ ಮುತ್ತಿಗೆ

“ಹಾಸ್ಟೆಲ್ ನಿಯಮಾವಳಿಯಲ್ಲಿ ಒಪ್ಪತಕ್ಕಂಥದ್ದಿಲ್ಲ. ಶುಲ್ಕ ಹೆಚ್ಚಳ, ನಿಷೇಧಾಜ್ಞೆಯ ಸಮಯ ಮತ್ತು ಡ್ರೆಸ್ ಕೋಡ್ ಇತ್ಯಾದಿ ಹೊಸ ನಿಯಮಗಳಿಗೆ ಅದು ಅವಕಾಶ ಮಾಡಿಕೊಟ್ಟಿದೆ. ನಾವು ಉಪ ಕುಲಪತಿಯವರೊಂದಿಗೆ ಮಾತನಾಡಬೇಕೆಂದರೆ ಅವರು ನಮ್ಮನ್ನು ಭೇಟಿಯಾಗುತ್ತಿಲ್ಲ. ಈ ಮೂರು ವರ್ಷಗಳಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದನ್ನೇ ನೋಡಿಲ್ಲ. ಇವತ್ತು ಪೊಲೀಸರು ನಮ್ಮ ಮೇಲೆ ಬಲ ಪ್ರಯೋಗ ಮಾಡಿದ್ದಾರೆ. ನನ್ನ ಸಹಪಾಠಿಗಳನ್ನ ಪೊಲೀಸರು ಎಳೆದಾಡಿದ್ದಾರೆ” ಎಂದು ನಂದಿನಿ ಶರ್ಮಾ ಎಂಬ ವಿದ್ಯಾರ್ಥಿನಿಯು ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ.

ಎಐಸಿಟಿಇ ಕಟ್ಟಡವು ಜೆಎನ್​ಯು ಕ್ಯಾಂಪಸ್​​ನಿಂದ 3 ಕಿಮೀ ದೂರದಲ್ಲಿದೆ. ಇವತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದು ಗೊತ್ತಾಗುತ್ತಿದ್ದಂತೆಯೇ ಎಐಸಿಟಿಇ ಕ್ಯಾಂಪಸ್​ನ ಗೇಟ್​ಗಳನ್ನು ಮುಚ್ಚಿ ಬಿಗಿಭದ್ರತೆ ಒದಗಿಸಲಾಗಿತ್ತು. ಹಾಗೆಯೇ ಜೆಎನ್​ಯು ಕ್ಯಾಂಪಸ್​ನ ಉತ್ತರ ಮತ್ತು ಪಶ್ಚಿಮ ಭಾಗದ ಗೇಟ್​ಗಳ ಹೊರಗೆ ಬ್ಯಾರಿಕೇಡ್​ಗಳನ್ನ ಹಾಕಲಾಗಿತ್ತು. ಜೆಎನ್​ಯುನಿಂದ ಎಐಸಿಟಿಇಗೆ ಹೋಗುವ ಮಾರ್ಗದಲ್ಲೂ ಕೆಲವೆಡೆ ಬ್ಯಾರಿಕೇಡ್​ಗಳನ್ನು ಹಾಕಲಾಗಿತ್ತು. ಆದರೆ, ಪ್ರತಿಭಟನಾನಿರತ ವಿದ್ಯಾರ್ಥಿಗಳು ಈ ತಡೆಗಳನ್ನು ಬೀಳಿಸಿ ಬೆಳಗ್ಗೆ 11:30ರ ಸುಮಾರಿಗೆ ಎಐಸಿಟಿಇ ಕ್ಯಾಂಪಸ್ ಕಡೆಗೆ ಹೋದರೆನ್ನಲಾಗಿದೆ. ಉಪಕುಲಪತಿ ಎಂ. ಜಗದೀಶ್ ಅವರನ್ನು ಕಳ್ಳ ಎಂದು ಕರೆಯುವ ಘೋಷಣೆಗಳನ್ನು ಕೂಗಿದರು. ಡೆಲ್ಲಿ ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು. ಎಐಸಿಟಿಇ ಕ್ಯಾಂಪಸ್ ಗೇಟನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಸುತ್ತುವರೆದಿದ್ದರು.

ಇದನ್ನೂ ಓದಿ: ಗಗನಕ್ಕೇರಿದ ಈರುಳ್ಳಿ ಬೆಲೆ: ವರ್ತಕರ ಮೇಲೆ ಐಟಿ ದಾಳಿ

ಎಐಸಿಟಿಇನಲ್ಲಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರು ಹೊರಗೆ ಹೋಗಲಾಗದೇ ಸಿಲುಕಿಕೊಳ್ಳುವಂತಾಗಿತ್ತು. ಕೇಂದ್ರ ಸಚಿವರಿಗೆ ಹೊರಹೋಗಲು ದಾರಿ ಮಾಡಿಕೊಡಲು ವಿದ್ಯಾರ್ಥಿಗಳ ಮನವೊಲಿಸುವಂತೆ ಕೆಲ ವಿದ್ಯಾರ್ಥಿ ಮುಖಂಡರ ಮೂಲಕ ಮಾಡಿದ ಪ್ರಯತ್ನ ವಿಫಲವಾಯಿತು. ಬಳಿಕ, ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸಲಾಗುವುದು ಎಂದು ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಭರವಸೆ ನೀಡಿದ ಬಳಿಕ ಅವರಿಗೆ ಹೊರಹೋಗಲು ದಾರಿ ಬಿಡಲಾಯಿತು.“ನಾವು ತಡೆಗಳನ್ನು ಬೀಳಿಸಿ ಘಟಿಕೋತ್ಸವದ ಸ್ಥಳ ತಲುಪಿ ಸಚಿವರನ್ನು ಭೇಟಿ ಮಾಡಲು ಸಾಧ್ಯವಾಗಿದೆ. ನಾವು ಒಗ್ಗಟ್ಟಿನಿಂದ ಇದ್ದದ್ದರಿಂದಲೇ ಈ ಐತಿಹಾಸಿಕ ಕಾರ್ಯ ಸಾಧ್ಯವಾಗಿದೆ. ಇದು ನಮ್ಮ ಹೋರಾಟದ ಅಂತ್ಯವಲ್ಲ. ಉಪಕುಲಪತಿಗಳಿಂದಲೇ ಈಗ ಈ ಎಲ್ಲಾ ಅವಾಂತರ ಆಗಿರುವುದು. ವಿದ್ಯಾರ್ಥಿಗಳ ಜೊತೆ ಉಪಕುಲಪತಿಗಳು ಮಾತನಾಡುವಂತೆ ಮಾಡಿ ಎಂದು ಮಾನವ ಸಂಪನ್ಮೂಲ ಸಚಿವರಿಗೆ ನಾವು ಒತ್ತಾಯಿಸಿದ್ದೇವೆ. ಸಚಿವಾಲಯದೊಂದಿಗೆ ಸಭೆ ನಡೆಸಲು ವಿದ್ಯಾರ್ಥಿ ಒಕ್ಕೂಟಕ್ಕೆ ಆಹ್ವಾನ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ” ಎಂದು ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಆಯಿಷೆ ಘೋಷ್ ತಿಳಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 11, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading