ಎರಡು ವರ್ಷದ ಮಗಳೊಬ್ಬಳು ರೈಲ್ವೆ ನಿಲ್ದಾಣದ ಫ್ಲಾಟ್ಫಾರ್ಮ್ ಮೇಲೆ ಪ್ರಜ್ಞೆ ತಪ್ಪಿ ಬಿದ್ದ ತಾಯಿಯನ್ನು ತನ್ನ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಈ ಘಟನಾ ಸಂಬಂಧದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದ ತಾಯಿಯ ಸ್ಥಿತಿಯನ್ನು ಅರಿತ ಮಗುವು ಹೋಗಿ ಕೆಲವು ಆರ್ಪಿಎಫ್ ಅಧಿಕಾರಿಗಳನ್ನು ತಾಯಿಯ ಬಳಿ ಕರೆ ತಂದಿದೆ. ಆಗ ತಾಯಿಯು ಪ್ರಜ್ಞೆ ತಪ್ಪಿ ಬಿದ್ದಿರುವುದು ಮತ್ತು ಆಕೆಯ ಬಳಿ 6 ತಿಂಗಳ ಮಗುವೊಂದು ಅಳುತ್ತಿರುವ ದೃಶ್ಯವನ್ನು ಪೊಲೀಸರು ಕಂಡಿದ್ದಾರೆ. ತಕ್ಷಣ ಆಕೆಯನ್ನು ನೇರವಾಗಿ ಮಲಗಿಸಿ ತಾಯಿಯ ಮುಖದ ಮೇಲೆ ನೀರು ಚಿಮುಕಿಸಿ ಎಬ್ಬಿಸಲು ನೋಡಿದ್ದಾರೆ. ಆದರೆ ಆಕೆಗೆ ಪ್ರಜ್ಞೆ ಬರಲಿಲ್ಲ. ನಂತರ ಆಂಬುಲೆನ್ಸ್ಗೆ ಕರೆ ಮಾಡಿ ತಾಯಿಯನ್ನು ಮತ್ತು ಮಕ್ಕಳಿಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇದೀಗ ಈ ಮಗುವಿನ ವರ್ತನೆ, ಧೈರ್ಯ ಎಲ್ಲರ ಮನೆ ಮಾತಾಗಿದ್ದು, ಈ ಮಗುವಿನ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ಪಿಎಫ್ ಅಧಿಕಾರಿ ಮನೋಜ್ ಕುಮಾರ್ ಅವರು, ಪ್ರಜ್ಞೆ ತಪ್ಪಿ ಬಿದ್ದ ತಾಯಿಯನ್ನು ಗುರುತಿಸಿದ ನಮ್ಮ ಆರ್ಪಿಎಫ್ ಸಿಬ್ಬಂದಿ ಆಕೆಯನ್ನು ಎಚ್ಚರಿಸಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿದ್ದಾರೆ. ನಂತರ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಏನಿದು ಘಟನೆ?
ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮೊರಾದಾಬಾದ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದರು. ಆಕೆಯೊಂದಿಗೆ ಇಬ್ಬರು ಹೆಣ್ಣು ಮಕ್ಕಳಿಬ್ಬರು, ಒಂದು ಸಣ್ಣ ಬ್ಯಾಗ್ ಹೊರತು ಯಾರೂ ಇರಲಿಲ್ಲ. ಅದರಲ್ಲಿ ಒಂದು ಸುಮಾರು 2 ವರ್ಷ ಮತ್ತು ಇನ್ನೊಂದು 6 ತಿಂಗಳ ಮಗು. ತಾಯಿ ಮೂರ್ಛೆ ಹೋದ ನಂತರ, ತನ್ನ ತಾಯಿಗೆ ಏನಾಗಿದೆ ಎಂದು ತಿಳಿಯದೆ ಮೊದಲಿಗೆ 2 ವರ್ಷದ ಮಗು ತುಂಬಾ ಅಳುತ್ತಿತ್ತು. ಸ್ವಲ್ಪ ಸಮಯದ ನಂತರ ಅವಳು ಎದ್ದು ನಿಲ್ದಾಣದಲ್ಲಿದ್ದ ಆರ್ಪಿಎಫ್ನ ಲೇಡಿ ಕಾನ್ಸ್ಟೇಬಲ್ ಕರೆ ತಂದು ತಾಯಿಯ ಜೀವವನ್ನು ಉಳಿಸಿದ್ದಾಳೆ.
ಆ ಇಬ್ಬರು ಮಕ್ಕಳು ಹಾಗೂ ತಾಯಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಯಾವ ಊರಿಗೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಆ ಕ್ಷಣ ಏನಾಯಿತು ಎಂಬ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಸ್ಪತ್ರೆಯ ತುರ್ತು ಆರೋಗ್ಯ ಅಧಿಕಾರಿ, ಡಾ. ಶೋಭಿತ್ ಅವರು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, ಜಿಆರ್ಪಿ ರೈಲ್ವೆ ನಿಲ್ದಾಣದಿಂದ ಪೊಲೀಸರು ಇಬ್ಬರು ಮಕ್ಕಳೊಂದಿಗೆ ಒಬ್ಬ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದರು. ಸ್ವಲ್ಪ ಸಮಯ ಆ ಮಹಿಳೆಯನ್ನು ಪರೀಕ್ಷಿಸಲಾಯಿತು. ಅವರು ಅರೆಪ್ರಜ್ಞಾವಸ್ಥೆಯಲ್ಲಿರುವ ಕಾರಣ ಮಕ್ಕಳು ಮತ್ತು ತಾಯಿಯ ಬಗ್ಗೆ ಮಾಹಿತಿ ಪಡೆದಿಲ್ಲ. ಪ್ರಜ್ಞೆ ಬಂದ ಕೂಡಲೇ ಮಾಹಿತಿ ಕಲೆಹಾಕಲಾಗುವುದು ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ