HOME » NEWS » National-international » WATCH RAHUL GANDHI JUMPS INTO WATER WHILE VENTURING INTO SEA WITH FISHERMEN IN POLL BOUND KERALA STG MAK

Rahul Gandhi: ಕೇರಳದಲ್ಲಿ ಸಮುದ್ರಕ್ಕೆ ಧುಮುಕಿ ಈಜಾಡಿದ ರಾಹುಲ್ ಗಾಂಧಿ!: ವಿಡಿಯೋ ಸಖತ್ ವೈರಲ್!

ಬೆಳ್ಳಿಗೆ 4.30ರ ಹೊತ್ತಿಗೆ ವಾಡಿ ಬೀಚ್‌ನಿಂದ ತಮ್ಮ ಪ್ರಯಾಣ ಆರಂಭಿಸಿದ ರಾಹುಲ್ ಗಾಂಧಿ ಸಂವಾದದ ಸ್ಥಳಕ್ಕೆ ತಲುಪುವ ಮೊದಲು ಮೀನುಗಾರರೊಂದಿಗೆ 1 ಗಂಟೆಗೂ ಹೆಚ್ಚು ಕಾಲ ಕಳೆದರು. ನೀಲಿ ಬಣ್ಣದ ಟಿ-ಶರ್ಟ್ ಮತ್ತು ಖಾಕಿ ಚಡ್ಡಿಯಲ್ಲಿಯೇ ಸಮುದ್ರಕ್ಕೆ ಇಳಿದರು.

news18-kannada
Updated:February 26, 2021, 3:15 PM IST
Rahul Gandhi: ಕೇರಳದಲ್ಲಿ ಸಮುದ್ರಕ್ಕೆ ಧುಮುಕಿ ಈಜಾಡಿದ ರಾಹುಲ್ ಗಾಂಧಿ!: ವಿಡಿಯೋ ಸಖತ್ ವೈರಲ್!
ಸಮುದ್ರದಲ್ಲಿ ರಾಹುಲ್ ಗಾಂಧಿ.
  • Share this:
ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮಿಳುನಾಡಿನ ವಿಲೇಜ್ ಫುಡ್ ಯೂಟ್ಯೂಬ್ ಚಾನಲ್ ನಲ್ಲಿ ಕಾಣಿಸಿಕೊಂಡು ಬಿರಿಯಾನಿ ಸವಿದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದರು. ಇದೀಗ ಕೇರಳದ ಮೀನುಗಾರರ ಜೊತೆ ಸಮುದ್ರಕ್ಕೆ ಹಾರಿ ಈಜು ಹೊಡೆಯುವ ಮೂಲಕ ಸಂಭ್ರಮಿಸಿದ್ದಾರೆ. ಹೌದು, ಕೇರಳ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರಚಾರದ ನಿಮಿತ್ತ ಕೊಲ್ಲಂ ಜಿಲ್ಲೆಗೆ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ತಂಗಸ್ಸೆರಿ ಸಮುದ್ರದಲ್ಲಿ ಮೀನುಗಾರರೊಂದಿಗೆ ಕೆಲಕಾಲ ಈಜಾಡಿ ಗಮನ ಸೆಳೆದಿದ್ದಾರೆ.

ಸಮುದ್ರ ತೀರಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಬೋಟ್ ನಲ್ಲಿ ಕರೆದೊಯ್ಯಲಾಗುತ್ತದೆ. ಈ ವೇಳೆ ಕೆಲ ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿ ಸಮುದ್ರಕ್ಕೆ ಜಿಗಿದಿದ್ದಾರೆ. ಅವರೊಟ್ಟಿಗೆ ರಾಹುಲ್ ಗಾಂಧಿ ಕೂಡ ದೋಣಿಯಿಂದ ನೀರಿಗೆ ಧುಮುಕಿದ್ದಾರೆ. ಈ ವಿಡಿಯೋವನ್ನು ಸ್ವತಃ ರಾಹುಲ್ ಗಾಂಧಿಯವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram


A post shared by Rahul Gandhi (@rahulgandhi)


‘ಪ್ರತಿದಿನ ಬೆಳಗ್ಗೆ ನಮ್ಮ ರಾಷ್ಟ್ರದ ಮೀನುಗಾರರು ಲಕ್ಷಾಂತರ ಭಾರತೀಯರಿಗೆ ಆಹಾರ ಒದಗಿಸಲು ದಣಿವರಿಯದೆ ಕೆಲಸ ಮಾಡುತ್ತಾರೆ. ಅವರು ಮಾಡುವ ಕೆಲಸ ಕಷ್ಟ ಮತ್ತು ಶ್ರಮದಾಯಕ, ಆದರೆ ನಂಬಲಾಗದಷ್ಟು ಲಾಭದಾಯಕ. ಅವರೊಂದಿಗೆ ಸಮಯ ಕಳೆಯುವುದೇ ಒಂದು ಗೌರವ. ಅವರ ಕಠಿಣ ಪರಿಶ್ರಮಕ್ಕೆ ನಾನು ಸಾಕ್ಷಿಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಳ್ಳಿಗೆ 4.30ರ ಹೊತ್ತಿಗೆ ವಾಡಿ ಬೀಚ್‌ನಿಂದ ತಮ್ಮ ಪ್ರಯಾಣ ಆರಂಭಿಸಿದ ರಾಹುಲ್ ಗಾಂಧಿ ಸಂವಾದದ ಸ್ಥಳಕ್ಕೆ ತಲುಪುವ ಮೊದಲು ಮೀನುಗಾರರೊಂದಿಗೆ 1 ಗಂಟೆಗೂ ಹೆಚ್ಚು ಕಾಲ ಕಳೆದರು. ನೀಲಿ ಬಣ್ಣದ ಟಿ-ಶರ್ಟ್ ಮತ್ತು ಖಾಕಿ ಚಡ್ಡಿಯಲ್ಲಿಯೇ ಸಮುದ್ರಕ್ಕೆ ಇಳಿದರು. ದಡ ತಲುಪುವ ಮುಂಚೆ ದೋಣಿಯಲ್ಲೇ ನಿಂತು ನೋಡುಗರತ್ತ ಕೈ ಬೀಸುತ್ತಿದ್ದರು. ಈಜಾಡಿದ ನಂತರ ತೀರಕ್ಕೆ ಬಂದ ರಾಹುಲ್ ಮೀನುಗಾರರೊಂದಿಗೆ ಕುಶಲೋಪರಿ ವಿಚಾರಿಸಿದರು.

‘ರಾಹುಲ್ ಅವರು ಸಮುದ್ರಕ್ಕಿಳಿಯುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ಅವರು ಸಮುದ್ರಕ್ಕೆ ಹಾರಿದ್ದನ್ನು ನೋಡಿ ನಮಗೆಲ್ಲಾ ಒಂದು ಕ್ಷಣ ಗಾಬರಿಯಾಯಿತು. ಆದರೆ ರಾಹುಲ್ ಅವರು ಬಹಳ ಆರಾಮಾಗಿ ಸಮುದ್ರದಲ್ಲಿ ಈಜಾಡಿದರು. ಅವರಿಗೆ ಚೆನ್ನಾಗಿ ಈಜಲು ಬರುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮೀನುಗಾರರ ಮತ ಸೆಳೆಯುವ ಉದ್ದೇಶದಿಂದ ರಾಹುಲ್ ಗಾಂಧಿ ತಂಗಸ್ಸೆರಿ ಬೀಚ್‌ನಲ್ಲಿ ಸಂವಾದ ನಡೆಸಿದರು. ‘ನಾನು ಯಾವಾಗಲೂ ಮೀನುಗಾರರ ಜೀವನದ ಅನುಭವ ಪಡೆಯಲು ಬಯಸುತ್ತೇನೆ. ಮುಂಜಾನೆ ನಾನು ನನ್ನ ಸಹೋದರರೊಂದಿಗೆ ಸಮುದ್ರಕ್ಕೆ ಹೋದೆ. ಬೋಟ್ ಸಮುದ್ರದೊಳಗೆ ಹೋಗಿ ಹೊರಬರುವ ತನಕವೂ ಅವರು ನನಗಾಗಿ ರಿಸ್ಕ್ ತೆಗೆದುಕೊಂಡರು. ಅವರು ಬಲೆಬೀಸಿ ಕಷ್ಟಪಟ್ಟು ಸಮುದ್ರವನ್ನೆಲ್ಲಾ ತಡಕಾಡಿ ಮೀನು ಹೀಡಿಯುತ್ತಾರೆ. ಅವರು ಹೀಗೆ ಮಾಡಿದಾಗ ಮಾತ್ರ ಬೇರೆಯವರಿಗೆ ಲಾಭ ಸಿಗುತ್ತದೆ’ ಎಂದು ಹೇಳಿದರು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದವರನ್ನು ಮೂರೇ ದಿನದಲ್ಲಿ ಬೇರೆ ಮಾಡಿದ ಮಂಡ್ಯದ ಪೊಲೀಸರು; ಕಣ್ಣೀರಿಡುತ್ತಿರುವ ಪತಿ

‘ನಾವು ಕೂಡ ಮೀನು ಹಿಡಿಯಲು ಪ್ರಯತ್ನಿಸಿದೆವು, ಆದರೆ ಕೇವಲ ಒಂದೇ ಒಂದು ಸಿಕ್ಕಿತು. ನಾವು ಬೀಸಿದ ಬಲೆ ಖಾಲಿಯಾಗಿ ಬಂತು. ಇದರಿಂದ ನನಗೆ ಒಂದು ಒಳ್ಳೆಯ ಅನುಭವವಾಯಿತು. ಕೇಂದ್ರದಲ್ಲಿ ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲು ಪ್ರಯತ್ನಿಸುತ್ತೇನೆ. ಇದರಿಂದ ಮೀನುಗಾರಿಕಾ ಸಮುದಾಯದ ಸಮಸ್ಯೆ ಪರಿಹರಿಸಿಕೊಳ್ಳಬಹುದು. ರಾಜ್ಯದ ಯುಡಿಎಫ್ ನಾಯಕರು ಶೀಘ್ರದಲ್ಲೇ ಮೀನುಗಾರರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಆಳ ಸಮುದ್ರ ಮೀನುಗಾರಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ಎಲ್‌ಡಿಎಫ್ ಸರ್ಕಾರದ ಜೊತೆ ಕಾಂಗ್ರೆಸ್ ಮುಖಂಡರು ಸುದೀರ್ಘವಾಗಿ ಚರ್ಚಿಸಲಿದ್ದಾರೆ. ಮುಂದೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೋ ನೋಡುತ್ತೇನೆ’ ಎಂದು ರಾಹುಲ್ ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಟಿ.ಎನ್.ಪ್ರತಾಪನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಜೊತೆ ಉಪಸ್ಥಿತರಿದ್ದರು.
Published by: MAshok Kumar
First published: February 26, 2021, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories