ಚೆನ್ನೈ(ಫೆ.03): ಕೊರೋನಾ ಸೋಂಕು ವಕ್ಕರಿಸಿದ ಬಳಿಕ ಕೋಟ್ಯಂತರ ರೂ. ಖರ್ಚು ಮಾಡುವ, ಆಡಂಬರ ವಿವಾಹಕ್ಕೆ ಸ್ವಲ್ಪ ಬ್ರೇಕ್ ಬಿದ್ದಿರಬಹುದು. ಆದರೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಹಲವರು ಮದುವೆಯಾಗಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೇ ರೀತಿ, ತಮಿಳುನಾಡಿನ ಚೆನ್ನೈನ ದಂಪತಿ ಸಮುದ್ರದೊಳಗೆ ಮದುವೆ ಮಾಡಿಕೊಂಡಿದ್ದಾರೆ. ನೀಲಂಕರೈ ಕರಾವಳಿಯ ತೀರದಿಂದ 4.5 ಕಿ.ಮೀ ದೂರದಲ್ಲಿ 60 ಅಡಿಗಳ ಆಳದಲ್ಲಿ ಸಪ್ತಪದಿ ತುಳಿದಿದ್ದಾರೆ. ಅರ್ಚಕರು ಸೂಚಿಸಿದ 'ಶುಭ' ಸಮಯವನ್ನು ಅನುಸರಿಸಿ ಬೆಳಗ್ಗೆ 7.30 ರ ಮೊದಲು ನೀರಿಗಿಳಿದ ವಿ. ಚಿನ್ನದುರೈ ಮತ್ತು ಶ್ವೇತಾ ನೀರೊಳಗೇ ಸಾಂಪ್ರದಾಯಿಕ ವಿವಾಹವಾಗಿದ್ದಾರೆ. ಶುಭ ಮಹೂರ್ತದಲ್ಲೇ ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಿದ್ದಾರೆ ರೆ ನವ ದಂಪತಿ.
ಈ ರೀತಿ ವಿಶಿಷ್ಟವಾಗಿ ಮದುವೆಯಾಗಲು ವಧು ಶ್ವೇತಾ ಕಳೆದ ಒಂದು ತಿಂಗಳಿನಿಂದ ಸ್ಕೂಬಾ ಡೈವಿಂಗ್ ಕೋರ್ಸ್ ತರಬೇತಿಗೆ ಹೋಗುತ್ತಿದ್ದರು. ಕೊಯಮತ್ತೂರು ಮೂಲದ ವಧು, ಈ ಇಡೀ ಘಟನೆಯ ಬಗ್ಗೆ ತಾನು ಉತ್ಸುಕಳಾಗಿದ್ದೆ ಮತ್ತು ಅಷ್ಟೇ ಆತಂಕಗೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡಕೋಟಾ ಎಕ್ಸ್ಪ್ರೆಸ್ನಂತಿರುವ ಬಿಜೆಪಿ ಸರ್ಕಾರವನ್ನು ಜನರು ಶೀಘ್ರದಲ್ಲೇ ರಿಪ್ಲೇಸ್ ಮಾಡ್ತಾರೆ; ವಿಧಾನಸಭೆಯಲ್ಲಿ ಗುಡುಗಿದ ಸಿದ್ದರಾಮಯ್ಯ
ಆಕೆಯ ಪೋಷಕರು ಸಹ ಆತಂಕಕ್ಕೊಳಗಾಗಿದ್ದರು. ಆದರೆ, ವಧು ವರರಿಗೆ ನೆರವಾಗಲು ಒಟ್ಟು ಎಂಟು ಡೈವರ್ಗಳು ಇದ್ದರು ಎಂದು ತಿಳಿದುಬಂದಿದೆ. ಮತ್ತೂ ವಿಶೇಷವೆಂದರೆ, ಅವರು ಕಳೆದ ಒಂದು ವಾರದಿಂದ ಈ ರೀತಿ ತಾಳಿ ಕಟ್ಟಲು ಪ್ರಯತ್ನಿಸುತ್ತಿದ್ದರೂ ಸಫಲವಾಗಿರಲಿಲ್ಲ. ಇದಕ್ಕೆ ಕಾರಣ ಸಮುದ್ರದೊಳಗಿನ ಅಲೆಗಳು ಎನ್ನಲಾಗಿದೆ.
ತಿರುವಣ್ಣಾಮಲೈ ಮೂಲದ ವರ, 12 ವರ್ಷಗಳಿಂದ ಸ್ಕೂಬಾ ಡೈವಿಂಗ್ ಮಾಡುತ್ತಿದ್ದು, ಈ ರೀತಿ ವಿವಾಹವಾಗಲು ವರನ ಇಚ್ಛೆಯಂತೆ ವರನ ಕುಟುಂಬದವರು ಸೂಚಿಸಿದ್ದರು. ದಂಪತಿ 45 ನಿಮಿಷಗಳ ಕಾಲ ನೀರೊಳಗಿನ ಸಮಯವನ್ನು ಕಳೆದಿದ್ದು, ಈ ವೇಳೆ ವರ - ವಧುವಿಗೆ ಪ್ರಪೋಸ್ ಕೂಡ ಮಾಡಿದ್ದಾರೆ.
ವಾಸ್ತವವಾಗಿ, ವಿವಾಹದ ದಿನಾಂಕ ಮತ್ತು ಸಮಯವನ್ನು ಆಮಂತ್ರಣ ಪತ್ರಿಕೆಯಲ್ಲಿ ಭರ್ತಿ ಮಾಡಿರಲಿಲ್ಲ. ಬೆಳಗ್ಗೆಯವರೆಗೆ ಅದನ್ನು ಖಾಲಿ ಬಿಡಲಾಗಿತ್ತು. ನೀರು ಶಾಂತವಾಗಿದೆ ಎಂದು ಡೈವರ್ಗಳು ದೃಢಪಡಿಸಿದ ಬಳಿಕವೇ ನೀರೊಳಗೆ ಈ ರೀತಿ ವಿಶಿಷ್ಟವಾಗಿ ವಿವಾಹ ಬಂಧನಕ್ಕೊಳಗಾಗಿದ್ದಾರೆ ನವ ಜೋಡಿ.
ಒದ್ದೆಯಾದ ಬಟ್ಟೆಯಲ್ಲಿ ವರ - ವಧು ಪ್ರಾಕ್ಟೀಸ್ ಮಾಡುತ್ತಿದ್ದರಾದರೂ, ಸಾಂಪ್ರದಾಯಿಕ ಉಡುಪಿನಲ್ಲೇ ಮದುವೆಯಾಗಿದ್ದಾರೆ. ಶ್ವೇತಾ ಕೂರೈ ಸೀರೆಯನ್ನು ಧರಿಸಿದ್ದರೆ, ಚಿನ್ನದುರೈ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಈ ಮದುವೆ ಸಮಾರಂಭವನ್ನು ನೀರೊಳಗೆ ಚಿತ್ರೀಕರಣವನ್ನೂ ಮಾಡಲಾಗಿದೆ. ತಾಳಿ ಕಟ್ಟಿದ ಬಳಿಕ ಹರ್ಷೋದ್ಗಾರದೊಂದಿಗೆ ನವ ವಧು - ವರ ನೀರೊಳಗಿಂದ ಹೊರಬಂದಿದ್ದಾರೆ. ನಂತರ ಇತರ ವಿವಾಹ ವಿಧಿಗಳು ನಡೆದಿವೆ.
ಮದುವೆ ದಿನಾಂಕ, ಸಮಯದ ಬಗ್ಗೆ ಖಚಿತತೆ ಇರದ ಕಾರಣ ದಂಪತಿ, ತಮ್ಮ ಅನೇಕ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಆಹ್ವಾನಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಈ ತಿಂಗಳ ಕೊನೆಯಲ್ಲಿ ಶೋಲಿಂಗನಲ್ಲೂರಿನಲ್ಲಿ ಆರತಕ್ಷತೆ ಸಮಾರಂಭಕ್ಕೆ ಹಲವರನ್ನು ಆಹ್ವಾನಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಇನ್ನು, ನೀರೊಳಗೆ ಹಲವು ವಿವಾಹಗಳು ಸದ್ಯದಲ್ಲೇ ಜರುಗಲಿವೆ ಎಂಬ ವರದಿಗಳೂ ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ