ನಾವು ಚಿಕ್ಕವರಾಗಿದ್ದಾಗ ರಸ್ತೆಗಳಲ್ಲಿ ಹೋಗುವಾಗ ಬೀದಿ ನಾಟಕಗಳು (Street Drama) ನಡೆಯುತ್ತಿದ್ದುದ್ದನ್ನು ನೋಡುತ್ತಿದ್ದೆವು. ಆದರೆ ಇತ್ತೀಚೆಗೆ ಅಂತಹ ನಾಟಕಗಳು ತೀರಾ ಕಡಿಮೆ ಆಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲಿ ದೇವರ ಪಾತ್ರವನ್ನು ಮಾಡಲು ಜನರು ಆ ದೇವರಂತೆಯೇ ವೇಷವನ್ನು ಧರಿಸಿಕೊಂಡು ನಾಟಕ ಮಾಡುವುದನ್ನು ನಾವೆಲ್ಲಾ ಒಮ್ಮೆಯಾದರೂ ರಸ್ತೆ ಬದಿಯಲ್ಲಿ ನಿಂತು ನೋಡಿರುತ್ತೇವೆ. ನೋಡಿ ಎಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದಾರೆ ಪಾತ್ರಧಾರಿಗಳು (Characters) ಅಂತ ಮನಸ್ಸಿನಲ್ಲಿ ಅಂದು ಕೊಂಡಿರುವುದು ಉಂಟು. ಆದರೆ ಹೀಗೆ ದೇವರ ವೇಷಗಳನ್ನು ಧರಿಸಿಕೊಂಡು ಬೀದಿ ನಾಟಕಗಳಲ್ಲಿ ಭಾಗವಹಿಸುವುದು ಅಪರಾಧವೇ ಅಥವಾ ಈ ರೀತಿಯ ನಾಟಕಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ (Harm to Religious Sentiments) ಅಥವಾ ನೋವು ಉಂಟು ಮಾಡುತ್ತವೆಯೇ ಎಂಬ ಪ್ರಶ್ನೆಗಳು ನಮ್ಮ ತಲೆಯಲ್ಲಿ ಮೂಡುವುದು ಸಹಜ.
ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಬೀದಿ ನಾಟಕ
ಅರೇ ಈ ವಿಷಯದ ಬಗ್ಗೆ ಈಗೇಕೆ ಮಾತು ಅಂತೀರಾ? ಜುಲೈ 10ನೇ ತಾರೀಖು ಅಸ್ಸಾಂನ ನಾಗೌನ್ ನಲ್ಲಿ ನಡೆದ ಒಂದು ನುಕ್ಕಡ್ ನಾಟಕ ಎಂದರೆ ಬೀದಿ ನಾಟಕದಲ್ಲಿ ಶಿವನ ವೇಷ ಧರಿಸಿಕೊಂಡು ಪಾತ್ರ ಮಾಡಿದ್ದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾನೆ ಎಂಬ ಆರೋಪದ ಮೇಲೆ 38 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಈ ವ್ಯಕ್ತಿಯನ್ನು ನಾಗೌನ್ ನ ನೊನೊಯಿ ಗ್ರಾಮದ ಬಿರಿಂಚಿ ಬೋರಾ ಎಂದು ಗುರುತಿಸಲಾಗಿದ್ದು, ಇವರು ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.
I agree with you @NavroopSingh_ that
Nukad Natak on current issues is not blasphemous. Dressing up is not a crime unless offensive material is said.
Appropriate order has been issued to @nagaonpolice https://t.co/Fivh7KMX5L
— Himanta Biswa Sarma (@himantabiswa) July 10, 2022
ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಯುವ ಮೋರ್ಚಾ ಮತ್ತು ಇತರ ಗುಂಪುಗಳು ಸಲ್ಲಿಸಿದ ಪೊಲೀಸ್ ದೂರಿನ ಆಧಾರದ ಮೇಲೆ ಈ ವ್ಯಕ್ತಿಯನ್ನು ಬಂಧಿಸಲಾಗಿತ್ತು. ನಂತರ ಆ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರಿಗೆ ಖುದ್ದು ಅಸ್ಸಾಂ ನ ಮುಖ್ಯಮಂತ್ರಿಗಳೇ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ.
ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದೇನು ನೋಡಿ
ಅಸ್ಸಾಂ ಮುಖ್ಯಮಂತ್ರಿಯಾದ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಪ್ರಸ್ತುತ ವಿಷಯಗಳ ಬಗ್ಗೆ ಬೀದಿ ನಾಟಕವನ್ನು ಅಭಿನಯಿಸುವುದು ಧರ್ಮನಿಂದನೆ ಅಲ್ಲ ಮತ್ತು ಇದು ಅಪರಾಧವಲ್ಲ ಎಂದು ಹೇಳಿದರು. ಈ ಕುರಿತು "ಆಕ್ರಮಣಕಾರಿ ಮಾತುಗಳನ್ನು ಆಡದ ಹೊರತು ದೇವರ ರೀತಿಯಲ್ಲಿ ಉಡುಗೆ ತೊಡುಗೆ ಧರಿಸುವುದು ಅಪರಾಧವಲ್ಲ. ನಾಗೌನ್ ಪೊಲೀಸರಿಗೆ ಸೂಕ್ತ ಆದೇಶವನ್ನು ನೀಡಲಾಗಿದೆ" ಎಂದು ಅವರೇ ಖುದ್ದಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Nupur Sharma Row: ಅಂಗಡಿಗಳಲ್ಲಿ ಆಯುಧ ಇಡ್ಕೊಳ್ಳಿ ಎಂದ ಬಿಜೆಪಿ ಶಾಸಕ! ವಿವಾದ ಸೃಷ್ಟಿಸಿದ ಹೇಳಿಕೆ
"ನುಕ್ಕಡ್ ನಾಟಕದಲ್ಲಿ ಶಿವನ ಪಾತ್ರ ನಿರ್ವಹಿಸಿದ ವ್ಯಕ್ತಿಯನ್ನು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ" ಎಂದು ಸದರ್ ಪಿಎಸ್ ಉಸ್ತುವಾರಿ ಮನೋಜ್ ರಾಜವಂಶಿ ತಿಳಿಸಿದ್ದಾರೆ. "ಆದರೆ ಆ ವ್ಯಕ್ತಿಗೆ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅವರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ' ಎಂದು ನಾಗೌನ್ ನ ಪೊಲೀಸ್ ಅಧೀಕ್ಷಕರಾದ ಲೀನಾ ಡೋಲೆ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಂಧನ ಬೆಲೆ ಹೆಚ್ಚಳ ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ಧ ಪ್ರತಿಭಟನೆ
ಬಿಜೆಪಿ ಐಟಿ ಮಾಧ್ಯಮ ಘಟಕದ ಸಂಚಾಲಕ ಸಾಹಿಂದರ್ ಕುಮಾರ್ ಅವರು ಈ ಘಟನೆಯ ಬಗ್ಗೆ ಮಾತನಾಡಿ "ಅವರು ಶಿವ ಮತ್ತು ಪಾರ್ವತಿ ದೇವಿಯ ವೇಷ ಧರಿಸಿದ್ದಾರೆ. ನೀವು ಪ್ರತಿಭಟಿಸಲು ಬಯಸಿದರೆ, ಒಂದು ಸ್ಥಳದಲ್ಲಿ ಕುಳಿತುಕೊಂಡು ಅದನ್ನು ಮಾಡಿ. ನಿಮ್ಮ ಪ್ರತಿಭಟನೆ ದೇವತೆಗಳಂತೆ ವೇಷ ಭೂಷಣ ಧರಿಸಿ ಮಾಡುವ ಕ್ರಿಯೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದರು. ಈ ಬೀದಿ ನಾಟಕದಲ್ಲಿ ಈ ವ್ಯಕ್ತಿ ಶಿವನ ವೇಷ ಧರಿಸಿಕೊಂಡು ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ಧ ಪ್ರತಿಭಟಿಸುತ್ತಿದ್ದನು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Bomb Hurled At RSS Office: ಆರ್ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ
ಪೊಲೀಸ್ ಠಾಣೆಯಿಂದ ಹೊರ ಬಂದ ನಂತರ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೋರಾ ಅವರು ತಮ್ಮ ಬೀದಿ ನಾಟಕದ ಮುಖ್ಯ ಉದ್ದೇಶ ಬೆಲೆ ಏರಿಕೆಯನ್ನು ಎತ್ತಿ ತೋರಿಸುವುದಾಗಿತ್ತು ಮತ್ತು ಯಾರ ನಂಬಿಕೆಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ