ನವದೆಹಲಿ: ತ್ರಿಪುರಾ (Tripura) ವಿಧಾನಸಭೆಯ 60 ಸ್ಥಾನಗಳಿಗೆ ನಡೆಯುವ ಚುನಾವಣೆ (Assembly Election 2023) ಇಂದು (ಗುರುವಾರ) ನಡೆಯಲಿದೆ. ಚುನಾವಣೆಯು ಶಾಂತಿಯುತ ಮತ್ತು ಪಾರದರ್ಶಕತೆಯಿಂದ ನಡೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಚುನಾವಣಾಧಿಕಾರಿಗಳು (Election Commission) ಮಾಡಿಕೊಂಡಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ ನಾಲ್ಕರ ತನಕ ಮತದಾನ ಪ್ರಕ್ರಿಯೆ (Voting Process) ನಡೆಯಲಿದೆ.
ರಾಜ್ಯದ ಒಟ್ಟು 3337 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಆ ಪೈಕಿ ಒಟ್ಟು 1100 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 28 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಚುನಾವಣೆಯನ್ನು ಮುಕ್ತ, ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸಲು ಅಧಿಕಾರಿಗಳು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಹೀಗಾಗಿ ಮತಗಟ್ಟೆಗಳಲ್ಲಿ ಒಟ್ಟು 31000 ಸಿಬ್ಬಂದಿ, 25000 ಕೇಂದ್ರ ಪಡೆಗಳ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸಶಸ್ತ್ರ ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಗಿಟ್ಟೆ ಕಿರಣ್‌ಕುಮಾರ್ ದಿನಕರ್ರೊ ತಿಳಿಸಿದ್ದಾರೆ.
ಇದನ್ನೂ ಓದಿ: Amit Shah: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಳಿಯೇ ಇಲ್ಲ, ಕರ್ನಾಟಕದಲ್ಲೂ ಜಯ ನಮ್ಮದೇ ಎಂದ ಅಮಿತ್ ಶಾ
ಬಿಜೆಪಿಗೆ ಎರಡನೇ ಅಗ್ನಿಪರೀಕ್ಷೆ
ತ್ರಿಪುರಾ ರಾಜ್ಯದಲ್ಲಿ ಸುದೀರ್ಘ 25 ವರ್ಷಗಳ ಆಡಳಿತವನ್ನು 2018ರ ಚುನಾವಣೆಯಲ್ಲಿ ಕೊನೆಗೊಳಿಸಿದ್ದ ಎಡಪಕ್ಷಗಳು, ಅಚ್ಚರಿಯಂತೆ ಚುನಾವಣೆಯಲ್ಲಿ ಸೋತ ಪರಿಣಾಮ ಬಿಜೆಪಿಗೆ ಅಧಿಕಾರಕ್ಕೆ ಬರುವಂತಾಗಿತ್ತು. ಬಿಜೆಪಿಯಿಂದ ಮೊದಲ ತ್ರಿಪುರಾ ಮುಖ್ಯಮಂತ್ರಿ ಆಗಿ ಬಿಪ್ಲಬ್ ದೇಬ್ ಅವರು ಆಯ್ಕೆಯಾದರು. ಆದರೆ ಬಿಜೆಪಿ ಕಳೆದ ವರ್ಷ ಮೇ ತಿಂಗಳಲ್ಲಿ ಸಿಎಂ ಬದಲಾವಣೆ ಮಾಡಿ ಮಾಣಿಕ ಷಾ ಅವರನ್ನು ನೂತನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿತು. ಸದ್ಯ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯು ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಪ್ರಚಾರ ನಡೆಸಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಹೀನಾಯ ಸೋತರೂ ಮತ ಹಂಚಿಕೆಯಲ್ಲಿ ಮುಂದಿದ್ದ ಸಿಪಿಎಂ
ಆಡಳಿತಾರೂಢ ಸಿಪಿಎಂ ಪಕ್ಷ ಕಳೆದ ಬಾರಿಯ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಕೇವಲ 16 ಕ್ಷೇತ್ರಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿತ್ತು. ಆದರೆ ಮತ ಹಂಚಿಕೆಯಲ್ಲಿ ಹಿಂದುಳಿದಿರಲಿಲ್ಲ. ಸಿಪಿಎಂ ಶೇಕಡಾ 42.22 ಮತಗಳನ್ನು ಗಳಿಸಿದರೆ, ಬಿಜೆಪಿ ಶೇ.43.59 ಮತಗಳನ್ನು ಗಳಿಸಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆ ಕೂಡ ಬಿಜೆಪಿ ಮತ್ತು ಸಿಪಿಎಂ ನಡುವಿನ ಹೋರಾಟಗಳಾಗಿ ರೂಪುಗೊಂಡಿದ್ದು, ಇತರ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಎದುರು ನೋಡುತ್ತಿದೆ.
ಇದನ್ನೂ ಓದಿ: Supreme Court: ಒಬ್ಬ ಅಭ್ಯರ್ಥಿ ಏಕಕಾಲಕ್ಕೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು: ಸುಪ್ರೀಂ ಕೋರ್ಟ್
ಇನ್ನು ತ್ರಿಪುರಾ ರಾಜ್ಯದಲ್ಲಿ ಈ ಬಾರಿ ಒಟ್ಟು 28.13 ಲಕ್ಷ ಮತದಾರರಿದ್ದು, ಆ ಪೈಕಿ 13.53 ಲಕ್ಷ ಮಹಿಳಾ ಮತದಾರರಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ 259 ಅಭ್ಯರ್ಥಿಗಳ ಪೈಕಿ ಮಹಿಳಾ ಅಭ್ಯರ್ಥಿಗಳು ಕೇವಲ 20 ಮಾತ್ರ. ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಆಗಮಿಸಿ ಗಲಭೆ ಉಂಟು ಮಾಡುವುದನ್ನು ತಡೆಯಲು ಅಂತರಾಷ್ಟ್ರೀಯ ಮತ್ತು ಅಂತರ್‌ರಾಜ್ಯ ಗಡಿಗಳನ್ನು ಕೂಡ ಮುಚ್ಚಲಾಗಿದೆ.
ಬಿಜೆಪಿ 55 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 13 ಸ್ಥಾನಗಳಲ್ಲಿ ಸ್ಪರ್ಧೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 55 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮಿತ್ರ ಪಕ್ಷ ಐಪಿಎಫ್‌ಟಿ ಆರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಆ ಪೈಕಿ ಒಂದು ಸ್ಥಾನದಲ್ಲಿ ಪರಸ್ಪರ ಒಪ್ಪಿತ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಸಿಪಿಎಂ 47 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ ಅದರ ಮಿತ್ರ ಪಕ್ಷ ಕಾಂಗ್ರೆಸ್ 13 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ತಿಪ್ರಾ ಮೋಥಾ ಪಕ್ಷ 42, ತೃಣಮೂಲ ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ 58 ಮಂದಿ ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಬಾರಿಯ ಚುನಾವಣೆ ಆಡಳಿತ ಮತ್ತು ಪ್ರತಿ ಪಕ್ಷಗಳ ಮಧ್ಯೆ ಕಠಿಣ ಪೈಪೋಟಿ ನೀಡುತ್ತಿರುವುದರಿಂದ ಎರಡೂ ಪಕ್ಷಗಳು ತ್ರಿಪುರಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ