ಜೈಪುರ (ಜುಲೈ 27); ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ಸಂಖ್ಯಾಬಲ ಪರೀಕ್ಷೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದರೆ, ರಾಜಸ್ಥಾನದಲ್ಲಿರುವ ಎಲ್ಲಾ 6 ಜನ ಬಹುಜನ ಸಮಾಜವಾದಿ ಪಕ್ಷದ ಶಾಸಕರು ಕಾಂಗ್ರೆಸ್ ವಿರುದ್ಧವಾಗಿ ಮತ ಚಲಾಯಿಸಬೇಕು ಎಂದು ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿ ಇಂದು ಆದೇಶ ಹೊರಡಿಸಿದ್ದಾರೆ.
ಸಚಿನ್ ಪೈಲಟ್ ಬೆಂಬಲಿತ 18 ಜನ ಶಾಸಕರು ಈಗಾಗಲೇ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ನಿಂತಿದ್ದಾರೆ. ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯ ನಂತರ ಬಿಎಎಸ್‌ಪಿ ಶಾಸಕರು ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಇದೀಗ ಬಿಎಸ್‌ಪಿ ಶಾಸಕರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕು ಎಂದು ಮಾಯಾವತಿ ಆದೇಶಿಸಿರುವುದು ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ಹೇಳಲಾಗುತ್ತಿದೆ.
ಆರ್. ಗುಧಾ, ಲಖನ್ ಸಿಂಗ್, ದೀಪ್ ಚಂದ್, ಜೆ.ಎಸ್. ಅವನಾ, ಸಂದೀಪ್ ಕುಮಾರ್ ಮತ್ತು ವಾಜಿಬ್ ಅಲಿ ಅವರಿಗೆ ಬಿಎಸ್ಪಿ ಪಕ್ಷ ಭಾನುವಾರವೇ ನೊಟೀಸ್ ನೀಡಿದ್ದು, ವಿಪ್ ಜಾರಿ ಮಾಡಿದೆ. ಬಿಎಸ್‌ಪಿ ರಾಷ್ಟ್ರೀಯ ಪಕ್ಷವಾಗಿದ್ದು ಪಕ್ಷದ ಶಾಸಕರು ವಿಪ್ ಉಲ್ಲಂಘಿಸಿದರೆ ಶಾಸಕರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಲಾಗುವುದು ಎಂದು ತಿಳಿಸಿದೆ.
ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಇದೀಗ ಜುಲೈ 31ರಂದು ಬಹುಮತ ಸಾಬೀತುಪಡಿಸಲು ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಮಹಡಿ ಪರೀಕ್ಷೆಯಲ್ಲಿ ಬಹುಮತ ಸಾಬೀತುಪಡಿಸಿದರೆ, ಮುಂದಿನ ಆರು ತಿಂಗಳ ಕಾಲ ಸರ್ಕಾರಕ್ಕೆ ಯಾವುದೇ ಬೆದರಿಕೆ ಇರುವುದಿಲ್ಲ.
ಆದರೆ, ಅಷ್ಟರಲ್ಲಿ ತಮ್ಮ ಪಕ್ಷದ 18 ಜನ ರೆಬೆಲ್ ಶಾಸಕರನ್ನು ಕಾಂಗ್ರೆಸ್ ಅನರ್ಹಗೊಳಿಸಲೇಬೇಕು. ಇಲ್ಲದಿದ್ದರೆ ಇವರು ಬಹುಮತ ಯಾಚನೆ ವೇಳೆ ಕಾಂಗ್ರೆಸ್ ವಿರುದ್ಧವಾಗಿ ಮತ ಚಲಾಯಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇವರು ಮತ ಚಲಾವಣೆ ಮಾಡಿದ ನಂತರ ಅನರ್ಹಗೊಳಿಸಿದರೂ ಇವರ ಮತಗಳನ್ನು ಎಣಿಕೆಗೆ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : ’ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ‘: ಇಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ