ಬೆಂಗಳೂರು (ಜ. 27): ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದ ಆರೋಪದಲ್ಲಿ 4 ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ (ಶಶಿಕಲಾ ನಟರಾಜನ್) ಇಂದು ಬಿಡುಗಡೆಯಾಗಿದ್ದಾರೆ. 2021ರ ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ, ಇದೇ ಸಮಯದಲ್ಲಿ ಜೈಲಿನಿಂದ ರಿಲೀಸ್ ಆಗಿರುವ ಶಶಿಕಲಾ ಅವರ ಎಂಟ್ರಿಯಿಂದ ತಮಿಳುನಾಡಿನ ರಾಜಕೀಯ ಲೆಕ್ಕಾಚಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅನಾರೋಗ್ಯದ ಕಾರಣದಿಂದ ಅವರು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ರಾಜಕೀಯದಲ್ಲಿ ಸಕ್ರಿಯರಾಗುವುದು ಒಳ್ಳೆಯದಲ್ಲ ಎಂದು ವೈದ್ಯರು ಕೂಡ ರಜನಿಕಾಂತ್ ಅವರಿಗೆ ಸಲಹೆ ನೀಡಿದ್ದರು. ಆದರೂ ರಜನಿಕಾಂತ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಪಕ್ಕಾ ಎನ್ನಲಾಗಿತ್ತು. ಆದರೆ, ರಾಜಕೀಯ ಪಕ್ಷ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿದರೂ ಪ್ರಚಾರ ಮಾಡಿ, ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ. ಸೋಷಿಯಲ್ ಮೀಡಿಯಾ ಮೇಲೆ ಅವಲಂಬಿತರಾಗಿ ರಾಜಕೀಯದ ಪ್ರಚಾರ ಮಾಡಲು ಆಗುವುದಿಲ್ಲ. ಹೀಗಾಗಿ, ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಜನಿಕಾಂತ್ ತಿಳಿಸಿದ್ದರು.
ಅನಾರೋಗ್ಯದ ಕಾರಣದಿಂದ ರಜನಿಕಾಂತ್ ರಾಜಕೀಯ ಪ್ರವೇಶದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ರೀಎಂಟ್ರಿ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜಯಲಲಿತಾ ಅವರ ಆಪ್ತೆಯಾಗಿದ್ದ ಶಶಿಕಲಾ ಸದ್ಯಕ್ಕೆ ಕೊರೋನಾದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ವಾರ ಅವರನ್ನು ಡಿಸ್ಚಾರ್ಜ್ ಮಾಡಿದ ನಂತರ ಚೆನ್ನೈಗೆ ತೆರಳಲಿದ್ದಾರೆ.
ಬಿಜೆಪಿ ಹೊಸ ಲೆಕ್ಕಾಚಾರ:
ಶಶಿಕಲಾ ಮೂಲತಃ ತಂಜಾವೂರಿನ ಮನ್ನಾರ್ಗುಡಿಯವರು. ಎಐಎಡಿಎಂಕೆ ಪಕ್ಷದಲ್ಲಿ ಹಿಡಿತ ಸಾಧಿಸಿರುವ ತೇವರ್ ಸಮುದಾಯದವರಾದ ಶಶಿಕಲಾ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಕ್ರಿಯ ರಾಜಕಾರಣಕ್ಕೆ ಮರಳುವ ಸಾಧ್ಯತೆಗಳಿವೆ. ಎಐಎಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಈಗಾಗಲೇ ತಮಿಳುನಾಡಿನಲ್ಲಿ ಚುನಾವಣಾ ಲೆಕ್ಕಾಚಾರ ಶುರು ಮಾಡಿದೆ.
ಜೈಲಿಗೆ ಹೋಗಿ 4 ವರ್ಷ ಶಿಕ್ಷೆ ಅನುಭವಿಸಿರುವ ಅನುಕಂಪ ಮತ್ತು ಜಯಲಲಿತಾ ಅವರ ಆಪ್ತೆಯೆಂಬ ಕಾರಣವನ್ನೇ ಮುಂದಿಟ್ಟುಕೊಂಡು ಶಶಿಕಲಾ ಅವರ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ. ಆದರೆ, ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಅವರನ್ನು ತೆಗೆದುಹಾಕಿಲ್ಲವಾದರೂ ಅವರನ್ನು ಎಐಎಡಿಎಂಕೆ ಪಕ್ಷದಲ್ಲಿ ಉಳಿಸಿಕೊಳ್ಳಬೇಕಾ, ಬೇಡವಾ ಎಂಬ ಬಗ್ಗೆ ಪಕ್ಷದ ವರಿಷ್ಠರಲ್ಲೇ ಪರ-ವಿರೋಧದ ಅಭಿಪ್ರಾಯವಿದೆ. ಈ ಬಗ್ಗೆ ಇನ್ನೂ ನಿಖರವಾದ ನಿರ್ಧಾರ ಹೊರಬಿದ್ದಿಲ್ಲ.
ಇದನ್ನೂ ಓದಿ: VK Sasikala: ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ರಿಲೀಸ್; 1 ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 4 ವರ್ಷಗಳ ಜೈಲು ಶಿಕ್ಷೆಯನ್ನು ಮುಗಿಸಿರುವ ಶಶಿಕಲಾ ಅವರನ್ನು ಇಂದು ರಿಲೀಸ್ ಮಾಡಲಾಗಿದೆ. ಆದರೆ, ಅವರಿಗೆ ಕೊರೋನಾ ಸೋಂಕು ತಗುಲಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಜೈಲಿನಿಂದ ಬಿಡುಗಡೆಯಾದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಇನ್ನೂ 8 ದಿನಗಳು ಕಾಯಬೇಕಾಗಿದೆ.
ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಯಲ್ಲಿರುವ ಶಶಿಕಲಾ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಇನ್ನೂ 8 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ವೈದ್ಯರು ತಿಳಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಶಶಿಕಲಾ ಅವರ ರಿಲೀಸ್ನಿಂದ ಚುನಾವಣೆಯ ಫಲಿತಾಂಶದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ವಿ.ಕೆ ಶಶಿಕಲಾ ಜೊತೆಯಲ್ಲಿ ಅವರ ಸಂಬಂಧಿ ಇಳವರಸಿ ಮತ್ತು ಸೋದರಳಿಯ ಸುಧಾಕರ್ ಅವರ ಜೈಲುವಾಸ ಕೂಡ ಇಂದಿಗೆ ಮುಕ್ತಾಯವಾಗಿದೆ. ಶಶಿಕಲಾ ಅವರೊಂದಿಗೆ ಇಳವರಸಿ ಅವರಿಗೂ ಕೊರೋನಾ ಸೋಂಕು ತಗುಲಿದೆ. ಹೀಗಾಗಿ, ಅವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2017ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಸೇರಿ ಮತ್ತಿಬ್ಬರಿಗೆ 10 ಕೋಟಿ ರೂ. ದಂಡ, 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ನ್ಯಾಯಾಲಯ ವಿಧಿಸಿದ್ದ 10 ಕೋಟಿ ರೂ. ದಂಡವನ್ನು ಶಶಿಕಲಾ ಅವರ ಸಂಬಂಧಿಕರು ಪಾವತಿಸಿದ್ದಾರೆ. ಹೀಗಾಗಿ, ಅವರನ್ನು ಇಂದು ಜೈಲಿನಿಂದ ರಿಲೀಸ್ ಮಾಡಲಾಗಿದೆ.
1984ರಲ್ಲಿ ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ತಮ್ಮ ಆಪ್ತೆಯಾಗಿದ್ದ ಶಶಿಕಲಾ ಅವರನ್ನು ರಾಜಕೀಯಕ್ಕೆ ಪರಿಚಯಿಸಿದ್ದರು. ಜಯಲಲಿತಾ ಅವರೊಂದಿಗೆ ಆಪ್ತವಾಗಿದ್ದ ಶಶಿಕಲಾ ಜೊತೆಗಿನ ಒಡನಾಟದ ಬಗ್ಗೆ ಸಾಕಷ್ಟು ಚರ್ಚೆಗಳು, ವಿವಾದಗಳು ಕೂಡ ಏರ್ಪಟ್ಟಿದ್ದವು. ಜಯಲಲಿತಾ ಸಾವಿನ ಹಿಂದೆಯೂ ಶಶಿಕಲಾ ಕೈವಾಡವಿದೆ ಎಂಬ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ