ಚೆನ್ನೈ (ಮೇ 30): ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ (ಶಶಿಕಲಾ ನಟರಾಜನ್) ಸ್ಪರ್ಧೆ ಮಾಡುವುದು ಖಚಿತ ಎನ್ನಲಾಗಿತ್ತು. ಆದರೆ, ಅಚ್ಚರಿಯೆಂಬಂತೆ ಚುನಾವಣೆಗೂ ಮೊದಲೇ ಶಶಿಕಲಾ ರಾಜಕೀಯದಿಂದ ದೂರ ಸರಿದಿರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಇದೀಗ ಶಶಿಕಲಾ ಅವರ ಆಡಿಯೋವೊಂದು ವೈರಲ್ ಆಗಿದ್ದು, ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ ಶಶಿಕಲಾ ನಟರಾಜನ್ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರಾ? ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.
ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿರುವ ಎಐಎಡಿಎಂಕೆ ಪಕ್ಷದ ಕ್ಯಾಡರ್ ಜೊತೆ ಶಶಿಕಲಾ ನಟರಾಜನ್ ನಡೆಸಿರುವ ಸಂಭಾಷಣೆಯ ಆಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಕೊರೋನಾ ಆರ್ಭಟ ಕಡಿಮೆಯಾದ ಬಳಿಕ ನಾನು ರಾಜಕೀಯಕ್ಕೆ ಮರಳುತ್ತೇನೆ ಎಂದು ಶಶಿಕಲಾ ಹೇಳಿರುವ ಆಡಿಯೋ ಸಾಕಷ್ಟು ಕುತೂಹಲ ಮೂಡಿಸಿದೆ. ಪಕ್ಷದ ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ಮತ್ತೆ ತಮಿಳುನಾಡಿನಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸೋಣ ಎಂದು ಶಶಿಕಲಾ ಮಾತನಾಡಿರುವ ಆಡಿಯೋದಿಂದಾಗಿ ಅವರು ಮತ್ತೆ ರಾಜಕೀಯಕ್ಕೆ ಮರಳುವುದು ಖಚಿತ ಎನ್ನಲಾಗುತ್ತಿದೆ. ಆ ಆಡಿಯೋ ಶಶಿಕಲಾ ಅವರದ್ದೇ ಹೌದಾ? ಎಂಬ ಬಗ್ಗೆಯೂ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 4 ವರ್ಷ ಶಿಕ್ಷೆಗೆ ಒಳಗಾಗಿದ್ದ ವಿ.ಕೆ. ಶಶಿಕಲಾ ಜನವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದರು. ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಚೆನ್ನೈವರೆಗೂ ಭಾರೀ ಮೆರವಣಿಗೆ ಮೂಲಕ ಕರೆದೊಯ್ಯಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡುವುದು ಖಚಿತ ಎನ್ನಲಾಗಿತ್ತು. AIADMK ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಬಳಿಕ ಚಿನ್ನಮ್ಮ ಶಶಿಕಲಾ ಅವರೇ ಹೊಸದೊಂದು ಪಕ್ಷ ಕಟ್ಟಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ತಾವು ರಾಜಕೀಯ ಮತ್ತು ಸಾರ್ವಜನಿಕ ಜೀವನವನ್ನು ತೊರೆಯಲು ನಿರ್ಧರಿಸುವುದಾಗಿ ಘೋಷಿಸುವ ಮೂಲಕ ಶಶಿಕಲಾ ಶಾಕ್ ನೀಡಿದ್ದರು.
ಇದನ್ನೂ ಓದಿ: Karnataka Politics: ಆತ ಬೊಗಳುತ್ತಲೇ ಇರಲಿ, ಯಡಿಯೂರಪ್ಪನವರೇ ನಮ್ಮ ನಾಯಕ; ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಜಯಲಲಿತಾ ಅವರು ಬದುಕಿದ್ದಾಗಲೂ ನಾನು ಯಾವುದೇ ಅಧಿಕಾರ, ಸ್ಥಾನಮಾನದ ಮೇಲೆ ಆಸೆ-ಆಸಕ್ತಿ ಹೊಂದಿರಲಿಲ್ಲ. ಆಕೆ ಮೃತಪಟ್ಟ ನಂತರವೂ ನಾನು ಹಾಗೆಯೇ ಇರಲು ಬಯಸಿದ್ದೇನೆ. ಹೀಗಾಗಿ ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ. ಎಐಎಡಿಎಂಕೆ ಬೆಂಬಲಿಗರು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಜಯಲಲಿತಾ ಹಾಕಿಕೊಟ್ಟ ಪರಂಪರೆಯನ್ನು ಕಾರ್ಯಕರ್ತರು ಮುಂದುವರೆಸಬೇಕು ಎಂದು ಶಶಿಕಲಾ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು.
2017ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಸೇರಿ ಮತ್ತಿಬ್ಬರಿಗೆ 10 ಕೋಟಿ ರೂ. ದಂಡ, 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ನ್ಯಾಯಾಲಯ ವಿಧಿಸಿದ್ದ 10 ಕೋಟಿ ರೂ. ದಂಡವನ್ನು ಶಶಿಕಲಾ ಅವರ ಸಂಬಂಧಿಕರು ಪಾವತಿಸಿದ್ದರು. ಹೀಗಾಗಿ, ಅವರನ್ನು ಜೈಲಿನಿಂದ ರಿಲೀಸ್ ಮಾಡಲಾಗಿತ್ತು. ಆದರೆ, ಬಳಿಕ ಎಐಎಡಿಂಕೆ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು
1984ರಲ್ಲಿ ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ತಮ್ಮ ಆಪ್ತೆಯಾಗಿದ್ದ ಶಶಿಕಲಾ ಅವರನ್ನು ರಾಜಕೀಯಕ್ಕೆ ಪರಿಚಯಿಸಿದ್ದರು. ಜಯಲಲಿತಾ ಅವರೊಂದಿಗೆ ಆಪ್ತವಾಗಿದ್ದ ಶಶಿಕಲಾ ಜೊತೆಗಿನ ಒಡನಾಟದ ಬಗ್ಗೆ ಸಾಕಷ್ಟು ಚರ್ಚೆಗಳು, ವಿವಾದಗಳು ಕೂಡ ಏರ್ಪಟ್ಟಿದ್ದವು. ಜಯಲಲಿತಾ ಸಾವಿನ ಹಿಂದೆಯೂ ಶಶಿಕಲಾ ಕೈವಾಡವಿದೆ ಎಂಬ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ