Anitha EAnitha E
|
news18-kannada Updated:February 19, 2021, 1:43 PM IST
ವಿವೇಕ್ ಒಬೆರಾಯ್
ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಭಿನಯದ ಜೊತೆಗೆ ಅನೇಕ ಸಾಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಕ್ಯಾನ್ಸರ್ ಪೀಡಿತ ದುರ್ಬಲವರ್ಗದ ಮಕ್ಕಳಿಗೆ ಕಳೆದ 18 ವರ್ಷಗಳಿಂದ ಸಹಾಯ ಮಾಡುತ್ತಿರುವ ವಿವೇಕ್, ತಮ್ಮ ವಿಶಿಷ್ಟ ಸೇವಾ ಮನೋಭಾವದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಗ್ರಾಮೀಣ ಭಾರತದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮಹತ್ವದ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಹೌದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಆಶಯದಿಂದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬರೋಬ್ಬರಿ 16 ಕೋಟಿ ಮೊತ್ತದ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಿಸಿದ್ದಾರೆ. ಗ್ರಾಮೀಣ ಭಾರತದ ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಉದ್ದೇಶದಿಂದ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ಬರೋಬ್ಬರಿ 16 ಕೋಟಿ ವಿದ್ಯಾರ್ಥಿವೇತನ ಪಡೆಯಲಿದ್ದಾರೆ.
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ರಾಷ್ಟ್ರಮಟ್ಟದಲ್ಲಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಯಲ್ಲಿ ಹಳ್ಳಿಗಾಡಿನ ಮಕ್ಕಳು ಯಶಸ್ಸು ಸಾಧಿಸಬೇಕೆಂಬ ಉದ್ದೇಶದಿಂದ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
‘ಪ್ರತಿಯೊಬ್ಬ ಹಳ್ಳಿಯ ಮಕ್ಕಳು ಕೂಡ ದೊಡ್ಡ ಸಾಧನೆ ಮಾಡಬೇಕು. ಅವರ ಕುಟುಂಬ ಮಾತ್ರವಲ್ಲದೇ ಅವರು ಬೆಳೆದ ಇಡೀ ಹಳ್ಳಿಯೂ ಕೂಡ ಅಭಿವೃದ್ಧಿಯಾಗಬೇಕು. ನಮ್ಮ ಸುತ್ತಲೂ ಸಾಕಷ್ಟು ಪ್ರತಿಭಾವಂತ ಮತ್ತು ಸಾಧಕ ಯುವ ವಿದ್ಯಾರ್ಥಿಗಳು ಇದ್ದಾರೆ. ಆದರೆ ಅವರಿಗೆ ಸಬ್ಸಿಡಿ ಸಹಿತ ಉನ್ನತ ಶಿಕ್ಷಣ ಮತ್ತು ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹಣಕಾಸಿನ ತೊಂದರೆಗಳಿಂದಾಗಿ ಅವರು ಇಷ್ಟ ಪಟ್ಟ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಆಗುತ್ತಿಲ್ಲ’ ಎಂದು ವಿವೇಕ್ ಹೇಳಿದ್ದಾರೆ.
ಇದನ್ನೂ ಓದಿ: Diganth-Aindrita: ಕ್ಯಾಂಡಲ್ ಲೈಟ್ನಲ್ಲಿ ರೊಮ್ಯಾಂಟಿಕ್ ಆದ ಲವ್ ಬರ್ಡ್ಸ್ ಐಂದ್ರಿತಾ-ದಿಗಂತ್..!
‘ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾದ ಮೂಲ ಸೌಕರ್ಯಗಳು ಸರಿಯಾಗಿ ಸಿಗುತ್ತಿಲ್ಲ. ಮುಂದೆ ಮಹತ್ತರವಾದದ್ದನ್ನು ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಅಂತಹ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುವುದನ್ನು ನಾನು ಬಯಸುವುದಿಲ್ಲ. ನನ್ನ ತಂಡದ ಸದಸ್ಯರು ಮತ್ತು ನಾನು ಅವರ ಕನಸುಗಳನ್ನು ನನಸು ಮಾಡಲು ಹಾಗೂ ಅವರು ಅಂದುಕೊಂಡಿದ್ದನ್ನು ಸಾಧಿಸಲು ಸಹಾಯ ಮಾಡುವ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆ ರೂಪಿಸಿದ್ದೇವೆ. ಇದರ ಸಹಾಯದಿಂದ ಗ್ರಾಮೀಣ ಭಾಗದ ಮಕ್ಕಳು ತಮ್ಮ ಶೈಕ್ಷಣಿಕ ಗುರಿಗಳನ್ನು ಈಡೇರಿಸಿಕೊಳ್ಳಬೇಕು’ ಎಂದು ವಿವೇಕ್ ತಿಳಿಸಿದ್ದಾರೆ.
ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಅವರು ರೂಪಿಸಿದ್ದ ಸೂಪರ್ 30 ಕಾರ್ಯಕ್ರಮದ ಐ30 ತರಬೇತಿ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
Published by:
Anitha E
First published:
February 19, 2021, 1:43 PM IST