ಶಿಮ್ಲಾ (ಜುಲೈ 08); ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ 87 ವರ್ಷದ ವೀರಭದ್ರ ಸಿಂಗ್ ಗುರುವಾರ ತೀವ್ರ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ ಎಂದು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಐಜಿಎಂಸಿ) ವೈದ್ಯಕೀಯ ಅಧೀಕ್ಷಕ ಡಾ.ಜಾನಕ್ ರಾಜ್ ಪಖ್ರೆಟಿಯಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಇಂದು ಮುಂಜಾನೆ 3.40 ಕ್ಕೆ ವೀರಭದ್ರ ಸಿಂಗ್ ಕೊನೆಯುಸಿರೆಳೆದಿದ್ದಾರೆ ಎಂದು ಡಾ.ಜಾನಕ್ ಮಾಹಿತಿ ನೀಡಿದ್ದಾರೆ. ಸಿಂಗ್ ಅವರ ನಿಧನಕ್ಕೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ. ನಡ್ಡಾ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ವಕ್ತಾರರು ಗುರುವಾರ ತಿಳಿಸಿದ್ದಾರೆ.
ವೀರಭದ್ರ ಸಿಂಗ್ ಅವರು ಏಪ್ರಿಲ್ 23 ರಿಂದ ಐಜಿಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ, ಹೃದಯ ಸ್ತಂಭನದಿಂದ ಬಳಲುತ್ತಿದ್ದ ಅವರ ಸ್ಥಿತಿ ಹದಗೆಟ್ಟಿತ್ತು. ಕೂಡಲೇ ಸಿಂಗ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಯಿತು ಮತ್ತು ವೆಂಟಿಲೇಟರ್ ಸಹಾಯದಲ್ಲಿ ಇರಿಸಲಾಗಿತ್ತು. ಆದರೂ ಯಾವ ಚಿಕಿತ್ಸೆಯ ಫಲ ನೀಡಿದೆ ಅವರು ಇಂದು ಮೃತರಾಗಿದ್ದಾರೆ.
ಏಪ್ರಿಲ್ 12 ಮತ್ತು ಜೂನ್ 11 ರಂದು ಎರಡು ತಿಂಗಳಲ್ಲಿ ಎರಡು ಬಾರಿ ವೀರಭದ್ರ ಸಿಂಗ್ ಮಾರಕ ಮಾರಕ ಕೊರೋನಾ ವೈರಸ್ಗೆ ತುತ್ತಾಗಿದ್ದರು. ಏಪ್ರಿಲ್ನಲ್ಲಿ ಅವರನ್ನು ಮೊಹಾಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಏಪ್ರಿಲ್ 23 ರಂದು ಬಿಡುಗಡೆ ಮಾಡಲಾಯಿತು. ಆದರೆ ಶಿಮ್ಲಾಕ್ಕೆ ಆಗಮಿಸಿದಾಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿ ಮತ್ತೆ ಅವರನ್ನು ಐಜಿಎಂಸಿಗೆ ಸೇರಿಸಲಾಯಿತು.
ಒಂಬತ್ತು ಬಾರಿ ಶಾಸಕ ಮತ್ತು ಐದು ಬಾರಿ ಸಂಸತ್ತಿನ ಸದಸ್ಯರಾಗಿದ್ದ ಸಿಂಗ್ ಅವರು ಆರು ಅವಧಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಏಪ್ರಿಲ್ 8, 1983 ರಿಂದ ಮಾರ್ಚ್ 5, 1990-ಡಿಸೆಂಬರ್ 3, 1993 ರಿಂದ ಮಾರ್ಚ್ 23, 1998- ಮಾರ್ಚ್ 6, 2003 ರಿಂದ ಡಿಸೆಂಬರ್ 29, 2007- ಡಿಸೆಂಬರ್ 25, 2012 ರಿಂದ- ಡಿಸೆಂಬರ್ 26, 2017 ರವರೆಗೆ ಆರು ಬಾರಿ ಅವರು ಸಿಎಂ ಆಗಿದ್ದಾರೆ.
ಸಿಂಗ್ ಮಾರ್ಚ್ 1998 ರಿಂದ ಮಾರ್ಚ್ 2003 ರವರೆಗೆ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಿಮಾಚಲ ಪ್ರದೇಶ ವಿಧಾನಸಭೆಯ ಸೋಲನ್ ಜಿಲ್ಲೆಯ ಅರ್ಕಿ ಕ್ಷೇತ್ರವನ್ನು ವೀರಭದ್ರ ಸಿಂಗ್ ಪ್ರತಿನಿಧಿಸಿದ್ದರು. ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಮತ್ತು ಮಗ ವಿಕ್ರಮಾದಿತ್ಯ ಸಿಂಗ್ ಕೂಡ ರಾಜಕಾರಣಿಗಳು. ಪ್ರತಿಭಾ ಸಿಂಗ್ ಮಾಜಿ ಸಂಸದರಾಗಿದ್ದರೆ, ವಿಕ್ರಮಾದಿತ್ಯ ಶಿಮ್ಲಾ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ