HOME » NEWS » National-international » VIRAL VIDEO IAS OFFICER SAUMYA PANDEY REJOINS WORK 14 DAYS AFTER DELIVERY WITH NEWBORN BABY SCT

Viral Video: 14 ದಿನದ ಕಂದಮ್ಮನೊಂದಿಗೆ ಆಫೀಸಿಗೆ ಬಂದ ಐಎಎಸ್​ ಅಧಿಕಾರಿ​ ಸೌಮ್ಯ ಪಾಂಡೆ; ವಿಡಿಯೋ ವೈರಲ್

Saumya Pandey: ಮಹಿಳೆಯರಿಗೆ 6 ತಿಂಗಳು ಹೆರಿಗೆ ರಜೆ ನೀಡಲಾಗುತ್ತದೆ. ಆದರೆ, ಐಎಎಸ್​ ಅಧಿಕಾರಿ ಸೌಮ್ಯ ಪಾಂಡೆ ಕೇವಲ 22 ದಿನಗಳ ಕಾಲ ಹೆರಿಗೆ ರಜೆ ಪಡೆದುಕೊಂಡಿದ್ದು, ಮಗುವಿಗೆ 2 ವಾರ ಕಳೆದ ನಂತರ ಕೆಲಸಕ್ಕೆ ವಾಪಾಸಾಗಿದ್ದಾರೆ. ಹಸುಗೂಸಿನೊಂದಿಗೆ ಆಫೀಸಿಗೆ ಹಾಜರಾದ ಅವರ ವಿಡಿಯೋ ವೈರಲ್ ಆಗಿದೆ.

Sushma Chakre | news18-kannada
Updated:October 13, 2020, 3:42 PM IST
Viral Video: 14 ದಿನದ ಕಂದಮ್ಮನೊಂದಿಗೆ ಆಫೀಸಿಗೆ ಬಂದ ಐಎಎಸ್​ ಅಧಿಕಾರಿ​ ಸೌಮ್ಯ ಪಾಂಡೆ; ವಿಡಿಯೋ ವೈರಲ್
ಐಎಎಸ್​ ಅಧಿಕಾರಿ ಸೌಮ್ಯ ಪಾಂಡೆ
  • Share this:
ಕೊರೋನಾದಿಂದಾಗಿ ಮನೆಯಿಂದ ಹೊರಹೋಗಲು ಯೋಚಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ವಯಸ್ಸಾದವರು, ಅನಾರೋಗ್ಯ ಪೀಡಿತರು, ಗರ್ಭಿಣಿ, ಬಾಣಂತಿಯರು ಇನ್ನಷ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿಯಿದೆ. ಆದರೆ, ಉತ್ತರ ಪ್ರದೇಶದ ಮಹಿಳಾ ಐಎಎಸ್​ ಅಧಿಕಾರಿ ಸೌಮ್ಯ ಪಾಂಡೆ ಕೊರೋನಾ ಭೀತಿಯ ನಡುವೆಯೂ ತನ್ನ 14 ದಿನದ ಮಗುವಿನೊಂದಿಗೆ ಕೆಲಸಕ್ಕೆ ಹಾಜರಾಗಿದ್ದಾರೆ. ಉತ್ತರ ಪ್ರದೇಶದ ಘಜಿಯಾಬಾದ್​ ಜಿಲ್ಲೆಯ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಗಿರುವ ಸೌಮ್ಯ ಪಾಂಡೆ ಕೇವಲ 22 ದಿನಗಳ ಕಾಲ ಹೆರಿಗೆ ರಜೆ ಪಡೆದು, 14 ದಿನದ ಮಗುವಿನೊಂದಿಗೆ ಕೆಲಸಕ್ಕೆ ವಾಪಾಸಾಗಿದ್ದಾರೆ. ಮಡಿಲಿನಲ್ಲಿ ಮಗುವನ್ನು ಮಲಗಿಸಿಕೊಂಡು ಆಫೀಸ್ ಕೆಲಸ ಮಾಡುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಮಾತನಾಡಿರುವ ಸೌಮ್ಯ ಪಾಂಡೆ, ನಾನೊಬ್ಬ ಐಎಎಸ್​ ಅಧಿಕಾರಿ. ಹೀಗಾಗಿ, ಕುಟುಂಬದ ಜೊತೆಗೆ ಕೆಲಸಕ್ಕೂ ಆದ್ಯತೆ ನೀಡಲೇಬೇಕು. ಕೊರೋನಾದಿಂದಾಗಿ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ದೇವರು ಹೆಣ್ಣಿಗೆ ಕೆಲಸ, ಕುಟುಂಬ ಎರಡನ್ನೂ ನಿಭಾಯಿಸುವ ಹಾಗೂ ಮಗುವಿನ ಜನ್ಮ ನೀಡಿ, ಅದನ್ನು ಪೋಷಿಸುವ ಸಾಮರ್ಥ್ಯ ನೀಡಿದ್ದಾನೆ. ಹಳ್ಳಿಗಳಲ್ಲಿ ಮಹಿಳೆಯರು ಮಗುವಿಗೆ ಜನ್ಮ ನೀಡುವ ಕೊನೆಯ ದಿನದವರೆಗೂ ಕೆಲಸ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ, ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೃಷಿ ಜೊತೆಗೆ ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅದೇ ರೀತಿ ನಾನು ಸಹ 2 ವಾರದ ಮಗುವಿನ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.


ಸಾಮಾನ್ಯವಾಗಿ ಬಾಣಂತಿಯರಿಗೆ ಮನೆಯಿಂದ ಹೊರಗೆ ಗಾಳಿಯಲ್ಲಿ ಓಡಾಡಲೂ ಬಿಡುವುದಿಲ್ಲ. ಆದರೆ, ನಮ್ಮ ಮನೆಯಲ್ಲಿ ಕುಟುಂಬದವರು ಕೂಡ ನಾನು ಮಗುವಿನೊಂದಿಗೆ ಆಫೀಸಿಗೆ ಬರುತ್ತೇನೆ ಎಂದಾಗ ಪ್ರೋತ್ಸಾಹ ನೀಡಿದರು. ಆಫೀಸ್​ನಲ್ಲಿ ಕೂಡ ಸಿಬ್ಬಂದಿಗಳು ನನ್ನ ಬಳಿ ಬರುವ ಫೈಲ್​ಗಳನ್ನು ಸ್ಯಾನಿಟೈಸ್ ಮಾಡಿ, ನನ್ನ ಕೊಠಡಿಯನ್ನೂ ಸ್ಯಾನಿಟೈಸ್ ಮಾಡಿ ನನಗೂ ಮತ್ತು ನನ್ನ ಮಗುವಿಗೂ ಯಾವುದೇ ಸೋಂಕು ಹರಡದಂತೆ ಎಚ್ಚರ ವಹಿಸುತ್ತಿದ್ದಾರೆ ಎಂದು ಸೌಮ್ಯ ಪಾಂಡೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಘಜಿಯಾಬಾದ್​ನಲ್ಲಿ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದ ಜವಾಬ್ದಾರಿ ವಹಿಸಿಕೊಂಡಿದ್ದ ಸೌಮ್ಯ ಪಾಂಡೆ ಹೆರಿಗೆಗೂ ಒಂದು ವಾರ ಮೊದಲು ರಜೆ ತೆಗೆದುಕೊಂಡರು. ಮಹಿಳೆಯರಿಗೆ 6 ತಿಂಗಳು ಹೆರಿಗೆ ರಜೆ ನೀಡಲಾಗುತ್ತದೆ. ಆದರೆ, ಸೌಮ್ಯ ಪಾಂಡೆ ಕೇವಲ 22 ದಿನಗಳ ಕಾಲ ಹೆರಿಗೆ ರಜೆ ಪಡೆದುಕೊಂಡಿದ್ದು, ಮಗುವಿಗೆ 2 ವಾರ ಕಳೆದ ನಂತರ ಕೆಲಸಕ್ಕೆ ವಾಪಾಸಾಗಿದ್ದಾರೆ. ಈ ಮೂಲಕ ಹೆಣ್ಣು ಮನಸು ಮಾಡಿದರೆ ಯಾವುದನ್ನು ಬೇಕಾದರೂ ನಿಭಾಯಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾರೆ.
Published by: Sushma Chakre
First published: October 13, 2020, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories