ಪಾಟ್ನಾ (ಜೂನ್ 13): ಕೆಲವೊಂದು ಪ್ರೇಮಕತೆಗಳನ್ನು ಕೇಳಿದಾಗ ವಾವ್ ಎನಿಸುತ್ತದೆ. ಇನ್ನು ಕೆಲವೊಂದು ಲವ್ ಸ್ಟೋರಿಗಳನ್ನು ಕೇಳಿದಾಗ ವಿಚಿತ್ರ ಎನಿಸುತ್ತದೆ. ಅಂತಹ ವಿಚಿತ್ರವಾದ ಪ್ರೇಮಕತೆಯೊಂದು ಬಿಹಾರದಲ್ಲಿ ನಡೆದಿದೆ. ಈಗಾಗಲೇ ಮದುವೆಯಾಗಿರುವ ಮಹಿಳೆಯೊಂದಿಗೆ ಪ್ರೇಮದಾಟವಾಡಿದ ಯುವಕನೊಬ್ಬ ಆಕೆಯೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ರೈಲಿನಲ್ಲಿ ಬೇರೆ ಊರಿಗೆ ಹೋಗಲು ನಿರ್ಧರಿಸಿದ ಅವರು ಚಲಿಸುವ ರೈಲಿನೊಳಗೇ ಮದುವೆಯಾಗಿದ್ದಾರೆ! ಈ ಫೋಟೋಗಳು ಈಗ ವೈರಲ್ ಆಗಿವೆ.
ಬಿಹಾರದ ಸುಲ್ತಾನ್ಗಂಜ್ ಪ್ರದೇಶದ ಭಿರ್ ಕುರ್ದ್ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಅನು ಕುಮಾರಿ ಎಂಬಾಕೆಗೆ ಈಗಾಗಲೇ ಮದುವೆಯಾಗಿತ್ತು. ಆದರೂ ಬೇರೊಬ್ಬನೊಂದಿಗೆ ಸಂಬಂಧ ಹೊಂದಿದ್ದ ಆಕೆ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಳು. ಅಶು ಕುಮಾರ್ ಎಂಬ ತನ್ನ ಪ್ರಿಯತಮನೊಂದಿಗೆ ಆಕೆ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮದುವೆಯಾಗಿರುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
2 ತಿಂಗಳ ಹಿಂದಷ್ಟೇ ಮನೆಯವರ ಒತ್ತಾಯಕ್ಕೆ ಮಣಿದು ಅನು ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿದ್ದಳು. ಅಶು ಕುಮಾರ್ ಎಂಬಾತನ ಜೊತೆ ಸಂಬಂಧವಿಟ್ಟುಕೊಂಡಿದ್ದ ಆಕೆ ಆತನೊಂದಿಗೆ ಮನೆಬಿಟ್ಟು ಹೋಗಿ ಮದುವೆಯಾಗಿದ್ದಾಳೆ. ಆಕೆ ಬೇರೊಬ್ಬನನ್ನು ಪ್ರೀತಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ಆಕೆಯ ಮನೆಯವರು ಆಕೆಯನ್ನು ಮನೆಯಿಂದ ಹೊರಗೆ ಹೋಗದಂತೆ ಬಂಧಿಸಿಟ್ಟಿದ್ದರು. ಬಳಿಕ ಏಪ್ರಿಲ್ ತಿಂಗಳಲ್ಲಿ ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು.
ಆದರೆ, ಆತನೊಂದಿಗೆ ಅನು ಖುಷಿಯಾಗಿ ಸಂಸಾರ ನಡೆಸುತ್ತಿರಲಿಲ್ಲ. ಹೀಗಾಗಿ, ಗಂಡನ ಮನೆಯವರಿಗೆ ಗೊತ್ತಾಗದಂತೆ ಆಕೆ ಅಶು ಜೊತೆ ಓಡಿಹೋಗಿದ್ದಾಳೆ. ಸುಲ್ತಾನ್ಗಂಜ್ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಹೋಗುವ ರೈಲನ್ನು ಹತ್ತಿದ ಅನು ಮತ್ತು ಅಶು ಚಲಿಸುವ ರೈಲಿನಲ್ಲೇ ಮದುವೆಯಾಗಿದ್ದಾರೆ. ಬಳಿಕ ಬೆಂಗಳೂರನ್ನು ತಲುಪಿ, ಮನೆಯವರಿಗೆ ಸಿಗದಂತೆ ತಲೆಮರೆಸಿಕೊಂಡಿದ್ದಾರೆ.
ಆದರೆ, ಅವರಿಬ್ಬರೂ ರೈಲಿನಲ್ಲಿ ಮದುವೆಯಾಗಿರುವ ಫೋಟೋಗಳು ವೈರಲ್ ಆಗಿದ್ದು, ಈ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಳು ಕೂಡ ವಿಚಾರಣೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅಶು ಕುಮಾರ್, ನಾವು ಊರಲ್ಲೇ ಇದ್ದರೆ ಮನೆಯವರು ಸುಮ್ಮನಿರುವುದಿಲ್ಲ ಎಂದು ಬೆಂಗಳೂರಿಗೆ ಹೋಗಲು ನಿರ್ಧರಿಸಿದೆವು. ರೈಲಿನಲ್ಲಿ ತನಗೆ ತಾಳಿ ಕಟ್ಟುವಂತೆ ಅನು ಬಹಳ ಒತ್ತಾಯ ಮಾಡಿದಳು. ಹೀಗಾಗಿ, ಆಕೆಯ ಹಣೆಗೆ ಕುಂಕುಮವಿಟ್ಟು ರೈಲಿನೊಳಗೆ ಮದುವೆಯಾದೆ ಎಂದು ತಿಳಿಸಿದ್ದಾನೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ