ತೆಲಂಗಾಣ (ಜು. 27): ನಿಯಮ ಉಲ್ಲಂಘನೆಗೆ, ಅಪರಾಧ ಮಾಡಿದ್ದಕ್ಕೆ ದಂಡ ವಿಧಿಸುವುದನ್ನು ನೋಡಿದ್ದೇವೆ. ಈಗಂತೂ ಮಾಸ್ಕ್ ಧರಿಸದಿದ್ದರೆ, ಹೆಲ್ಮೆಟ್ ಹಾಕದಿದ್ದರೆ, ಅನಗತ್ಯವಾಗಿ ಊರೂರು ಅಲೆದಾಡಿದರೂ ದಂಡ ವಿಧಿಸಲಾಗುತ್ತದೆ. ಆದರೆ, ತೆಲಂಗಾಣದಲ್ಲಿ ಮೇಕೆಗಳು ಆಗಷ್ಟೇ ಚಿಗುರೊಡೆದ ಸಸಿಗಳನ್ನು ತಿಂದುಹಾಕಿವೆ ಎಂಬ ಕಾರಣಕ್ಕೆ 3,000 ರೂ. ದಂಡ ವಿಧಿಸಲಾಗಿವೆ.
ಹೌದು, ತೆಲಂಗಾಣದ ಭದ್ರಾದ್ರಿ ಕೋತಗುಂಡೆಂ ಜಿಲ್ಲೆಯ ಯೆಲ್ಲಂದು ಮುನ್ಸಿಪಾಲಿಟಿ ಪ್ರಾಧಿಕಾರ 15 ಮೇಕೆಗಳಿಗೆ ತಲಾ 3,000 ರೂ. ದಂಡ ವಿಧಿಸಿದೆ. ಯೆಲ್ಲಂದು ಮುನ್ಸಿಪಾಲ್ ಆಯುಕ್ತ ಶ್ರೀನಿವಾಸ್ ರೆಡ್ಡಿ ಪ್ರಕಾರ, ಮುನ್ಸಿಪಾಲಿಟಿ ಸಿಬ್ಬಂದಿ ಇತ್ತೀಚೆಗೆ ನೆಟ್ಟಿದ್ದ ಗಿಡಗಳನ್ನು ಮೇಕೆಗಳು ತಿನ್ನುತ್ತಿರುವುದನ್ನು ನೋಡಿದ್ದರು. ಆ 15 ಮೇಕೆಗಳನ್ನು ಮುನ್ಸಿಪಾಲಿಟಿಯ ವಶಕ್ಕೆ ಪಡೆಯಲಾಗಿದ್ದು, ಅದರ ಮಾಲೀಕರಿಗೆ 3 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.
ಮುನ್ಸಿಪಾಲಿಟಿಗೆ ಸೇರಿದ ತೋಟದೊಳಗೆ ನುಗ್ಗಿ ಗಿಡಗಳನ್ನು ತಿನ್ನುತ್ತಿದ್ದ 15 ಮೇಕೆಗಳನ್ನು ನಮ್ಮ ವಶಕ್ಕೆ ತೆಗೆದುಕೊಂಡೆವು. ಒಂದೊಂದು ಮೇಕೆಗೂ 3,000 ರೂ.ಗಳ ದಂಡ ವಿಧಿಸಿದ್ದೇವೆ. ಆ ದಂಡ ಪಾವತಿ ಮಾಡಿದ ನಂತರ ಮೇಕೆಗಳನ್ನು ಮನೆಗೆ ಕರೆದುಕೊಂಡು ಹೋಗಲು ಮೇಕೆಗಳ ಮಾಲೀಕರಿಗೆ ತಿಳಿಸಿದ್ದೇವೆ. ಆದರೆ, ಇದುವರೆಗೂ ಯಾವ ಮಾಲೀಕರೂ ದಂಡ ಪಾವತಿಸಿಲ್ಲ. ಹೀಗಾಗಿ, ಮೇಕೆಗಳು ನಮ್ಮ ವಶದಲ್ಲಿಯೇ ಇವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಗೇಮ್ ಆಡಿದ್ದಕ್ಕೆ ಮಗನಿಂದ ಮೊಬೈಲ್ ಕಿತ್ತುಕೊಂಡ ಅಮ್ಮ; ಕೋಪದಿಂದ ಆತ್ಮಹತ್ಯೆ ಮಾಡಿಕೊಂಡ ಬಾಲಕ
ಮೇಕೆ, ಹಸು ಮುಂತಾದ ಸಾಕುಪ್ರಾಣಿಗಳ ಮಾಲೀಕರಿಗೆ ನಾವು ಈಗಾಗಲೇ ಸೂಚನೆ ನೀಡಿದ್ದೇವೆ. ತೋಟದೊಳಗೆ ಅವರ ಪ್ರಾಣಿಗಳು ನುಗ್ಗದಂತೆ ಎಚ್ಚರ ವಹಿಸಲು ಸೂಚಿಸಿದ್ದೇವೆ. ಆದರೆ, ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ದಂಡ ವಿಧಿಸಿದರೆ ಬುದ್ಧಿ ಬರಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುನ್ಸಿಪಾಲಿಟಿ ಆಯುಕ್ತರು ತಿಳಿಸಿದ್ದಾರೆ.
(ವರದಿ: ಪಿ.ವಿ. ರಮಣ ಕುಮಾರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ