ಆಹಾರ ಹುಡುಕಿ ಬಂದ ಗರ್ಭಿಣಿ ಆನೆಯ ಬಾಯಲ್ಲಿ ಪಟಾಕಿಯಿಟ್ಟು ಕೊಂದ ಜನ!

ನೀರಿನಲ್ಲಿ ನಿಂತಲ್ಲೇ ಸಾವನ್ನಪ್ಪಿದ ಆನೆ

ನೀರಿನಲ್ಲಿ ನಿಂತಲ್ಲೇ ಸಾವನ್ನಪ್ಪಿದ ಆನೆ

ಗರ್ಭಿಣಿಯಾಗಿದ್ದ ಆನೆಯನ್ನು ನೀರಿನಾಚೆ ತರಲು ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ವೆಲ್ಲಿಯಾರ್​ ನದಿಯಲ್ಲಿ ತನ್ನ ಸೊಂಡಿಲನ್ನು ಮುಳುಗಿಸಿಟ್ಟುಕೊಂಡ ಸ್ಥಿತಿಯಲ್ಲೇ ಆನೆ ಸಾವನ್ನಪ್ಪಿದೆ.

  • Share this:

ಕೆಲವೊಮ್ಮೆ ಕ್ರೂರ ಪ್ರಾಣಿಗಳಿಗಿಂತ ಮನುಷ್ಯರೇ ಹೆಚ್ಚು ಕ್ರೂರಿಗಳಾಗಿಬಿಡುತ್ತಾರೆ. ಮೂಕಪ್ರಾಣಿಗಳ ಮೇಲೆ ಮನುಷ್ಯರು ತಮ್ಮ ಅಟ್ಟಹಾಸ ಮೆರೆಯುತ್ತಾ ಮನುಷ್ಯತ್ವವನ್ನೇ ಮರೆತ ಅನೇಕ ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ಅದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಕೇರಳದಲ್ಲಿ ಒಂದು ಘಟನೆ ನಡೆದಿದೆ. ತುಂಬು ಗರ್ಭಿಣಿಯಾದ ಕಾಡಾನೆಗೆ ಅನಾನಸ್​ (ಪೈನಾಪಲ್) ಹಣ್ಣಿನಲ್ಲಿ ಸ್ಫೋಟಕವನ್ನು ಹಾಕಿ ತಿನ್ನಿಸಿರುವ ಅಮಾನವೀಯ ಘಟನೆ ನಡೆದಿದೆ. ತನಗಾದ ನೋವನ್ನು ಕಡಿಮೆ ಮಾಡಿಕೊಳ್ಳಲು ನದಿಗೆ ಇಳಿದ ಆನೆ ನೀರಿನಲ್ಲಿ ನಿಂತ ಸ್ಥಿತಿಯಲ್ಲೇ ಸಾವನ್ನಪ್ಪಿದೆ!


ಈ ಘಟನೆ ಮನುಷ್ಯರ ವಿಕೃತಿ ಮತ್ತು ಅಮಾನವೀಯ ನಡವಳಿಕೆಗೆ ಸ್ಪಷ್ಟ ಮತ್ತು ತಾಜಾ ಉದಾಹರಣೆಯಾಗಿದೆ. ಈ ಘಟನೆ ಬಗ್ಗೆ ಕೇರಳದ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಮಧ್ಯೆ ನಿಂತು, ಮರಿಯನ್ನು ಹೊಟ್ಟೆಯಲ್ಲಿಟ್ಟುಕೊಂಡು ಸಾವನ್ನಪ್ಪಿದ ಹೆಣ್ಣು ಆನೆಯ ಫೋಟೋವನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ತುಂಬುತ್ತದೆ.


ಅಷ್ಟಕ್ಕೂ ಆಗಿದ್ದೇನು?:
ಕೇರಳದ ಪಲಕ್ಕಾಡ್​ನ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್​ (ಎಸ್​ವಿಎನ್​ಪಿ) ಆನೆ ಗರ್ಭಿಣಿಯಾಗಿತ್ತು. ಮೇ 27ರಂದು 15 ವರ್ಷದ ಈ ಆನೆ ಹತ್ತಿರದಲ್ಲಿದ್ದ ಊರೊಳಗೆ ಪ್ರವೇಶಿಸಿತ್ತು. ಊರಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಆ ಆನೆಯನ್ನು ನೋಡಿ ಎಲ್ಲರೂ ಹೆದರಿ ಮನೆಯಲ್ಲಿ ಕುಳಿತಿದ್ದರು. ಆದರೆ, ಅವರಲ್ಲಿ ಯಾರೋ ಆನೆಗೆ ತಿನ್ನಲು ಪೈನಾಪಲ್ ಹಣ್ಣನ್ನು ನೀಡಿದರು. ಮೊದಲೇ ಹಸಿವಿನಿಂದ ಆಹಾರಕ್ಕಾಗಿ ಹುಡುಕಾಡುತ್ತಿದ್ದ ಆನೆ ಆ ಹಣ್ಣನ್ನು ತಿನ್ನುತ್ತಿದ್ದಂತೆ ಅದರೊಳಗಿದ್ದ ಮದ್ದುಗುಂಡು ಸ್ಫೋಟವಾಯಿತು. ಪೈನಾಪಲ್ ಹಣ್ಣಿನೊಳಗೆ ಸ್ಫೋಟಕವನ್ನು ತುಂಬಿದ್ದರಿಂದ ಆನೆಯ ಬಾಯಿಗೆ ತೀವ್ರ ಗಾಯವಾಗಿತ್ತು.


ತನಗೆ ಪ್ರಾಣ ಹೋಗುವಷ್ಟು ನೋವಾದರೂ ಆ ಆನೆ ಅಲ್ಲಿದ್ದ ಯಾರೊಬ್ಬರಿಗೂ ತೊಂದರೆ ಕೊಡಲಿಲ್ಲ, ಮನೆ-ಅಂಗಡಿಗಳಿಗೂ ಹಾನಿ ಮಾಡಲಿಲ್ಲ. ತನ್ನ ನೋವನ್ನು ನುಂಗಿಕೊಂಡು ಕಾಡಿನೊಳಗೆ ಸೇರಿಕೊಂಡ ಆನೆ ನಂತರ ವೆಲ್ಲಿಯಾರ್​ ನದಿಯೊಳಗೆ ಇಳಿದು ತನ್ನ ಬಾಯಿ, ಸೊಂಡಿಲನ್ನು ನೀರಿನಲ್ಲಿಟ್ಟುಕೊಂಡು ನಿಂತಿತು. ಅದರಿಂದ ಆನೆಗೆ ಸ್ವಲ್ಪ ಆರಾಮಾದಂತೆ ಎನಿಸಿರಬೇಕು. ಹಾಗೇ ಗಂಟೆಗಟ್ಟಲೆ ಆನೆ ನೀರಿನಲ್ಲಿ ನಿಂತೇ ಇತ್ತು. ಅಷ್ಟರಲ್ಲಿ ವಿಷಯ ತಿಳಿದು ಎಸ್​ವಿಎನ್​ಪಿಯ ಅರಣ್ಯಾಧಿಕಾರಿಗಳು ಆನೆಯನ್ನು ಹುಡುಕುತ್ತಾ ಸ್ಥಳಕ್ಕೆ ಬಂದರು.


'ನದಿಯ ಮಧ್ಯದಲ್ಲಿ ನಿಂತಿದ್ದ ಆನೆಯನ್ನು ದಡಕ್ಕೆ ಕರೆತಂದು, ಚಿಕಿತ್ಸೆ ಕೊಡಿಸುವ ಸಲುವಾಗಿ ಎರಡು ಆನೆಗಳನ್ನು ಕರೆಸಿದೆವು. ಆದರೆ, ಅದನ್ನು ನೋಡಿದ ಆನೆ ಕಣ್ಮುಚ್ಚಿ ಹಾಗೇ ನೀರಿನಲ್ಲಿ ನಿಂತಿತೇ ವಿನಃ ಒಂದಿಂಚೂ ಕದಲಲಿಲ್ಲ. ಬಹುಶಃ ಆನೆಗೆ ತಾನಿನ್ನು ಬದುಕುವುದಿಲ್ಲ ಎಂಬುದು ಅರ್ಥವಾಗಿತ್ತೇನೋ... ಆ ಕ್ಷಣದಲ್ಲಿ ಆ ಆನೆ ಖಂಡಿತ ತನಗಿಂತ ಹೆಚ್ಚಾಗಿ ತನ್ನ ಹೊಟ್ಟೆಯಲ್ಲಿದ್ದ ಮರಿಯ ಜೀವ ಉಳಿಸಿಕೊಳ್ಳಬೇಕು ಎಂದು ಯೋಚಿಸಿರುತ್ತದೆ' ಎಂದು ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.


ನೀರಿನಲ್ಲಿ ನಿಂತಿರುವ ಆನೆ


ಬಹಳ ಪವರ್​ಫುಲ್ ಆಗಿದ್ದ ಸ್ಫೋಟಕ ಸಿಡಿದಿದ್ದರಿಂದ ಆನೆಯ ಸ್ಥಿತಿ ಚಿಂತಾಜನಕಾಗಿತ್ತು. ಆ ಆನೆಯನ್ನು ನೀರಿನಾಚೆ ತರಲು ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ವೆಲ್ಲಿಯಾರ್​ ನದಿಯಲ್ಲಿ ತನ್ನ ಸೊಂಡಿಲನ್ನು ಮುಳುಗಿಸಿಟ್ಟುಕೊಂಡ ಸ್ಥಿತಿಯಲ್ಲೇ ಆನೆ ಸಾವನ್ನಪ್ಪಿದೆ. ನೀರಿನಲ್ಲಿ ನಿಂತ ಸ್ಥಿತಿಯಲ್ಲೇ ಕೊನೆಯುಸಿರೆಳೆದ ಆನೆಯ ಫೋಟೋ ಟ್ವಿಟ್ಟರ್​ ಹಾಗೂ ಫೇಸ್​ಬುಕ್​ನಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗುತ್ತಿದ್ದು, ಮನುಷ್ಯರ ವಿಕೃತಿಗೆ ಆಕ್ರೋಶ ವ್ಯಕ್ತವಾಗಿದೆ.


ಗರ್ಭಿಣಿಯೆಂಬ ವಿಷಯವೇ ಗೊತ್ತಿರಲಿಲ್ಲ:


ಇನ್ನು, ಈ ಘಟನೆಯ ಬಗ್ಗೆ ತ್ರಿಶೂರ್​ನ ಅಸಿಸ್ಟೆಂಟ್​ ಫಾರೆಸ್ಟ್​ ವೆಟರ್ನರಿ ಆಫೀಸರ್ ಡಾ. ಡೇವಿಡ್ ಅಬ್ರಾಹಾಂ ಕೂಡ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ 20 ವರ್ಷದ ವೃತ್ತಿ ಜೀವನದಲ್ಲಿ 250ಕ್ಕೂ ಹೆಚ್ಚು ಆನೆಗಳ ಪೋಸ್ಟ್​ ಮಾರ್ಟಂ ಮಾಡಿದ್ದೇನೆ. ಇದುವರೆಗೂ ಯಾವ ಕೇಸ್​ನಲ್ಲೂ ನನಗೆ ಇಷ್ಟು ಸಂಕಟ, ಬೇಸರವಾಗಿರಲಿಲ್ಲ. ಈ ಆನೆಯ ಪೋಸ್ಟ್​ ಮಾರ್ಟಂ ಮಾಡುವಾಗ ನನ್ನ ಕೈಯಲ್ಲಿ ಅದರ ಭ್ರೂಣವನ್ನು ಹಿಡಿಯಬೇಕಾಯ್ತು. ಆ ಕ್ಷಣಕ್ಕೆ ನನಗೆ ಬಹಳ ದುಃಖವಾಯಿತು. 15 ವರ್ಷದ ಆನೆ ಗರ್ಭಿಣಿಯಾಗಿತ್ತು ಎಂಬ ವಿಷಯ ನಮಗೂ ಗೊತ್ತಿರಲಿಲ್ಲ. ಆನೆಯ ಮರಣೋತ್ತರ ಪರೀಕ್ಷೆ ವೇಳೆ ಆನೆಯ ಹೃದಯವನ್ನು ನೋಡಿದಾಗ ಅದು ಗರ್ಭಿಣಿಯಾಗಿತ್ತು ಎಂಬ ವಿಷಯ ನನಗೆ ಗೊತ್ತಾಯಿತು ಎಂದು ಇಂಡಿಯನ್ ಎಕ್ಸ್​ಪ್ರೆಸ್​ ಪತ್ರಿಕೆಗೆ ತಿಳಿಸಿದ್ದಾರೆ.

top videos


    ನಾವು ಆ ಆನೆಯನ್ನು ಲಾರಿಯಲ್ಲಿ ತಂದಿದ್ದೆವು. ಆಗಿನ್ನೂ ಅದು ಬಹಳ ಚಿಕ್ಕದಾಗಿತ್ತು. ಅರಣ್ಯದಲ್ಲಿ ಮರದ ದಿಮ್ಮಿಗಳ ಮೇಲೆ, ಮರಳಿನ ಮೇಲೆ ಆಟವಾಡುತ್ತಾ ಆ ಆನೆ ದೊಡ್ಡದಾಯಿತು. ಆ ಆನೆ ಇಷ್ಟು ದುರಂತವಾಗಿ ಅಂತ್ಯ ಕಾಣುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ಕಾಡು ಪ್ರಾಣಿಗಳ ಸುರಕ್ಷತೆಗಾಗಿ ಅಭಯಾರಣ್ಯದಲ್ಲಿ ಇನ್ನಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.


    First published: