HOME » NEWS » National-international » VIRAL NEWS MONKEY SNATCHES BAG CONTAINING RS 4 LAKH IN UTTAR PRADESH TEARS AND THROWS THE NOTES FROM TREE SCT

4 ಲಕ್ಷ ರೂ. ಇದ್ದ ಬ್ಯಾಗ್ ಕದ್ದು ಮರವೇರಿದ ಕೋತಿ; ಮಂಗನ ಕೈಯಲ್ಲಿ ಚೂರು ಚೂರಾಯ್ತು ಗರಿ ಗರಿ ನೋಟು!

ಜಮೀನನ್ನು ರಿಜಿಸ್ಟರ್ ಮಾಡಿಸಲು ಬ್ಯಾಂಕ್​ನಿಂದ 4 ಲಕ್ಷ ರೂ.ಗಳನ್ನು ಡ್ರಾ ಮಾಡಿಕೊಂಡು ಬಂದಿದ್ದ ಭಗವಾನ್ ಅವರಿಂದ ಆ ಹಣವಿರುವ ಬ್ಯಾಗನ್ನು ಕೋತಿ ಎಳೆದುಕೊಂಡು ಹೋಗಿತ್ತು.

Sushma Chakre | news18-kannada
Updated:December 24, 2020, 9:01 AM IST
4 ಲಕ್ಷ ರೂ. ಇದ್ದ ಬ್ಯಾಗ್ ಕದ್ದು ಮರವೇರಿದ ಕೋತಿ; ಮಂಗನ ಕೈಯಲ್ಲಿ ಚೂರು ಚೂರಾಯ್ತು ಗರಿ ಗರಿ ನೋಟು!
ಕೋತಿಗಳು
  • Share this:
ಕಪಿಚೇಷ್ಟೆ ಎನ್ನುವುದು ಸುಮ್ಮನೇ ಅಲ್ಲ. ಕೆಲವೊಮ್ಮೆ ಮಂಗಗಳು ಮಾಡುವ ಚೇಷ್ಟೆಗಳಿಂದ ಜನರು ಪರದಾಡಬೇಕಾಗುತ್ತದೆ. ಅಂತಹ ಉದಾಹರಣೆಗಳು ಸಾಕಷ್ಟಿವೆ. ಯಾರದ್ದಾದರೂ ಕೈಯಲ್ಲಿರುವ ವಸ್ತುಗಳನ್ನು ಕಸಿದುಕೊಂಡು ಮರವೇರುವುದು ಕೋತಿಗಳ ಅಭ್ಯಾಸ. ತಿಂಡಿಗಾಗಿ ಹೊಂಚು ಹಾಕುತ್ತಾ ಕುಳಿತಿರುವ ಕೋತಿಗಳು ಯಾರ ಕೈಲಾದರೂ ಬ್ಯಾಗ್, ತಿಂಡಿ, ಹಣ್ಣುಗಳನ್ನು ನೋಡಿದ ಕೂಡಲೆ ಚಂಗನೆ ಜಿಗಿದು, ಅವುಗಳನ್ನು ಅವರ ಕೈಯಿಂದ ಕಸಿದುಕೊಂಡು ಓಡಿಹೋಗುತ್ತವೆ. ಇದೇ ರೀತಿ ಉತ್ತರ ಪ್ರದೇಶದಲ್ಲಿ ನೋಟಿನ ಕಂತೆಗಳು ತುಂಬಿದ್ದ ಬ್ಯಾಗೊಂದನ್ನು ಕಸಿದುಕೊಂಡು ಮರವೇರಿದ ಮಂಗ ಅದರಲ್ಲಿ ತಿಂಡಿಯಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ನೋಟುಗಳನ್ನು ಹರಿದು, ಗಾಳಿಗೆ ತೂರಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಸೀತಾಪುರದಲ್ಲಿ ಹಣ ತುಂಬಿದ್ದ ಬ್ಯಾಗನ್ನು ಕಸಿದುಕೊಂಡ ಕೋತಿ ನೋಟುಗಳನ್ನು ಮರದಿಂದ ಬಿಸಾಡಿದೆ. ಇಲ್ಲಿನ ರಿಜಿಸ್ಟಾರ್ ಆಫೀಸಿನಿಂದ ಹೊರಗೆ ಬರುತ್ತಿದ್ದ ವೃದ್ಧರೊಬ್ಬರು 4 ಲಕ್ಷ ರೂ.ಗಳು ತುಂಬಿದ್ದ ಬ್ಯಾಗನ್ನು ಹಿಡಿದು ಕಾರಿನತ್ತ ಸಾಗುತ್ತಿದ್ದರು. ಅಷ್ಟರಲ್ಲೇ ಮರದಿಂದ ಜಿಗಿದ ಕೋತಿಯೊಂದು ಅವರ ಕೈಲಿದ್ದ ಬ್ಯಾಗನ್ನು ಎಳೆದುಕೊಂಡು ಮರವೇರಿತ್ತು. ಇದರಿಂದ ಗಾಬರಿಯಾದ ವೃದ್ಧ ಭಗವಾನ್ ದೀನ್ ತಮ್ಮ ಬ್ಯಾಗನ್ನು ವಾಪಾಸ್ ಕೊಡಿಸುವಂತೆ ಸುತ್ತಮುತ್ತಲೂ ಇದ್ದವರ ಬಳಿ ಸಹಾಯ ಕೇಳಿದರು. ಆದರೆ, ಅವರ ಕಣ್ಣೆದುರೇ ಕೋತಿ ಮರದಿಂದ ಮರಕ್ಕೆ ಹಾರುತ್ತಾ ಮಾಯವಾಯಿತು.

ಇದನ್ನೂ ಓದಿ: Video: ಹೆದ್ದಾರಿ ಮಧ್ಯೆ ಬೆತ್ತಲಾಗಿ ಓಡಾಡಿದ ವ್ಯಕ್ತಿ; ಆತನನ್ನು ಕಂಡ ಪ್ರಯಾಣಿಕ ಏನು ಮಾಡಿದ ಗೊತ್ತಾ?

ಕೊನೆಗೂ ಕೋತಿ ಇರುವ ಮರವನ್ನು ಹುಡುಕುವುದರಲ್ಲಿ ಸಫಲರಾದ ಭಗವಾನ್ ಅವರು ಕೋತಿಯಿಂದ ಹಣದ ಬ್ಯಾಗ್ ಪಡೆಯಲು ಇನ್ನಿಲ್ಲದ ಸರ್ಕಸ್ ಮಾಡಿದರು. ಆದರೆ, ಅದಕ್ಕೆ ಜಗ್ಗದ ಕೋತಿ ಆ ಬ್ಯಾಗ್​ನಿಂದ 500 ರೂ.ಗಳ ನೋಟುಗಳನ್ನು ತೆಗೆದು ಮರದಿಂದ ಕೆಳಗೆ ಬಿಸಾಡಲಾರಂಭಿಸಿತು. ಇನ್ನೂ ಕೆಲವು ನೋಟುಗಳನ್ನು ಹರಿದು ಎಸೆಯಿತು. ಮರದಿಂದ ಹಣ ಬೀಳುತ್ತಿರುವುದನ್ನು ಕಂಡ ಜನರು ಕುತೂಹಲದಿಂದ ಓಡಿಬಂದರು. ಮಂಗನಿಂದ ಹೇಗಾದರೂ ಬ್ಯಾಗ್ ಪಡೆಯಲೇಬೇಕೆಂದು ಭಗವಾನ್ ಅವರು ಬಾಳೆಹಣ್ಣು, ಬಿಸ್ಕತ್, ಬೇರೆ ಹಣ್ಣುಗಳನ್ನು ತೋರಿಸಿದರು. ಆದರೆ, ಕೆಳಗೆ ಸೇರಿದ್ದ ಜನರನ್ನು ನೋಡಿ ಮಂಗ ಮರದಿಂದ ಇಳಿಯಲೇ ಇಲ್ಲ. ಅಷ್ಟರಲ್ಲಿ ಕೆಲವರು ಮರವನ್ನು ಹತ್ತಿ, ಮಂಗನಿಂದ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಆದರೂ ಪ್ರಯೋಜನವಾಗಲಿಲ್ಲ.

ಇದೆಲ್ಲ ಆಗಿ ಸುಮಾರು 1 ಗಂಟೆಯ ನಂತರ ಕೋತಿ ಆ ಹಣದ ಬ್ಯಾಗನ್ನು ಕೆಳಗೆ ಎಸೆಯಿತು. ಬ್ಯಾಗ್​ನಿಂದ ಬಿದ್ದ ನೋಟುಗಳನ್ನು ಹೆಕ್ಕಿದ ಜನರು ಅದನ್ನು ಭಗವಾನ್ ಅವರಿಗೆ ನೀಡಿದರು. ಇದೆಲ್ಲ ಆದ ನಂತರ ಭಗವಾನ್ ಅವರು ಆ ಬ್ಯಾಗ್​ನಲ್ಲಿದ್ದುದು ಬರೋಬ್ಬರಿ 4 ಲಕ್ಷ ರೂ. ಎಂಬ ವಿಷಯವನ್ನು ಹೇಳಿದರು! ಜಮೀನನ್ನು ರಿಜಿಸ್ಟರ್ ಮಾಡಿಸಲು ಬ್ಯಾಂಕ್​ನಿಂದ 4 ಲಕ್ಷ ರೂ.ಗಳನ್ನು ಡ್ರಾ ಮಾಡಿಕೊಂಡು ಬಂದಿದ್ದ ಭಗವಾನ್ ಅವರಿಂದ ಆ ಭಾರೀ ಮೊತ್ತದ ಹಣವಿರುವ ಬ್ಯಾಗನ್ನು ಕೋತಿ ಎಳೆದುಕೊಂಡು ಹೋಗಿತ್ತು.

ಆದರೆ, ಆ ಒಂದು ಗಂಟೆಯಲ್ಲಿ ಕೋತಿ ಸುಮಾರು 10ರಿಂದ 12 ಸಾವಿರ ರೂ. ಮೌಲ್ಯದ ನೋಟುಗಳನ್ನು ಹರಿದು ಹಾಕಿತ್ತು. ಈ ಪ್ರಕರಣದ ಕುರಿತು ಕೋಟ್ವಾಲಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Published by: Sushma Chakre
First published: December 24, 2020, 8:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories