ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ, ಸೋಮವಾರ ಉಭಯ ರಾಜ್ಯಗಳ ಜನರ ನಡುವೆ ಘರ್ಷಣೆಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಶಾನ್ಯ ಭಾರತ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳನ್ನು ಶಿಲ್ಲಾಂಗ್ನಲ್ಲಿ ಭೇಟಿಯಾದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಗಡಿ ಪ್ರದೇಶಗಳಿಂದ ಗುಂಡು ಹಾರಿಸುವುದು ಮತ್ತು ಸರ್ಕಾರಿ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಉಭಯ ರಾಜ್ಯಗಳ ನಡುವೆ ದೀರ್ಘಕಾಲದಿಂದ ಇರುವ ಭೂ ವಿವಾದವೇ ಈ ಗಲಭೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂಸಾಚಾರದ ಕುರಿತು ಶಾ ಅವರು ಅಸ್ಸಾಂ ಮತ್ತು ಮಿಜೋರಾಂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದರು ಮತ್ತು ಸಂಘರ್ಷವನ್ನು ಶೀಘ್ರ ಪರಿಹರಿಸುವಂತೆ ಒಂದು ಪರಿಹಾರ ಮಾರ್ಗವನ್ನು ಕಂಡುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಹೇಳಲಾಗಿದೆ. ಮೂಲಗಳ ಪ್ರಕಾರ, ಪರಿಸ್ಥಿತಿಯನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಿಜೋರಾಂ ಮುಖ್ಯಮಂತ್ರಿ ಒರಮ್ಥಂಗಾ ಭರವಸೆ ನೀಡಿದ್ದಾರೆ.
"ಗೌರವಾನ್ವಿತ ಹಿಮಾಂತ ಬಿಸ್ವಾ ಜಿ, ನಾವಿಬ್ಬರು ಈ ಹಿಂದೆ ಚರ್ಚಿಸಿದಂತೆ ನಮ್ಮ ರಾಜ್ಯದ ನಾಗರಿಕರ ಸುರಕ್ಷತೆಗಾಗಿ ಗಲಭೆ ನಡೆದ ಸ್ಥಳದಿಂದ ಹಿಂದೆ ಸರಿಯುವಂತೆ ಅಸ್ಸಾಂ ಪೋಲಿಸರಿಗೆ ಸೂಚನೆ ನೀಡಬೇಕೆಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ" ಎಂದು ಒರಮ್ಥಂಗಾ ಮನವಿ ಮಾಡಿದ್ದಾರೆ.
“ಗೌರವಾನ್ವಿತ ಮುಖ್ಯಮಂತ್ರಿ ಒರಮ್ಥಂಗಾ ಜಿ, ನಾನು ಪೊಲೀಸರೊಂದಿಗೆ ಮಾತನಾಡಿದ್ದೇನೆ. ಅಸ್ಸಾಂ ಮತ್ತು ನಿಮ್ಮ ರಾಜ್ಯದ ಗಡಿಗಳ ನಡುವೆ ಯಥಾಸ್ಥಿತಿ ಮತ್ತು ಶಾಂತಿಯನ್ನು ಕಾಪಾಡುವುದಕ್ಕೆ ನಾನು ಬದ್ದನಾಗಿದ್ದೇನೆ ಎಂದು ಪುನರುಚ್ಚರಿಸುತ್ತೇನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಆನಂತರ ನಿಮ್ಮ ಜೊತೆ ಮಾತನಾಡಲು ಬಯಸುತ್ತೇನೆ "ಎಂದು ಶರ್ಮಾ ಹೇಳಿದ್ದಾರೆ.
ಇಬ್ಬರೂ ಮುಖ್ಯಮಂತ್ರಿಗಳು ಟ್ವೀಟರ್ ಮೂಲಕ ಘಟನೆಯ ಬಗ್ಗೆ ಸಾಕಷ್ಟು ಆಕ್ರೋಶವನ್ನು ಹೊರಹಾಕಿದ್ದರು. ಮಿಜೋರಾಂ ಮುಖ್ಯಮಂತ್ರಿ ಅವರು ಗೃಹಸಚಿವ ಷಾ ಅವರ ಹಸ್ತಕ್ಷೇಪವನ್ನು ಕೋರಿದ್ದರಿಂದ ಇಬ್ಬರು ಮುಖ್ಯಮಂತ್ರಿಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಇದು ಕಾರಣವಾಗಿತ್ತು. ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ಮಿಜೋರಾಂ ಮುಖ್ಯಮಂತ್ರಿ, ಮುಗ್ಧ ದಂಪತಿ ಕಾರಿನಲ್ಲಿ ಅವರ ಪಾಡಿಗೆ ಕಚಾರ್ ಮೂಲಕ ಮಿಜೋರಾಂಗೆ ವಾಪಸ್ ಆಗುವಾಗ. ಅವರ ಮೇಲೆ ಗೂಂಡಾಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಂಥ ಹಿಂಸೆಯನ್ನು ನೀವೆಲ್ಲ ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಏತನ್ಮಧ್ಯೆ, ಶರ್ಮಾ ಅವರು ಟ್ವೀಟ್ ಮಾಡಿ “ಗೌರವಾನ್ವಿತ ಒರಮ್ಥಂಗಾ ಜಿ, ಕೋಲಾಸಿಬ್ (ಮಿಜೋರಾಂ) ಎಸ್ಪಿ ಅವರಿಗೆ ಅವರ ಹುದ್ದೆಯಿಂದ ಹಿಂದೆ ಸರಿಯುವಂತೆ ಹೇಳಿ. ಅಲ್ಲಿಯವರೆಗೆ ನಾಗರಿಕರು ಹಿಂಸಾಚಾರವನ್ನು ನಿಲ್ಲಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಾವು ಸರ್ಕಾರವನ್ನು ಹೇಗೆ ನಡೆಸಲು ಸಾಧ್ಯ? ನೀವು ಬೇಗನೆ ಮಧ್ಯಪ್ರವೇಶಿಸುವಿರಾ’’ ಎಂದು ಎಸ್ಪಿಯನ್ನೇ ದೂರಿದ್ದಾರೆ.
ಅಸ್ಸಾಂ-ಮಿಜೋರಾಂ ಗಡಿಯಲ್ಲಿ ದಕ್ಷಿಣ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲೈಲಾಪುಲ್ನಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ ಏಳು ಅಸ್ಸಾಂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕ್ಯಾಚರ್ ಉಪ ಆಯುಕ್ತರ ವಾಹನವನ್ನು ಧ್ವಂಸಗೊಳಿಸಲಾಗಿದ್ದು, ಮಿಜೋರಾಂ ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಹಿಂಸಾಚಾರದ ನಂತರ, ಗಡಿಯಲ್ಲಿ ಅಸ್ಸಾಂ ಪೊಲೀಸ್ ಬೆಟಾಲಿಯನ್ ನಿಯೋಜನೆಯನ್ನು ಹೆಚ್ಚಿಸಲಾಗಿದೆ.
“ಅವರು ಕಲ್ಲುಗಳನ್ನು ಎಸೆದರು, ಕೋಲುಗಳು, ಕಂಬಿಗಳು, ಕವಣೆಯಿಂದ ನಮ್ಮ ಮೇಲೆ ಹಲ್ಲೆ ನಡೆಸಿ ನಮ್ಮನ್ನು ಬೆನ್ನಟ್ಟಿದರು. ಈ ವೇಳೆ ನಮ್ಮ ಎಸ್ಪಿ ಐಜಿ ಮತ್ತು ಡಿಐಜಿ ಇದ್ದರು. ನಮ್ಮ 11 ಮಂದಿ ಪೋಲಿಸರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿದೆ "ಎಂದು ಗಾಯಗೊಂಡ ಅಸ್ಸಾಂ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.
" ನನ್ನ ಕೈ ಮುರಿಯುವಂತೆ ಕಲ್ಲಿನಿಂದ ದಾಳಿ ಮಾಡಲಾಯಿತು" ಎಂದು ಅಸ್ಸಾಂ ಮಹಿಳಾ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.
ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೊಲಾಸಿಬ್ ಮತ್ತು ಮಾಮಿತ್ಗಳು, ಅಸ್ಸಾಂನ ಕ್ಯಾಚರ್, ಹಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಅಂತರ ರಾಜ್ಯ ಗಡಿಯನ್ನು ಹಂಚಿಕೊಂಡಿವೆ.
ಹಿಂದಿನ ದಿನ, ಅಸ್ಸಾಂ ಪೊಲೀಸರು, ಕಚಾರ್ ಜಿಲ್ಲಾ ಆಡಳಿತದೊಂದಿಗೆ, ಮಿಜೋರಾಂ ಜನರು ಆಕ್ರಮಿಸಿಕೊಂಡಿದ್ದಾರೆಂದು ಹೇಳಲಾದ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ವರದಿಯ ಪ್ರಕಾರ, ಅಸ್ಸಾಂ ಹಾಗು ಮಿಜೋರಾಂಗೆ ಎರಡೂ ರಾಜ್ಯಕ್ಕೆ ಸೇರಿದೆ ಎನ್ನಲಾದ ಸುಮಾರು 6.5 ಕಿ.ಮೀ ಭೂಮಿ ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಯಾವುದೇ ಭೂಮಿಯನ್ನು ಅತಿಕ್ರಮಣ ಮಾಡುವುನ್ನು ನಾವು ಒಪ್ಪುವುದಿಲ್ಲ ಎಂದು ಮಿಜೋರಾಂ ಸರ್ಕಾರ ಹೇಳಿದೆ.
ಇದನ್ನೂ ಓದಿ: Karnataka Bjp: ಸಿಎಂ ಬದಲಾಯ್ತು; ಸಚಿವರೂ ಬದಲಾಗುವರೇ? ಇಲ್ಲಿದೆ ಕುರ್ಚಿ ಕಳೆದುಕೊಳ್ಳುವವರ ಪಟ್ಟಿ
ಕಳೆದ ಜೂನ್ 2020 ರಲ್ಲಿ ಮಿಜೋ ದುಷ್ಕರ್ಮಿಗಳು ಸುಟ್ಟುಹಾಕಿದ ಪ್ರಾಥಮಿಕ ಶಾಲೆಯನ್ನು ಪುನರ್ನಿರ್ಮಿಸಲು ಹೋದಾಗಲು ಗಲಭೆ ನಡೆದಿತ್ತು. ಗ್ರೆನೇಡ್ ಸ್ಪೋಟಿಸಿ ಶಾಲೆಯನ್ನು ಸುಟ್ಟುಹಾಕಲಾಗಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ