• Home
  • »
  • News
  • »
  • national-international
  • »
  • ಮಹಾರಾಷ್ಟ್ರದ ಗುರುದ್ವಾರದ ಬಳಿ ಹಿಂಸಾಚಾರ; ನಾಲ್ವರು ಪೊಲೀಸರಿಗೆ ಗಾಯ; 17 ಮಂದಿ ಬಂಧನ

ಮಹಾರಾಷ್ಟ್ರದ ಗುರುದ್ವಾರದ ಬಳಿ ಹಿಂಸಾಚಾರ; ನಾಲ್ವರು ಪೊಲೀಸರಿಗೆ ಗಾಯ; 17 ಮಂದಿ ಬಂಧನ

ನಂದೇಡ್​ನಲ್ಲಿ ನಡೆದ ಹಿಂಸಾಚಾರ

ನಂದೇಡ್​ನಲ್ಲಿ ನಡೆದ ಹಿಂಸಾಚಾರ

ಮಹಾರಾಷ್ಟ್ರದ ನಂದೇಡ್ ಜಿಲ್ಲೆಯಲ್ಲಿ ಹೋಲಾ ಆಚರಣೆ ಮಾಡಲು ಅಡ್ಡಿಪಡಿಸಿದರೆಂದು ಪೊಲೀಸರ ಮೇಲೆ ಕೆಲ ಸಿಖ್ ವ್ಯಕ್ತಿಗಳು ಹಲ್ಲೆ ಮಾಡಿದ ಘಟನೆ ನಿನ್ನೆ ನಡೆದಿದೆ. ಈ ಸಂಬಂಧ 17 ಮಂದಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ಧಾರೆ.

  • Share this:

ಮುಂಬೈ(ಮಾ. 30): ಮಹಾರಾಷ್ಟ್ರದ ನಂದೇಡ್​ನ ಸಿಖ್ ಗುರುದ್ವಾರವೊಂದರ ಬಳಿ ನಿನ್ನೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಸಿಖ್ಖರ ಹೋಲಾ ಮೊಹಲ್ಲಾ ಹಬ್ಬದ ಆಚರಣೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು ಈ ಘಟನೆಗೆ ಕಾರಣವಾಗಿದೆ. ಹೋಲಾ ಮೊಹಲ್ಲಾ ಆಚರಣೆಗೆ ನೆರೆದಿದ್ದ ನೂರಾರು ಸಿಖ್ಖರಿಗೆ ಕೋವಿಡ್ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಪಾಲನೆ ಮಾಡಬೇಕೆಂದು ಪೊಲೀಸರು ಸೂಚನೆ ನೀಡಿದ್ದರು. ಆದರೂ ಅದನ್ನು ಲೆಕ್ಕಿಸದೇ ಇದ್ದ ಜನರನ್ನು ಚದುರಿಸಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಕೆಲ ಸಿಖ್ ವ್ಯಕ್ತಿಗಳು ತಮ್ಮ ಕೈಯಲ್ಲಿದ್ದ ಖಡ್ಗ, ದೊಣ್ಣೆ ಇತ್ಯಾದಿಗಳಿಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದರು. ಕಡಿಮೆ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಇದ್ದರಿಂದ ದೊಡ್ಡ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಿನ್ನೆ ಸಂಜೆ 4ಕ್ಕೆ ಸಂಭವಿಸಿದ ಈ ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯವಾಗಿದೆ. ಆದರೆ, ಯಾರಿಗೂ ಗಂಭೀರ ಸ್ವರೂಪದ ಗಾಯವಾದ ವರದಿ ಬಂದಿಲ್ಲ.


ಹಿಂಸಾಚಾರ ನಡೆಸಿದ ಶಂಕೆಯ ಮೇಲೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ, ಹಲ್ಲೆ, ಗಲಭೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರ ಡಿಜಿಪಿ ರಜನೀಶ್ ಸೇಠ್, ಇದೀಗ ಪರಿಸ್ಥಿತಿ ತಹಬದಿಗೆ ಬಂದಿದೆ. 17 ಮಂದಿಯನ್ನು ಬಂಧಿಸಿದ್ದೇವೆ. ಗಾಯಗೊಂಡಿರುವ ನಾಲ್ವರು ಪೊಲೀಸರು ಅಪಾಯದಿಂದ ಹೊರಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.


ಇದನ್ನೂ ಓದಿ: ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ದೈತ್ಯ ಹಡಗಿನ ತೆರವಿಗೆ ಕಾರಣವಾದನಾ ಹುಣ್ಣಿಮೆ ಚಂದ್ರ?


ಹೋಲಾ ಮೊಹಲ್ಲಾ ಎಂಬುದು ಸಿಖ್ಖರ ಅತ್ಯಂತ ಪ್ರಮುಖವಾದ ಆಚರಣೆ. ಹೋಳಿ ಹಬ್ಬದ ವೇಳೆಯಲ್ಲೇ ಈ ಹಬ್ಬ ಮೂರು ದಿನಗಳ ಕಾಲ ನಡೆಯುತ್ತದೆ. ಆದರೆ, ಹೋಳಿಗೂ ಈ ಹೋಲಾಗೂ ಸಂಬಂಧ ಇಲ್ಲ. ಹೋಲಾ ಎಂದರೆ ಸೇನಾ ಕವಾಯತ್ತು ಎಂದರ್ಥ. ಇಲ್ಲಿ ಸಿಖ್ಖರು ತಮ್ಮ ಸಮರ ಕಲೆ, ಧೈರ್ಯ ಸಾಹಸಗಳ ಪ್ರದರ್ಶನ ಮಾಡುತ್ತಾರೆ. ಧಾರ್ಮಿಕ ಕೀರ್ತನೆಗಳು, ಸಂಗೀತ, ಕವಿತೆಗಳನ್ನ ಹೀಗೆ ಅನೇಕ ಕಲೆಗಳನ್ನ ತೋರ್ಪಡಿಸುತ್ತಾರೆ.


ಮಹಾರಾಷ್ಟ್ರದಲ್ಲಿರುವ ನಂದೇಡ್ ಜಿಲ್ಲೆಯಲ್ಲಿ ಸಿಖ್ಖರಿಗೆ ಬಹಳ ಪವಿತ್ರವೆನಿಸಿರವ ತಖ್ತ್ ಸಚ್​ಖಂಡ್ ಶ್ರೀ ಹಾಜುರ್ ಅಬಚಲ್ ನಗರ್ ಸಾಹೀಬ್ ಗುರುದ್ವಾರ ಇದೆ. ಸಿಖ್ಖರ ಕೊನೆಯ ಗುರು ಎನಿಸಿದ ಗುರು ಗೋಬಿಂದ ಸಿಂಗ್ ಅವರು 18ನೇ ಶತಮಾನದ ಆರಂಭದಲ್ಲಿ ಇಲ್ಲಿ ಬಂದು ಗುರು ಗ್ರಂಥ ಸಾಹೀಬ್ ಗ್ರಂಥವನ್ನು ಸಿಖ್ಖರ ಸಾರ್ವಕಾಲಿಕ ಗುರು ಎಂದು ಪ್ರತಿಷ್ಠಾಪಿಸಿ, ಇಲ್ಲಿಯೇ ತಮ್ಮ ಜೀವನದ ಕೊನೆಯ 14 ತಿಂಗಳನ್ನ ಕಳೆದಿದ್ದರು. ಹೀಗಾಗಿ, ನಂದೇಡ್​ನ ಈ ಗುರುದ್ವಾರ ಸಿಖ್ಖರಿಗೆ ಭಾವನಾತ್ಮಕವಾಗಿ ಉಚ್ಛ ಸ್ಥಾನದಲ್ಲಿದೆ.

Published by:Vijayasarthy SN
First published: