Vikas Dubey: ಎನ್​ಕೌಂಟರ್​ ವೇಳೆ ವಿಕಾಸ್​ ದುಬೆ ಮೇಲೆ 6 ಬಾರಿ ಗುಂಡಿನ ದಾಳಿ; ಪೋಸ್ಟ್​ ಮಾರ್ಟಂ ವರದಿಯಲ್ಲಿ ಬಹಿರಂಗ

Vikas Dubey Encounter: ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ವಿಕಾಸ್​ ದುಬೆಯನ್ನು ಜು. 9ರಂದು ಬಂಧಿಸಿ ಜು. 10ರಂದು ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್​ ವಾಹನ ಪಲ್ಟಿ ಹೊಡೆದಿತ್ತು.

ವಿಕಾಸ್‌ ದುಬೆ ಇದ್ದ ಪೊಲೀಸ್‌ ಕಾರು ಪಲ್ಟಿಯಾಗಿರುವ ದೃಶ್ಯ

ವಿಕಾಸ್‌ ದುಬೆ ಇದ್ದ ಪೊಲೀಸ್‌ ಕಾರು ಪಲ್ಟಿಯಾಗಿರುವ ದೃಶ್ಯ

 • Share this:
  ಲಕ್ನೋ (ಜು. 20): ಗ್ಯಾಂಗ್​ಸ್ಟರ್ ವಿಕಾದ್ ದುಬೆಯನ್ನು ಜು. 10ರಂದು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿತ್ತು. ತಮ್ಮ ಪ್ರಾಣ ರಕ್ಷಣೆಗಾಗಿ ಎನ್​ಕೌಂಟರ್ ನಡೆಸಿದ್ದಾಗಿ ಉತ್ತರ ಪ್ರದೇಶದ ಪೊಲೀಸರು ಸ್ಪಷ್ಟನೆ ನೀಡಿದ್ದರು. ವಿಕಾಸ್​ ದುಬೆಯ ಪೋಸ್ಟ್​ ಮಾರ್ಟಂ ವರದಿ ಇದೀಗ ಪೊಲೀಸರ ಕೈಸೇರಿದ್ದು, ವಿಕಾಸ್​ ದುಬೆಯ ಮೇಲೆ 6 ಬಾರಿ ಗುಂಡು ಹಾರಿಸಲಾಗಿದೆ, ದೇಹದ ಮೇಲೆ ಒಟ್ಟು 10 ಗಾಯದ ಗುರುತುಗಳಿವೆ. ಹಾಗೂ ಆತ ಶೂಟೌಟ್ ಬಳಿಕ ಹ್ಯಾಮರೇಜ್ ಮತ್ತು ಆಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿದೆ.

  ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ವಿಕಾಸ್​ ದುಬೆಯನ್ನು ಜು. 9ರಂದು ಬಂಧಿಸಿ ಜು. 10ರಂದು ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್​ ವಾಹನ ಪಲ್ಟಿ ಹೊಡೆದಿತ್ತು. ಈ ವೇಳೆ ಪೊಲೀಸರ ಬಳಿಯಿದ್ದ ಗನ್ ಎತ್ತಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ ವಿಕಾಸ್​ ದುಬೆಯನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿತ್ತು.

  ವಿಕಾಸ್​ ದುಬೆಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನಕ್ಕೆ ಎಮ್ಮೆಗಳು ಅಡ್ಡಬಂದ ಕಾರಣ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಎದುರು ಇದ್ದಕ್ಕಿದ್ದಂತೆ ಎಮ್ಮೆಗಳು ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್​ (ಎಸ್​ಟಿಎಫ್) ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ನಮ್ಮ ಸಿಬ್ಬಂದಿಯ ಬಳಿಯಿದ್ದ ಗನ್ ಕಿತ್ತುಕೊಂಡು ವಿಕಾಸ್​ ದುಬೆ ಪರಾರಿಯಾಗಲು ಪ್ರಯತ್ನಿಸಿದ. ಆಗ ಪೊಲೀಸರು ಆತನನ್ನು ಸುತ್ತುವರೆದು ಶರಣಾಗುವಂತೆ ಎಚ್ಚರಿಸಿದರಾದರೂ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಈ ವೇಳೆ ದುಬೆಯನ್ನು ಎನ್​ಕೌಂಟರ್ ಮಾಡಬೇಕಾಗಿ ಬಂತು ಎಂದು ಪೊಲೀಸರು ಹೇಳಿದ್ದರು.

  ಇದನ್ನೂ ಓದಿ: ಇಂದಿನಿಂದ ಜಾರಿಯಾಗಲಿದೆ ಕೇಂದ್ರದ ನೂತನ ಗ್ರಾಹಕರ ರಕ್ಷಣಾ ಕಾಯ್ದೆ 2019; ಇಲ್ಲಿದೆ ಕಾಯ್ದೆಯ ಸಂಪೂರ್ಣ ಮಾಹಿತಿ

  ವಿಕಾಸ್​ ದುಬೆ ಎನ್​ಕೌಂಟರ್ ಆದ ಮೂರೇ ದಿನಕ್ಕೆ ವಿಕಾಸ್ ದುಬೆಯ ತಂದೆ ರಾಮ್​ಕುಮಾರ್ ದುಬೆ ಅದೇ ಆಘಾತದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ವಿಕಾಸ್ ದುಬೆಯ ಎನ್​ಕೌಂಟರ್​ ಬಳಿಕ ಮಾನಸಿಕವಾಗಿ ಬಹಳ ನೊಂದಿದ್ದ ಅವರು ಮಗನ ಅಂತ್ಯಕ್ರಿಯೆ ಕೂಡ ನೆರವೇರಿಸಿರಲಿಲ್ಲ. ಹೀಗಾಗಿ, ವಿಕಾಸ್​ ದುಬೆಯ ಭಾವನೇ ಅಂತ್ಯಕ್ರಿಯೆ ನೆರವೇರಿಸಿದ್ದರು.

  ಇಂದು ವಿಕಾಸ್​ ದುಬೆಯ ಪೋಸ್ಟ್ ಮಾರ್ಟಂ ವರದಿ ಬಂದಿದ್ದು, 6 ಗುಂಡುಗಳ ಗಾಯಗಳು ಸೇರಿದಂತೆ ವಿಕಾಸ್​ ದುಬೆಯ ದೇಹದ ಮೇಲೆ 10 ಗಾಯದ ಗುರುತುಗಳಿವೆ. 6ರಲ್ಲಿ 3 ಗುಂಡುಗಳು ವಿಕಾಸ್​ ದುಬೆಯ ದೇಹವನ್ನು ಸೀಳಿಕೊಂಡು ಹೋಗಿವೆ. ಎರಡು ಗುಂಡುಗಳು ವಿಕಾಸ್​ ದುಬೆಯ ಎದೆಯ ಎಡಭಾಗದಲ್ಲಿ ಹಾದುಹೋಗಿವೆ. ಒಂದು ಗುಂಡು ಆತನ ಬಲ ಭುಜವನ್ನು ಸೀಳಿಕೊಂಡು ಹೋಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎಷ್ಟು ದೂರದಿಂದ ಗುಂಡು ಹಾರಿಸಲಾಗಿದೆ ಎಂಬುದನ್ನು ವರದಿಯಲ್ಲಿ ನಮೂದಿಸಿಲ್ಲ. ಉಳಿದ ಗಾಯಗಳು ಆತ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿ, ಕೆಳಗೆ ಬಿದ್ದಿದ್ದರಿಂದ ಆಗಿರಬಹುದು ಎಂದು ಅಂದಾಜಿಸಲಾಗಿದೆ.
  Published by:Sushma Chakre
  First published: